ಮೊದಾಸಾದಲ್ಲಿ ಹೆಪಟೈಟಿಸ್ ಬಿ/ಡಿ: ರಕ್ಷಣೆ ಹೇಗೆ?

ಕಳೆದ ಕೆಲ ದಿನಗಳಿಂದ ಗುಜರಾತಿನ ಸಬರಕಾಂತಾ ಜಿಲ್ಲೆಯ ಮೊದಾಸದಲ್ಲಿ ನೂರೈವತ್ತಕ್ಕೂ ಹೆಚ್ಚು ಜನರು ಹೆಪಟೈಟಿಸ್ ಬಿ/ಡಿ ಸೋಂಕಿಗೆ ತುತ್ತಾಗಿರುವ ಬಗ್ಗೆ ಹಾಗೂ ಸುಮಾರು ೩೫ರಷ್ಟು ರೋಗಿಗಳು ಅದರಿಂದಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸೋಕು ತಗಲಿಸಿಕೊಂಡವರೆಲ್ಲ ಡಾ|ಗೋವಿಂದ ಪಟೇಲ್ (ಎಂ.ಬಿ.ಬಿ.ಎಸ್) ಎಂಬ ವೈದ್ಯನಿಂದ ಕಳೆದ ಆರು ತಿಂಗಳೊಳಗೆ ಚಿಕಿತ್ಸೆಯನ್ನು ಪಡೆದಿದ್ದರೆನ್ನುವುದು ಹಾಗೂ ಯಾವುದೇ ತರಬೇತಿಯಿಲ್ಲದ ಆತನ ಮಗ ಚಿಂತನ್ ಪಟೇಲ್ ಈ ರೋಗಿಗಳಿಗೆ ಚುಚ್ಚುಮದ್ದನ್ನು ನೀಡುತ್ತಿದ್ದನೆನ್ನುವುದು ತನಿಖೆಗಳಲ್ಲಿ ವ್ಯಕ್ತವಾಗಿದ್ದು, ಅವರಿಬ್ಬರನ್ನೂ ಈಗ ಬಂಧಿಸಲಾಗಿದೆ. ಇನ್ನಷ್ಟು ಜನರಿಗೆ ಹೆಪಟೈಟಿಸ್ ಬಿ/ಡಿ ಹರಡದಂತೆ ಅಲ್ಲೀಗ ಲಕ್ಷಗಟ್ಟಲೆ ಜನರಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ಚುಚ್ಚಲಾಗುತ್ತಿದ್ದು, ಇದು ವಿಶ್ವದಲ್ಲೇ ಅತಿದೊಡ್ಡದಾದ ಲಸಿಕೆ ಹಾಕುವ ಕಾರ್ಯಕ್ರಮವೆಂದು ಸರಕಾರವು ಹೇಳಿಕೊಂಡಿದೆ.

ಈ ಘಟನೆಯು ಇಡೀ ವೈದ್ಯ ವೃಂದವೇ ತಲೆತಗ್ಗಿಸುವಂತಹಾ ಘೋರವಾದ ಅಪರಾಧವಾಗಿದ್ದು, ಒಬ್ಬ ವೈದ್ಯನ ದುರಾಸೆಯ ಹಾಗೂ ಬೇಜವಾಬ್ದಾರಿಯ ವರ್ತನೆಯಿಂದ ನೂರಾರು ಜನರು ಪ್ರಾಣಾಪಾಯಕ್ಕೆ ಸಿಲುಕುವಂತಾಗಿದೆ. ಹೆಪಟೈಟಿಸ್ ಬಿ ಇರುವ ರೋಗಿಗೆ ಚುಚ್ಚುಮದ್ದನ್ನು ನೀಡುವಾಗ ಸೂಜಿಯೊಳಕ್ಕೆ ಅದು ಅಂಟಿಕೊಳ್ಳುತ್ತದೆ. ಆ ಸೂಜಿಯನ್ನು ಪ್ರತ್ಯೇಕವಾಗಿ, ಜಾಗ್ರತೆಯಿಂದ ವಿಲೇವಾರಿ ಮಾಡಬೇಕಾದದ್ದು ಅತ್ಯಗತ್ಯ. ಅದನ್ನು ಕುದಿಯುವ ನೀರಲ್ಲಿಟ್ಟು ಯಾ ರಾಸಾಯನಿಕಗಳಿಂದ ಕ್ರಿಮಿಶುದ್ಧೀಕರಿಸಿದರೂ ಹೆಪಟೈಟಿಸ್ ಬಿ ವೈರಾಣು ನಾಶಗೊಳ್ಳುವುದಿಲ್ಲ. ಆದ್ದರಿಂದ ಅದೇ ಸೂಜಿಯನ್ನು ಇತರರಿಗೆ ಚುಚ್ಚಿದರೆ ಸೋಂಕು ಹರಡುತ್ತದೆ; ವೈರಾಣು ಹಲವು ವಾರಗಳ ಕಾಲ ಸೂಜಿಯಲ್ಲಿ ಉಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಅದರಿಂದ ಚುಚ್ಚಿಸಿಕೊಂಡ ನೂರಾರು ಜನರಿಗೆ ಅದು ಹರಡಬಹುದು. ಹೆಪಟೈಟಿಸ್ ಡಿ ವೈರಾಣುವು ಒಂದು ಅರೆ ವೈರಾಣುವಾಗಿದ್ದು, ಹೆಪಟೈಟಿಸ್ ಬಿ ಯ ಜೊತೆಗಷ್ಟೇ ಸೋಂಕನ್ನುಂಟುಮಾಡಬಲ್ಲದು; ಆದರೆ ಇವೆರಡೂ ಜೊತೆಯಾಗಿ ತಗಲಿದರೆ, ಕಾಹಿಲೆಯ ತೀವ್ರತೆಯು ಬಹಳ ಹೆಚ್ಚಿರುತ್ತದೆ, ಸಾಯುವ ಅಪಾಯವೂ ಹೆಚ್ಚಾಗುತ್ತದೆ. ಮೊದಾಸದಲ್ಲೀಗ ಆಗಿರುವುದು ಇದೇ: ಹೆಪಟೈಟಿಸ್ ಬಿ/ಡಿ ಜಂಟಿ ಸೋಂಕಿದ್ದ ಯಾರೋ ಒಬ್ಬ ರೋಗಿಗೆ ಬಳಸಿದ್ದ ಸೂಜಿಯಿಂದ ಇತರ ಹಲವರಿಗೆ ಚುಚ್ಚುಮದ್ದು ನೀಡಿದ್ದರಿಂದಾಗಿ ಇಂತಹಾ ಗಂಭೀರವಾದ ಸಮಸ್ಯೆಯುಂಟಾಗಿದೆ.

ಇಂದು ಬಳಸಿ ಎಸೆಯುವ (’ಎಸೆಯುವುದಕ್ಕೂ’ ಸೂಕ್ತವಾದ ವಿಧಿ-ವಿಧಾನಗಳಿವೆ) ಸೂಜಿಗಳು ಒಂದೆರಡು ರೂಪಾಯಿಗಳಿಗೆ ವ್ಯಾಪಕವಾಗಿ ಲಭ್ಯವಿದ್ದು, ಒಮ್ಮೆ ಬಳಸಿದ ಸೂಜಿಯನ್ನು ಮತ್ತೆ ಮತ್ತೆ ಬಳಸುವ ಪ್ರಮೇಯವು ಇಲ್ಲವೇ ಇಲ್ಲ. ಈ ಒಂದೆರಡು ರೂಪಾಯಿಗಳನ್ನು ಉಳಿಸಲೆತ್ನಿಸುವ ವೈದ್ಯರ ಧನದಾಹವನ್ನು ಎಷ್ಟು ಖಂಡಿಸಿದರೂ ಕಡಿಮೆಯೇ. ಅಂತಹಾ ಒಂದೆರಡು ಸೂಜಿಗಳಿಂದ ನೂರಾರು ಜನರಿಗೆ ಚುಚ್ಚುಮದ್ದನ್ನು ನೀಡಲಾಗಿದೆಯೆಂದರೆ, ಆ ವೈದ್ಯರ ಕಾರ್ಯವೈಖರಿಯ ಬಗ್ಗೆ ಅಚ್ಚರಿಯಾಗುತ್ತದೆ. ಅದರ ಜೊತೆಗೆ, ಯಾವುದೇ ತರಬೇತಿಯಿಲ್ಲದ ಮಗನನ್ನು ಚುಚ್ಚುಮದ್ದು ನೀಡುವ ಕೆಲಸಕ್ಕೆ ನೇಮಿಸಿಕೊಂಡಿರುವುದರಿಂದ, ವೈದ್ಯವೃತ್ತಿಯ ಘನತೆ ಗೌರವಗಳೂ, ಸಾಮಾಜಿಕ ಬದ್ಧತೆಯೂ ವೈದ್ಯರಿಂದಲೇ ಮಣ್ಣುಪಾಲಾದಂತಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯ ವೃತ್ತಿಯು ಅತಿಯಾಗಿ ಖಾಸಗೀಕರಣಗೊಳ್ಳುತ್ತಿರುವುದು, ಅದಕ್ಕೆ ಖರ್ಚು-ವೆಚ್ಚಗಳು ಅತಿರೇಕದ ಮಟ್ಟಕ್ಕೆ ಮುಟ್ಟುತ್ತಿರುವುದು, ವೈದ್ಯ ಶಿಕ್ಷಣ ಹಾಗೂ ವೃತ್ತಿಯ ಗುಣಮಟ್ಟಗಳು ಪಾತಾಳಕ್ಕೆ ಕುಸಿಯುತ್ತಿರುವುದು ಇಂತಹಾ ಘಟನೆಗಳು ಇನ್ನಷ್ಟು ಹೆಚ್ಚುವುದಕ್ಕೆ ಕಾರಣವಾಗುವ ಅಪಾಯವು ಇದ್ದೇ ಇದೆ. ಕಣ್ಣುಮುಚ್ಚಿ ಕುಳಿತು ಇವೆಲ್ಲವನ್ನೂ ಆಗಗೊಡುತ್ತಿರುವ ಸರಕಾರವನ್ನು ಹಾಗೂ ವೈದ್ಯವೃತ್ತಿಯನ್ನು ನಿಯಂತ್ರಿಸುವ ಸಂಸ್ಥೆಗಳನ್ನು ನಂಬಿ ಜನಸಾಮಾನ್ಯರು ಇನ್ನೂ ಸುಮ್ಮನೆ ಕೂರುವುದು ಸರಿಯಲ್ಲ.

ಲಕ್ಷಾಂತರ ಜನರಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ಹಾಕುವುದು ಈ ಸಮಸ್ಯೆಗೆ ಪರಿಹಾರವಲ್ಲ, ಅದರಿಂದ ಲಸಿಕೆಯನ್ನು ತಯಾರಿಸುವ ಕಂಪೆನಿಗಳಿಗಷ್ಟೆ ಲಾಭವಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರು ಹಾಗೂ ವೈದ್ಯರು ಈ ಕೆಳಗಿನ ಸರಳ ಸೂತ್ರಗಳನ್ನು ಪಾಲಿಸಬಹುದು:

  • ಹೆಚ್ಚಿನ ಸಂದರ್ಭಗಳಲ್ಲಿ ಚುಚ್ಚುಮದ್ದಿನ ಅಗತ್ಯವೇ ಬರುವುದಿಲ್ಲ. ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆಯುವಾಗ ಚುಚ್ಚುಮದ್ದಿನಿಂದ ಕಾಹಿಲೆಯು ಬೇಗನೇ ಗುಣವಾಗುತ್ತದೆ ಯಾ ಶಮನಗೊಳ್ಳುತ್ತದೆ ಎನ್ನುವುದು ತಪ್ಪಾದ ಕಲ್ಪನೆಯಷ್ಟೆ. ಆದ್ದರಿಂದ ಅನಗತ್ಯವಾಗಿ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಡಿ, ಅದನ್ನು ಹಾಕುವಂತೆ ವೈದ್ಯರನ್ನು ಬಲವಂತಪಡಿಸಬೇಡಿ. ವೈದ್ಯರುಗಳೂ ರೋಗಿಗಳ ಬಲವಂತಕ್ಕೋ, ಅವರ ಮನಮೆಚ್ಚಿಸುವುದಕ್ಕೂ ಇಂತಹ ಚಿಕಿತ್ಸೆಯನ್ನು ನೀಡುವ ಪ್ರಲೋಭನೆಗೆ ಬೀಳಬಾರದು.
  • ಚುಚ್ಚುಮದ್ದನ್ನು ಹಾಕಿಸಿಕೊಳ್ಳಲೇಬೇಕಾದ ಸಂದರ್ಭಗಳಲ್ಲಿ ಬಳಸಿ ಎಸೆಯುವ ಸೂಜಿಗಳನ್ನೇ ಉಪಯೋಗಿಸಬೇಕು; ವೈದ್ಯರೆಲ್ಲರೂ ಅದನ್ನು ಪಾಲಿಸಬೇಕು, ವೈದ್ಯರು ಹಾಗೆ ಮಾಡುವಂತೆ ಜನಸಾಮಾನ್ಯರೂ ಒತ್ತಾಯ ಮಾಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಯಾ ಯಾವುದೇ ವೈದ್ಯರಲ್ಲಿ ಅಂತಹಾ ಸೂಜಿಗಳಿಲ್ಲದಿದ್ದರೆ, ಅದನ್ನು ತಾವೇ ಖರೀದಿಸುವುದು ಒಳ್ಳೆಯದು; ಒಂದೆರಡು ರೂಪಾಯಿಗಳು ನಮ್ಮ ಜೀವಕ್ಕಿಂತ ದೊಡ್ಡವೇ?
  • ಆಯುರ್ವೇದ, ಹೋಮಿಯೋಪತಿ, ಯುನಾನಿ ಇವೇ ಮುಂತಾದ ಬದಲಿ ವೈದ್ಯಕೀಯ ಪದ್ಧತಿಗಳಲ್ಲಿ ಚುಚ್ಚುಮದ್ದನ್ನು ಬಳಸಲಾಗುವುದಿಲ್ಲವಾದ್ದರಿಂದ ಅಂತಹಾ ವೈದ್ಯರಿಂದ ಯಾವುದೇ ಕಾರಣಕ್ಕೂ ಚುಚ್ಚುಮದ್ದುಗಳನ್ನು ಹಾಕಿಸಿಕೊಳ್ಳಲೇಬಾರದು.

ವರದಿಗಳು ಇಲ್ಲಿವೆ:

13 Mar19:37

- Thanks for the info

By rowery (not verified)

- Thanks for the info

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.