ಹೋಮಿಯೋಪತಿಯಲ್ಲಿ ಹರ(ಹುರು)ಳಿಲ್ಲ!
ಬಹು ಕಾಲದಿಂದ ನಮ್ಮ ಕುಟುಂಬಕ್ಕೆ ನಿಕಟರಾಗಿರುವ ಹಿರಿಯರೊಬ್ಬರಿಂದ ಕೆಲದಿನಗಳ ಹಿಂದೆ ದೂರವಾಣಿಯಲ್ಲಿ ನನಗೊಂದು ಕರೆ ಬಂತು. ಯಾವಾಗಲೊಮ್ಮೆ ಕರೆ ಮಾಡಿ ನಮ್ಮೆಲ್ಲರ ಬಗ್ಗೆ ವಿಚಾರಿಸುತ್ತಿದ್ದವರು ಅಂದು ಸ್ವಲ್ಪ ಸಿಟ್ಟಾಗಿದ್ದಂತೆ ಕೇಳಿಸಿತು. "ಆಯುರ್ವೇದ, ಹೋಮಿಯೋಪತಿಯ ಬಗ್ಗೆ ನೀವು ಹೇಳಿದ್ದನ್ನು ಪೇಪರ್ನಲ್ಲಿ ಓದಿದೆ. ನೀವು ಹೇಳಿದ್ದು ನನಗೆ ಒಪ್ಪಿಗೆಯಿಲ್ಲ" ಎಂದರು. ಆಶಾ ಕಾರ್ಯಕರ್ತೆಯರ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಕೇಂದ್ರ ಸರಕಾರವು ಆಯುಷ್ (ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪತಿ) ಇಲಾಖೆಗೆ ಹನ್ನೊಂದನೇ ಪಂಚವಾರ್ಷಿಕ ಯೋಜನೆಯಲ್ಲಿ 1380ಕೋಟಿ ರೂಪಾಯಿಗಳನ್ನು ವ್ಯರ್ಥವಾಗಿ ವ್ಯಯಿಸುತ್ತಿರುವುದು ಅನ್ಯಾಯವೆಂದು ನಾನು ಹೇಳಿದ್ದು ಅವರಿಗೆ ಪಥ್ಯವಾಗಿರಲಿಲ್ಲ.
"ಸರಿ, ಆದರೆ ನಿಮಗೆ ಒಪ್ಪಿಗೆ ಯಾಕಾಗಲಿಲ್ಲ?" ಎಂದೆ.
"ನಾನೂ ಹೋಮಿಯೋಪತಿ ಬಲ್ಲೆ. ಬಹಳಷ್ಟು ಜನರಿಗೆ ಹೋಮಿಯೋಪತಿ ಮದ್ದು ಕೊಟ್ಟು ಗುಣ ಪಡಿಸಿದ್ದೇನೆ. ಒಮ್ಮೆ ರೈಲಿನಲ್ಲಿ ಡೆಲ್ಲಿಗೆ ಹೋಗುತ್ತಿದ್ದಾಗ ನಮ್ಮ ಜೊತೆಗಿದ್ದ ಒಬ್ಬನಿಗೆ ತಡೆಯಲಾಗದಷ್ಟು ಬೇಧಿಯಾಯಿತು, ನಾನು ಹೋಮಿಯೋಪತಿ ಔಷಧ ಕೊಟ್ಟು ಸ್ವಲ್ಪ ಹೊತ್ತಿನಲ್ಲೇ ಅವನು ಸರಿಯಾದ" ಎಂದರು.
"ನೀವು ಎಲ್ಲೈಸಿ ಬಿಟ್ಟು ಹೋಮಿಯೋಪತಿ ಡಾಕ್ಟರಾದದ್ದು ಯಾವಾಗ, ನನಗೆ ಗೊತ್ತೇ ಆಗಲಿಲ್ಲವಲ್ಲ" ನಾನಂದೆ.
"ಬಹಳ ವರ್ಷ ಆಯಿತು, ಅದೊಂದು ಹವ್ಯಾಸ ಅಷ್ಟೆ , ಬಹಳಷ್ಟು ಜನರನ್ನು ಗುಣ ಪಡಿಸಿದ್ದೇನೆ" ಅಂದರವರು.
"ಇರಬಹುದು, ಆದರೆ ಹೋಮಿಯೋಪತಿಯಿಂದ ಯಾವುದೇ ಕಾಹಿಲೆಯನ್ನು ಗುಣಪಡಿಸಬಹುದೆನ್ನುವುದಕ್ಕೆ ಆಧಾರಗಳು ಇಲ್ಲ. ನಿಮ್ಮಲ್ಲಿದ್ದರೆ ಕೊಡಿ. ನಿಷ್ಫ್ರಯೋಜಕವಾದ ಈ ಬದಲಿ ಪದ್ಧತಿಗಳನ್ನು ನಮ್ಮ ದೇಶದ ಹಳ್ಳಿಗರ ಮೇಲೆ ಹೇರುತ್ತಿರುವುದನ್ನು ವಿರೋಧಿಸಬಾರದೇಕೆ?" ಎಂದು ಕೇಳಿದೆ.
"ಇನ್ನೊಮ್ಮೆ ಸಿಗುತ್ತೇನೆ’ ಎನ್ನುವ ಉತ್ತರ ಬಂತು
ಅದೇ ದಿನಗಳಲ್ಲಿ ಇನ್ನೊಂದು ಮಿಂಚೋಲೆಯೂ ಬಂತು. ಬೆಂಗಳೂರಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯೊಂದರಲ್ಲಿ ದುಡಿಯುತ್ತಿರುವ ತಂತ್ರಜ್ಞರೊಬ್ಬರೂ ಇಂತಹದೇ ವಾದವನ್ನು ಮುಂದಿಟ್ಟು ಹೋಮಿಯೋಪತಿಯೇ ಅತ್ಯುತ್ತಮವೆಂದು ವಾದಿಸಿದ್ದರು, ತಾನೂ ಹೋಮಿಯೋಪತಿ ಚಿಕಿತ್ಸೆಯನ್ನು ನೀಡಬಲ್ಲೆ ಎಂದು ಹೇಳಿಕೊಂಡಿದ್ದರು.
ಈ ಎಲ್ಲೈಸಿ ಏಜಂಟರು ಹಾಗೂ ತಂತ್ರಜ್ಞರಿಂದ ಹಿಡಿದು ದಾರಿಹೋಕರವರೆಗೆ ಯಾರು-ಯಾರೋ ಅತಿ ಸುಲಭದಲ್ಲಿ ಚಿಕಿತ್ಸೆಯನ್ನು ನೀಡಬಲ್ಲರೆಂದಾದರೆ, ಯಾವುದೇ ವೈದ್ಯಕೀಯ ತರಬೇತಿಯನ್ನು ಪಡೆಯದಿರುವವರು ತಾವೂ ವೈದ್ಯರೇ ಎಂದು ಯಾವುದೇ ಅಳುಕಿಲ್ಲದೆಯೇ ಘೋಷಿಸಿಕೊಳ್ಳುತ್ತಾರೆಂದರೆ, ಅಂತಹಾ ಅವಕಾಶವನ್ನೊದಗಿಸಿದ ಹೋಮಿಯೋಪತಿಯು ವೈದ್ಯಶಾಸ್ತ್ರವಾಗಲು ಹೇಗೆ ಸಾಧ್ಯ? ಕಾಹಿಲೆಯಿಂದ ಬಳಲುತ್ತಿರುವ ಒಬ್ಬ ರೋಗಿಯನ್ನು ಪರೀಕ್ಷಿಸಿ ಅವನ ಕಾಹಿಲೆ ಮತ್ತು ಅದಕ್ಕೆ ಕಾರಣಗಳನ್ನು ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ನೀಡುವುದಕ್ಕೆ ಯಾವ ಪರಿಣತಿಯೂ ಬೇಡವೇ?
ಏನಿದು ಹೋಮಿಯೋಪತಿ?
ಹೋಮಿಯೋ ಅಂದರೆ ಸದೃಶ ಅಥವಾ ಹೋಲಿಕೆಯುಳ್ಳದ್ದು ಎಂದರ್ಥ. ಪಥೋಸ್ ಅಂದರೆ ಕರುಣಾಜನಕ ಸ್ಥಿತಿ ಅಥವಾ ಕಾಹಿಲೆ. ಕಾಹಿಲೆಯ ಲಕ್ಷಣವನ್ನೇ ಹೋಲುವ ತೊಂದರೆಯನ್ನುಂಟುಮಾಡಬಲ್ಲ ವಸ್ತುವನ್ನು ಅತಿ ಸಣ್ಣ ಪ್ರಮಾಣದಲ್ಲಿ ನೀಡಿ ಕಾಹಿಲೆಯನ್ನು ಗುಣಪಡಿಸಬಹುದೆಂಬ ವಾದವನ್ನು ಹುಟ್ಟು ಹಾಕಿದ ಹಾನಿಮನ್ ಎಂಬ ಜರ್ಮನ್ ವೈದ್ಯ ತನ್ನ ಈ ಹೊಸ ಆವಿಷ್ಕಾರಕ್ಕೆ ಹೋಮಿಯೋಪತಿ ಅಥವಾ ಸದೃಶ ಚಿಕಿತ್ಸೆ ಎಂದು ಹೆಸರಿಟ್ಟ. ಸುಲಭದಲ್ಲಿ ಹೋಮಿಯೋಪತಿಯನ್ನು ಹೋಲಿಕೆ ಚಿಕಿತ್ಸೆ ಎಂದು ಹೇಳಬಹುದು. ಕಾಹಿಲೆಯ ಲಕ್ಷಣಗಳಿಗೆ ವಿರುದ್ಧವಾದ ಪರಿಣಾಮವನ್ನುಂಟುಮಾಡುವ ಔಷಧಗಳನ್ನು ಬಳಸುತ್ತಿದ್ದ ವೈದ್ಯ ಪದ್ಧತಿಯನ್ನು ಅಲೋಪತಿ ಅಥವಾ ವಿದೃಶ ಚಿಕಿತ್ಸೆ ಎಂದು ಹಾನಿಮನ್ ಕರೆದ. ಉದಾಹರಣೆಗೆ ಯಾವುದೋ ಸೋಂಕಿನಿಂದ ಜ್ವರವುಂಟಾಗುತ್ತದೆ ಎಂದಿಟ್ಟುಕೊಳ್ಳಿ. ಜ್ವರವು ರೋಗದ ಲಕ್ಷಣವಷ್ಟೇ ಹೊರತು ಅದೇ ರೋಗವಲ್ಲ. ತಗಲಿರುವ ಸೋಂಕನ್ನು ನಮ್ಮ ರೋಗರಕ್ಷಣಾ ವ್ಯವಸ್ಥೆಯು ಎದುರಿಸಿ, ನಿಯಂತ್ರಣಕ್ಕೆ ತರುವ ಯತ್ನದಲ್ಲಿ ಜ್ವರವುಂಟಾಗುತ್ತದೆ. ಹಾಗಾಗಿ ಜ್ವರವನ್ನು ಕಡಿಮೆ ಮಾಡುವ ಜ್ವರನಿವಾರಕ ಔಷಧಗಳನ್ನು ಬಳಸುವುದು ಸರಿಯಲ್ಲ; ಬದಲಾಗಿ, ಜ್ವರವನ್ನುಂಟು ಮಾಡಬಲ್ಲ ವಸ್ತುಗಳನ್ನೇ ಅತಿ ಸಣ್ಣ ಪ್ರಮಾಣದಲ್ಲಿ ಕೊಡುವ ಮೂಲಕ ರೋಗವನ್ನು ನಿಯಂತ್ರಿಸಲು ಸಹಾಯ ಮಾಡಬಹುದು ಎನ್ನುವುದು ಹಾನಿಮನ್ನನ ವಾದ. ಅದೇ ರೀತಿ ವಾಂತಿಗೆ ವಾಂತಿಕಾರಕಗಳೂ, ಬೇಧಿಗೆ ಬೇಧಿಕಾರಕಗಳೂ ಔಷಧಗಳಾಗುತ್ತವೆ, ಅವನ್ನು ಅತಿ ಸಣ್ಣ ಪ್ರಮಾಣದಲ್ಲಿ ನೀಡಬೇಕಾಗುತ್ತದೆ, ಅಷ್ಟೆ. ಹೀಗೆ ಒಬ್ಬ ರೋಗಿಯಲ್ಲಿ ಕಂಡುಬರುವ ಲಕ್ಷಣಗಳನ್ನೂ, ಅವನ ವ್ಯಕ್ತಿತ್ವ ಮತ್ತು ಪರಿಸರಗಳೆಲ್ಲವನ್ನೂ ಗಮನಿಸಿ ಅಳೆದು ಸುರಿದು ಅವನಿಗೆ ಸೂಕ್ತವಾದ ಔಷಧವೇನೆಂಬುದನ್ನು ನಿರ್ಧರಿಸಿ ಅದನ್ನು ಅತಿ ಸಣ್ಣ ಪ್ರಮಾಣದಲ್ಲಿ ನೀಡಬೇಕು, ಅದುವೇ ಹೋಲಿಕೆ ಚಿಕಿತ್ಸೆ.
ಹಾನಿಮನ್ ಮತ್ತು ಹೋಮಿಯೋಪತಿ
ಹಾನಿಮನ್ನನ ಕಾಲ 1755-1843. ಆತ ಬಹುಭಾಷಾ ಪಂಡಿತನಾಗಿದ್ದ. ಆಗ ಪ್ರಚಲಿತವಿದ್ದ ವೈದ್ಯಶಾಸ್ತ್ರವನ್ನೂ ಕಲಿತು 1779 ರಿಂದ ಹಳ್ಳಿಯೊಂದರಲ್ಲಿ ವೈದ್ಯವೃತ್ತಿಯನ್ನು ಆರಂಭಿಸಿದ. ಆದರೆ ಆ ಕಾಲದಲ್ಲಿ ಕಾಹಿಲೆಯ ಕಾರಣಗಳೂ, ಬಳಸುತ್ತಿದ್ದ ಔಷಧಗಳ ಕಾರ್ಯಗಳೂ ಸರಿಯಾಗಿ ತಿಳಿಯದೇ ಇದ್ದುದರಿಂದ ಹಾನಿಮನ್ ತನ್ನ ವೃತ್ತಿಯಲ್ಲಿ ನಿರಸನಗೊಂಡು ಐದೇ ವರ್ಷಗಳಲ್ಲಿ, 1784ರಲ್ಲಿ, ವೈದ್ಯ ವೃತ್ತಿಯನ್ನು ತೊರೆದು ಭಾಷಾಂತರಕಾರನಾಗಿ ದುಡಿಯಲಾರಂಭಿಸಿದ. ಮಲೇರಿಯಾ ಜ್ವರದ ಚಿಕಿತ್ಸೆಯಲ್ಲಿ ಬಳಸುತ್ತಿದ್ದ ಸಿಂಕೋನಾ ತೊಗಟೆಯ ಬಗ್ಗೆ ಮಾಹಿತಿಯೊಂದನ್ನು ಭಾಷಾಂತರಿಸುತ್ತಿದ್ದ ಹಾನಿಮನ್ ಗೆ ಹೊಸ ಆಲೋಚನೆಯೊಂದು ಹೊಕ್ಕಿತು. ಮಲೇರಿಯಾ ಚಿಕಿತ್ಸೆಯಲ್ಲಿ ಬೇರಾವುದೇ ಸಸ್ಯಜನ್ಯ ವಸ್ತುಗಳಿಂದ ದೊರೆಯದ ಪರಿಣಾಮವು ಕೇವಲ ಸಿಂಕೋನಾದಲ್ಲಷ್ಟೇ ಅಡಕವಾಗಿರುವುದೇಕೆ ಎಂಬುದಕ್ಕೆ ಉತ್ತರವನ್ನು ಹುಡುಕಲಾರಂಭಿಸಿ ತನ್ನ ಮೇಲೆಯೇ ಅವನ್ನು ಬಳಸಿ ನೋಡಿಕೊಂಡ. ಸಿಂಕೋನಾವನ್ನು ಸೇವಿಸಿದಾಗ ತನ್ನ ದೇಹದಲ್ಲಿ ಜ್ವರದಂತಹ ಲಕ್ಷಣಗಳನ್ನು ಗಮನಿಸಿದ ಹಾನಿಮನ್, ಆರೋಗ್ಯವಂತರಲ್ಲಿ ರೋಗಲಕ್ಷಣಗಳನ್ನುಂಟು ಮಾಡುವ ವಸ್ತುಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ರೋಗಿಗಳಿಗೆ ಕೊಟ್ಟರೆ ರೋಗವು ಗುಣಹೊಂದಬಲ್ಲದೆಂದು ಪ್ರತಿಪಾದಿಸಿದ. ಇನ್ನಷ್ಟು ವಸ್ತುಗಳನ್ನು ಆರೋಗ್ಯವಂತರಲ್ಲಿ ಬಳಸಿ ಅಂತಹಾ ’ಔಷಧಗಳ’ ದೊಡ್ಡ ಪಟ್ಟಿಯನ್ನೇ ತಯಾರಿಸಿಕೊಂಡು ತನ್ನ ಹೊಸ ಚಿಕಿತ್ಸಾ ಪದ್ಧತಿಯನ್ನು 1792 ರಲ್ಲಿ ಬಳಕೆಗೆ ತಂದ.
ಹಾನಿಮನ್ ಈ ಸಿದ್ಧಾಂತಗಳನ್ನು ಪ್ರತಿಪಾದಿಸಿದಾಗ ಹೆಚ್ಚಿನ ರೋಗಗಳಿಗೆ ಕಾರಣಗಳೇನೆಂಬುದು ಇನ್ನೂ ತಿಳಿದಿರಲಿಲ್ಲ. ಅವನ ಹೊಸ ಸಿದ್ಧಾಂತಕ್ಕೆ ಮೂಲ ಪ್ರೇರಣೆಯಾಗಿದ್ದ ಮಲೇರಿಯಾ ರೋಗಕ್ಕೆ ಕಾರಣವೇನೆನ್ನುವುದೂ ಆಗ ತಿಳಿದಿರಲಿಲ್ಲ (ಮಲೇರಿಯಾವನ್ನುಂಟು ಮಾಡುವ ಪರೋಪಜೀವಿಯನ್ನು ಗುರುತಿಸಿದ್ದು 1880ರಲ್ಲಿ, ಹಾನಿಮನ್ನನ ಹೊಸ ಸಿದ್ಧಾಂತವು ರೂಪುಗೊಂಡು 90 ವರ್ಷಗಳಾದ ಬಳಿಕ). ಹಾಗಾಗಿ ಹಾನಿಮನ್ ಸೂಚಿಸಿದ್ದೆಲ್ಲವೂ ರೋಗಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯಷ್ಟೇ ಹೊರತು ರೋಗದ ಮೂಲ ಕಾರಣವನ್ನು ಸರಿಪಡಿಸುವ ಆಶಯವೇನೂ ಅವನ ಚಿಕಿತ್ಸೆಯಲ್ಲಿ ಇರಲಿಲ್ಲ. ಹಾನಿಮನ್ನನ ನಂತರ ಎರಡು ಶತಮಾನಗಳೇ ಕಳೆದು ಹೋಗಿವೆ. ಈ ಕಾಲಾವಧಿಯಲ್ಲಿ ಹಲವು ರೋಗಗಳ ಕಾರಣಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿದೆ; ಉದಾಹರಣೆಗೆ, ಲೂಯಿ ಪಾಸ್ಚರ್, ರಾಬರ್ಟ್ ಕಾಕ್ ಮತ್ತಿತರರ ಪ್ರಯತ್ನಗಳಿಂದ ಸೋಂಕು ರೋಗಗಳಿಗೆ ಕಾರಣವಾಗುವ ಹಲವು ಸೂಕ್ಷ್ಮಾಣು ಜೀವಿಗಳನ್ನು ಗುರುತಿಸಲಾಗಿದ್ದು, ಕಳೆದೊಂದು ಶತಮಾನದಿಂದೀಚೆಗೆ ಈ ಸೂಕ್ಷ್ಮಾಣು ಜೀವಿಗಳನ್ನು ನಿಯಂತ್ರಿಸಬಲ್ಲ ಹಲವು ಔಷಧಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಅತಿ ನೂತನವಾದ ಬೆಳವಣಿಗೆಗಳೆಲ್ಲವನ್ನೂ ಬಳಸಿಕೊಂಡು ಮಾನವನ ಆರೋಗ್ಯವರ್ಧನೆಗೆ ನೆರವಾಗುವ ಹೊಸ ಹೊಸ ಪರೀಕ್ಷೆಗಳನ್ನೂ, ಚಿಕಿತ್ಸಾ ವಿಧಾನಗಳನ್ನೂ ಅಭಿವೃದ್ಧಿ ಪಡಿಸುತ್ತಾ ಆಧುನಿಕ ವೈದ್ಯ ವಿಜ್ಞಾನವು ಬಹಳಷ್ಟು ಬೆಳೆದಿದೆ, ಬೆಳೆಯುತ್ತಿದೆ. ಇನ್ನೊಂದೆಡೆ ಹಾನಿಮನ್ನನ ಹೋಮಿಯೋಪತಿಯು ಕೇವಲ ಆ ಒಬ್ಬ ವ್ಯಕ್ತಿಯ ತರ್ಕಗಳಿಗೇ ಜೋತು ಬಿದ್ದು ಅಲ್ಲೇ ನಿಂತಿದೆ. ಹಾನಿಮನ್ನನ ತರ್ಕಗಳಾಗಲೀ, ಹೋಮಿಯೋಪತಿಯಲ್ಲಿ ಹೇಳಿಕೊಳ್ಳಲಾಗುತ್ತಿರುವ ‘ಸಾಧನೆ’ಗಳಾಗಲೀ ಅತಿ ಸರಳವಾದ ವೈಜ್ಞಾನಿಕ ಪರೀಕ್ಷೆಗಳಲ್ಲಿ ಇದುವರೆಗೆ ಶ್ರುತ ಪಟ್ಟಿಲ್ಲ. ಹೋಮಿಯೋಪತಿಯ ಯಾವುದೇ ಚಿಕಿತ್ಸೆಯಿಂದ ಯಾವುದೇ ಕಾಹಿಲೆಯನ್ನು ಗುಣಪಡಿಸಬಹುದೆನ್ನುವುದಕ್ಕೆ ಯಾವ ಆಧಾರಗಳೂ ಇದುವರೆಗೆ ಲಭ್ಯವಿಲ್ಲ.
ಹೋಮಿಯೋಪತಿ ಪರಿಣಾಮಕಾರಿಯೇ?
ಸುಮಾರು 40 ಬಗೆಯ ಬದಲಿ ವೈದ್ಯಕೀಯ ಪದ್ಧತಿಗಳ ಗುಣಾವಗುಣಗಳನ್ನು ವಿಮರ್ಶಿಸಿರುವ ಟ್ರಿಕ್ ಓರ್ ಟ್ರೀಟ್ ಮೆಂಟ್ ಎಂಬ ಪುಸ್ತಕವೊಂದಿದೆ. ಬದಲಿ ವೈದ್ಯಕೀಯ ಪದ್ಧತಿಗಳ ಬಗ್ಗೆ ಆಳವಾದ ಅಧ್ಯಯನಗಳನ್ನು ನಡೆಸಿರುವ ಹಾಗೂ ಇಂಗ್ಲೆಂಡಿನ ಎಕ್ಸ್ ಟರ್ ವಿಶ್ವವಿದ್ಯಾಲಯದಲ್ಲಿ ಬದಲಿ ಪದ್ಧತಿಗಳ ಅಧ್ಯಯನ ಪೀಠದ ಮುಖ್ಯಸ್ಥರಾಗಿ ದುಡಿದಿರುವ ಎಡ್ಜಾರ್ಡ್ ಎರ್ನ್ಸ್ಟ್ (ಈತ ಆರಂಭದಲ್ಲಿ ಹೋಮಿಯೋಪತಿ ವೈದ್ಯನಾಗಿಯೂ ಕೆಲಸ ಮಾಡಿದ್ದರೆನ್ನುವುದು ಗಮನಾರ್ಹ) ಮತ್ತು ಸೈಮನ್ ಸಿಂಗ್ (ಭೌತ ಶಾಸ್ತ್ರಜ್ಞರು, ವಿಜ್ಞಾನ ಲೇಖಕರು) ಜೊತೆಗೂಡಿ ಇದನ್ನು ಬರೆದಿದ್ದಾರೆ. ಹೋಮಿಯೋಪತಿಯ ಬಗ್ಗೆ ಪ್ರಕಟಗೊಂಡಿರುವ ಅಧ್ಯಯನಗಳನ್ನೆಲ್ಲ ಪರಾಮರ್ಶಿಸಿರುವ ಅವರು ಕೊನೆಯಲ್ಲಿ ಹೀಗೆನ್ನುತ್ತಾರೆ: "ಹೋಮಿಯೋಪತಿಯ ಚರಿತ್ರೆಯ ಬಗ್ಗೆ ಮತ್ತು ಅದರ ಪ್ರಯೋಜನಗಳನ್ನು ಪರೀಕ್ಷಿಸಲು ನಡೆಸಲಾಗಿರುವ ಅಧ್ಯಯನಗಳ ಬಗ್ಗೆ ಹಲವು ಸಾವಿರ ಪದಗಳಲ್ಲಿ ಬರೆದಿದ್ದೇವೆ, ಆದರೆ ಅಂತಿಮ ನಿರ್ಣಯವು ಬಲು ಸರಳವಿದೆ: ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ನೂರಾರು ಅಧ್ಯಯನಗಳನ್ನು ನಡೆಸಲಾಗಿದ್ದರೂ, ಒಂದೇ ಒಂದು ಕಾಹಿಲೆಯ ಚಿಕಿತ್ಸೆಯಲ್ಲಿ ಹೋಮಿಯೋಪತಿಯ ವಿಧಾನದಿಂದ ಏನಾದರೂ ಪ್ರಯೋಜನವಾಗಿದೆಯೆನ್ನುವುದಕ್ಕೆ ಸ್ಪಷ್ಟವಾದ ಆಧಾರಗಳು ಎಲ್ಲೂ ದೊರೆಯುವುದಿಲ್ಲ. ಬದಲಾಗಿ, ಹೋಮೊಯೋಪತಿ ಔಷಧಗಳು ಯಾವ ಕೆಲಸವನ್ನೂ ಮಾಡುವುದಿಲ್ಲ ಎನ್ನುವುದಕ್ಕೆ ಪರ್ವತದಷ್ಟೆತ್ತರದ ಸಾಕ್ಷ್ಯಾಧಾರಗಳು ಲಭ್ಯವಿವೆ. ಹೋಮಿಯೋಪತಿಯಲ್ಲಿ ಬಳಸಲಾಗುವ ಗುಳಿಗೆಗಳಲ್ಲಿ ಮೂಲ ಔಷಧದ ಪ್ರಮಾಣವು ಸೊನ್ನೆಯೆಂದ ಮೇಲೆ ಇದೇನೂ ಅಚ್ಚರಿಯಲ್ಲ".
ಇಂದು ಬಳಕೆಯಲ್ಲಿರುವ ವಿವಿಧ ವೈದ್ಯಕೀಯ ಪದ್ಧತಿಗಳಲ್ಲಿ ತೀರಾ ಅಸಂಬದ್ಧವೂ ಆಧಾರರಹಿತವೂ ಆಗಿರುವವುಗಳ ಸಾಲಿನಲ್ಲಿ ಹೋಮಿಯೋಪತಿಯೇ ಮುಂಚೂಣಿಯಲ್ಲಿದೆ ಎನ್ನಲಡ್ಡಿಯಿಲ್ಲ. ರೋಗಲಕ್ಷಣಜನಕ ವಸ್ತುವನ್ನು (ಸದೃಶ ನಿಯಮ : Law of Similars, like cures the like) ಆದಷ್ಟು ಕಡಿಮೆ ಪ್ರಮಾಣದಲ್ಲಿ (Law of Minimum) ಬಳಸಬೇಕು ಮತ್ತು ಒಬ್ಬ ರೋಗಿಗೆ ಒಮ್ಮೆಗೆ ಕೇವಲ ಒಂದೇ ’ಔಷಧವನ್ನು’ (Law of Simplex) ಕೊಡಬೇಕು ಎನ್ನುವ ಹೋಲಿಕೆ ಚಿಕಿತ್ಸೆಯ ಮೂಲ ಸಿದ್ಧಾಂತಗಳೆಲ್ಲವೂ ಕೇವಲ ಪೊಳ್ಳು ತರ್ಕಗಳಷ್ಟೇ.
ಲಕ್ಷಣವನ್ನು ಹೋಲುವ ಔಷಧ ಪ್ರಯೋಗವೇ ಹೊರತು ರೋಗಕ್ಕೆ ಚಿಕಿತ್ಸೆಯಲ್ಲ
ರೋಗಲಕ್ಷಣ ಜನಕವನ್ನೇ ಔಷಧವಾಗಿ ಕೊಟ್ಟರೆ ರೋಗವು ವಾಸಿಯಾಗುತ್ತದೆ ಎನ್ನುವ ವಾದವನ್ನು ನೋಡಿ. ಅದರಂತೆ ನಡೆಯುವುದಾದರೆ, ಜ್ವರಕ್ಕೆ ಕಾರಣವು ಯಾವುದೇ ಇದ್ದರೂ ’ಚಿಕಿತ್ಸೆ’ ಒಂದೇ ಆಗಿರಬೇಕು. ಮಲೇರಿಯಾವಿರಲಿ, ವಿಷಮಶೀತ ಜ್ವರವಿರಲಿ ಅಥವಾ ಡೆಂಗೀ, ಚಿಕುಂಗುನ್ಯಾ ಯಾ ಫ್ಲೂ ಇರಲಿ, ಇವೆಲ್ಲಕ್ಕೂ ಚಿಕಿತ್ಸೆಯು ಏಕರೂಪದ್ದಾಗಿರುತ್ತದೆ. ಹೋಮಿಯೋಪತಿಯಲ್ಲಿ ಯುಪಟೋರಿಯಂ, ಸಲ್ಫರ್, ರಸ್, ಬೆಲಡೋನಾ, ಬ್ರಯೋನಿಯಾ, ಜೆಲ್ಸಿಮಿಯಂ, ಆರ್ನಿಕಾ, ಇತ್ಯಾದಿಗಳು ಈ ಎಲ್ಲಾ ಕಾಹಿಲೆಗಳ ಚಿಕಿತ್ಸೆಯಲ್ಲೂ ಬಳಸಲ್ಪಡುತ್ತವೆ! ಅಂದರೆ ಹೋಮಿಯೋಪತಿಯಲ್ಲಿ ರೋಗಕ್ಕೆ ಚಿಕಿತ್ಸೆಯಿಲ್ಲ, ರೋಗ ಲಕ್ಷಣಗಳಿಗಷ್ಟೇ ಚಿಕಿತ್ಸೆಯೆಂದಾಯಿತು.
ರೋಗಿಯಲ್ಲಿ ಕಾಣಿಸಿಕೊಳ್ಳುವ ವಿವಿಧ ಲಕ್ಷಣಗಳಿಗೆ ಅನುಸಾರವಾಗಿ, ಅವನ ವ್ಯಕ್ತಿತ್ವ ಹಾಗೂ ಪರಿಸರವನ್ನು ನೋಡಿಕೊಂಡು ಸೂಕ್ತವಾದ ಔಷಧವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೊದಲೇ ಹೇಳಿದೆನಲ್ಲ? ಹಾನಿಮನ್ನನ ತರ್ಕಕ್ಕೆ ಮೂಲ ಪ್ರೇರಣೆಯಾಗಿದ್ದ ಮಲೇರಿಯಾದ ಉದಾಹರಣೆಯನ್ನೇ ಈಗ ನೋಡೋಣ. ಮಲೇರಿಯಾ ಸೋಂಕುಳ್ಳವರಲ್ಲಿ ಜ್ವರ, ನಡುಕ, ಮೈಕೈ ನೋವು, ಬೆನ್ನು ನೋವು, ತಲೆ ನೋವು, ವಾಂತಿ, ಬೇಧಿ, ಕೆಮ್ಮು ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿರುತ್ತವೆ. ಆದರೆ ಇವೆಲ್ಲಕ್ಕೂ ಕಾರಣ ಒಂದೇ: ಮಲೇರಿಯಾದ ಪರೋಪಜೀವಿಯು ನಮ್ಮ ಕೆಂಪು ರಕ್ತ ಕಣಗಳನ್ನು ಸೋಂಕಿ, ಅಲ್ಲಿ ಬೆಳೆದು, ಅವನ್ನೊಡೆದು ಹೊರಬಂದಾಗ ಬಿಡುಗಡೆಯಾಗುವ ವಿವಿಧ ಸಂಯುಕ್ತಗಳು ಈ ಎಲ್ಲಾ ತೊಂದರೆಗಳನ್ನು ಉಂಟು ಮಾಡುತ್ತವೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ಮಲೇರಿಯಾ ರೋಗಕ್ಕೆ ಕಾರಣವಾದ ಮಲೇರಿಯಾ ಪರೋಪಜೀವಿಯನ್ನು ಗುರುತಿಸಿ ಅದಕ್ಕೆ ತಕ್ಕುದಾದ ಕ್ಲೋರೋಕ್ವಿನ್, ಆರ್ಟೆಸುನೇಟ್ ಇತ್ಯಾದಿ ಪರೋಪಜೀವಿನಾಶಕ ಔಷಧಗಳನ್ನು ನೀಡಲಾಗುತ್ತದೆ, ಅವುಗಳಿಂದಾಗಿ ಪರೋಪಜೀವಿಗಳು ನಾಶಗೊಂಡಾಗ ಎಲ್ಲಾ ರೋಗಲಕ್ಷಣಗಳೂ ವಾಸಿಯಾಗುತ್ತವೆ. ಮಲೇರಿಯಾ ಚಿಕಿತ್ಸೆಯಲ್ಲಿ ಸಿಂಕೋನಾ ಪರಿಣಾಮಕಾರಿಯಾಗುವುದೇಕೆ ಎನ್ನುವುದು ಹಾನಿಮನ್ನನಿಗೆ ಅರ್ಥವಾಗಿರಲಿಲ್ಲ. ಹಾಗಾಗಿ ಅವನೇನೋ ತರ್ಕಿಸಿ ಹೋಮಿಯೋಪತಿಯನ್ನು ಹುಟ್ಟು ಹಾಕಿದ. ಸಿಂಕೋನಾದಲ್ಲಿರುವ ಕ್ವಿನಿನ್ ಎಂಬ ಸಂಯುಕ್ತವು ಮಲೇರಿಯಾ ಪರೋಪಜೀವಿಯು ಹಿಮೋಗ್ಲೋಬಿನ್ ಅನ್ನು ಬಳಸಲಾರದಂತೆ ಅಡ್ಡಿಪಡಿಸಿ ಅದರ ನಾಶಕ್ಕೆ ಕಾರಣವಾಗುತ್ತದೆಯೆನ್ನುವ ವಿವರಗಳೆಲ್ಲವೂ ಈಗ ತಿಳಿದಿವೆ. ಹಾನಿಮನ್ ಪರೀಕ್ಷಿಸಿದ ಇತರ ಸಸ್ಯಜನ್ಯ ವಸ್ತುಗಳಿಗೆ ಈ ಸಾಮರ್ಥ್ಯವಿಲ್ಲದ್ದರಿಂದಲೇ ಅವು ಮಲೇರಿಯಾ ಚಿಕಿತ್ಸೆಯಲ್ಲಿ ನಿಷ್ಪ್ರಯೋಜಕವೆನಿಸಿದ್ದವು. ಆದರೆ ಹಾನಿಮನ್ನನ ತರ್ಕದ ದಾರಿಯು ಬೇರೆಯೇ ಆಗಿದ್ದುದರಿಂದ ಇಂತಹ ಸಾಧ್ಯತೆಗಳಾವುವೂ ಅವನಿಗೆ ಹೊಳೆಯಲಿಲ್ಲ. ಮಲೇರಿಯಾ ಸೋಂಕಿಗೆ ಹಾನಿಮನ್ನನ ಚಿಕಿತ್ಸೆಯೇನು ಗೊತ್ತೇ? ಜ್ವರ ಮಾತ್ರವಿದ್ದರೆ ಒಂದು, ಅದರೊಟ್ಟಿಗೆ ತಲೆನೋವಿದ್ದರೆ ಬೇರೊಂದು, ವಾಂತಿಯಿದ್ದರೆ ಇನ್ನೊಂದು, ಬೇಧಿಯಿದ್ದರೆ ಮತ್ತೊಂದು. ರಾಬರ್ಟ್ ಗೆ ಒಂದು, ರೆಹಮಾನ್ ಗೆ ಇನ್ನೊಂದು, ಆನಂದನಿಗೆ ಮತ್ತೊಂದು, ರೇಖಾಳಿಗೆ ಬೇರೆಯೇ ಒಂದು. ಆನಂದ ಮಂಗಳೂರಲ್ಲಿದ್ದರೆ ಒಂದು, ಬೆಂಗಳೂರಲ್ಲಿ ಇನ್ನೊಂದು, ಮೈಸೂರಲ್ಲಿದ್ದರೆ ಬೇರೊಂದು,ಧಾರವಾಡದಲ್ಲಿದ್ದರೆ ಮತ್ತೊಂದು. ಅದೇ ಆನಂದನಿಗೆ ಮಂಗಳೂರಲ್ಲಿ ಹೋಮಿಯೋಪತಿ ವೈದ್ಯ ಡಾ| ಎ ಕೊಡುವುದೊಂದು, ಡಾ| ಬಿ ಕೊಡುವುದು ಇನ್ನೊಂದು. ಹೋಮಿಯೋಪತಿಯಲ್ಲಿ ಸೋಂಕುರೋಗ, ಸೂಕ್ಷ್ಮಾಣುಜೀವಿ ಇತ್ಯಾದಿ ಪರಿಕಲ್ಪನೆಗಳಿಗೆ ಸ್ಥಾನವೇ ಇಲ್ಲದಿದ್ದರೂ ಹೋಮಿಯೋಪತಿಯ ’ತಜ್ಞರು’ ಎಲ್ಲಾ ಸೋಂಕು ರೋಗಗಳಿಗೆ ಥಟ್ಟನೆ ಚಿಕಿತ್ಸೆಯನ್ನು ತಯಾರಿಸಿ ಬಿಡುತ್ತಾರೆ ಹಾಗೂ ಫ್ಲೂ, ಚಿಕುಂಗುನ್ಯಾದಂತಹ ರೋಗಗಳನ್ನು ತಡೆಯಬಲ್ಲ ಔಷಧಗಳನ್ನೂ ಕ್ಷಣ ಮಾತ್ರದಲ್ಲಿ ತಯಾರಿಸುತ್ತಾರೆ! ನಮ್ಮ ಸರಕಾರೀ ಇಲಾಖೆಗಳು ಲಕ್ಷಗಟ್ಟಲೆ ಕೊಟ್ಟು ಇಂತಹಾ ಔಷಧಗಳನ್ನು ಖರೀದಿಸಿಬಿಡುತ್ತವೆ, ದೊಡ್ಡದಾಗಿ ಬೊಬ್ಬಿರಿದು ಜನರೆಲ್ಲರಿಗೆ ಹಂಚುವುದೂ ಆಗಿಬಿಡುತ್ತದೆ. ಹೀಗಿದೆ ಹೋಮಿಯೋಪತಿಯ ಚಿಕಿತ್ಸಾ ಕ್ರಮ. ಇದುವೇ ಹೋಮಿಯೋಪತಿಯ ವಿಶೇಷತೆ. ಅದ್ಭುತ! ಆದರೆ ಇದೆಲ್ಲ ಅರ್ಥವಾಗಬೇಕಿದ್ದರೆ ಹೋಮಿಯೋಪತಿಯ ಬಗ್ಗೆ ಆಳವಾದ ಜ್ಞಾನವಿರಬೇಕಾಗುತ್ತದೆ. ನಮ್ಮಂತಹಾ ಪಾಮರರ ಅರಿವಿಗೆ ಇವೆಲ್ಲಾ ನಿಲುಕಲಾರದು!?
ದುರ್ಬಲವಾದಷ್ಟೂ ಪ್ರಬಲತೆ ಹೆಚ್ಚು!
ರೋಗಿಗೆ ಕೊಡುವ ಔಷಧದಲ್ಲಿ ಮೂಲ ಸತ್ವದ ಪ್ರಮಾಣವು ಕಡಿಮೆಯಾದಂತೆ ರೋಗಿಯ ಮೇಲೆ ಅದರ ಪರಿಣಾಮವು ಹೆಚ್ಚುತ್ತದೆ ಎನ್ನುವುದು ಹೋಮಿಯೋಪತಿಯ ಇನ್ನೊಂದು ತತ್ವ. ಹೋಮಿಯೋಪತಿಯಲ್ಲಿ ಪ್ರಾಣಿಗಳು ಹಾಗೂ ಸಸ್ಯಗಳ ವಿವಿಧ ಭಾಗಗಳು/ಅಂಗಗಳು, ಮಣ್ಣು-ಕಲ್ಲು-ಗಾರೆಗಳು, ಕುತುಬ್ ಮಿನಾರ್, ಚೀನಾದ ಗೋಡೆ ಇತ್ಯಾದಿಗಳನ್ನು ಕೆರೆದು ತೆಗೆದ ಪುಡಿಗಳು, ಕೀವು, ಕಫ, ವಾಂತಿ, ಗೆಡ್ಡೆಗಳು, ವೃಣಗಳು, ಹೀಗೆ ಹತ್ತು ಹಲವು ವಸ್ತುಗಳೆಲ್ಲವೂ ‘ಔಷಧಗಳಾಗಿ’ ಬಳಸಲ್ಪಡುತ್ತವೆ. ಇವನ್ನು 10000 (4X) ದಿಂದ 1,000, 000, 000, 000, 000, 000, 000, 000, 000, 000, 000, 000, 000, 000, 000, 000, 000, 000, 000, 000 (30C) ಅಥವಾ ಇನ್ನೂ ಹೆಚ್ಚು ಪಟ್ಟು (100000C ಯೂ ಇದೆ!) ಸಾರರಿಕ್ತಗೊಳಿಸಿ (ತಿಳಿಗೊಳಿಸಿ, ದುರ್ಬಲಗೊಳಿಸಿ) ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಹೋಮಿಯಪತಿಯ ಪ್ರಕಾರ, ಮೂಲ ’ಔಷಧ’ವನ್ನು ತಿಳಿಗೊಳಿಸಿ, ಆದಷ್ಟು ಜೋರಾಗಿ ಕುಲುಕಿಸುತ್ತಿದ್ದಂತೆ ಅದರ ಔಷಧೀಯ ಗುಣವು ವೃದ್ಧಿಸುತ್ತಾ ಹೋಗುತ್ತದೆ. ಹೋಲಿಕೆಗಾಗಿ, ಮೂಲ ಔಷಧದ ಒಂದು ಹರಳನ್ನು ಅರಬೀ ಸಮುದ್ರದಲ್ಲಿ ಸೇರಿಸಿ, ಚೆನ್ನಾಗಿ ಕಲಸಿ-ಕುಲುಕಿ, ಅರಬೀ ಸಮುದ್ರದಿಂದ ಒಂದು ಬಿಂದು ನೀರನ್ನು ತೆಗೆದು ಗುಳಿಗೆಯನ್ನು ತಯಾರಿಸಿದರೆ ಬಹಳಷ್ಟು ಪ್ರಭಾವಶಾಲಿಯಾದ ಔಷಧವು ತಯಾರಾಗುತ್ತದೆ! ಇನ್ನೂ ಹೆಚ್ಚು ತಿಳಿಗೊಳಿಸಿದರೆ ಅದರ ಪರಿಣಾಮವು ಇನ್ನಷ್ಟು ಹೆಚ್ಚುತ್ತದೆಯಂತೆ! ಅಷ್ಟೇ ಅಲ್ಲ, ಅತೀ ಹೆಚ್ಚು ತಿಳಿಗೊಂಡಿರುವ ‘ಔಷಧಕ್ಕೆ’ ಅತೀ ಹೆಚ್ಚಿನ ಬೆಲೆಯನ್ನೂ ತೆರಬೇಕಾಗುತ್ತದೆ!! ಆದರೆ 30Cಯಷ್ಟು ತಿಳಿಗೊಳಿಸಿ ತಯಾರಿಸಲಾದ ಗುಳಿಗೆಯಲ್ಲಿ ಮೂಲ ‘ಔಷಧದ’ ಸಾರವು ಉಳಿದಿರುವ ಸಾಧ್ಯತೆಯು ಒಂದು ಲಕ್ಷ ಕೋಟಿಯಲ್ಲಿ ಒಂದರಷ್ಟು ಮಾತ್ರ!!! ಅಂದರೆ ಹೋಮಿಯೋಪತಿಯ ಗುಳಿಗೆಗಳಲ್ಲಿ ಮೂಲ ‘ಔಷಧವು’ ಇರುವ ಸಾಧ್ಯತೆಯು ಇಲ್ಲವೇ ಇಲ್ಲವೆನ್ನಬಹುದು. ಇಂತಹಾ ‘ಗುಳಿಗೆ’ಗಳಿಂದ ಯಾವುದೇ ಚಿಕಿತ್ಸೆಯು ಸಾಧ್ಯವೇ?
ಹೋಲಿಕೆ ಚಿಕಿತ್ಸೆಯ ಈ ’ವಿಶೇಷವಾದ’ ತತ್ವಕ್ಕೆ ಇನ್ನೂ ಒಂದೆರಡು ಹೋಲಿಕೆಗಳನ್ನು ನೋಡೋಣ. ನಿಮ್ಮಲ್ಲಿ ಬೇರೆ ಬೇರೆ ಗಾತ್ರದ ನಾಲ್ಕು ಬರ್ನರ್ ಗಳನ್ನು ಹೊಂದಿರುವ ಗ್ಯಾಸ್ ಒಲೆಯಿದೆ ಎಂದಿಟ್ಟುಕೊಳ್ಳೋಣ. ದೊಡ್ಡದೊಂದು, ಸಣ್ಣದೊಂದು ಪಾತ್ರೆಗಳಲ್ಲಿ ನೀರು ತುಂಬಿಸಿ ಕಾಯಿಸಬೇಕೆಂದರೆ ನೀವೇನು ಮಾಡುತ್ತೀರಿ? ದೊಡ್ಡ ಪಾತ್ರೆಯನ್ನು ದೊಡ್ಡ ಬರ್ನರ್ ಮೇಲೂ, ಸಣ್ಣದನ್ನು ಸಣ್ಣ ಬರ್ನರ್ ಮೇಲೂ ಇಟ್ಟು ಮೊದಲಲ್ಲಿ ಬೆಂಕಿಯ ಮಟ್ಟವು ಹೆಚ್ಚಿರುವಂತೆ ಇಟ್ಟು ನೀರು ಕುದಿಯ ತೊಡಗಿದಾಗ ಅವನ್ನು ನಂದಿಸಿಬಿಡುತ್ತೀರಿ. ಇದು ಸಾಮಾನ್ಯ ಜ್ಞಾನ. ಆದರೆ ಹೋಮಿಯೋಪತಿಯ ತತ್ವಗಳನುಸಾರ, ಬೆಂಕಿ ಸಣ್ಣದಾದಷ್ಟೂ ಅದರ ಪರಿಣಾಮವು ಹೆಚ್ಚಾಗುತ್ತಾ ಹೋಗುವುದರಿಂದ ನೀವು ದೊಡ್ಡ ಪಾತ್ರೆಯನ್ನು ಸಣ್ಣ ಬರ್ನರ್ ನಲ್ಲಿಟ್ಟು ಬೆಂಕಿಯ ಮಟ್ಟವನ್ನು ಆದಷ್ಟು ಕಡಿಮೆಯಿಡಬೇಕು, ಅಥವಾ ರೆಗುಲೇಟರ್ ತಿರುಗಿಸುತ್ತಾ ಬೆಂಕಿಯು ಸಂಪೂರ್ಣವಾಗಿ ಆರಿ ಹೋದರೂ ಪರವಾಗಿಲ್ಲ, ಬೆಂಕಿಯ ತಾಪವು ಹೆಚ್ಚುತ್ತಾ ಹೋಗುತ್ತದೆ, ಬರ್ನರ್ ತಂಪಾದಷ್ಟೂ ನೀರು ಹೆಚ್ಚು ಹೆಚ್ಚು ಬಿಸಿಯಾಗಿ ಬೇಗನೇ ಕುದಿಯತೊಡಗುತ್ತದೆ! ಇನ್ನೊಂದು ಉದಾಹರಣೆ ನೋಡಿ. ಹೋಮಿಯಪತಿಯ ತತ್ವದಂತೆ ಮದ್ಯಪಾನದ ಆನಂದವನ್ನು ಅನುಭವಿಸುವುದು ಬಹಳ ಸುಲಭ. ಒಂದು ತೊಟ್ಟು ವಿಸ್ಕಿಯನ್ನು (ಅಥವಾ ಅತಿ ಕಡಿಮೆ ಮದ್ಯದಂಶವಿರುವ ಬೀರ್ ಯಾ ವೈನ್ ಆದರೆ ಇನ್ನೂ ಒಳ್ಳೆಯದು) ನೂರು ಲೀಟರ್ ನೀರಿನಲ್ಲಿ (ಯಾ ಸೋಡಾದಲ್ಲಿ) ಬೆರೆಸಿ (ಜೋರಾಗಿ ಕುಲುಕಿಸಲು ಮರೆಯಬೇಡಿ), ಅದರಿಂದ ಒಂದು ತೊಟ್ಟನ್ನು ತೆಗೆದು ಇನ್ನೂ ನೂರು ಲೀಟರ್ ನೀರಿನಲ್ಲಿ ಬೆರೆಸಿ, ಮತ್ತೆ ಜೋರಾಗಿ ಕುಲುಕಿ, ಅದರಿಂದ ಒಂದು ತೊಟ್ಟನ್ನು ಕುಡಿದರೆ ಭಯಂಕರವಾದ ಕಿಕ್ ಖಂಡಿತ! ಈ ವಿಶೇಷ ಮಿಶ್ರಣದ ಬೆಲೆಯೆಷ್ಟೆಂದು ಮಾತ್ರ ಕೇಳಬೇಡಿ!
[ವಿಡಿಯೋ ನೋಡಿ:
ನೋಡಿ: http://altmed.creighton.edu/Homeopathy/science/validity.htm
ಹೋಮಿಯೋಪತಿ ಸುರಕ್ಷಿತವೇ?
ಹೋಮಿಯೋಪತಿಯಲ್ಲಿ ಅಡ್ದ ಪರಿಣಾಮಗಳಿಲ್ಲ ಮತ್ತು ಆಧುನಿಕ ಚಿಕಿತ್ಸೆಗೆ ಹೋಲಿಸಿದರೆ ಹೋಮಿಯೋಪತಿ ಚಿಕಿತ್ಸೆಗೆ ಖರ್ಚು ಬಹಳ ಕಡಿಮೆ ಎಂದು ಹೋಮಿಯೋಪತಿ ’ತಜ್ಞರು’ ಹೇಳಿಕೊಳ್ಳುತ್ತಾರೆ. ಹೋಮಿಯೋಪತಿ ಔಷಧಗಳಲ್ಲಿ ಔಷಧದಂಶವೇ ಇಲ್ಲವೆಂದ ಮೇಲೆ ಅಡ್ಡ ಪರಿಣಾಮಗಳು ಹೇಗುಂಟಾಗುತ್ತವೆ? ಪರಿಣಾಮವೇ ಇಲ್ಲ ಎಂದ ಬಳಿಕ ಅಡ್ಡ ಪರಿಣಾಮವು ಇನ್ನೆಲ್ಲಿಂದ ಬರಬೇಕು? ಆದರೆ ಹೋಮಿಯೋಪತಿಯ ’ಔಷಧ’ಗಳಿಗೆ ಅಡ್ಡ ಪರಿಣಾಮವಿಲ್ಲದಿದ್ದರೂ, ಹೋಮಿಯೋಪತಿ ಚಿಕಿತ್ಸೆಯು ಫಲಕಾರಿಯಾಗದೆ ಕಾಹಿಲೆಯು ಬಿಗಡಾಯಿಸುವ ಅಪಾಯವು ಬಹಳಷ್ಟಿರುತ್ತದೆ ಎನ್ನುವುದನ್ನು ಮರೆಯಬಾರದು. ಹಲವು ಕಾಹಿಲೆಗಳು (ಫ್ಲೂ, ಡೆಂಗೀ, ಚಿಕುಂಗುನ್ಯಾ ಸೇರಿದಂತೆ ಇನ್ನೂ ಹಲವು) ತನ್ನಿಂತಾನಾಗಿ, ಯಾವುದೇ ಚಿಕಿತ್ಸೆಯಿಲ್ಲದೆಯೇ ಗುಣಹೊಂದುತ್ತವೆ; ಇಂತಹವನ್ನು ಹೋಮಿಯೋಪತಿಯಿಂದ ಗುಣಪಡಿಸಬಹುದೆಂದು ಬುರುಡೆ ಬಿಡಲಾಗುತ್ತದೆ. ಆದರೆ ಸಮರ್ಪಕವಾದ ಚಿಕಿತ್ಸೆಯ ಅಗತ್ಯವಿರುವ ರೋಗಗಳಿಗೆ ಹೋಮಿಯೋಪತಿಯನ್ನು ನೆಚ್ಚಿಕೊಂಡು ಕುಳಿತರೆ ಅವು ಉಲ್ಬಣಗೊಂಡು ಪ್ರಾಣಹಾನಿಯೂ ಉಂಟಾಗಬಹುದು. ಹೋಮಿಯೋಪತಿಯಿಂದ ಕಾಹಿಲೆಯು ಉಲ್ಬಣಗೊಂಡಾಗಲೂ, ಅದು ಕಾಹಿಲೆಯು ಗುಣ ಹೊಂದುತ್ತಿರುವ ಲಕ್ಷಣವೆಂದು ಹೇಳಿ ರೋಗಿಗಳನ್ನು ದಾರಿ ತಪ್ಪಿಸಿ ಮೋಸಗೊಳಿಸುವ ಪ್ರಯತ್ನವನ್ನು ಹೋಮಿಯೋಪತಿ ವೈದ್ಯರೆನಿಸಿಕೊಂಡವರು ಮಾಡುತ್ತಿರುತ್ತಾರೆ, ಆ ಬಗ್ಗೆ ಎಚ್ಚರವಾಗಿರುವುದೇ ಒಳ್ಳೆಯದು. ಅಂತಹಾ ಹಲವು ನಿದರ್ಶನಗಳನ್ನು ಪಟ್ಟಿ ಮಾಡಬಹುದು; ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ದಂಪತಿಯ ಪುಟ್ಟ ಮಗುವೊಂದು ತಂದೆಯ ’ಹೋಮಿಯೋಪತಿ’ ಹಠಕ್ಕೆ ಕೆಲವು ತಿಂಗಳುಗಳ ಹಿಂದೆ ಬಲಿಯಾದದ್ದು ಮತ್ತು ಪರಿಣಾಮವಾಗಿ ಹೆತ್ತವರು ಜೈಲು ಸೇರಿದ್ದನ್ನು ಇಲ್ಲಿ ನೆನಪಿದರೆ ಸಾಕಾಗಬಹುದು.[ನೋಡಿ: ಹೋಮಿಯೋಪತಿ ಎಂದು ಮಗಳನ್ನೇ ಕೊಂದರೆ?; http://www.news.com.au]
ಹೋಮಿಯೋಪತಿಯ ’ಔಷಧಗಳಲ್ಲಿ’ ಮೂಲ ಔಷಧದಂಶವು (’ಔಷಧಗಳು’ ಎಂತಹವು ಎನ್ನುವುದನ್ನು ಮೇಲೆ ಹೇಳಲಾಗಿದೆ!) ಲವಲೇಶವೂ ಇಲ್ಲವೆಂದ ಮೇಲೆ ಅಂತಹಾ ಔಷಧಗಳಿಗೆ ಒಂದು ಪೈಸೆ ಬೆಲೆಯಿದ್ದರೂ ಅದು ದುಬಾರಿಯೇ ಆಗುತ್ತದೆ. ರೋಗ ಉಲ್ಬಣಿಸಿದರೆ ಅದರಿಂದಾಗಬಹುದಾದ ಅನಾಹುತಗಳು ಮತ್ತು ಅದರಿಂದೊದಗುವ ಖರ್ಚುಗಳನ್ನೆಲ್ಲ ಪರಿಗಣಿಸಿದರೆ ಹೋಮಿಯೋಪತಿಯು ಅಲ್ಪ ವೆಚ್ಚದಾಯಕವೆನ್ನುವ ವಾದವೂ ಬಿದ್ದು ಹೋಗುತ್ತದೆ. ಹೋಮಿಯೋಪತಿ ಔಷಧಗಳ ಸೇವನೆಯಿಂದ ಚಿಕುಂಗುನ್ಯಾ ಬಾರದಂತೆ ತಡೆಯಲು ಸಾಧ್ಯವೆನ್ನುವುದನ್ನು ನಂಬಿ, ಸೊಳ್ಳೆಕಡಿತದಿಂದ ರಕ್ಷಿಸಿಕೊಳ್ಳದ ಪರಿಣಾಮವಾಗಿ ಸಾವಿರಾರು ಜನ ಚಿಕುಂಗುನ್ಯಾಕ್ಕೆ ತುತ್ತಾದುದಕ್ಕೆ ಹೊಣೆಗಾರರು ಯಾರು?
ಹೋಮಿಯೋಪತಿಯ ಅವಾಂತರ: ವಿಡಿಯೋ ನೋಡಿ That Mitchell and Webb Look: Homeopathic A&E
ಒಟ್ಟಿನಲ್ಲಿ ಹೋಮಿಯೋಪತಿಯಿಂದ ಯಾವುದೇ ಪ್ರಯೋಜನವಿದೆಯೆನ್ನುವುದಕ್ಕೆ ಯಾವ ಆಧಾರಗಳೂ ಇಲ್ಲ, ಯಾರಲ್ಲಾದರೂ ಇದ್ದರೆ ಅವನ್ನು ದಯವಿಟ್ಟು ತೋರಿಸಿ. ಅಂತಹಾ ಆಧಾರಗಳನ್ನು ತೋರಿಸುವವರೆಗೆ, ಹೋಮಿಯೋಪತಿಯ ಔಷಧಗಳಲ್ಲಿ ಹರಳಿಲ್ಲ, ಹೋಮಿಯೋಪತಿ ’ವೈದ್ಯರುಗಳ’ ವಾದಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಧೈರ್ಯವಾಗಿಯೇ ಹೇಳಬಹುದು. ಆ ಕಾರಣಕ್ಕಾಗಿಯೇ ಇಂಗ್ಲೆಂಡಿನ ಸಂಸದರು ಮತ್ತು ಹಿರಿಯ ಹಾಗೂ ಕಿರಿಯ ವೈದ್ಯರುಗಳೆಲ್ಲರೂ ಹೋಮಿಯೋಪತಿ ಬರೇ ಬುರುಡೆಯೆಂದೂ, ಅದಕ್ಕೆ ಸರಕಾರಿ ಹಣವನ್ನು ಪೋಲು ಮಾಡಬಾರದೆಂದೂ ಹೇಳಿರುವುದಾಗಿದೆ.[ನೋಡಿ: Stop funding homeopathy, say British MPs; British Medical Association: homeopathy is witchcraft] ನಮ್ಮ ಸರಕಾರವೂ ಕೂಡಾ ಈ ಬದಲಿ ಪದ್ಧತಿಗಳ ಪ್ರಯೋಜನಗಳ ಬಗ್ಗೆ ಯಾವುದೇ ಪುರಾವೆಗಳನ್ನು ಹೊಂದಿಲ್ಲದೆಯೂ ಪ್ರಸಕ್ತ ಪಂಚವಾರ್ಷಿಕ ಯೋಜನೆಯಲ್ಲಿ 1380 ಕೋಟಿ ರೂಪಾಯಿಗಳನ್ನು ಇವುಗಳಿಗಾಗಿ ವ್ಯಯಿಸುತ್ತಿರುವುದು ಅನ್ಯಾಯವಲ್ಲದೆ ಮತ್ತೇನು?
- Add new comment
- 1106 reads

ಹೋಮಿಯೋಪತಿ
ಒಳ್ಳೆಯ ಲೇಖನ. ಹೋಮಿಯೋಪತಿ ವೈದ್ಯರ ದಾಳಿಯನ್ನಂತೂ ನೀವು ಎದುರಿಸಲೇ ಬೇಕಾಗುತ್ತದೆ.
ಸ್ವಾಗತ!
ಹೋಮಿಯೋಪತಿ ವೈದ್ಯರ ದಾಳಿಯನ್ನೆದುರಿಸಲು ಸಿದ್ಧನಿದ್ದೇನೆ!