ಗೋವುಗಳು ಮತ್ತು ನಾವು

ಗೋವುಗಳು, ಗೋ-ಲೋಬಲ್ ವಾರ್ಮಿಂಗ್ ಮತ್ತು ಗೋ ಸಮ್ಮೇಳನವೂ
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಗೋವುಗಳ ಮೇಲೊಂದು ‘ವಿಶ್ವ ಸಮ್ಮೇಳನವು’ ಇದೇ ಎಪ್ರಿಲ್ ೨೧ರಿಂದ ಹೊಸನಗರದಲ್ಲಿ ನಡೆಯಲಿದೆಯೆಂಬುದು ಮತ್ತು ಅದಕ್ಕಾಗಿ ಎಂಟು ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದ್ದು, ಕರ್ನಾಟಕದ ಘನ ಸರಕಾರವು ಈ ಸಲದ ಆಯವ್ಯಯಪತ್ರದಲ್ಲಿ ಇದಕ್ಕಾಗಿಯೇ ಎರಡು ಕೋಟಿ ರೂಪಾಯಿಗಳನ್ನು ಒದಗಿಸಿರುವುದು ಈಗಾಗಲೇ ಸುದ್ದಿಯಾಗಿದೆ, ಸಂಪದದಲ್ಲೂ ಈ ಬಗ್ಗೆ ಲೇಖನವಿದೆ. [http://sampada.net/event/3335]

ಮನುಷ್ಯ ಮತ್ತು ದನಗಳ ಸಂಬಂಧ ಬಹಳ ಹಳೆಯದೇನಲ್ಲ. ಆಧುನಿಕ ಮಾನವನ ಮೂರ್ನಾಲ್ಕು ಲಕ್ಷ ವರ್ಷಗಳ ಚರಿತ್ರೆಯಲ್ಲಿ ದನಗಳ ಪ್ರವೇಶವಾದದ್ದು ಸುಮಾರು ಏಳೆಂಟು ಸಾವಿರ ವರ್ಷಗಳ ಹಿಂದೆಯಷ್ಟೇ. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯನು ತನ್ನ ಆಹಾರವನ್ನು ತಾನೇ ಬೆಳೆಯತೊಡಗಿದ ಬಳಿಕ, ಈ ಕಾರ್ಯದಲ್ಲಿ ನೆರವಾಗಲು ಎತ್ತು-ಕೋಣ-ಎಮ್ಮೆ-ದನಗಳಂತಹ ಹೇಳಿದಂತೆ ಪಳಗುವ ಪ್ರಾಣಿಗಳನ್ನು ಸಾಕತೊಡಗಿದ. ಕೃಷಿಕಾರ್ಯದಲ್ಲಿ ನೆರವಾದ ಈ ಪ್ರಾಣಿಗಳ ಹಾಲಿನ ರುಚಿಯನ್ನು ಸವಿದಾಗಿನಿಂದ ಅದಕ್ಕೂ ಕೈಹಾಕಿದ. ಕಾಲಕ್ರಮೇಣ, ಕೃಷಿಯೊಂದಿಗೆ ಹೈನುಗಾರಿಕೆಯೂ ಒಂದು ಉದ್ಯಮವೇ ಆಗಿಬಿಟ್ಟಿತು, ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳ ಪಾಲಾಗಿಬಿಟ್ಟಿತು, ಹೊಸ ಹೊಸ ಕೃಷಿತಳಿಗಳ ಜೊತೆಗೆ ದಷ್ಟಪುಷ್ಟವಾದ, ಲೀಟರುಗಟ್ಟಲೆ ಹಾಲನ್ನು ನೀಡುವ ಗೋತಳಿಗಳೂ ಬಂದವು. ಇನ್ನೊಂದೆಡೆ, ತಾಯಿಯ ಹಾಲನ್ನು ಕುಡಿಯುವ ವಯಸ್ಸು ಕಳೆದ ಬಳಿಕವೂ ಕುಡಿಯಲು ಹಾಲನ್ನು ಒದಗಿಸಿದ ದನಕ್ಕೆ ತನ್ನ ಸ್ವಂತ ತಾಯಿಯ (ಅಥವಾ ಅದಕ್ಕೂ ಮೇಲಿನ) ಸ್ಥಾನವನ್ನು ಕೆಲವರು ಕೊಟ್ಟುಬಿಟ್ಟರು (ಆದರೆ, ಅದೇ ರೀತಿ ಹಾಲನ್ನು ಒದಗಿಸುತ್ತಿರುವ ಎಮ್ಮೆ, ಆಡು, ಒಂಟೆ ಇತ್ಯಾದಿಗಳಿಗೇಕೆ ಈ ಸ್ಥಾನಮಾನ ದೊರೆಯಲಿಲ್ಲವೆನ್ನುವುದು ಸೋಜಿಗವೇ!). ದನಗಳ ಮೇಲಿನ ಈ ಮಮತೆಯು ಅಲ್ಲಿಗೇ ನಿಲ್ಲದೆ, ಗೋವುಗಳು ತಮಗೆ ಅಗತ್ಯವಿಲ್ಲವೆಂದು ಹೊರಹಾಕಿದ ಕಶ್ಮಲಗಳಾದ ಮಲ-ಮೂತ್ರಗಳು ಕೂಡ ಮನುಷ್ಯನ ಆರೋಗ್ಯಕ್ಕೂ, ನೆಮ್ಮದಿಗೂ ಉತ್ತಮ ಸಾಧನಗಳೆಂದು ಡಂಗುರ ಸಾರುವಲ್ಲಿಯವರೆಗೆ ತಲುಪಿತು. ಇದೀಗ ಗೋವುಗಳ ಮಲ-ಮೂತ್ರಗಳನ್ನು ಸಂಗ್ರಹಿಸಿ, ಅವುಗಳಿಗೊಂದು ವಿಶೇಷವಾದ ಶಕ್ತಿಯನ್ನು 'ಕೊಡಮಾಡಿಸಿ', ಶೀಷೆಗಳಲ್ಲಿ ಅವುಗಳನ್ನು ತುಂಬಿಸಿ ಮಾರಾಟ ಮಾಡುವ ಕೆಲಸವೂ ಆರಂಭವಾಗಿದೆ. ಕೀಟನಾಶದಿಂದ ಹಿಡಿದು ಕ್ಯಾನ್ಸರ್ ರೋಗದ ಚಿಕಿತ್ಸೆಯವರೆಗೂ ಈ ಕಶ್ಮಲಗಳ ಬಳಕೆಗೆ ಕುಮ್ಮಕ್ಕು ದೊರಕುತ್ತಿದೆ (ಅದರಲ್ಲೂ ಒಂದು ವಿಧದ ವರ್ಣಬೇಧವನ್ನು ಹೇರಲಾಗಿದೆ - ಭಾರತೀಯ ದನಗಳ ಕಶ್ಮಲಗಳಿಗೆ ಮಾತ್ರವೇ ಈ ತರಹದ ವಿಶೇಷವಾದ ಗುಣವಿದೆಯಂತೆ; ಈ ಗೋವುಗಳನ್ನು ಹಡೆದ ಭಾರತ ಮಾತೆ ನಿಜಕ್ಕೂ ಧನ್ಯಳು!). ಮುಂದೊಂದು ದಿನ, ಆಕಳ ಹಾಲಿನ ಮಾರಾಟವು ದೊಡ್ದ ಉದ್ದಿಮೆಯಾಗಿ ಬೆಳೆದ ರೀತಿಯಲ್ಲಿಯೇ, ಭಾರತೀಯ ದನಗಳ ಕಶ್ಮಲಗಳ ಮಾರಾಟವೂ ಒಂದು ಬಹುದೊಡ್ಡ ಉದ್ಯಮವಾಗಬಹುದೇನೋ? ಅದಿರಲಿ, ಗೋಮಾತೆಯ ಮೇಲಿನ ಮಮತೆಯು ಕೆಲವರಲ್ಲಿ ಉಚ್ಛ್ರಾಯಕ್ಕೆ ತಲುಪಿ, ‘ಗೋಮಾತೆಯ’ ಹೆಸರಲ್ಲಿ ಕೊಲೆಗಳು, ದೊಂಬಿಗಳು, ಕರ್ಫ್ಯೂ ಮುಂತಾದ ವಿಪರೀತದ ಪರಿಸ್ಥಿತಿಗಳು ಆಗಿಂದಾಗ್ಗೆ ಅಲ್ಲಲ್ಲಿ ನಿರ್ಮಾಣಗೊಳ್ಳುವಲ್ಲಿಯವರೆಗೆ ಬಂದು ತಲುಪಿದೆ. (ಆದರೆ ನಮ್ಮನ್ನು ಹೊತ್ತು, ಹೆತ್ತು, ತನ್ನ ಎದೆಯ ಅಮೃತವನ್ನು ನೀಡಿ ಸಾಕಿ ಸಲಹಿದ ಸ್ವಂತ ಅಮ್ಮನನ್ನು ಸುಖವಾಗಿ ನೋಡಿಕೊಳ್ಳುವ ಬಗ್ಗೆ ಈ ತರಹದ ಗಲಭೆಗಳಾಗುವುದನ್ನು ಎಲ್ಲಾದರೂ ಯಾರಾದರೂ ಕೇಳಿದ್ದೀರಾ?) 'ಅನಾಥ' ಗೋವುಗಳಿಗೂ, ವನಿತೆಯರಿಗೂ ಆಶ್ರಯವನ್ನು ನೀಡುವ ಸಂಸ್ಥೆಗಳೂ ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ, ಆದರೆ ಗೋವುಗಳಿಗೂ, ವನಿತೆಯರಿಗೂ ತುಲನೆಯೇನೆನ್ನುವುದು ಸ್ಪಷ್ಟವಿಲ್ಲ.

ಇಂತಹ ಸನ್ನಿವೇಶದಲ್ಲಿ, ಇದೇ ಎಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಜಗನ್ಮಾತೆಯ (ಭೂಮಿಯನ್ನೇ ಹೆತ್ತವಳು?!) ಬಗ್ಗೆ ‘ವಿಶ್ವ ಗೋ ಸಮ್ಮೇಳನವು’ ನಡೆಯಲಿದ್ದು ಇದರಿಂದ ಜಗದೊಳಿತಾಗುವುದೆಂದು ಹೇಳಲಾಗುತ್ತಿದೆ. ಅದಕ್ಕಾಗಿ ನಾವು-ನೀವು ಸರಕಾರದ ಬೊಕ್ಕಸಕ್ಕೆ ಕಟ್ಟಿರುವ ತೆರಿಗೆಯಿಂದ ಎರಡು ಕೋಟಿ ರೂಪಾಯಿಗಳಷ್ಟನ್ನು ಗೋ ಮಾತೆಯ ಮೇಲೆ ಅತೀವವಾದ ಮಮತೆಯಿರುವ ನಮ್ಮ ಸರಕಾರವು ಈಗಾಗಲೇ ಒದಗಿಸಿದೆ.

ಜಗದೊಳಿತು?

ದನಗಳನ್ನು ‘ಮಾತೆಯರನ್ನಾಗಿಸಿದ’ ಆ ಹಾಲೇ ಅಷ್ಟೊಂದು ಆರೋಗ್ಯಕರವಾದ ಆಹಾರವಲ್ಲವೆನ್ನುವ ಸತ್ಯವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಪ್ರಕಟಗೊಳ್ಳುತ್ತಲಿದೆ. ಆಕಳ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ಮನುಷ್ಯನ ದೇಹದ ಮೇಲೆ ಹಲವಾರು ದುಷ್ಪರಿಣಾಮಗಳುಂಟಾಗುವ ಸಾಧ್ಯತೆಗಳ ಬಗ್ಗೆ ಸಹಸ್ರಾರು ಸಂಶೋಧನಾ ಲೇಖನಗಳು ಈಗಾಗಲೇ ಪ್ರಕಟವಾಗಿದ್ದು, ಅವನ್ನು ಒಪ್ಪಿಕೊಳ್ಳುವ ಧೈರ್ಯವನ್ನು ನಾವಿನ್ನೂ ತೋರಬೇಕಷ್ಟೆ. ಇತ್ತೀಚೆಗೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಯ ಬದಲಾಗಿ ಹಾಲನ್ನೇ ನೀಡಬೇಕೆಂದು ಕೆಲವು ‘ಧಾರ್ಮಿಕ ನಾಯಕರುಗಳೂ’, ಅವರ ಬೆಂಬಲಕ್ಕಿರುವ ರಾಜಕಾರಣಿಗಳೂ ಕಿರುಚಾಡಿದ ಸಂದರ್ಭದಲ್ಲಿ, ಈ ಬಗ್ಗೆ ನಾನು ಹೆಚ್ಚಿನ ವಿವರಗಳನ್ನು ಬರೆದಿದ್ದೇನೆ (ಇಲ್ಲಿ ನೋಡಿ http://arogya.sampada.net/node/5 ). ಹಾಲನ್ನೀಯುವ ‘ಗೋಮಾತೆಯ’ ಬಗೆಗಿನ ‘ವಿಶ್ವ’ ಸಮ್ಮೇಳನಕ್ಕೆ ನಮ್ಮ ಹಣವನ್ನು ದಾನ ನೀಡಿರುವವರೂ ಹಾಲಿನ ಪರವಹಿಸಿ ಬೊಬ್ಬಿರಿದ ಇದೇ ರಾಜಕಾರಣಿಗಳೆನ್ನುವುದು ಗಮನಿಸತಕ್ಕದ್ದಾಗಿದೆ.

ಹಸುಗಳ ಹಾಲನ್ನು ಸೇವಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟಾಗಬಹುದೆಂದ ಮೇಲೆ, ಹಸುಗಳ ಮೂತ್ರ ಮತ್ತದರಿಂದ ತಯಾರಿಸಿದ ಅರ್ಕಗಳಿಂದ ಆರೋಗ್ಯವು ನೆಟ್ಟಗಾಗುತ್ತದೆಯೆಂದು ಹೇಳುವುದಕ್ಕೆ ಸಾಕ್ಶ್ಯಾಧಾರಗಳಿವೆಯೇ? ಆ ಬಗ್ಗೆ ವೈಜ್ಞಾನಿಕವಾದ ಸಂಶೋಧನೆಗಳಾಗಿವೆಯೇ? ಆಗಿದ್ದರೆ ಅವು ಯಾವುದೇ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆಯೇ?

ಹಸುಗಳ ಹಾಲಿನಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವುದು ಮಾತ್ರವೇ ಅಲ್ಲ, ಹಾಲು ಮತ್ತು ಮಾಂಸಕ್ಕಾಗಿ ಹಸುಗಳು ಹಾಗೂ ಇನ್ನಿತರ ಪ್ರಾಣಿಗಳನ್ನು ಮನುಷ್ಯನು ಸಾಕುತ್ತಿರುವುದರಿಂದಾಗಿ ಪ್ರಾಕೃತಿಕ ಸಮತೋಲನವೇ ಏರುಪೇರಾಗುತ್ತಿ ದೆಯೆಂದು ವಿಶ್ವ ಸಂಸ್ಥೆಯ ಇತ್ತೀಚಿನ ವರದಿಯೊಂದು ಎಚ್ಚರಿಕೆಯನ್ನು ನೀಡಿರುವುದು ಬಹುಷಃ ಹೆಚ್ಚಿನವರ ಗಮನಕ್ಕೆ ಬಂದಿಲ್ಲವೇನೋ? ಮನುಷ್ಯನ ಕೃಪೆಯಿಂದಾಗಿ ಆಗಿರುವ ಈ ನಿಸರ್ಗಸಹಜವಲ್ಲದ ಪ್ರಾಣಿಸಂಖ್ಯಾಸ್ಫೋಟಕ್ಕೆ ಭೂಮಿತಾಯಿಯು ಬಲುದೊಡ್ಡ ಬೆಲೆ ತೆರಬೇಕಾಗಿ ಬಂದಿದೆ. ನವೆಂಬರ್ ೨೦೦೬ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಟಿಸಿರುವ ವರದಿಯಲ್ಲಿ ಭೂಲೋಕದ ತಾಪಮಾನದ ಏರಿಕೆಗೆ, ಭೂಮಿ ಬರಡಾಗುವುದಕ್ಕೆ, ನೀರಿನ ಮೂಲಗಳು ಮರೆಯಾಗುತ್ತಿರುವುದಕ್ಕೆ ಮತ್ತು ಕಲುಷಿತಗೊಳ್ಳುತ್ತಿರುವುದಕ್ಕೆ ಸಾಕುಪ್ರಾಣಿಗಳ ಕೊಡುಗೆಯು ಗಣನೀಯವಾಗಿದೆಯೆಂದು ಹೇಳಲಾಗಿದೆ. Livestock’s Long Shadow–Environmental Issues and Options ಎಂಬ ಈ ವರದಿಯಲ್ಲಿ ಹೇಳಲಾಗಿರುವ ಕೆಲವು ಮುಖ್ಯಾಂಶಗಳು ಹೀಗಿವೆ:

[ಈ ವರದಿಯನ್ನು ಅಂತರ್ಜಾಲದಲ್ಲಿ ಪಡೆಯಬೇಕಾದರೆ ಈ ತಾಣಗಳನ್ನು ನೋಡಿ:
1. Rearing cattle produces more greenhouse gases than driving cars, UN report warns http://www.un.org/apps/news/story.asp?NewsID=20772&Cr=global&Cr1=warming
2. Livestock’s Long Shadow–Environmental Issues and Options http://www.virtualcentre.org/en/library/key_pub/longshad/A0701E00.pdf ]

• ಸಾಕುಪ್ರಾಣಿಗಳು ಭೂಮಿಯ ನೆಲವಿಸ್ತೀರ್ಣದ ಶೇ.30ರಷ್ಟನ್ನು ಬಳಸಿಕೊಳ್ಳುತ್ತಿದ್ದು, ಅವುಗಳ ಆಹಾರಗಳನ್ನು ಬೆಳೆಯುವುದಕ್ಕೆ ಇನ್ನೂ ಹೆಚ್ಚಿನ ಭೂಭಾಗವು ಬಳಕೆಯಾಗುತ್ತಲಿದೆ. ಸಾಕುಪ್ರಾಣಿಗಳಿಗಾಗಿ ಹುಲ್ಲುಗಾವಲುಗಳನ್ನು ವಿಸ್ತರಿಸಲಾಗುತ್ತಿರುವುದು ಕಾಡುಗಳ ನಾಶಕ್ಕೆ ಅತಿಮುಖ್ಯವಾದ ಕಾರಣಗಳಲ್ಲೊಂದಾಗಿದೆ. ಲ್ಯಾಟಿನ್ ಅಮೆರಿಕದಲ್ಲಿ ಒಂದು ಕಾಲಕ್ಕೆ ದಟ್ಟವಾಗಿದ್ದ ಅಮೆಜಾನ್ ಕಾಡುಗಳಲ್ಲಿ ಶೇ.70ರಷ್ಟನ್ನು ಇಂದು ಹುಲ್ಲುಗಾವಲುಗಳಾಗಿ ಪರಿವರ್ತಿಸಲಾಗಿದೆ. ಜಾನುವಾರುಗಳು ಮೇವು ತಿನ್ನುವ ಭರಾಟೆಯಲ್ಲಿ ಹಸಿರೆಲ್ಲ ಮಾಯವಾಗಿ ಭೂಮಿಯು ಬೆಂಗಾಡಾಗುವ ಅಪಾಯವಿದೆಯೆಂದೂ ಈ ವರದಿಯು ಎಚ್ಚರಿಕೆಯನ್ನು ನೀಡಿದೆ. (ಅರೇಬಿಯಾದಲ್ಲಿ ಸಾವಿರಗಟ್ಟಲೆಯಲ್ಲಿ ಸಾಕಿದ ಆಡು-ಕುರಿಗಳು ಇಡೀ ಪ್ರದೇಶವನ್ನೇ ಮರುಳುಗಾಡಾಗಿಸಿದ್ದರ ನೆನಪು ಆರಿಹೋಗುವ ಮೊದಲೇ ಈ ಎಚ್ಚರಿಕೆಯು ಮೊಳಗಿದೆ.)
• ಇದರ ಜೊತೆಗೆ, ಭೂಸವೆತ ಹಾಗೂ ನೀರಿನ ಕೊರತೆಗೂ ಸಾಕುಪ್ರಾಣಿಗಳು ಸಾಕಷ್ಟು ಮಟ್ಟಿಗೆ ಕಾರಣವಾಗಿವೆ. ಪಶುಸಂಗೋಪನೆಯಿಂದಾಗಿ ಹಲವಾರು ಜಲಮೂಲಗಳು ಕಲುಷಿತಗೊಂಡಿವೆ.
• ಭೂಮಿಯ ಮೇಲಿನ ತಾಪಮಾನದ ಏರಿಕೆಗೆ ಪಶುಸಂಗೋಪನೆಯ ವಿವಿಧ ಚಟುವಟಿಕೆಗಳು ಹಾಗೂ ಈ ಸಾಕುಪ್ರಾಣಿಗಳು ತಮ್ಮ ಕರುಳುಗಳಿಂದ ವಿಸರ್ಜಿಸುವ ಅನಿಲಗಳು ಗಣನೀಯವಾದ ಕಾರಣಗಳೆಂದು ಈ ವರದಿಯು ಎಚ್ಚರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮೇಲಿನ ತಾಪಮಾನವು ಅಪಾಯಕಾರಿ ಮಟ್ಟದಲ್ಲಿ ಏರುತ್ತಿರುವುದು ಮನುಷ್ಯನೂ ಸೇರಿದಂತೆ ಸಕಲ ಜೀವರಾಶಿಯ ಉಳಿವಿಗೇ ಸಂಚಕಾರವನ್ನು ತಂದೊಡ್ಡಿದೆ. ವರ್ಷ ೨೦೫೦ರ ವೇಳೆಗೆ ಹಲವು ಜೀವ ವೈವಿಧ್ಯಗಳು ಭೂಮಿಯ ಮೇಲಿಂದ ಮರೆಯಾಗಬಹುದೆಂದು ಅಂದಾಜಿಸಲಾಗಿದೆ. ತಾಪಮಾನದ ಏರಿಕೆಯಿಂದಾಗಿ ಉಂಟಾಗುವ ಹವಾಮಾನದ ವೈಪರೀತ್ಯಗಳು, ಸಾಗರದ ಮಟ್ಟಗಳಲ್ಲಿ ಏರಿಕೆ, ನೀರಿನ ಅತೀವ ಕೊರತೆ, ಕೀಟಜನ್ಯ ರೋಗಗಳಲ್ಲಿ ಹೆಚ್ಚಳ ಇವೇ ಮುಂತಾದ ಹತ್ತು ಹಲವು ಸಮಸ್ಯೆಗಳು ಈಗಾಗಲೇ ಗೋಚರಿಸಲಾರಂಭಿಸಿದ್ದು ಮುಂಬರುವ ವರ್ಷಗಳಲ್ಲಿ ಇವು ಭೂತಾಕಾರವಾಗಿ ಬೆಳೆದು ಮನುಷ್ಯನ ಸಾಮರ್ಥ್ಯಕ್ಕೇ ಸವಾಲಾಗಲಿವೆ. ಭೂಮಿಯ ತಾಪಮಾನದ ಏರಿಕೆಗೆ ಮನುಷ್ಯನ ನಿಸರ್ಗವಿರೋಧಿ ಚಟುವಟಿಕೆಗಳಿಂದ ಹೊರಹೊಮ್ಮುವ 'ಹಸಿರು ಮನೆ ಅನಿಲಗಳೇ' ಮುಖ್ಯ ಕಾರಣವೆನ್ನುವುದು ಸರ್ವವಿದಿತವಾಗಿದೆ. ವಿಮಾನಗಳು, ಹಡಗುಗಳು ಮತ್ತು ಭೂಸಂಚಾರಿ ವಾಹನಗಳು ಉಗುಳುವ ಹೊಗೆ ಹಾಗೂ ಕಾರ್ಖಾನೆಗಳು ಹೊರಬಿಡುವ ಹೊಗೆಗಳು ಒಂದೆಡೆಯಾದರೆ, ಇದಕ್ಕಿಂತಲೂ ಮುಖ್ಯವಾಗಿ, ಸಾಕು ಪ್ರಾಣಿಗಳು ಹುಲ್ಲನ್ನು ತಿಂದು ತಮ್ಮ ಕರುಳುಗಳಿಂದ ಹೊರಬಿಡುವ ಗಾಳಿಯಲ್ಲಿರುವ ಅನಿಲಗಳು ಕೂಡಾ 'ಹಸಿರು ಮನೆ' ಪರಿಣಾಮಕ್ಕೆ ಕಾರಣಗಳೆಂದು ವಿಶ್ವಸಂಸ್ಥೆಯ ಈ ವರದಿಯಲ್ಲಿ ಹೇಳಲಾಗಿದೆ. ಮಾನವನ ಚಟುವಟಿಕೆಗಳಿಂದಾಗಿ ಹೊರಹೊಮ್ಮುತ್ತಿರುವ 'ಹಸಿರುಮನೆ ಅನಿಲ'ಗಳಲ್ಲಿ, ಅಂಗಾರಾಮ್ಲದ ಶೇ.೯ ರಷ್ಟು, ನೈಟ್ರಸ್ ಆಕ್ಸೈಡ್‌ನ ಶೇ. ೬೫ ರಷ್ಟು ಮತ್ತು ಮಿಥೇನ್‌ನ ಶೇ.೩೭ ರಷ್ಟು ಸಾಕುಪ್ರಾಣಿಗಳ ಮೂಲದಿಂದಲೇ ಬರುತ್ತವೆಯೆಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. (ತನ್ನ ಹಾಗೂ ತಾನು ಸಾಕಿದ ಪ್ರಾಣಿಗಳ ಆಹಾರಕ್ಕೋಸ್ಕರ ಮನುಷ್ಯನು ನಡೆಸುತ್ತಿರುವ ಭತ್ತ ಮುಂತಾದ ಧಾನ್ಯಗಳ ಬೇಸಾಯದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಮಿಥೇನ್ ಬಿಡುಗಡೆಯಾಗುತ್ತದೆಯೆನ್ನುವುದನ್ನು ಗಮನಿಸಿ). ಇವುಗಳ ಪೈಕಿ, ನೈಟ್ರಸ್ ಆಕ್ಸೈಡ್ ಮತ್ತು ಮಿಥೇನ್ ಅನಿಲಗಳು ಅಂಗಾರಮ್ಲಕ್ಕಿಂತ ಕ್ರಮವಾಗಿ ೨೯೬ ಪಟ್ಟು ಹಾಗೂ ೨೩ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ. ಅಷ್ಟೇ ಅಲ್ಲದೆ, ಮಾನವನ ಚಟುವಟಿಕೆಗಳಿಂದ ಬಿಡುಗಡೆಯಾಗುವ ಅಮೋನಿಯಾದ ಶೇ.೬೪ ರಷ್ಟು ಪಾಲು ಸಾಕುಪ್ರಾಣಿಗಳಿಂದಲೇ ಬರುತ್ತದೆ ಮತ್ತು ಅಮೋನಿಯಾವು ಆಮ್ಲೀಯ ಮಳೆಯನ್ನುಂಟು ಮಾಡುತ್ತದೆ.

ಒಟ್ಟಿನಲ್ಲಿ ಪಶುಸಂಗೋಪನೆಯು ಭೂಮಿಯ ತಾಪಮಾನದ ಏರಿಕೆಗೆ, ಕಾಡುಗಳ ನಾಶಕ್ಕೆ, ಭೂಮಿಯು ಬಂಜರಾಗುವುದಕ್ಕೆ, ನೀರಿನ ಮೂಲಗಳು ಕಲುಷಿತಗೊಳ್ಳುವುದಕ್ಕೆ ಮತ್ತು ಮರೆಯಾಗುತ್ತಿರುವುದಕ್ಕೆ ಸಾಕಷ್ಟು ದೊಡ್ಡ ಕಾರಣವೆಂದು ವಿಶ್ವಸಂಸ್ಥೆಯ ವರದಿಯು ಎಚ್ಚರಿಸಿದೆ. ಈ ಸಮಸ್ಯೆಯತ್ತ ಅತಿ ತುರ್ತಾಗಿ ಗಮನ ಹರಿಸದಿದ್ದರೆ ಭೂಮಿಯ ಮೇಲೆ ಮನುಷ್ಯನೂ ಸೇರಿದಂತೆ ಇಡೀ ಜೀವ ಸಂಕುಲದ ಉಳಿವಿಗೇ ಸಂಚಕಾರ ಬಂದೊದಗಬಹುದೆಂದು ಹೇಳಲಾಗಿದೆ. ಭಾರತ, ಬ್ರೆಜಿಲ್ ಗಳಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಹನಗಳಿಗಿಂತಲೂ ಪಶುಸಂಗೋಪನೆಯಿಂದಾಗಿಯೇ ಹೆಚ್ಚಿನ ಪರಿಸರ ಮಾಲಿನ್ಯವುಂಟಾಗುತ್ತಿರುವುದು ಗಮನಿಸತಕ್ಕ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಭಾರತದಲ್ಲಿ ಜಗತ್ತಿನ ಬೇರೆಲ್ಲೆಡೆಗಿಂತಲೂ ಹೆಚ್ಚು ಸಂಖ್ಯೆಯ ಸಾಕುಪ್ರಾಣಿಗಳಿವೆಯೆನ್ನುವುದು ನಮಗೆ ಹೆಮ್ಮೆ ತರುವ ಸಂಗತಿಯೇನಲ್ಲ.

ವಸ್ತುಸ್ಥಿತಿಯು ಹೀಗಿರುತ್ತಾ, ನಮ್ಮ ತೆರಿಗೆಯ ಹಣದ ಬೆಂಬಲದೊಂದಿಗೆ ನಡೆಯಲಿರುವ ವಿಶ್ವ ಗೋ ಸಮ್ಮೇಳನದಲ್ಲಿ ದನಗಳ ಹಾಲಿನಿಂದಾಗುವ ದುಷ್ಪರಿಣಾಮಗಳ ಬಗೆಗೆ, ಪಶುಸಂಗೋಪನೆಯಿಂದಾಗಿ ಜಗತ್ತಿನ ಪರಿಸರದ ಮೇಲಾಗುತ್ತಿರುವ ಹಾನಿಯ ಬಗೆಗೆ, ಅದರಲ್ಲೂ ವಿಶೇಷವಾಗಿ ಭೂಮಿಯ ತಾಪಮಾನದ ಮೇಲಾಗುತ್ತಿರುವ ವಿಪರೀತವಾದ ಪರಿಣಾಮಗಳ ಬಗೆಗೆ (ಜಗನ್ಮಾತೆಯಿಂದ ನಿಜಕ್ಕೂ ಜಗದೊಳಿತಾಗುವುದೇ ಎಂಬ ಬಗೆಗೆ) ಮತ್ತು ಒಟ್ಟಾರೆಯಾಗಿ ಮನುಷ್ಯನಿಗೆ ದನಗಳ ಅಗತ್ಯದ ಬಗೆಗೆ ವೈಜ್ಞಾನಿಕವಾದ, ವೈಚಾರಿಕವಾದ, ವಸ್ತುನಿಷ್ಠವಾದ, ವೈಯಕ್ತಿಕ ಭಾವೋದ್ರೇಕಗಳಿಂದ ಮುಕ್ತವಾದ ಚರ್ಚೆಗಳು ನಡೆಯಲಿ ಎಂದು ತೆರಿಗೆದಾರರಾದ ನಾವೆಲ್ಲರೂ ಆಶಿಸಬಹುದೇ?

03 May23:42

ಗೋ ಸಮ್ಮೇಳನವೂ, ಪರಿಸರ ಹಾನಿಯೂ, ಕೋಟಿ ಪುಣ್ಯವೂ

By skakkilaya

‘ಅಳಿವಿನಂಚಿನಲ್ಲಿರುವ’ ಭಾರತೀಯ ಗೋತಳಿಗಳ ರಕ್ಷಣೆಗಾಗಿ ನಡೆಸಲಾಯಿತೆಂದು ಹೇಳಲಾದ ‘ಜಗನ್ಮಾತೆಯ ಜಾಗತಿಕ ಹಬ್ಬ’ದಿಂದಾಗಿ, ಪವಿತ್ರವಾದ ಭಾರತೀಯ ಗೋವುಗಳ ಪರಮ ಪವಿತ್ರವಾದ ಮೂತ್ರವೇ ಮುಂತಾದ ಕಶ್ಮಲಗಳು, ಕೀಟನಾಶಕಗಳು ಇತ್ಯಾದಿಗಳು ಹರಿದು ಶರಾವತಿಯ ನೀರನ್ನೆಲ್ಲ ಕಲುಷಿತಗೊಳಿಸಿ ಸಹಸ್ರಾರು ಮೀನುಗಳ ಸಾವಿಗೆ ಕಾರಣವಾದದ್ದೇ ಅಲ್ಲದೆ, ಇನ್ನೂ ಹಲದಿನಗಳ ಕಾಲ ಅಲ್ಲಿನ ಜನರಿಗೂ ಆ ನೀರು ಬಳಸಲಸಾಧ್ಯವಾಗಿದೆಯಂತೆ. ಗೋಸಾಕಣೆಯಿಂದಾಗಿ ಪರಿಸರದ ತಾಪಮಾನವು ಏರುವುದೇ ಅಲ್ಲದೆ ಅವುಗಳಿಂದ ಸಾಕಷ್ಟು ಪರಿಸರ ಮಾಲಿನ್ಯವೂ ಆಗುತ್ತದೆಯೆಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯಲ್ಲಿ ಹೇಳಿದ್ದೇನೂ ಉತ್ಪ್ರೇಕ್ಷೆಯಲ್ಲವೆಂದಾಯಿತಲ್ಲ!

ಇನ್ನು ‘ಪುಣ್ಯಕೋಟಿಯ ಉಳಿಸಿ, ಕೋಟಿ (ಪುಣ್ಯವ) ಗಳಿಸಿ'ದ ಬಗೆಗೆ ತನಿಖೆಯಾಗಬೇಕೆಂದು ದಲಿತ ಸಂಘರ್ಷ ಸಮಿತಿ ಮತ್ತಿತರ ಸಂಘಟನೆಗಳು ಒತ್ತಾಯಿಸಿವೆ. [ನೋಡಿ ಪ್ರಜಾವಾಣಿ ತಾ. ಮೇ 3, 2007 ವಿಶ್ವ ಗೋಸಮ್ಮೇಳನದ ಕೊಳಕು: ನದಿಯ ಮೀನುಗಳ ಮಾರಣ ಹೋಮ http://prajavani.net/Content/May32007/state2007050226777.asp?section=scr... ]

25 Apr08:24

ಪುಣ್ಯಕೋಟಿಗೆ ಇನ್ನಷ್ಟು ಕೋಟಿ!

By skakkilaya

ಗೋಸಮ್ಮೇಳನದ ಉದ್ಘಾಟನೆಯ ಸಂದರ್ಭದಲ್ಲಿ, ಗೋರಕ್ಷಣೆಗಾಗಿ 30 ಕೋಟಿ ರೂಪಾಯಿಗಳನ್ನು ಒದಗಿಸುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆಂದು ವರದಿಯಾಗಿದೆ. ಹಾಗೆಲ್ಲಾ ಬೊಕ್ಕಸದ ಹಣವನ್ನು ನೀಡುವುದಕ್ಕೆ ನಾವು ಬಿಡಲಾರೆವು ಅಂತ ಡಿಕೆಶಿ ಹೇಳಿರುವುದೂ ವರದಿಯಾಗಿದೆ. ಅಂತೂ ಭಾರತೀಯ ಪುಣ್ಯಕೋಟಿಯು 'ವಿನಾಶದ ಅಂಚಿನಲ್ಲಿದೆ' ಎಂದು ಯಾರೋ ಹೇಳಿದ್ದಕ್ಕೆ ಗೋಪ್ರೇಮಿ ಸರಕಾರವು ಕೋಟಿಗಟ್ಟಲೆ ಹಣವನ್ನು ಮಠಕ್ಕೆ ನೀಡಲು ಮುಂದಾಗಿದೆ. ಅಂತೂ ಪುಣ್ಯಕೋಟಿಯ ಉಳಿಸುವ, ಕೋಟಿ(ಪುಣ್ಯವ)ಗಟ್ಟಲೆ ಗಳಿಸುವ ಆಶಯವು ಸಫಲವಾಗುವಂತೆ ತೋರುತ್ತಿದೆ!

ನಾಯಿಗಳು ಮತ್ತು ದನಗಳ ಮೇಲೆ ತೋರಿಸಲಾಗುತ್ತಿರುವ ಈ ವಿಶೇಷವಾದ ಕಾಳಜಿಯ ಅತಿಸಣ್ಣ ಭಾಗದಷ್ಟಾನ್ನಾದರೂ ಬಡಜನರ ಬಗ್ಗೆ ತೋರಿಸುವ ಸದ್ಬುದ್ಧಿಯು ನಮ್ಮನ್ನಾಳುವ ಮಂದಿಗೆ ಬರಲೆಂದು ಆ ಗೋಮಾತೆ ಅವರನ್ನು ಹರಸಲೆಂದು ನಾವೆಲ್ಲರೂ ಪ್ರಾರ್ಥಿಸೋಣವೇ?

14 Apr00:44

ಗೋವುಗಳು ಮತ್ತು ನಾವು- ಯಾಕೆ ಈ ಧ್ವಂಧ್ವ

By shrikanthnh

ಗೋವುಗಳು ಮತ್ತು ನಾವು- ಒಂದು ಪ್ರತಿಕ್ರಿಯೆ
ಡಾ. ಶ್ರೀಕಾಂತ ಎನ್ ಹೆಗಡೆ, ಶಿವಮೊಗ್ಗ

ಡಾ . ಶ್ರೀನಿವಾಸ ಕಕ್ಕಿಲ್ಲಾಯ ಅವರು ತಮ್ಮ ಲೇಖನದಲ್ಲಿ ಕೆಲವು ಕುತೂಹಲಕಾರಿಯಾದ ವಿಷಯ ಗಳನ್ನು ಆಧಾರ ಸಹಿತ ವಿವರಿಸಿದ್ದಾರೆ. ಆದರೆ ವೈಜ್ನಾನಿಕ ಅಂಶ ಗಳ ಜೊತೆಗೆ ರಾಜಕೀಯ ವನ್ನು ಬೆರೆಸಿರುವುದು ಗೋಜಿಗೆ ಕಾರಣವಾಗಿದೆ. ಇಲ್ಲಿ ಮುಖ್ಯವಾಗಿರುವುದು ೩ ವಿಷಯಗಳು : ೧. ಗೋವಿಗೆ ಮಾತೆಯ ಸ್ವರೂಪ ಕೊಟ್ಟಿರುವುದು ೨. ಗೋ ಸಮ್ಮೇಳನಕ್ಕೆ ಸರ್ಕಾರದ ೨ ಕೋಟಿ ರೂ. ಕೊಡುಗೆ ೩. ಗೋ ಮತ್ತು ಇತರ ಪ್ರಾಣಿಗಳಿಂದಾಗುವ ಗ್ಲೋಬಲ್ ವಾರ್ಮಿಂಗ್? ಇತ್ಯಾದಿ.

ನಮ್ಮ ದೇಶದಲ್ಲಿ ಸಹಸ್ರಾರು ವರ್ಷ ಗಳಿಂದ ಗೋ ಪೂಜ್ಯ ಸ್ಥಾನವನ್ನು ಪಡೆದಿದೆ. ಪುರಾಣ ಗಳು , ಮಹಾ ಗ್ರಂಥ ಗಳಲ್ಲೂ ಗೊವನ್ನು ಪೂಜಿಸುವುದು ಕಾಣಿಸುತ್ತದೆ. ಆದರೆ ಯಾವಾಗ ವಿದೇಶಿ ಗೊ ಥಳಿಗಳಿಗಳಿಂದ ಗರ್ಭ ಧಾರಣೆ ಮಾಡಿಸಿ ಗೊ ವನ್ನು ಹಾಲು ಕೊಡುವ ಯಂತ್ರ ದಂತೆ ನೋಡಲು ಪ್ರಾರಂಭಿಸಿದಂದಿನಿಂದೆ ಸ್ವದೇಸಿ ಗೋ ತ ಳಿ ಗಳ ನಾಶ ಪ್ರಕ್ರಿಯೆ ಪ್ರಾರಂಭ ವಾಯಿತು. ಈಗ ರಾಮಚಂದ್ರಾಪುರ ಮಠದ ಸ್ವಾಮಿಜಿ ಉದ್ದೇಶಿಸಿರುವುದು ಈ ಸ್ವದೇಶಿ ಗೋ ತಳಿಗಳ ರಕ್ಷಣೆ ಮತ್ತು ಅಭಿವ್ರುದ್ದಿ. ಈ ನಿಟ್ಟಿನಲ್ಲಿ ಅವರು ಅನೇಕ ಅಭಿಯಾನ ವನ್ನು ಕೈಗೊಂದಿದ್ದಾರೆ.
ಗೋ ವನ್ನು ಪೂಜಿಸುವುದು ಒಂದು ಭಾವನೆ. ಇದಕ್ಕೆ ಪೌರಾಣಿಕ ,ಸಾಂಸ್ಕ್ರುತಿಕ ,ಧಾರ್ಮಿಕ ಹಿನ್ನಲೆ ಇದೆ. ಇದನ್ನು ತಪ್ಪು ಅಥವಾ ಅವೈಜ್ನಾನಿಕವೆನ್ನಬರುವುದಿಲ್ಲ.ಜನರ ಭಾವನೆಗಳು ಯಾವಾಗಲೂ ವೈಚಾರಿಕ ,ವ್ಯವಹಾರಿಕ ಅಥವಾ ವೈಜ್ನಾನಿಕ ವಾಗಿಯೇಇರುತ್ತವೆ ಅಥವಾ ಇರಬೇಕು ಎಂದು ಅಪೇಕ್ಷಿಸಲಾಗುವುದಿಲ್ಲ ಅಥವಾ ಹಾಗೆ ಅಪೇಕ್ಷಿಸಲೂಬಾರದು. ಈ ಸಂಭಂಧ ನಡೆಯುವ ಘರ್ಷಣೆ ಇಥ್ಯಾದಿಗೆ ಕೇವಲ ಗೊ ಪ್ರೇಮಿಗಳನ್ನಷ್ಟೇ ದೂರುವುದೂ ಸರಿಯಲ್ಲ. ಒಂದು ಕೈ ಯಾವಗಲೂ ಚಪ್ಪಾಳೆ ಯಾಗಲಾರದು.
ಎರದನೆಯದಾಗಿ ಗೊ ಸಮ್ಮೆಳನ ಕ್ಕೆ ಸರ್ಕಾರದ ಧನಸಹಾಯ - ನೀವು ಹೇಳಿದಂತೆ ಇದು ತೆರಿಗೆದಾರನ ಹಣ . ಆದರೆ ಈ ದೇಶದಲ್ಲಿ ಇದೇ ಮೊದಲ ಬಾರಿಗೆ ಎನಾದರೂ ತೆರಿಗೆ ದಾರನ ಹಣ ವನ್ನು ಧಾರ್ಮಿಕ ಅಥವಾ ಇನ್ನಾವುದೆ ಉದ್ದೇಶ ಕ್ಕೆ ಕೊಟ್ತಿದ್ದಾಗಿದ್ದರೆ ಸರಿ. ಪ್ರತಿ ವರ್ಷ ಸರ್ಕಾರ ಕೆಲವರ ತೀರ್ಥ ಯಾತ್ರೆಗೆ ನೂರಾರು ಕೋಟಿ ಸಬ್ಸಿಡಿ ಕೊಡುತ್ತಿಲ್ಲವೇ? ಇದು ಯಾರ ಹಣ ? ಈ ತೆರಿಗೆ ಯಾರಿಂದ ಬಂದಿದ್ದು? ಅದಕ್ಕಿಲ್ಲದ ಗದ್ದಲ ಈಗೇಕೆ? ಈ ಧ್ವಂಧ್ವ ಸಮಂಜಸವೇ? ಕೇವಲ ೧೧ ತಿಂಗಳು ಪ್ರಧಾನಿಯಗಿದ್ದ ವ್ಯಕ್ತಿಯ ೧೧ ವರ್ಷದ ಡಯಾಲಿಸಿಸ್ ಚಿಕಿ ತ್ಸೆಯ ವೆಚ್ಚವನ್ನು ಸರ್ಕಾರ ವಹಿಸುವುದು ಯಾರ ಹಣದಿಂದ? ಇದು ತೆರಿಗೆದಾರನ ಹಣವಲ್ಲವೆ? ಖಾತೆಯೇ ಇಲ್ಲದ ಮಂತ್ರಿಯೊಬ್ಬನ ಜೀವವಿಲ್ಲದ ದೇಹವನ್ನು ಅಮೇರಿಕದ ಆಸ್ಪತ್ರೆಯಲ್ಲಿಟ್ಟು ಕೋಟಿಗಟ್ಟಲೇ ಸುರಿದಿದ್ದು ತೆರಿಗೆದಾರನ ಹಣವಲ್ಲವೇ?

ಈ ಗೋ ಸಮ್ಮೇಳನ ದಿಂದ ಲೋಕ ಕಲ್ಯಾಣ ವಾಗುತ್ತದೆಂದಾಗಲೀ ಅಥವಾ ಗೋ ಗಳ ರಕ್ಷಣೆ ಯಾಗುತ್ತದೆಂದು ನಾನೂ ಕೂಡ ನಂಬಿಲ್ಲ. ಆದರೆ ಒಳ್ಳೆಯ ಉದ್ದೇಶ ವಿಟ್ಟು ಮಾಡುತ್ತಿದ್ದರೆ ಒಳ್ಳೆಯದಾಗಲಿ ಎಂದು ದೂರದಿಂದ ಹಾರೈಸುವವರಲ್ಲಿ ಒಬ್ಬ ಅಷ್ಟೇ.
ಇನ್ನು ಸಾಕು ಪ್ರಾಣಿಗಳಿಂದಾಗುವ ಗ್ಲೋಬಲ್ ವಾರ್ಮಿಂಗ್ ಕುತೂಹಲಕಾರಿಯಾಗಿದೆ. ಆದರೆ ಇದರರ್ಥ ಏನು? ಈ ಭೂಮಿ ಕೇವಲ ಮಾನವನಿಗಾಗಿಯಷ್ಟೇ ಇರಬೇಕೆ? ಇತರ ಜೀವಿಗಳಿಗೆ ಇಲ್ಲಿ ಬದುಕಲು ಹಕ್ಕೇ ಇರಬಾರದೇ ? ಮಾನವನ ಇತಿಹಾಸದುದ್ದಕ್ಕೊ ದನ, ಕುರಿ, ಕೋಳಿ ಇತ್ಯಾದಿ ಪ್ರಾಣಿಗಳು ಮಾನವನ ಜೊತೆ ಸಹ ಜೀವನ ನಡೆಸಿ ವ್ಯಕ್ತಿಯ ಕುಟುಂಬದಲ್ಲೊಬ್ಬರಾಗಿದ್ದಾವೆ. ಈ ಗ್ಲೋಬಲ್ ವಾರ್ಮಿಂಗ್ ಗೆ ಈ ಪ್ರಾಣಿಗಳ ಹತ್ತು ಪಟ್ಟು ಹಾನಿ ಮನುಷ್ಯ ಪರಿಸರಕ್ಕೆ ಮಾಡಿದ್ದಾನೆ. ಹಾಗಾದರೆ ಮನುಷ್ಯನನ್ನು ಏನು ಮಾಡಬೇಕು?

ಒಟ್ಟಾರೆ ಜಗತ್ತಿನ ಅನೇಕ ಸಮ್ಮೇಳನ ಗಳಂತೆ ಗೋ ಸಮ್ಮೇಳನ ಕೂಡ ಒಂದಿರಬಹುದು .ಆದರೆ ಔಷಧ ಕಂಪನಿಗಳ ದುಡ್ದಿನಲ್ಲಿ ನಡೆಯುವ ವೈದ್ಯಕೀಯ ಸಮ್ಮೇಳನ ಗಳಿಗಿಂತ ಭಿನ್ನವಂತೂ ಹೌದು.

14 Apr15:02

ಭಾರತೀಯ ಗೋವುಗಳು ಮತ್ತು ನಂಬಿಕೆಗಳು

By skakkilaya

ಪ್ರಿಯ ಡಾ| ಶ್ರೀಕಾಂತ, ನೀವು ಎತ್ತಿರುವ ಪ್ರಶ್ನೆಗಳು ಬಹಳ ಮುಖ್ಯವಾದುವು, ಬಹಳಷ್ಟು ಜನರ ಮನದಲ್ಲೂ ಇವೇ ಪ್ರಶ್ನೆಗಳಿರುವುದನ್ನು ನಾನು ಬಲ್ಲೆ. ನಾನು ಬರೆದಿರುವುದರಲ್ಲಿ ಯಾವುದೇ ದ್ವಂದ್ವಗಳಾಗಲೀ, ಗೊಂದಲಗಳಾಗಲೀ ನನಗಂತೂ ಗೋಚರಿಸುತ್ತಿಲ್ಲ.

ಮೊದಲನೆಯದಾಗಿ, ಸರಕಾರಗಳು ಧಾರ್ಮಿಕ ಕಾರ್ಯಗಳಿಗೆ ಹಣ ಒದಗಿಸುವ ಬಗ್ಗೆ ನಾವು ಚರ್ಚಿಸುವುದಿದ್ದರೆ, ನಮ್ಮ ದೇಶದಲ್ಲಿರುವ ಎಲ್ಲಾ ಧರ್ಮಗಳು, ಪಂಗಡಗಳು, ಜಾತಿಗಳು, ಉಪಜಾತಿಗಳು ಇತ್ಯಾದಿ ಇತ್ಯಾದಿಗಳ ಮಂದಿರಗಳು, ಮಠಗಳು, ಪೂಜಾ ಸ್ಥಳಗಳು ಇತ್ಯಾದಿಗಳ ಜೀರ್ಣೋದ್ಧಾರ, ಬ್ರಹ್ಮಕಲಶ, ಮೇಳಗಳು, ಜಾತ್ರೆಗಳು ಮುಂತಾದುವಕ್ಕೆಲ್ಲ ಸರಕಾರದ ಬೊಕ್ಕಸದಿಂದ ನೇರವಾಗಿ ಮತ್ತು ಪರೋಕ್ಷವಾಗಿ ಆಗುತ್ತಿರುವ ವೆಚ್ಚಗಳನ್ನು ಪರಿಗಣಿಸಬೇಕಾಗುತ್ತದೆ. ಅದರ ಜೊತೆಗೆ ದೇಶದ ಮೂಲೆ-ಮೂಲೆಗಳಲ್ಲಿ ನೆಲೆಸಿರುವ (ತಪೋನಿರತರಾಗಿರುವ) ಸ್ವಾಮಿಗಳು, ಬಾಬಾಗಳು, ಶ್ರೀ ಶ್ರೀ ಗಳವರುಗಳು, ಗುರುಗಳು, 'ಧರ್ಮಪಾಲಕರುಗಳು' ಇವೇ ಮುಂತಾದವರೆನ್ನೆಲ್ಲ 'ನೋಡಿಕೊಳ್ಳಲು' ಆಗುತ್ತಿರುವ ವೆಚ್ಚವನ್ನೂ, ಅವರಿಗೆ ನೀಡಲಾಗಿರುವ ತೆರಿಗೆ ವಿನಾಯಿತಿಗಳಿಂದಾಗುತ್ತಿರುವ ವೆಚ್ಚವನ್ನೂ ಲೆಕ್ಕ ಹಾಕಬೇಕಾಗುತ್ತದೆ. ಕೇವಲ ಒಂದು ನಿರ್ದಿಷ್ಟ ಕೋಮಿನವರಿಗೆ ತೀರ್ಥಯಾತ್ರೆಗೆ ಸಬ್ಸಿಡಿ ನೀಡಲಾಗುತ್ತದೆಯೆಂಬ, ನೆಲೆಯಿಂದ ಪ್ರತ್ಯೇಕಿಸಲ್ಪಟ್ಟ, ಸಂಗತಿಯನ್ನು ಉತ್ಪ್ರೇಕ್ಷಿಸಿ ತಮ್ಮ ಆಜ್ಞಾನುವರ್ತಿ ಮಾಧ್ಯಮಗಳ ಮೂಲಕ ಕೆಲವರು ಬೊಬ್ಬಿರಿದೊಡನೆ ಪ್ರಜ್ಞಾವಂತರು ಗೊಂದಲಕ್ಕೀಡಾಗುವುದು ಸರಿಯಲ್ಲ. ಭೂಲೋಕದಾದ್ಯಂತ ಬಲಿಷ್ಠರು ದುರ್ಬಲರ ಮೇಲೆ ದಾಳಿ ಮಾಡುವುದಕ್ಕೆ ಬಳಸುವ ಅತ್ಯಂತ ಸಾಮಾನ್ಯವಾದ ವಿಧಾನವಿದೆನ್ನುವ ಸತ್ಯವನ್ನು ನಾವು ಮರೆಯಬಾರದು.

ಇನ್ನು ನಂಬಿಕೆಗೆ ಬರೋಣ. ನಂಬಿಕೆ ಎನ್ನುವುದಕ್ಕೆ ಆಧಾರಗಳು ಇರುವುದೇ ಇಲ್ಲ ಅಂದ ಮೇಲೆ, ನಂಬಿಕೆಗಳು ವೈಜ್ಞಾನಿಕವಾಗಿರಬೇಕು ಯಾ ವೈಚಾರಿಕವಾಗಿರಬೇಕು ಎಂದು ಯಾರೂ ಅಪೇಕ್ಷಿಸುವುದಿಲ್ಲ, ಆದರೆ ಹಾಗೆ ನಂಬುವವರ ಮನೋಧರ್ಮವು ಬದಲಾಗಿ ಅವರೆಲ್ಲ ವೈಜ್ಞಾನಿಕವಾಗಿ ಚಿಂತಿಸಬಲ್ಲ ವಿಚಾರವಂತರಾಗಬೇಕೆಂದಷ್ಟೇ ಬಯಸುತ್ತೇವೆ. ಯಾವುದೇ ವಿಚಾರಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆಯೆಂದಾಗ ಅದೊಂದು ಸತ್ಯವಾಗುತ್ತದೆ, ಸತ್ಯದ ಅರಿವು ಜ್ಞಾನವಾಗುತ್ತದೆ, ಜ್ಞಾನಿಗಳ ಸಂಖ್ಯೆ ಹೆಚ್ಚಿದಂತೆ ಬುಡವಿಲ್ಲದ ನಂಬಿಕೆಗಳು ತನ್ನಿಂತಾನಾಗಿ ಅಳಿಯುತ್ತವೆ, ವಿವಿಧ ರೀತಿಯ ಸುಳ್ಳುಗಳನ್ನು ಹೇಳಿ ಜನರನ್ನು ಮರುಳುಗೊಳಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವವರ ಆಟಗಳು ನಿಂತುಹೋಗುತ್ತವೆ. ನಮ್ಮ ಸಮಾಜದಲ್ಲಿ ಅಂತಹ ಜ್ಞಾನವಂತರ ಸಂಖ್ಯೆಯನ್ನು ಬೆಳೆಸುವುದು ಎಲ್ಲ ಜ್ಞಾನವಂತರ ಗುರಿಯಾಗಿರಬೇಕು. ಅದಕ್ಕೆ ಬದಲಾಗಿ ಆಧಾರವಿಲ್ಲದ ನಂಬಿಕೆಗಳನ್ನು ಅನಗತ್ಯವಾಗಿ ಪೋಷಿಸುವವರ ಸಾಲಿನಲ್ಲಿ ವಿಚಾರವಂತರು ಕಾಣಿಸಿಕೊಂಡಾಗ ಸಮಾಜದ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ.

ದನಗಳ ಬಗೆಗಿನ 'ನಂಬಿಕೆ' ತೀರಾ ಇತ್ತೀಚಿನದು, ಗೋಮಾತೆಯ ಮೇಲಿನ ಮಮಕಾರವಂತೂ ಅತ್ಯಂತ ಹೊಸದು. ನಮ್ಮ ದೇಶದ ಯಾವುದೇ ಪುರಾತನ ಬರಹಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಿರುವ ಬಗ್ಗೆ ಉಲ್ಲೇಖಗಳಿದ್ದರೆ ತಿಳಿದವರು ಹೇಳಬೇಕು.

ಇನ್ನು ಪರಿಸರ ಮಾಲಿನ್ಯದ ಕುರಿತು. ಎಲ್ಲಾ ರೀತಿಯ ಪರಿಸರ ವಿನಾಶಕ್ಕೂ ಮನುಷ್ಯನೇ ಕಾರಣವೆನ್ನುವುದರಲ್ಲಿ ಎರಡು ಮಾತಿಲ್ಲ, ಗೋವುಗಳಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದಕ್ಕೂ ಅವುಗಳನ್ನು ಸಾಕಿ ಸಲಹುತ್ತಿರುವ ಮನುಷ್ಯನೇ ಕಾರಣನಾಗಿದ್ದಾನೆ. ಇವನ್ನೆಲ್ಲ ಸರಿಪಡಿಸಬೇಕಾದರೆ ಮೊದಲಾಗಿ ಮನುಷ್ಯನ ಬುದ್ಧಿಯು ನೆಟ್ಟಗಾಗಬೇಕು. ಪ್ರಕೃತಿಯ ವಿದ್ಯಮಾನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆಯೇ ಪರಿಸರದ ಮೇಲೆ ಮನಸಾರೆ ಸವಾರಿ ಮಾಡಿದ ಪರಿಣಾಮವಾಗಿ ಭೂಮಿಯಲ್ಲಿನ್ನು ಯಾರೂ ಬದುಕುಳಿಯಲಾರದಂತಹ ಪರಿಸ್ಥಿತಿಯು ನಿರ್ಮಾಣಗೊಳ್ಳುತ್ತಲಿದೆ. ತನ್ನ ಬದುಕನ್ನು ಹಸನುಗೊಳಿಸುವ ಭರದಲ್ಲಿ ತನ್ನ 'ಆಹಾರವನ್ನು' ತಾನೇ ಬೆಳೆದು, ತನ್ನ ಸಹಾಯಕ್ಕಾಗಿ, ಹಾಲಿಗಾಗಿ ಮತ್ತು ಮಾಂಸಕ್ಕಾಗಿ ಹಲವು ಪ್ರಾಣಿಗಳನ್ನು ಸಾಕಿ, ಹೊಗೆಯುಗುಳುವ ಕಾರ್ಖಾನೆಗಳನ್ನೂ, ವಾಹನಗಳನ್ನೂ ಓಡಿಸಿ, ಕಾಡುಗಳನ್ನು ಬರಿದು ಮಾಡಿ ಪ್ರಕೃತಿ ಮಾತೆಯ ಮೇಲೆ ಮನುಷ್ಯನು ನಿರಂತರವಾಗಿ ನಡೆಸುತ್ತಾ ಬಂದಿರುವ ಅತ್ಯಾಚಾರವು ಕೊನೆಗೊಳ್ಳದಿದ್ದರೆ, ಮನುಷ್ಯನೊಂದಿಗೆ ಅವನು ಸಾಕಿದ ಗೋವುಗಳು ಮತ್ತು ಅವನು ಸಾಕದ ಇತರೆಲ್ಲಾ ಜೀವರಾಶಿಗಳು ನಿರ್ನಾಮವಾಗುವ ಕಾಲವೇನೂ ಬಹುದೂರವಿಲ್ಲ.

ಜಗತ್ತಿನ ಜಾನುವಾರುಗಳ ಸಂಖ್ಯೆಯು ಸುಮಾರು ೧೩೦ಕೋಟಿಯಷ್ಟಿದ್ದು, ೨೦೦೩ರ ಜಾನುವಾರು ಗಣತಿಯ ಪ್ರಕಾರ, ಭಾರತದಲ್ಲಿ ಒಟ್ಟು ೪೮೫೦೦೨೦೦೦ ಜಾನುವಾರುಗಳಿವೆ (ಜಾಗತಿಕ ಸಂಖ್ಯೆಯ ಶೇ.೩೦). ಅವುಗಳ ಪೈಕಿ ಗೋವುಗಳ ಒಟ್ಟು ಸಂಖ್ಯೆಯು ೧೮೫೧೮೧೦೦೦ ದಷ್ಟಿದ್ದು ಜಗತ್ತಿನ ಗೋಸಂಖ್ಯೆಯ ಶೇ. ೧೫ ರಷ್ಟಾಗುತ್ತದೆ. ಈ ಪೈಕಿ, ೨೪೬೮೬೦೦೦ ಮಿಶ್ರತಳಿಯ ಗೋವುಗಳಾಗಿದ್ದು (ಶೇ. ೧೩), ಉಳಿದ ೧೬೦೪೯೫೦೦೦ ಭಾರತೀಯ ಗೋತಳಿಗಳಾಗಿವೆ (ಶೇ. ೮೭). ನಮ್ಮ ದೇಶದಲ್ಲಿ ಎಮ್ಮೆ, ಕೋಣಗಳ ಸಂಖ್ಯೆಯು ೯೭೯೨೨೦೦೦ ದಷ್ಟಿದೆ. ಇವುಗಳ ಪೈಕಿ ಸುಮಾರು ೮ ಕೋಟಿಯಷ್ಟು ಗೋವುಗಳು (ಶೇ.೩೦) ವಯಸ್ಸಾದವುಗಳೂ, ಅಪ್ರಯೋಜಕವಾದವುಗಳೂ ಆಗಿವೆಯೆಂದು ಅಂದಾಜಿಸಲಾಗಿದೆ. [ಆಕರಗಳು: http://www.livestockkerala.org/livescen.htm; http://dahd.nic.in/relcensus.htm; http://topics.developmentgateway.org/foodsecurity/rc/filedownload.do~itemId=1089359]

ವಸ್ತುಸ್ಥಿತಿಯು ಹೀಗಿರುತ್ತಾ, ಎರಡು ಮೂರಂಕೆಗಳ ಸಂಖ್ಯೆಯನ್ನು ತಲುಪಿ ಅಳಿವಿನ ಅಪಾಯದಂಚಿನಲ್ಲಿರುವ ಹಲವು ವನ್ಯಪ್ರಾಣಿಗಳಿಗೂ, ಹದಿನೆಂಟು ಕೋಟಿಯಷ್ಟಿರುವ ಗೋವುಗಳ ಶೇ. ೮೭ ರಷ್ಟಿರುವ ಭಾರತೀಯ ಗೋತಳಿಗಳಿಗೂ ಅದಾವ ಸಾಮ್ಯತೆಯೆಂದು ಗೋರಕ್ಷಣೆಗೆ ಕಟಿಬದ್ಧರಾಗಿರುವವರು ಸ್ವಲ್ಪ ತಿಳಿಸಿ ಹೇಳಿದರೆ ಒಳ್ಳೆಯದೇನೋ?

ಆದ್ದರಿಂದಲೇ, ಜಗದೊಳಿತಿಗಾಗಿ ನಡೆಸಲುದ್ದೇಶಿಸಲಾಗಿರುವ ವಿಶ್ವ ಗೋ ಸಮ್ಮೇಳನದಲ್ಲಿ ದನದ ಮೂತ್ರದ ಪ್ರಯೋಜನಗಳ ಬಗ್ಗೆ ಚರ್ಚಿಸುವಾಗ ದನದ ಹಾಲಿನಿಂದಾಗುವ ದುಷ್ಪರಿಣಾಮಗಳ ಬಗೆಗೂ, ಗೋರಕ್ಷಣೆಯ ಬಗ್ಗೆ ಆಲೋಚಿಸುವಾಗ ಗೋಸಂಖ್ಯೆಯಿಂದ ಪರಿಸರದ ಮೇಲಾಗಬಹುದಾದ ಹಾನಿಯ ಬಗೆಗೂ ವಿಚಾರಮಂಡನೆಯಾಗಲೆಂಬುದೊಂದು ಆಶಯವಷ್ಟೇ. ಇಲ್ಲವೆಂದಾದರೆ, ಔಷಧ ಕಂಪೆನಿಗಳ ಹಣದ ಬಲದಲ್ಲಿ ನಡೆಯುವ ವೈದ್ಯರುಗಳ ಸಮ್ಮೇಳನಗಳು ಹೇಗೆ ಜನಪರವಾದ ವಿಚಾರಗಳನ್ನು ಅಷ್ಟಾಗಿ ಗಮನಿಸುವುದಿಲ್ಲವೋ, ಹಾಗೆಯೇ ಈ ಸಮ್ಮೇಳನವೂ ಆದೀತೇನೋ?

14 Apr23:28

ಗೋವು ಮತ್ತುನಾವು

By shrikanthnh

ಆತ್ಮೀಯ ಡಾ. ಕಕ್ಕಿಲ್ಲಾಯರವರೇ,
ವಿಷಯ ಮತ್ತೆ ರಾಜಕೀಯದ ಸುತ್ತವೇ ಇದೆ. ಸಂಕುಚಿತ ಮನೋಭಾವದ ಕೆಲವು ವ್ಯಕ್ತಿಗಳು ಮಾಧ್ಯಮದ ಮೂಲಕ ವಿಚಾರವಂತರನ್ನು ತಪ್ಪು ದಾರಿಗೆಳೆಯುತ್ತಾರೆ ಎಂಬ ವಾದ ಸರಿಯಲ್ಲ. ಇಂದು ನಮ್ಮ ದೇಶದ ಬಹುತೇಕ ಜ್ನನ ತಮ್ಮನ್ನು ಬಲ ಅಥವಾ ಎಡ ಪಂಥದ ವಿಚಾರದೊಂದಿಗೆ ಗುರುತಿಸಿಕೊಳ್ಳ್ವುವುದಿಲ್ಲ. ಆದರೆ ನಿರ್ದಿಷ್ಟ ಕೋಮೊಂದರ ತುಷ್ಟೀಕರಣ ವನ್ನು ನೋಡಿ ನೋಡಿ ತಮಗರಿವಿಲ್ಲದಂತೆ ಬಲ ಪಂಥೀಯರಿಗೆ ಸಮೀಪವಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ತಥಾಕಥಿಥ ಜಾತ್ಯಾತೀತವಾದಿಗಳು ಮತ್ತು ಬುದ್ದ್ದಿಜೀವಿಗಳ ನಡವಳಿಕೆ. ಉದಾಹರಣೆಗೆ ಮಠ ಕ್ಕೆ, ದೇವಾಲಯಗಳ ಜೀರ್ಣೋಧ್ಧಾರಕ್ಕೆ ಕೊಡುವ ಹಣ ಮತ್ತು ಕೋಮೊಂದರ ತೀರ್ಥಯಾತ್ರೆಗೆ ಕೊಡುವ ಸಬ್ಸಿಡಿ ಅಲ್ಲಿಗಲ್ಲಿಗೆ ಸಮ ಎಂಬುವ ಅರ್ಥದ ನಿಮ್ಮ ವಿವರಣೆ. ಅದರ ಬದಲು ಎಲ್ಲಾ ವಿಚಾರವಂತರೂ , ಯಾವ ಜಾತಿ,ಕೋಮು ಎಂಬ ಭೇಧ ವಿಲ್ಲದೇ ಸರ್ಕಾರದ ಹಣವನ್ನು ಯಾವುದೇ ಮಠ ,ಮಂದಿರ, ಮಸೀದಿ, ಚರ್ಚುಗಳಿಗೆ ಧಾರ್ಮಿಕ ಕಾರಣಗಳಿಗೆ ವಿನಯೋಗಿಸಬಾರದು ಎಂದು ಒತ್ತಾಯಿಸಿದರೆ ಹೆಚ್ಚು ಅರ್ಥಪೂರ್ಣವಾದೀತು. ಇದೇ ಚರ್ಚಾ ವೆದಿಕೆಯಲ್ಲಿ ನೀವು ತೀರ್ಥಯಾತ್ರೆಗೆ ಸಬ್ಸಿದಿ ಕೊಡುವುದು ತಪ್ಪು ಎಂದು ಹೇಳುವಿರಾದರೆ ನಾನೂ ಮುಠ ಮಂದಿರ ಗಳಿಗೆ ದೇಣಿಗೆ ಕೊಡುವುದು ತಪ್ಪು ಎಂದು ಹೇಳುತ್ತೇನೆ. ರಾಜಕೀಯ ಲಾಭ ಕ್ಕಾಗಿ ಯಾವುದೇ ಜಾತಿ, ಕೋಮು ಗಳನ್ನು ಬಳಸುವುದು ತಪ್ಪು , ಇದು ಎಲ್ಲಾ ರಾಜಕೀಯ ಪಕ್ಶ ಗಳಿಗೂ ಅನ್ವಯಿಸುತ್ತದೆ,
ಇನ್ನು ಗೋಗಳನ್ನು ಪೂಜಿಸುವ ಕುರಿತು ಮತ್ಥು ನಂಬಿಕೆಯ ಕುರಿತು- ಗೋ ಗಳನ್ನು ಪೂಜಿಸುವ ,ಗೌರವಿಸುವ ವಿಷಯ ಕೇವಲ ಇತ್ತೀಚಿನ ಬೆಳವಣಿಗೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇದು ಯಾವ ಕೊಮುವಾದಿಗಳ ಹುನ್ನಾರವೂ ಅಲ್ಲ. ಭಾರತ ದಲ್ಲಿ ಗೊವನ್ನು ಕೇವಲ ಹಾಲು ಕೊಡುವ ಯಂತ್ರ ದಂತೆ ಕಾಣುತ್ತಿರುವುದು ಮಾತ್ರ ಇತ್ತೀಚಿನದು. ಹಳ್ಳಿಗಳಲ್ಲಿ ಈಗಲೂ ಗೋಗಳನ್ನು ಪೂಜಿಸುವುದು, ಹಬ್ಬ ,ವಿಶೆಷ ದಿನಗಳಲ್ಲಿ ಗೋಗ್ರಾಸ ತೆಗೆದಿಟ್ಟು ಊಟ ಮಾಡುವುದು , ಮಕ್ಕಳಂತೆ ಹೆಸರಿಟ್ಟು ಪ್ರೀತಿಸುವುದು ಸಾಮನ್ಯ. ಅದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆಯಾದರೂ ತೀರ ವಿರಳವೇನಲ್ಲ. ಇದು ನಂಬಿಕೆ ,ಧಾರ್ಮಿಕ ಕಾರಣಕ್ಕೂ ಮಿಗಿಲಾದ ಭಾವನೆ ಎಂದು ನಾನು ನಂಬಿದ್ದೇನೆ. ಇದಕ್ಕೂ ವೈಜ್ನಾನಿಕ ಚಿಂತನೆ ಬೇಕೇ? ನಾವು ತಂದೆ ತಾಯಿರನ್ನು ಗೌರವಿಸುವುದು, ಮಕ್ಕಳನ್ನು ಪ್ರೀತಿಸ್ಸುವುದು ಇದಕ್ಕೇನಾದರೂ ವೈಜ್ನಾನಿಕ ಕಾರಣ ಗಳಿದೆಯೇ?
ಗೋ ಹತ್ಯೆ ಬಹುಷ ಪುರಾಣಗಳಲ್ಲಿ ಏನಿದೆಯೋ ನನಗೆ ತಿಳಿಯದು, ಆದರೆ ಇದು ನಮ್ಮ ದೇಶದ ಮೇಲೆ ಅನ್ಯರ ಆಕ್ರಮಣದ ನಂತರ ಪ್ರಾರಂಭ ವಾಗಿರುವ ಸಮಸ್ಯೆ ಎಂಬುದು ನನ್ನ ಕಲ್ಪನೆ,ತಪ್ಪಾಗಿರಲೂಬಹುದು.
ಇನ್ನು ಗೊಮೂತ್ರ ದ ಔಷದೀಯ ಗುಣ ಇತ್ಯಾದಿ ನನ್ನ ಪ್ರಕಾರ ಕಾಗಕ್ಕ ,ಗುಬ್ಬಕ್ಕನ ಕತೆ ,ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಇನ್ನು ಸಗಣಿಯನ್ನು ಸಾವಯವ ಗೊಬ್ಬರವಾಗಿ ಬಳಸುವುದು ಮತ್ತು ಅದರ ಉಪಯೋಗದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಯಲು ಆಸಕ್ತನಾಗಿದ್ದೇನೆ.
ದನದ ಹಾಲಿನ ದುಷ್ಪರಿಣಾಮದ ಕುರಿತು ತಾವು ಬರೆದಿದ್ದೀರಿ. ಇದಕ್ಕೆ ಮೊದಲೂ ಕೂಡ ಉಲ್ಲೇಖ ಗಳನ್ನು ಒದಗಿಸಿದ್ದೀರಿ. ಇದನ್ನು ನಾನು ಭಾಗಷಹ ಒಪ್ಪಿದ್ದೆ, ಇದು ನನ್ನನ್ನು ಚಿಂತನೆಗೆ ಒಳಪಡಿಸಿದ್ದೂ ನಿಜ ಅದರೆ ಈ ಲೇಖನ ಒದಿದಾಗ ನೀವು ನಿಮ್ಮ ರಾಜಕೀಯ ಚಿಂತನೆಯಿಂದ ಪೂರ್ವಾಗ್ರಹಿತರಾಗಿದ್ದೀರೇ ಎಂಬ ಅನುಮಾನ ನನಗೆ ಬರಲಾರಂಬಿಸಿದೆ.ದಯವಿಟ್ಟು ಹಾಗಾಗದಿರಲಿ. ಅದಕ್ಕಾಗಿ ನನ್ನ ಕೋರಿಕೆ ಯೆಂದರೆ ಲೇಖನ ವೈಜ್ನಾನಿಕತೆಗೆ ಒತ್ತು ಕೊಟ್ಟು ರಾಜಕೀಯ ಅಂಶಗಳನ್ನು ದೂರವಿಡುವುದು ಒಳಿತು. ಆಗ ಚರ್ಚೆ ಹೆಚ್ಹು ಅರ್ಥಪೂರ್ಣವಗಬಹುದೆಂಬ ನಂಬಿಕೆ ಮತ್ತು ವಿಷಯ ಹೆಚ್ಹು ವಸ್ತುನಿಷ್ಟವಾಗಬಹುದು

15 Apr09:04

ತುಷ್ಟೀಕರಣದ ಪುಷ್ಟೀಕರಣ

By skakkilaya

ಪ್ರಿಯ ಡಾ| ಶೀಕಾಂತ, ಜೀವನದ ಎಲ್ಲ ಸ್ತರಗಳಲ್ಲಿಯೂ ವೈಚಾರಿಕತೆಯನ್ನು ಹೊಂದಿರುವುದು ಅಗತ್ಯವೆಂದು ತಿಳಿದುಕೊಂಡಿದ್ದೇನೆ, ಹಾಗಾದಾಗ ಯಾವುದೇ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ನಾನು ಬರೆದಿರುವ ಎಲ್ಲ ಅಭಿಪ್ರಾಯಗಳಿಗೂ (ಹಾಲಿನ ಕೆಡುಕುಗಳ ಬಗೆಗೂ ಸಹ) ಸೂಕ್ತವಾದ ಸಾಕ್ಶ್ಯಾಧಾರಗಳನ್ನೂ, ಆಕರಗಳನ್ನೂ ನಾನು ಒದಗಿಸಿದ್ದೇನೆ, ಅದರಲ್ಲಿ ನನ್ನ ವೈಯಕ್ತಿಕವಾದ ಗದ್ದಲಗಳಿಲ್ಲ. ಅದೇ ರೀತಿ, ಕೋಟಿಗಟ್ಟಲೆಯಲ್ಲಿರುವ ಭಾರತೀಯ ಗೋತಳಿಗಳು ಅಳಿವಿನಂಚಿನಲ್ಲಿರುವುದು ಅದೆಂತೆನ್ನುವುದು ನನಗೆ ಅರ್ಥವಾಗುತ್ತಿಲ್ಲವೆನ್ನುವುದನ್ನೂ ಮತ್ತು ‘ಅಳಿವಿನಂಚಿನಲ್ಲಿರುವ ಭಾರತೀಯ ಗೋತಳಿಗಳ’ ರಕ್ಷಣೆಗಾಗಿ ಕೋಟಿಗಟ್ಟಲೆ ರೂಪಾಯಿಗಳ ವೆಚ್ಚದಲ್ಲಿ ಸಮ್ಮೇಳನವನ್ನು ಆಯೋಜಿಸುತ್ತಿರುವವರು ಅದನ್ನು ನನ್ನಂತವರಿಗೆ ಅರ್ಥವಾಗುವಂತೆ ಬಿಡಿಸಿ ಹೇಳಬೇಕೆನ್ನುವುದನ್ನೂ ವಿನಮ್ರವಾಗಿಯೇ ಕೇಳುತ್ತಿದ್ದೇನೆ. ತುಷ್ಟೀಕರಣದ ಬಗ್ಗೆ ಹೇಳುವವರಿಂದ, ಅದನ್ನು ಪುಷ್ಟೀಕರಿಸುವ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಕೇಳಿ ಪಡೆದುಕೊಳ್ಳುವುದು ಸಹಾಯಕವಾದೀತು. ಹಾಗಾದಾಗ ಅಂತಹದನ್ನು (ನೋಡುವುದಕ್ಕಿಂತ ಹೆಚ್ಚಾಗಿ) ಕೇಳಿ ಕೇಳಿ, ‘ಅರಿವಿಲ್ಲದಂತೆ’ ಅದನ್ನು ಪದೇ ಪದೇ ಹೇಳುವವರಿಗೆ ‘ಸಮೀಪವಾಗುವ’ ಪ್ರಮೇಯವು ತಪ್ಪಬಹುದೇನೋ?

23 Sep17:04

ಸೊಲ್ಮೆಲು

By Guru Baliga (not verified)

ಡಾಕ್ಟ್ರೆ,
ನಿಮ್ಮ ಅಸ್ಖಲಿತ ವಿಚಾರಧಾರೆ ನನ್ನ ಹಲವು ಗೊಂದಲಗಳನ್ನು ದೂರ ಮಾಡಿದೆ. ನೀವು ಹೆಚ್ಚು ಹೆಚ್ಚು ಇಂತಹ ಮೌಢ್ಯಗಳ ಬಗ್ಗೆ ಬರೆಯಬೇಕು. " ಜೀವನದ ಎಲ್ಲ ಸ್ತರಗಳಲ್ಲಿಯೂ ವೈಚಾರಿಕತೆಯನ್ನು ಹೊಂದಿರುವುದು ಅಗತ್ಯವೆಂದು ತಿಳಿದುಕೊಂಡಿದ್ದೇನೆ" ಎನ್ನುವ ನಿಮ್ಮ ಮಾತಿನಿಂದಲೂ ನಾನು ಪ್ರಭಾವಿತನಾಗಿದ್ದೇನೆ.

ಸೊಲ್ಮೆಲು
ಗುರುದತ್ ಬಾಳಿಗ

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.