ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವ ಬಗ್ಗೆ ರಾಜ್ಯ ಸರಕಾರವು ತೆಗೆದುಕೊಂಡಿರುವ ಅವಸರದ ನಿರ್ಧಾರವನ್ನು ವಿರೋಧಿಸಿ ನಾವು ನೀಡಿದ್ದ ಹೇಳಿಕೆಗೆ ಹಲವಾರು ಪತ್ರಿಕೆಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಹಲವು ಯೋಗ ತಜ್ಞರೂ ನಮ್ಮ ನಿಲುವನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದಾರೆ. ನಮ್ಮ ಶಾಲೆಗಳಲ್ಲಿ ಶಿಕ್ಷಣ ಮಟ್ಟ ಹಾಗೂ ಕಲಿಕೆಯ ಸ್ಥಿತಿಗತಿಗಳನ್ನು ಸುಧಾರಿಸಬೇಕಾದ ಅತಿ ತುರ್ತಾದ ಅಗತ್ಯವಿರುವ ಇಂದಿನ ಸನ್ನಿವೇಶದಲ್ಲಿ, ಜೀವನಾವಶ್ಯಕ ಕೌಶಲ್ಯಗಳನ್ನು ಕಲಿಸುವತ್ತ ಇನ್ನಷ್ಟು ಹೆಚ್ಚಿನ ಗಮನವನ್ನು ಹರಿಸುವ ಅಗತ್ಯವಿದ್ದು, ಯೋಗದ ಬಗ್ಗೆ ಸ್ವಲ್ಪ ಮಟ್ಟಿನ ತರಬೇತಿಯನ್ನಷ್ಟೇ ಪಡೆದಿರುವ ದೈಹಿಕ ಶಿಕ್ಷಕರ ಮೂಲಕ ಒಂದನೇ ತರಗತಿಯಾದಿಯಾಗಿ ಎಲ್ಲಾ ಮಕ್ಕಳಿಗೆ ಯೋಗಾಭ್ಯಾಸವನ್ನು ಕಲಿಸುವುದು ಅಗತ್ಯವೂ ಅಲ್ಲ, ಅಪೇಕ್ಷಣೀಯವೂ ಅಲ್ಲ. ಆದ್ದರಿಂದ ತಮ್ಮ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿಯಿರುವ ಹೆತ್ತವರು ಸರಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಬೇಕಾದದ್ದು ಅನಿವಾರ್ಯವಾಗಿದೆ. ಈ ದಿಸೆಯಲ್ಲಿ, ರಾಜ್ಯದ ಶಿಕ್ಷಣ ಸಚಿವರಿಗೆ ಸಲ್ಲಿಸಬಹುದಾದ ಮನವಿಯೊಂದನ್ನು ಸಿದ್ಧಪದಿಸಲಾಗಿದ್ದು, ಆಸಕ್ತರು ಇದನ್ನು ಸಚಿವರಿಗೂ, ಅದರ ಪ್ರತಿಯನ್ನು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೂ ಕಳುಹಿಸಬಹುದು.
ನಮ್ಮ ಮಕ್ಕಳ ಮೇಲೆ ಯಾವುದನ್ನೇ ಆಗಲಿ ಬಲವಂತವಾಗಿ ಹೇರುವುದನ್ನು ವಿರೋಧಿಸೋಣ!
ಮನವಿ ಇಂತಿದೆ:
ಮಾನ್ಯ ಶಿಕ್ಷಣ ಸಚಿವರು,
ಕರ್ನಾಟಕ ಸರಕಾರ,
ಶಿಕ್ಷಣ ಸಚಿವಾಲಯ,
ಕೊಠಡಿ ಸಂ. 645 ಹಾಗೂ 641,
ಆರನೇ ಮಹಡಿ, ಬಹುಮಹಡಿ ಕಟ್ಟಡ,
ಬೆಂಗಳೂರು - 560001. ಇವರಿಗೆ
ಮಾನ್ಯರೇ,
ವಿಷಯ: ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಹೆತ್ತವರ ಮನವಿ
ಕರ್ನಾಟಕ ಸರಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸುವ ಬಗ್ಗೆ ನಿರ್ಧರಿಸಿರುವುದಾಗಿ ಪತ್ರಿಕೆಗಳ ಮೂಲಕ ನಮ್ಮ ಅರಿವಿಗೆ ಬಂದಿರುತ್ತದೆ. ಈ ಬಗ್ಗೆ ರಾಜ್ಯದ ಕೆಲವು ವೈದ್ಯಕೀಯ ತಜ್ಞರು, ಶಿಕ್ಷಣ ತಜ್ಞರು ಹಾಗೂ ಯೋಗ ತಜ್ಞರು ವ್ಯಕ್ತ ಪಡಿಸಿರುವ ಅಭಿಪ್ರಾಯಗಳೂ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇವುಗಳನ್ನು ಪರಿಗಣಿಸಿದಾಗ, ಯೋಗಾಭ್ಯಾಸದಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳ ಮೇಲೆ ನಿಸ್ಸಂದೇಹವಾದ ಪ್ರಯೋಜನಗಳಿರುವ ಬಗ್ಗೆ ಪುರಾವೆಗಳಿಲ್ಲವೆಂದೂ, ಮಕ್ಕಳಲ್ಲಿ ಯೋಗಾಭ್ಯಾಸವು ಸಂಪೂರ್ಣವಾಗಿ ಸುರಕ್ಷಿತವೆನ್ನುವುದಕ್ಕೂ ಯಾವುದೇ ಪುರಾವೆಗಳಿಲ್ಲವೆಂದೂ, ಯೋಗಾಭ್ಯಾಸಕ್ಕೆ ಆಹಾರ, ದಿರಿಸು ಹಾಗೂ ಸಮಯಗಳ ನಿರ್ದಿಷ್ಟ ಕಟ್ಟುಪಾಡುಗಳಿದ್ದು ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅವನ್ನು ಪಾಲಿಸುವುದು ಕಷ್ಟವೆಂದೂ, ಋತುಸ್ರಾವದ ಸಂದರ್ಭದಲ್ಲಿ ಯೋಗಾಭ್ಯಾಸವನ್ನು ಮಾಡುವುದಕ್ಕೆ ನಿರ್ಬಂಧಗಳಿದ್ದು ಇದರಿಂದಾಗಿ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾಗಬಹುದಾದ ಸಂದರ್ಭಗಳುಂಟಾಗಬಹುದೆಂದೂ, ಯೋಗ ಶಿಕ್ಷಣಕ್ಕೆ ನುರಿತ ಯೋಗ ಶಿಕ್ಷಕರು ಅತ್ಯಗತ್ಯವಾಗಿದ್ದು ದೈಹಿಕ ಶಿಕ್ಷಕರನ್ನೇ ಯೋಗ ಶಿಕ್ಷಣಕ್ಕೂ ನಿಯುಕ್ತಿಗೊಳಿಸುವುದರಿಂದ ಸರಿಯಾದ ಯೋಗ ಶಿಕ್ಷಣವು ದೊರೆಯುವುದರ ಬದಲಾಗಿ ತೊಂದರೆಗಳಿಗೂ ಕಾರಣವಾಗಬಹುದೆಂದೂ, ಈಗಾಗಲೇ ಮಕ್ಕಳಿಗೆ ಸಾಕಷ್ಟು ಹೊರೆಯಾಗಿರುವ ಶಿಕ್ಷಣವು ಇನ್ನಷ್ಟು ಹೊರೆಯಾಗಬಹುದೆಂದೂ ಸ್ಪಷ್ಟವಾಗಿ ಕಂಡುಬರುತ್ತಿದೆ.
ಆದ್ದರಿಂದ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸುವ ತರಾತುರಿಯ ನಿರ್ಧಾರವನ್ನು ಈ ಕೂಡಲೇ ಕೈಬಿಟ್ಟು, ಮಕ್ಕಳಲ್ಲಿ ಯೋಗ ಶಿಕ್ಷಣದ ಗುಣಾವಗುಣಗಳ ಬಗ್ಗೆ ಸೂಕ್ತವಾದ ದೀರ್ಘಕಾಲೀನ ಅಧ್ಯಯನಗಳನ್ನು ನಡೆಸಿ, ವೈದ್ಯಕೀಯ ತಜ್ಞರು, ಶಿಕ್ಷಣ ತಜ್ಞರು, ಯೋಗ ತಜ್ಞರು, ಕ್ರೀಡಾ ತಜ್ಞರು, ವಿದ್ಯಾರ್ಥಿಗಳು ಹಾಗೂ ಹೆತ್ತವರ ಅಭಿಪ್ರಾಯಗಳನ್ನು ಪಡೆದ ಬಳಿಕವಷ್ಟೇ ಆ ಬಗ್ಗೆ ಚಿಂತಿಸಬೇಕೆಂದೂ ನಾವು ಸರಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ.
ಸ್ಥಳ:
ದಿನಾಂಕ: ಸಹಿಗಳು
ಪ್ರತಿ: ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, --------------ಜಿಲ್ಲೆ
Thanks for the information
By imprezy integracyjne (not verified)Thanks for the information
Post new comment