ಮಾಡದ ಅಧ್ಯಯನಗಳು. ಓದದ ನಿದರ್ಶನಗಳು. ಅಂದಾಜುಗಳು, ಗ್ರಹಿಕೆಗಳು, ನಂಬಿಕೆಗಳು ಮತ್ತು ಇವುಗಳ ಆಧಾರದಲ್ಲೇ ನಿರ್ಧಾರಗಳು. ಅರೆಬರೆ ತಯಾರಿ: ಶಿಕ್ಷಣವನ್ನು ನೀಡುವ ನಿರ್ಧಾರ ಮೊದಲು, ನಂತರ ಶಿಕ್ಷಕರ ತರಬೇತಿಯ ಬಗ್ಗೆ ಯೋಚನೆ. ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಯೋಗಶಿಕ್ಷಣವನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲುದ್ದೇಶಿಸಿರುವ ಸರಕಾರದ ವೈಖರಿ ಇದು. ಇದು ಬೆಳೆಯುವ ಮಕ್ಕಳ ಮೇಲೆ ದೌರ್ಜನ್ಯವೆಂದರೂ ಕಡಿಮೆಯೇ.
ಮಕ್ಕಳಿಗೆ ಯೋಗಾಭ್ಯಾಸವು ಸುರಕ್ಷಿತವೇ ಎನ್ನುವ ಬಗ್ಗೆ ಸರಕಾರದ ಬಳಿ ಯಾವುದೇ ಮಾಹಿತಿಯಿಲ್ಲ ಮಾತ್ರವಲ್ಲ, ಅಂತಹಾ ವಿವರಗಳನ್ನು ಹುಡುಕುವ ಗೋಜಿಗೂ ಹೋದಂತಿಲ್ಲ. ಈ ಬಗ್ಗೆ ಮಾಹಿತಿ ಕಾಯಿದೆಯಡಿಯಲ್ಲಿ ಕೇಳಲಾದ ಪ್ರಶ್ನೆಗೆ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯು ನೀಡಿರುವ ಉತ್ತರ ಇಲ್ಲಿದೆ:
ಪ್ರಶ್ನೆ: ಯೋಗಾಭ್ಯಾಸದ ಒಳಿತು-ಕೆಡುಕುಗಳ ಬಗ್ಗೆ ಹಲವಾರು ಸಣ್ಣದಾದ, ಅಲ್ಪಕಾಲೀನ ಅಧ್ಯಯನಗಳನ್ನು ನಡೆಸಲಾಗಿದ್ದು, ಎಲ್ಲರಿಗೂ ಒಂದೇ ರೀತಿಯ ಯೋಗಾಭ್ಯಾಸದಿಂದ ನಿಸ್ಸಂದೇಹವಾದ ಪ್ರಯೋಜನವಿದೆಯೆಂದಾಗಲೀ, ಅದು ಸಂಪೂರ್ಣವಾಗಿ ಸುರಕ್ಷಿತವೆಂದಾಗಲೀ ಎಲ್ಲೂ ವರದಿಗಳಿಲ್ಲ. ಹಾಗಿರುತ್ತಾ, ಒಂದನೇ ತರಗತಿಯ ಮಕ್ಕಳಿಂದ ಹಿಡಿದು ಎಲ್ಲಾ ವಿದ್ಯಾರ್ಥಿಗಳಿಗೂ ಏಕರೂಪದ ಯೋಗಾಭ್ಯಾಸವನ್ನು ಮಾಡಿಸುವುದರಿಂದ ಯಾವುದೇ ದುಷ್ಪರಿಣಾಮಗಳುಂಟಾದರೆ ಅವನ್ನು ಗುರುತಿಸಿ, ನಿಭಾಯಿಸುವ ಬಗ್ಗೆ ಸಂಬಂಧಪಟ್ಟ ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆಯೇ? ಹಾಗಿದ್ದರೆ ಅವುಗಳ ವಿವರಗಳನ್ನು ಒದಗಿಸಿ.
ಉತ್ತರ: ಯೋಗಾಭ್ಯಾಸದಿಂದ ಯಾವುದೇ ದುಷ್ಪರಿಣಾಮ ಅಥವಾ ಅಪಾಯವಿದೆ ಎಂದು ಯಾವುದೇ ನಿದರ್ಶನಗಳಿರುವುದಿಲ್ಲ. ಆದ್ದರಿಂದ ಈ ಯೋಗಾಭ್ಯಾಸವು ಸುರಕ್ಷಿತವಾಗಿದೆ ಎಂದು ಗ್ರಹಿಸಲಾಗಿದೆ.
ನಿದರ್ಶನಗಳಿಲ್ಲವೇ ಅಥವಾ ಇರುವುದನ್ನು ನೋಡಿಲ್ಲವೆ? ನೋಡಬೇಕೆನ್ನುವ ಆಸಕ್ತಿಯಾಗಲೀ, ಕಾಳಜಿಯಾಗಲೀ ಇಲ್ಲವೆ? ಯಾರದೋ ‘ಗ್ರಹಿಕೆಯ’ ಆಧಾರದಲ್ಲಿ ನಮ್ಮ ಮಕ್ಕಳೇಕೆ ಕಡ್ದಾಯವಾಗಿ ಯೋಗಾಭ್ಯಾಸವನ್ನು ಮಾಡಬೇಕು?
ಯೋಗಾಭ್ಯಾಸದಿಂದಾಗಬಹುದಾದ ತೊಂದರೆಗಳ ಬಗ್ಗೆ ಅಧಿಕಾರಿಗಳು ಹುಡುಕದ, ಅವರಿಗೆ ದೊರೆಯದ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ, ಯೋಗಾಭ್ಯಾಸವು ‘ಗ್ರಹಿಸಿದಂತೆ’ ಸುರಕ್ಷಿತವೇನಲ್ಲ ಎನ್ನಲು ಇವಿಷ್ಟೇ ಸಾಕು.
ಯೋಗಾಭ್ಯಾಸದಿಂದ ಮಕ್ಕಳಿಗೇನಾದರೂ ಪ್ರಯೋಜನವಿದೆಯೇ? ಇಲಾಖೆ ಏನು ಹೇಳುತ್ತದೆ?
ಪ್ರಶ್ನೆ: ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಗಳ ದೃಷ್ಟಿಯಿಂದ ಯೋಗಾಭ್ಯಾಸವು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಷ್ಟೇ ಪ್ರಯೋಜನಕರವೆಂದು ಯಾವುದಾದರೂ ಅಧ್ಯಯನಗಳನ್ನು ನಡೆಸಲಾದ ಬಗ್ಗೆ ಸರಕಾರದ ಬಳಿ ಮಾಹಿತಿಯಿದೆಯೇ? ಈ ನಿಟ್ಟಿನಲ್ಲಿ ಮೈದಾನಗಳು ಲಭ್ಯವಿಲ್ಲದಿದ್ದ ಸಂದರ್ಭಗಳಲ್ಲಿ ಯೋಗಾಭ್ಯಾಸವನ್ನು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಿಗೆ ಪರ್ಯಾಯವಾಗಿ ಕಲಿಸಿದರೆ ಸಾಕಾಗುತ್ತದೆಯೇ?
ಉತ್ತರ: ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಗಳ ದೃಷ್ಟಿಯಿಂದ ಯೋಗಾಭ್ಯಾಸವು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಷ್ಟೇ ಪ್ರಯೋಜನಕರವೆಂದು ಯಾರು ಹೇಳುವುದಿಲ್ಲ. ದೈಹಿಕ ವ್ಯಾಯಾಮ ಅಥವಾ ಆಟೋಟಗಳ ಪ್ರಯೋಜನ ಒಂದು ವಿಧವಾದರೆ, ಯೋಗಾಭ್ಯಾಸದ ಪ್ರಯೋಜನ ಇನ್ನೊಂದು ವಿಧ. ಆದ್ದರಿಂದ ಅವುಗಳನ್ನು ತುಲನೆ ಮಾಡಲು ಬರುವುದಿಲ್ಲ ಮತ್ತು ಯೋಗಾಭ್ಯಾಸವನ್ನು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಿಗೆ ಪರ್ಯಾಯವಾಗಿ ಕಲಿಸಿದರೆ ಸಾಲದು.
ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಗಳ ದೃಷ್ಟಿಯಿಂದ ಯೋಗಾಭ್ಯಾಸವು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಷ್ಟೇ ಪ್ರಯೋಜನಕರವೆಂದು ಯಾರು ಹೇಳುವುದಿಲ್ಲ ಎನ್ನುವ ಇಲಾಖೆಯು ಇನ್ನೊಂದೆಡೆ ಏನು ಹೇಳಿದೆ ನೋಡಿ:.
ಪ್ರಶ್ನೆ: ಶಾಲೆಗಳಿಗೆ ಆಟದ ಮೈದಾನಗಳು ಸರಿಯಾಗಿ ಲಭ್ಯವಿಲ್ಲದಿರುವುದರಿಂದ ಯೋಗಾಭ್ಯಾಸವನ್ನು ಕಲಿಸಬಹುದೆಂದು ವರದಿಯಲ್ಲಿ ಹೇಳಲಾಗಿರುವುದರಿಂದ, ಶಾಲೆಗಳಿಗೆ ಸೂಕ್ತವಾದ, ವಿಶಾಲವಾದ ಆಟದ ಮೈದಾನಗಳನ್ನು ಒದಗಿಸುವಲ್ಲಿ ಸರಕಾರವು ಯಾವುದಾದರೂ ಉಪಕ್ರಮಗಳನ್ನು ಚಿಂತಿಸಿದೆಯೇ? ಅದಕ್ಕಿರುವ ಅಡಚಣೆಗಳೇನು?
ಉತ್ತರ: ಆಟದ ಮೈದಾನಗಳು ಸರಿಯಾಗಿ ಲಭ್ಯವಿಲ್ಲದಿರುವ ಶಾಲೆಗಳಲ್ಲಿ ಕನಿಷ್ಟ ಯೋಗಾಭ್ಯಾಸವನ್ನು ಕಲಿಸುವುದರಿಂದ ತಕ್ಕ ಮಟ್ಟಿಗೆ ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಗಳ ಮೇಲೆ ಒಳ್ಳೆಯ ಪ್ರಭಾವವುಂಟಾಗುವುದು. ಏಕೆಂದರೆ ಏನೂ ಇಲ್ಲದಿರುವುದಕ್ಕಿಂತ ಸ್ವಲ್ಪವಾದರೂ ಇರುವುದು ಲೇಸು.
ಯೋಗಾಭ್ಯಾಸವು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಷ್ಟೇ ಪ್ರಯೋಜನಕರವೆಂದು 'ಯಾರು ಹೇಳುವುದಿಲ್ಲವೆಂದ' ಮೇಲೆ, ಅದರಿಂದ ‘ತಕ್ಕ ಮಟ್ಟಿಗೆ ಒಳ್ಳೆಯ ಪ್ರಭಾವವುಂಟಾಗುವುದು’ ಎನ್ನಲು ಆಧಾರಗಳೇನು? ‘ಏನೂ ಇಲ್ಲದಿರುವುದಕ್ಕಿಂತ ಸ್ವಲ್ಪವಾದರೂ ಇರುವುದು ಲೇಸು’ ಎಂದಾದರೆ, ಇರುವ ಸೌಲಭ್ಯಗಳಲ್ಲೇ ಸಾಮಾನ್ಯವಾದ ವ್ಯಾಯಾಮಗಳನ್ನೇ ಮಾಡಿಸಬಾರದೇಕೆ? ಯೋಗಾಭ್ಯಾಸವೇ ಆಗಬೇಕೆಂದೇನಿದೆ? ಹಾಗೂ ಹೀಗೂ ಯೋಗಾಭ್ಯಾಸವನ್ನು ಕಡ್ದಾಯವಾಗಿ ಮಾಡಿಸಲೇಬೇಕು ಎನ್ನುವ ಈ ಹಠಮಾರಿತನದ ಹಿಂದಿರುವ ಉದ್ದೇಶವಾದರೂ ಏನು?
ಅಷ್ಟಕ್ಕೂ ಯೋಗಾಭ್ಯಾಸವನ್ನು ಕಲಿಸುವವರಾರು?
ಪ್ರಶ್ನೆ: ದೈಹಿಕ ಶಿಕ್ಷಕರು ತಮ್ಮ ತರಬೇತಿಯ ವೇಳೆ ಯೋಗ ತರಬೇತಿಯನ್ನು ಪಡೆದಿರುವುದರಿಂದ ಅವರೇ ಈ ಶಿಕ್ಷಣವನ್ನು ನೀಡಲು ಸಮರ್ಥರಿದ್ದಾರೆಂದು ವರದಿಯಲ್ಲಿ ಹೇಳಲಾಗಿರುವುದರಿಂದ, ಅದಕ್ಕಾಗಿಯೇ ಇನ್ನೂ 65000 ಶಿಕ್ಷಕರನ್ನು ರೂ. 4.55 ಕೋಟಿ ವೆಚ್ಚದಲ್ಲಿ ನೇಮಿಸುವ ಅಗತ್ಯವೇನು?
ಉತ್ತರ: ಸೇವಾನಿರತ ಶಿಕ್ಷಕರ ತರಬೇತಿಯಲ್ಲಿ ಈ ವರೆಗೆ ತರಬೇತಿಗೆ ಒಳಪಡದೆ ಉಳಿದಿರುವ ಶಿಕ್ಷಕರಿಗೆ ತರಬೇತಿ ನೀಡಲು ತಗಲಬಹುದಾದ ಅಂದಾಜುವೆಚ್ಚವನ್ನು ಇಲ್ಲಿ ತಿಳಿಸಿದೆ. ಹೊಸ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿರುವುದಲ್ಲ.
ಅಂದರೆ, ದೈಹಿಕ ಶಿಕ್ಷಕರಿಗೇ ಒಂದಿಷ್ಟು ತರಬೇತಿಯನ್ನು ನೀಡಿ ಅವರಿಂದಲೇ ಯೋಗಶಿಕ್ಷಣವನ್ನು ಕೊಡಿಸುವ ಇರಾದೆ ಸರಕಾರದ್ದು. ಮಕ್ಕಳಿಗೆ ಯೋಗಾಭ್ಯಾಸದಿಂದಾಗಬಹುದಾದ ತೊಂದರೆಗಳ ಬಗ್ಗೆ ಅರಿವೇ ಇಲ್ಲದ ಅಧಿಕಾರಿಗಳಿಗೆ ಮಕ್ಕಳ ಯೋಗಶಿಕ್ಷಣಕ್ಕೆ ಯೋಗತಜ್ಞರ ಅಗತ್ಯವು ಗೋಚರಿಸುವುದಾದರೂ ಹೇಗೆ ಸಾಧ್ಯ? ಆದರೆ ಯಾವ ಯೋಗತಜ್ಞರಲ್ಲಿ ಕೇಳಿದರೂ ಶಾಲೆಗಳಲ್ಲಿ ಮಕ್ಕಳ ಯೋಗಾಭ್ಯಾಸಕ್ಕೆ ಹಲವು ಅಡಚಣೆಗಳಿರುವ ಬಗ್ಗೆ ಪಟ್ಟಿ ಮಾಡುತ್ತಾರೆ: ಯೋಗಾಭ್ಯಾಸಕ್ಕೆ ಸೂಕ್ತವಾದ ಆಹಾರ ಕ್ರಮ, ದಿರಿಸು, ವೇಳೆ, ಹುಡುಗಿಯರು ಪಾಲಿಸಬೇಕಾದ ನಿರ್ಬಂಧಗಳು ಇತ್ಯಾದಿ. ಆದರೆ ತಜ್ಞರ ಮಾತು ಯಾರಿಗೆ ಬೇಕಾಗಿದೆ?
ಯೋಗದಿಂದ ಮಕ್ಕಳ ಮೇಲಿನ ಹೊರೆ ಹೆಚ್ಚುವುದಿಲ್ಲವೇ?
ಪ್ರಶ್ನೆ: ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಯೋಗಶಿಕ್ಷಣದ ಉದ್ದೇಶವೆಂದು ಹೇಳಿರುವಾಗ ಇಷ್ಟೊಂದು ವಿಸ್ತೃತವಾದ ಪಠ್ಯಕ್ರಮ ಹಾಗೂ ಅದರ ಬಗೆಗಿನ ಲಿಖಿತ ಹಾಗೂ ದೈಹಿಕ ಪರೀಕ್ಷೆಗಳಿಂದ ಈ ಉದ್ದೇಶವನ್ನು ಸಾಧಿಸಲು ಸಾಧ್ಯವಿದೆಯೇ? ಇದ್ದರೆ ಅದು ಹೇಗೆ?
ಉತ್ತರ: ದೈಹಿಕ ಶಿಕ್ಷಣ ಪಠ್ಯಕ್ರಮ ಸಮಿತಿಯವರು ಯೋಗ ಶಿಕ್ಷಣವು ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಯೋಗಶಿಕ್ಷಣದಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿಕೊಳ್ಳಲು ಸಮರ್ಥರಾಗುತ್ತಾರೆ ಎಂದು ನಂಬಲಾಗಿದೆ.
ಎಲ್ಲಿಯೂ ಹೇಳಿಕೊಂಡಿಲ್ಲವೆ? ದೈಹಿಕ ಶಿಕ್ಷಣ ತಜ್ಞರ ಸಮಿತಿಯ ವರದಿಯನ್ನೊಮ್ಮೆ ನೋಡಿ:
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲಾ ಸ್ತರದ ವಿದ್ಯಾರ್ಥಿಗಳೂ ಶೈಕ್ಷಣಿಕ ಒತ್ತಡಕ್ಕೆ ಹೆಚ್ಚು ಹೆಚ್ಚಾಗಿ ಒಳಗಾಗುತ್ತಿರುವ ಜೊತೆಗೆ ನಗರ/ಪಟ್ಟಣ ಪ್ರದೇಶಗಳಲ್ಲಿ ದೈಹಿಕ ಶಿಕ್ಷಣ ಚಟುವಟಿಕೆಗಳಿಗೆ ವಿಶಾಲವಾದ ಮೈದಾನ/ಬಯಲು ಸಿಗುವುದು ದುಸ್ತರವಾಗಿದೆ. ವಿದ್ಯಾರ್ಥಿಗಳ ಆರೋಗ್ಯಕ್ಕೆ ಧಕ್ಕೆ ತರುತ್ತಿರುವ ಒತ್ತಡಗಳ ನಿವಾರಣೆಗೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳಾಭಾವದ ಸ್ಥಿತಿಯಿದ್ದರೂ ದೈಹಿಕ ಮತ್ತು ಮಾನಸಿಕ ಆರೋಗ್ಯವರ್ಧನೆಗೆ ಯೋಗ್ಯವಾದಂಥಹ ಭಾರತೀಯ ಮೂಲದ ಅಮೂಲ್ಯ ಚಟುವಟಿಕೆಯಾದ ಯೋಗಶಿಕ್ಷಣವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. [ದೈಹಿಕ ಶಿಕ್ಷಣ ತಜ್ಞರ ಸಮಿತಿ, ಬೆಂಗಳೂರು . ಪ್ರೊ. ಎಲ್ ಆರ್ ವೈದ್ಯನಾಥನ್ ನೇತೃತ್ವದ ಸಮಿತಿಯ ಸಮಗ್ರ ವರದಿ 2006-07 ಪುಟ 40]
'ವಿದ್ಯಾರ್ಥಿಗಳ ಆರೋಗ್ಯಕ್ಕೆ ಧಕ್ಕೆ ತರುತ್ತಿರುವ ಒತ್ತಡಗಳ ನಿವಾರಣೆಗೆ ಯೋಗಶಿಕ್ಷಣವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ' ಅಂದರೇನರ್ಥ? ‘ಯೋಗಶಿಕ್ಷಣದಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿಕೊಳ್ಳಲು ಸಮರ್ಥರಾಗುತ್ತಾರೆ ಎಂದು ನಂಬಲಾಗಿದೆ’ ಯಾಕೆಂದು ಕೇಳಬಹುದೇ?
ಒಟ್ಟಿನಲ್ಲಿ, ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೆ, ಸರಿಯಾದ ಶಿಕ್ಷಕರಿಲ್ಲದೆ, ದುಷ್ಪರಿಣಾಮಗಳ ಪರಿವೆಯಿಲ್ಲದೆ ಹಠಮಾರಿತನದಿಂದ ನಮ್ಮ ರಾಜ್ಯದ ಮಕ್ಕಳ ಮೇಲೆ ಯೋಗಶಿಕ್ಷಣವನ್ನು ಹೇರಲುದ್ದೇಶಿಸಲಾಗಿರುವ ಕ್ರಮವನ್ನು ಹೆತ್ತವರು, ವಿದ್ಯಾರ್ಥಿಗಳು, ಯೋಗತಜ್ಞರು, ವೈದ್ಯರುಗಳೆಲ್ಲರೂ ಸೇರಿ ವಿರೋಧಿಸಬೇಕಾಗಿದೆ.
Re: ಮಕ್ಕಳಿಗೆ ಯೋಗಾಭ್ಯಾಸ: ಮಾಹಿತಿಯೂ ಇಲ್ಲ, ಕಾಳಜಿಯೂ ಇಲ್ಲ
By billigflieger (not verified)Thanks. Nice article
Post new comment