ಮನುಷ್ಯ ಕೃಷಿಕಾರ್ಯಗಳಲ್ಲಿ ತೊಡಗಿದಾಗ ತನಗೆ ನೆರವಾಗಲೆಂದು ಆಕಳನ್ನು ಸಾಕಲಾರಂಭಿಸಿದ.[1] ಇಂದು ಕೃಷಿಕೆಲಸಗಳು ಸಾಕಷ್ಟು ಯಾಂತ್ರೀಕೃತಗೊಂಡಿರುವುದರಿಂದ ಸಾಕಲ್ಪಟ್ಟ ಮೂಲ ಉದ್ದೇಶಕ್ಕೆ ಈ ಪ್ರಾಣಿಗಳು ಅಪ್ರಸ್ತುತವೆನಿಸಿಬಿಟ್ಟಿವೆಯಾದರೂ, ಕೃಷಿಪ್ರಧಾನವಾದ ನಮ್ಮ ಸಮಾಜದಲ್ಲಿ ಅವುಗಳಿಗಿದ್ದ ಪ್ರಾಮುಖ್ಯತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿ, 'ಎರಡನೇ ತಾಯಿ',[2] 'ವಿಶ್ವದ ಮಾತೆ'[3,4] ಎಂಬಿತ್ಯಾದಿಯಾಗಿ ಬಿಂಬಿಸುವ ಪ್ರಯತ್ನಗಳೀಗ ವ್ಯವಸ್ಥಿತವಾಗಿ ನಡೆಯುತ್ತಿವೆ. 'ಗೋ ಮಾತೆಯ' ರಕ್ಷಣೆಗಾಗಿ ನಡೆಯುತ್ತಿರುವ 'ಹೋರಾಟಗಳು',[4,5] ದನದ ಗೌರವ ರಕ್ಷಣೆಗಾಗಿ ನಡೆದ ದಲಿತರ ಕೊಲೆಗಳು ಮತ್ತು ಹಲವಾರು ದೊಂಬಿಗಳನ್ನು[6,7] ನೋಡಿದಾಗ, ನಮ್ಮ ದೇಶದಲ್ಲಿ ಮನುಷ್ಯನ ಜೀವಕ್ಕಿಂತ ಸತ್ತಿರುವ ದನದ ಸ್ಥಾನಮಾನವೇ ಹೆಚ್ಚೆಂದು ಅನಿಸದಿರಲಾರದು. ಹೀಗಿರುವಾಗ, ದನಗಳು ಸ್ರವಿಸುವ ಹಾಲು ಮತ್ತು ವಿಸರ್ಜಿಸುವ ಮಲ-ಮೂತ್ರಗಳನ್ನು ಬಳಸಿ ಹಲವು 'ಉತ್ಪನ್ನಗಳನ್ನು' ತಯಾರಿಸಿ ಮಾರಾಟ ಮಾಡುವುದಕ್ಕೂ, ಈ 'ಉತ್ಪನ್ನಗಳು' ಹೈನುಗಾರಿಕೆಗಿಂತಲೂ ಹೆಚ್ಚಿನ ಲಾಭವನ್ನು ತರಬಹುದೆಂದು ಪ್ರಚಾರ ಮಾಡುವುದಕ್ಕೂ ದನಗಳ ಮೇಲಿನ ವಿಶೇಷವಾದ ಮಮತೆ ಹಾಗೂ ಭಕ್ತಿಗಳಷ್ಟೇ ಕಾರಣವೇ ಅಥವಾ ಇದರ ಹಿಂದೆ ಬೇರೇನಾದರೂ ಉದ್ದೇಶವಿದೆಯೇ ಎಂಬ ಪ್ರಶ್ನೆಗಳೇಳುತ್ತವೆ.[8]
'ಗೋ ಉತ್ಪನ್ನಗಳು':
ದನದ ಹಾಲು ಹಾಗೂ ಮಲ-ಮೂತ್ರಗಳಿಂದ ತಯಾರಿಸಲಾದ 'ಉತ್ಪನ್ನಗಳ' ಪಟ್ಟಿಯು ಸಾಕಷ್ಟು ದೊಡ್ಡದಿದೆ. ಇವುಗಳ ಪೈಕಿ, ಪಂಚಗವ್ಯ ಹಾಗೂ ಗೋ ಅರ್ಕಗಳ ಬಗ್ಗೆ ಹೆಚ್ಚಾಗಿ ಹೇಳಲಾಗಿದೆ.
ಗೋವಿನ ಐದು ಉತ್ಪನ್ನಗಳ - ಸೆಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪ - ಮಿಶ್ರಣವೇ ಪಂಚಗವ್ಯ.[9,10] ಗೋಮೂತ್ರವನ್ನು ಹುಳಿಬರಿಸಿ ತಯಾರಿಸಿದ ಗೋ ಮೂತ್ರಾಸವ, ಭಟ್ಟಿ ಇಳಿಸಿ ತಯಾರಿಸಿದ ಗೋ ಅರ್ಕ ಮತ್ತು ಗನವತಿ ಮಾತ್ರೆಗಳನ್ನೂ ಔಷಧಗಳಾಗಿ ಬಳಸಬಹುದಂತೆ.[8,11] ಗೋ ಅರ್ಕಕ್ಕೆ ಅಮೆರಿಕದ ಎರಡು ಪೇಟೆಂಟ್ ಗಳನ್ನೂ ಪಡೆಯಲಾಗಿದ್ದು, [11]ಈ ವಿಚಾರವನ್ನು ಬಹು ದೊಡ್ಡ ಸಾಧನೆಯೆಂಬಂತೆ ತೋರಿಸಲಾಗುತ್ತಿದೆ.
ವಿವಿಧ ಗೋ ಉತ್ಪನ್ನಗಳು ಜ್ವರದಿಂದ ಹಿಡಿದು ಕ್ಯಾನ್ಸರ್ ವರೆಗೆ ನೂರಾರು ರೋಗಗಳನ್ನು ವಾಸಿ ಮಾಡಬಹುದೆಂದು ಹೇಳಲಾಗುತ್ತಿದೆ.[8,11,12] ಕುಟುಂಬದಲ್ಲಿ ಜನನ ಮರಣಗಳಾದಾಗ 'ಮೈಶುದ್ಧಿ' ಮಾಡಿಸಿಕೊಳ್ಳಲು ಬಳಸಲಾಗುವ ಪಂಚಗವ್ಯವನ್ನು ಹಲವು ರೋಗಗಳ ಚಿಕಿತ್ಸೆಯಲ್ಲಿಯೂ, ಗಿಡಗಳಲ್ಲಿ ಕೀಟನಾಶಕವಾಗಿಯೂ, ಮಣ್ಣಿನ ಸಾರವನ್ನು ಹೆಚ್ಚಿಸುವುದಕ್ಕೂ ಬಳಸಬಹುದೆಂದು ಹೇಳಲಾಗುತ್ತಿದೆ.[10](ಇಷ್ಟೊಂದು ವೈವಿಧ್ಯಮಯವಾದ ಉಪಯೋಗಗಳುಳ್ಳ ವಸ್ತು ಬಹುಷಃ ಇನ್ನೊಂದಿರಲಾರದು!) ಇತ್ತೀಚೆಗೆ, ಚಿಕುಂಗುನ್ಯಾ ರೋಗದ ಚಿಕಿತ್ಸೆಯಲ್ಲೂ ಪಂಚಗವ್ಯವು ಪರಿಣಾಮಕಾರಿಯಾಗಿದೆಯೆಂದು ಘೋಷಿಸಿ [13]ಅದನ್ನು ವಿತರಿಸುವ ಶಿಬಿರಗಳನ್ನೂ ಕೆಲವೆಡೆಗಳಲ್ಲಿ ನಡೆಸಲಾಯಿತು. ಕೇಶತೈಲ, ಶಾಂಪೂ, ಚರ್ಮದ ಮುಲಾಮುಗಳು ಇತ್ಯಾದಿಗಳಲ್ಲೂ ಗೋಮೂತ್ರವನ್ನು ಬಳಸಬಹುದಂತೆ.[8]
ಸಾಬೂನು, ಮೂಗಿಗೆ ಏರಿಸುವ ಪುಡಿ, ಮೈಗೆ ಹಾಕುವ ಪುಡಿ, ಮುಲಾಮು, ಅಗರಬತ್ತಿ, ಹಲ್ಲಿನ ಪುಡಿ ಇತ್ಯಾದಿಗಳನ್ನು ದನದ ಸೆಗಣಿಯಿಂದ ತಯಾರಿಸಬಹುದೆಂದೂ, ಇವಕ್ಕೆ ಔಷಧೀಯ ಗುಣಗಳಿವೆಯೆಂದೂ ಹೇಳಲಾಗುತ್ತಿದೆ.[8]
ಯಾವ್ಯಾವುದೋ ದನಗಳ ಮಲ ಮೂತ್ರಗಳನ್ನು ಬಳಸಿದರೇನೂ ಪ್ರಯೋಜನವಾಗದಂತೆ! ಭಾರತೀಯ ಶುದ್ಧ ಗೋತಳಿಗಳ ಉತ್ಪನ್ನಗಳ 'ರೋಗ ಪ್ರತಿರೋಧ ಶಕ್ತಿಯು' ಶೇ. 90ರಿಂದ 98ರಷ್ಟಿದ್ದರೆ, ಮಿಶ್ರ ತಳಿಗಳ ಶಕ್ತಿಯು ಶೇ. 40ಕ್ಕೂ ಕಡಿಮೆಯಿದೆಯೆಂದು 'ಗುರುತಿಸಿದ' ಸಂಶೋಧನೆಗಳೂ ನಡೆದಿವೆ.[11]
'ಆಧಾರ'ಗಳೇನು?
ಪಂಚಗವ್ಯದ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲದಿಂದ ಆಯುರ್ವೇದದ ವೈದ್ಯರೊಬ್ಬರಲ್ಲಿ ಆ ಬಗ್ಗೆ ವಿಚಾರಿಸಿದೆ. ಗೋ ಮಯ, ಗೋ ಮೂತ್ರ ಹಾಗೂ ಪಂಚಗವ್ಯಗಳ ಸತ್ಪ್ರಯೋಜನಗಳ ಬಗ್ಗೆ ಚರಕ ಸಂಹಿತೆಯನ್ನುದ್ಧರಿಸಿ ಅವರು ನನಗೆ ವಿವರಿಸಿದರು. ಆದರೆ ಇಪ್ಪತ್ತೊಂದನೇ ಶತಮಾನದಲ್ಲಿರುವ ನಾವು ಆದಿ ಕಾಲದ ಅಂತಹಾ ಬರಹಗಳ ಆಧಾರದಲ್ಲಿ ದನದ ಮಲ-ಮೂತ್ರಗಳನ್ನು ಸೇವಿಸಬೇಕೆ ಎಂದು ಕೇಳಿದೆ. ಚರಕನ ಕಾಲದಲ್ಲೇ ಈ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ ಎಂದರವರು. ಆದರೆ ಜೈವಿಕ ಸಂಯುಕ್ತಗಳ ಬಗೆಗಾಗಲೀ (ಅವುಗಳನ್ನು ಅಳೆಯುವ ಪರೀಕ್ಷೆಗಳಾಗಲೀ), ಸೂಕ್ಷ್ಮಾಣು ಜೀವಿಗಳ ಬಗೆಗಾಗಲೀ (ಅವುಗಳನ್ನು ಬೆಳೆಸಿ ಪ್ರತ್ಯೇಕಿಸುವ ವಿಧಾನಗಳಾಗಲೀ) ಆಗ ತಿಳಿದಿರಲಿಲ್ಲವಲ್ಲ? ಆದರೇನಂತೆ, ದನದ ಮೂತ್ರವೇನೂ ಬದಲಾಗಿಲ್ಲವಲ್ಲ ಎಂದು ಥಟ್ಟನೇ ಉತ್ತರ ಬಂತು. ನಾನು ದಂಗಾದೆ!
ಗೋವುಗಳು ವಿಸರ್ಜಿಸುವ ಕಶ್ಮಲಗಳ ಸತ್ಪ್ರಯೋಜನಗಳ ಬಗ್ಗೆ ಬರೆದಿರುವ ಹೆಚ್ಚಿನ ಲೇಖನಗಳಲ್ಲಿ ಆದಿಕಾಲದ ಬರಹಗಳನ್ನೂ, ಚರಕ ಸಂಹಿತೆಯನ್ನೂ ಬಹಳಷ್ಟು ಸಲ ಉದ್ಧರಿಸಲಾಗಿದ್ದು, ಕೆಲವೊಂದು ವಾದಗಳು ಇಂತಿವೆ:
ಗೋಮೂತ್ರದ ಬಗ್ಗೆ ಪಡೆಯಲಾಗಿರುವ ಪೇಟೆಂಟ್ ಗಳು ಇತ್ತೀಚೆಗೆ ಬಹಳಷ್ಟು ಸುದ್ದಿಯಲ್ಲಿವೆ. ಜೀವನಿರೋಧಕ ಔಷಧಗಳು ಹಾಗೂ ಕ್ಯಾನ್ಸರ್ ನಿರೋಧಕ ಔಷಧಗಳ ಪರಿಣಾಮಗಳನ್ನು ಗೋ ಅರ್ಕವು ಹೆಚ್ಚಿಸುತ್ತದೆಯೆಂದು ಪ್ರಯೋಗಗಳು ತೋರಿಸಿವೆಯೆಂಬ ಆಧಾರದಲ್ಲಿ ಪೇಟೆಂಟ್ ಪಡೆದಿರುವುದು ಒಂದೆಡೆಯಾದರೆ,[14,15] ಗೋಮೂತ್ರ ಚಿಕಿತ್ಸೆಗಾಗಿಯೇ ಇನ್ನೊಂದು ಪೇಟೆಂಟ್ [16] ಪಡೆಯಲಾಗಿದೆ. ಗೋ ಮೂತ್ರ ಚಿಕಿತ್ಸೆಯ ಬಗ್ಗೆ ಮ್ಯಾನ್ಮಾರ್ ನಿಂದಲೂ,[17] ಅಪಸ್ಮಾರ ಚಿಕಿತ್ಸೆಯಲ್ಲಿ ಗೋಮೂತ್ರದ ಕಷಾಯದ ಬಳಕೆಯ ಬಗ್ಗೆ ನೈಜೀರಿಯದಿಂದಲೂ ವರದಿಗಳಿವೆ.[18] ಗೌಟ್ ಸಂಧಿವಾತ, ಬಿಳಿರಕ್ತಕಣಗಳ ಕಾರ್ಯ, ಯಕೃತ್ತಿನ ಜೀವಕೋಶಗಳ ಮೇಲೆ ಕಾರ್ಬನ್ ಟೆಟ್ರಾಕ್ಲೋರೈಡ್ ನ ಪರಿಣಾಮ ಇತ್ಯಾದಿಗಳಲ್ಲಿ ಗೋ ಅರ್ಕದ ಪ್ರಯೋಜನಗಳ ಬಗ್ಗೆ ಪ್ರಾಣಿಗಳ ಮೇಲೆ ಸಣ್ಣ ಪ್ರಮಾಣದ ಪ್ರಯೋಗಗಳು ನಡೆದಿವೆ.[19-22] ಇಂತಹಾ ವರದಿಗಳನ್ನು ಉತ್ಪ್ರೇಕ್ಷಿಸಿ, ಮನುಕುಲವನ್ನು ಕಾಡುತ್ತಿರುವ ಸುಮಾರು ಎಲ್ಲಾ ಕಾಹಿಲೆಗಳಿಗೂ ಗೋಮೂತ್ರವೇ ಅತ್ಯಂತ ಪರಿಣಾಮಕಾರಿಯಾದ, ಸುರಕ್ಷಿತವಾದ ಚಮತ್ಕಾರಿಕ ಚಿಕಿತ್ಸೆಯೆಂಬಂತೆ ಡಂಗುರ ಸಾರಲಾಗುತ್ತಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯದಡಿಯಲ್ಲಿರುವ ಹೈನುಗಾರಿಕಾ ಇಲಾಖೆಯು ಕೂಡಾ ದನದ ಮೂತ್ರವನ್ನು ಔಷಧವನ್ನಾಗಿ ಮಾರುವುದಕ್ಕೆ ಪೂರಕವಾದ ವರದಿಗಳನ್ನು ಪ್ರಕಟಿಸಿದೆ.[23]
ಸತ್ಯವೇನು?
ದನದ ಮೂತ್ರವನ್ನು ಎಲ್ಲೆಂದರಲ್ಲಿ ಮಾರಾಟ ಮಾಡುವ ಭರಾಟೆಯನ್ನೂ, ಅದಕ್ಕೆ ದೊರೆಯುತ್ತಿರುವ ಸರಕಾರದ ಸಕ್ರಿಯ ಬೆಂಬಲವನ್ನೂ ನೋಡಿದಾಗ ಅಮಾಯಕರ ಗಂಟಲೊಳಗೆ ದನದ ಕಶ್ಮಲಗಳನ್ನು ತಳ್ಳುವ ಅಪಾಯಕಾರೀ ಪ್ರವೃತ್ತಿಯು ಹೆಚ್ಚುತ್ತಿರುವುದು ದಿಟವಾಗುವುದರಿಂದ ಇದರ ಹಿಂದಿರುವ ಸತ್ಯವನ್ನು ಕೆದಕುವುದು ಅನಿವಾರ್ಯವಾಗಿದೆ.
ಗೋ ಮೂತ್ರ ವ್ಯಾಪಾರದ ಪ್ರವರ್ತಕರ ಸೋಗಲಾಡಿತನವನ್ನು ಕಾಣಬೇಕಾದರೆ, ಗೋಮೂತ್ರದ ಔಷಧೀಯ ಗುಣಗಳನ್ನು ತಿಳಿಸುವ ಮೂಲಾಧಾರಗಳೆನ್ನಲಾದ ಆಯುರ್ವೇದದ ಗ್ರಂಥಗಳನ್ನೇ ಪರಿಶೀಲಿಸಿದರೆ ಸಾಕಾಗುತ್ತದೆ. ಆಯುರ್ವೇದದ ಮೂರು ಗ್ರಂಥಗಳಾದ ಚರಕ ಸಂಹಿತೆ (1-2ನೇ ಶತಮಾನ), ಸುಶ್ರುತ ಸಂಹಿತೆ (3-4ನೇ ಶತಮಾನ) ಹಾಗೂ ವಾಗ್ಭಟನ ಬರಹಗಳಲ್ಲಿ (7ನೇ ಶತಮಾನ) ರೋಗ ಚಿಕಿತ್ಸೆಯಲ್ಲಿ ಗೋಮಾಂಸದ ಪ್ರಯೋಜನಗಳ ಬಗ್ಗೆಯೂ ಹೇಳಲಾಗಿದೆಯಾದರೂ,[24,25] ಗೋ ಮೂತ್ರ ವ್ಯಾಪಾರದ ಪ್ರವರ್ತಕರು ಆ ಬಗ್ಗೆ ಚಕಾರವನ್ನೆತ್ತುವುದಿಲ್ಲ. ಭಾರತೀಯ ಸಂಸ್ಕೃತಿಯ ಸ್ವಯ ಘೋಷಿತ ಸಂರಕ್ಷಕರ ವಾದಗಳನ್ನು ಒಪ್ಪುವುದಾದರೆ, ಗೋಮಾಂಸ ಭಕ್ಷಣೆಯು ಪಾಪವೆನಿಸುತ್ತದೆ, ಗೋಮೂತ್ರವನ್ನು ಕುಡಿಯುವುದು ಹಾಗೂ ಗೋವಿನ ಸೆಗಣಿಯನ್ನು ತಿನ್ನುವುದು ಪುಣ್ಯದ ಕೆಲಸವಾಗುತ್ತದೆ.
ಆದರೆ ಗೋಮೂತ್ರಕ್ಕೆ ಪೇಟೆಂಟ್ ಪಡೆಯಲಾಗಿಲ್ಲವೇ? ಯಾವುದೇ ಸಂಶೋಧನೆಯನ್ನು ಇತರರು ನಕಲು ಮಾಡದಂತೆ ಯಾ ಮಾರದಂತೆ ನಿರ್ಬಂಧಿಸುವ ಏಕಸ್ವಾಮ್ಯತೆಯನ್ನಷ್ಟೇ ಪೇಟೆಂಟ್ ಒದಗಿಸುತ್ತದೆಯಲ್ಲದೆ, [26] ಅದು ಆ ಸಂಶೋಧನೆಯ ಉಪಯುಕ್ತತೆಗೆ ಆಧಾರವೆನಿಸದು. ಇನ್ನೊಂದೆಡೆ, ಗೋಮೂತ್ರಕ್ಕೆ ವಿದೇಶಗಳಲ್ಲಷ್ಟೇ ಪೇಟೆಂಟ್ ಪಡೆಯಲಾಗಿದ್ದು, ಭಾರತ ಸರಕಾರದಿಂದ ಪೇಟೆಂಟ್ ಪಡೆದ ಬಗ್ಗೆ ವರದಿಗಳಿಲ್ಲ. ಅಂತರರಾಷ್ಟ್ರೀಯ ಪೇಟೆಂಟ್ ಗಿರುವ ಮಾನ್ಯತೆಯಾಗಲೀ, ಸುದ್ದಿಮೌಲ್ಯವಾಗಲೀ ಭಾರತೀಯ ಪೇಟೆಂಟಿಗೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿರಬಹುದೇನೋ? ಅಲ್ಲದೆ, ವಿದೇಶೀಯರೂ ಗೋಮೂತ್ರದ ಮಹತ್ವವನ್ನು ಗುರುತಿಸಿದ್ದಾರೆಂದು ಹೇಳಿಕೊಳ್ಳಲು ಇದಕ್ಕಿಂತ ಉತ್ತಮವಾದ ಪುರಾವೆಯೇನು ಬೇಕು?
ಗೋಮೂತ್ರದ ಪ್ರಯೋಜನಗಳ ಬಗ್ಗೆ ಪ್ರಯೋಗಾಲಯಗಳಲ್ಲಿ ಕೆಲವು ಅಧ್ಯಯನಗಳನ್ನು ನಡೆಸಲಾಗಿರುವ ಬಗ್ಗೆ ವರದಿಗಳಷ್ಟೇ ಇವೆಯಲ್ಲದೆ, ಮನುಷ್ಯರಲ್ಲಿ ಯಾವುದೇ ವೈಜ್ಞಾನಿಕವಾದ ಅಧ್ಯಯನಗಳನ್ನು ನಡೆಸಲಾದ ಬಗ್ಗೆ ವರದಿಗಳಿಲ್ಲ. ಅಲ್ಲಿಲ್ಲೊಂದು 'ಅನುಭವದ ವರದಿಗಳು' ಹಾಗೂ ಸ್ವಯಂಘೋಷಿತ 'ಗೋಮೂತ್ರ ಚಿಕಿತ್ಸಕರು' ನಡೆಸಿದ್ದಾರೆನ್ನಲಾದ ಅಧ್ಯಯನಗಳ ವರದಿಗಳು ಲಭ್ಯವಿವೆಯಾದರೂ ಇವು ಯಾವುದೇ ವೈಜ್ಞಾನಿಕ ಮಾನದಂಡಗಳಿಗೂ ನಿಲುಕುವುದಿಲ್ಲ.[27] ಒಂದಕ್ಕೊಂದು ತಾಳೆ ಹೊಂದದ ಹಲವು ವಿಚಾರಗಳು ಅಂತಹಾ ವರದಿಗಳಲ್ಲಿ ಯಥೇಷ್ಟವಾಗಿ ದೊರೆಯುತ್ತವೆ: ಉದಾಹರಣೆಗೆ, ಗೋಮೂತ್ರದಲ್ಲಿ ತಾಮ್ರ ಹಾಗೂ ಚಿನ್ನದ ಅಂಶಗಳಿವೆ ಎಂದು ಹೇಳಲಾಗಿರುವ ಲೇಖನದಲ್ಲಿಯೇ ಇದನ್ನು ನಿರಾಕರಿಸುವ ವಿವರಗಳನ್ನೂ ನೀಡಲಾಗಿದೆ![8,28]
ಮೂತ್ರ ಬರೇ ಮೂತ್ರ, ಪ್ರಾಣಿಯ ಮೂತ್ರ ಪಿಂಡಗಳು ರಕ್ತದಿಂದ ಕಶ್ಮಲಗಳನ್ನು ಬೇರ್ಪಡಿಸಿ, ಮೂತ್ರನಾಳಗಳ ಮೂಲಕ ವಿಸರ್ಜಿಸುವ ಒಂದು ದ್ರಾವಣ, ಅಷ್ಟೆ. ಪ್ರಾಣಿಯ ಶರೀರದಲ್ಲಾಗುವ ಉಪಾಪಚಯದ ಕ್ರಿಯೆಗಳಲ್ಲಿ ಹುಟ್ಟಿಕೊಳ್ಳುವ ಹಲವು ಸಂಯುಕ್ತಗಳು, ದೇಹಕ್ಕೆ ಅಗತ್ಯವಿಲ್ಲದ ಲವಣಗಳು ಹಾಗೂ ಮೂತ್ರವು ಸಲೀಸಾಗಿ ವಿಸರ್ಜನೆಗೊಳ್ಳುವುದಕ್ಕೆ ನೆರವಾಗಲು ಮೂತ್ರನಾಳಗಳು ಸ್ರವಿಸುವ ಕೆಲವೊಂದು ವಿಶೇಷವಾದ ಸಂಯುಕ್ತಗಳು ಮೂತ್ರದಲ್ಲಿರುತ್ತವೆ. ಸಹಜವಾಗಿಯೇ, ಪ್ರಾಣಿಗಳು ಹಾಗೂ ಮನುಷ್ಯರ ಮೂತ್ರಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. [28,29] ಮೂತ್ರವು ವಿಸರ್ಜನೆಗೊಳ್ಳುವಾಗ ಹೆಪ್ಪುಗಟ್ಟದಂತೆ ತಡೆಯುವ ಯೂರೋಕೈನೇಸ್ ಎಂಬ ಕಿಣ್ವವೊಂದು ಮೂತ್ರದಲ್ಲಿದೆ. ಮಾನವ ಮೂತ್ರದಿಂದ ಯೂರೋಕೈನೇಸ್ ಅನ್ನು ಪ್ರತ್ಯೇಕಿಸಿ, ರಕ್ತವು ಹೆಪ್ಪುಗಟ್ಟಿ ಮುಚ್ಚಿಹೋಗಿರುವ ಹೃದಯದ ಅಪಧಮನಿಯನ್ನು ತೆರೆಯಲು ಹೃದಯಾಘಾತದ ಸಂದರ್ಭದಲ್ಲಿ ತುರ್ತುಚಿಕಿತ್ಸೆಗಾಗಿ ಅದನ್ನಿಂದು ನಾವು ಬಳಸುತ್ತಿದ್ದೇವೆ.[30] ಹಾಗೆಂದು ಹೃದಯಾಘಾತವಾದಾಗ ರೋಗಿಗೆ ಮೂತ್ರವನ್ನು ಕುಡಿಸಿದರೆ ರೋಗಿಯನ್ನು ಉಳಿಸಲಿಕ್ಕಾಗುತ್ತದೆಯೇ ಅಥವಾ ಮನುಷ್ಯನ ಮೂತ್ರವು ಪೂಜನೀಯವಾಗಿಬಿಡುತ್ತದೆಯೇ?
ಗೋಮೂತ್ರವು ಮಾನವರಿಗೆ ಸುರಕ್ಷಿತವೇ? ಗೋಮೂತ್ರದ ಉತ್ಪನ್ನಗಳನ್ನು ಸೇವಿಸುವುದರಿಂದ ಗಂಭೀರವಾದ, ಕೆಲವೊಮ್ಮೆ ಪ್ರಾಣಾಂತಿಕವಾಗಬಹುದಾದ ದುಷ್ಪರಿಣಾಮಗಳು ಉಂಟಾಗಿರುವ ಬಗ್ಗೆ ವರದಿಗಳಿವೆ ಹಾಗೂ ಪ್ರಯೋಗಗಳಿಂದಲೂ ಇದು ಶ್ರುತಪಟ್ಟಿದೆ.[31] ಇಲಿಜ್ವರವೂ ಸೇರಿದಂತೆ ಬಾಯಿಯ ಮೂಲಕ ಹರಡುವ ಕೆಲವು ಸೋಂಕುರೋಗಗಳಿಗೂ ಗೋಮೂತ್ರವು ಕಾರಣವಾಗಬಹುದು.[32] ಗೋಮೂತ್ರ ಹಾಗೂ ಗೋಮಯ (ಸೆಗಣಿ) ಗಳಿಗೆ ಸೂಕ್ಷ್ಮಾಣುಜೀವಿನಾಶಕ ಶಕ್ತಿಯಿದೆಯೆಂಬ ಹೇಳಿಕೆಗಳು ಆಧಾರರಹಿತವಷ್ಟೇ ಅಲ್ಲ, ತೀರಾ ಅಪಾಯಕಾರಿಯೂ ಆಗಿವೆ. ಸೆಗಣಿ (ಹಾಗೂ ಎಲ್ಲಾ ಪ್ರಾಣಿಗಳ ಮಲಗಳು) ಕರುಳಿನಿಂದ ವಿಸರ್ಜಿತಗೊಂಡ ಸೂಕ್ಷ್ಮಾಣುಜೀವಿಗಳಿಂದ ತುಂಬಿ ತುಳುಕುತ್ತಿರುವುದು ಒಂದೆಡೆಯಾದರೆ, ಪಂಚಗವ್ಯದಲ್ಲಿಯೂ ಹಲವು ತರದ ಸೂಕ್ಷ್ಮಾಣುಜೀವಿಗಳಿರುವುದನ್ನು ಗುರುತಿಸಲಾಗಿದೆ.[33,34] ಸೂಕ್ಷ್ಮಾಣುಜೀವಿಗಳಿಂದ ತುಂಬಿರುವ ಈ ಮಲ-ಮೂತ್ರಗಳನ್ನು ತೆರೆದ ಗಾಯಗಳಿಗೇನಾದರೂ ಲೇಪಿಸಿದರೆ ಮಾರಣಾಂತಿಕವಾಗಬಲ್ಲ ಸೋಂಕುಂಟಾಗಬಹುದು. ಈ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಅಜ್ಞಾನಿಗಳಾದವರಷ್ಟೇ ದನದ ಮಲ-ಮೂತ್ರಗಳನ್ನು ಸೂಕ್ಷ್ಮಾಣುಜೀವಿನಾಶಕಗಳೆಂದು ಮಾರುವ ಸಾಹಸಕ್ಕೆ ಕೈಯಿಕ್ಕಬಹುದೆನ್ನುವುದು ನಿಜವಿದ್ದರೂ, ಆಧುನಿಕ ವೈದ್ಯವಿಜ್ಞಾನದಲ್ಲಿ ಪರಿಣತರಾದ ಕೆಲವು ವೈದ್ಯರುಗಳು, ತಮ್ಮ 'ಆಧ್ಯಾತ್ಮಿಕ ಗುರುಗಳ' ಅಥವಾ ಮಠಾಧಿಪತಿಗಳ ಮೇಲಿನ ಕುರುಡು ಭಕ್ತಿಯಿಂದ, ಇಂತಹುದನ್ನು ಬೆಂಬಲಿಸುತ್ತಿರುವುದು ದೊಡ್ದ ದುರಂತವೆಂದೇ ಹೇಳಬೇಕು.
ಔಷಧಗಳಲ್ಲ, ಅಪಮಾನ
ಆದ್ದರಿಂದ ಗೋಮೂತ್ರ ಹಾಗೂ ಸೆಗಣಿಗಳು, ಇತರೆಲ್ಲ ಪ್ರಾಣಿಗಳ ಮಲ-ಮೂತ್ರದಂತೆ, ದೇಹಕ್ಕೆ ಅಗತ್ಯವಿಲ್ಲದೆ ವಿಸರ್ಜಿಸಲ್ಪಟ್ಟ ಕಶ್ಮಲಗಳಷ್ಟೇ ಆಗಿವೆ ಮತ್ತು ಗೋಮೂತ್ರ ಯಾ ಸೆಗಣಿಗೆ, ಬೇರಾವುದೇ ಪ್ರಾಣಿಯ (ಮನುಷ್ಯನದೂ ಸೇರಿ) ಮಲ-ಮೂತ್ರಗಳಿಗಿಲ್ಲದ ವಿಶೇಷವಾದ, ಪೂಜನೀಯ ಸ್ಥಾನವನ್ನು ಕಲ್ಪಿಸುವುದಕ್ಕೆ ಯಾವುದೇ ಕಾರಣಗಳು ಇಲ್ಲವೇ ಇಲ್ಲ.
ದನದ ಮಲ-ಮೂತ್ರಗಳು (ಮತ್ತವುಗಳ ಉತ್ಪನ್ನಗಳು) ಎಲ್ಲಾ ರೋಗಗಳ ಚಿಕಿತ್ಸೆಯಲ್ಲಿ ಅತಿ ಪರಿಣಾಮಕಾರಿಯಾಗಿವೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ, ಮಾತ್ರವಲ್ಲ, ಮನುಷ್ಯರಲ್ಲಿ ಈ ಕುರಿತು ನೇರವಾದ ಅಧ್ಯಯನಗಳು ನಡೆದಿರುವ ಬಗ್ಗೆ ವರದಿಗಳಿಲ್ಲ. ಬದಲಾಗಿ, ಗೋಮೂತ್ರದ ಬಳಕೆಯಿಂದ ಆಗಬಹುದಾದ ಗಂಭೀರವಾದ ದುಷ್ಪರಿಣಾಮಗಳ ಬಗ್ಗೆ ವರದಿಗಳಿರುವಾಗ, ಇಂತಹಾ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೂ, ಸರ್ವ ರೋಗ ನಿವಾರಕಗಳೆಂದು ಅತಿರಂಜಿತವಾಗಿ ಪ್ರಚಾರ ಮಾಡುವುದಕ್ಕೂ ಆಸ್ಪದ ನೀಡಲಾಗಿರುವುದು ಮತ್ತು ಅದಕ್ಕೆ ಭಾರತ ಸರಕಾರದ ಇಲಾಖೆಗಳ ಸಕ್ರಿಯವಾದ ಬೆಂಬಲವೂ ಇದೆಯೆನ್ನುವುದು ಅತ್ಯಂತ ಆಘಾತಕಾರಿಯಾಗಿದೆ.
ದನದ ಮಲ-ಮೂತ್ರಗಳಿಂದ ಮನುಕುಲಕ್ಕೆ ಅತ್ಯಮೋಘವಾದ ಪ್ರಯೋಜನಗಳಿವೆಯೆಂಬ ಪ್ರಚಾರದ ಹಿಂದೆ ಧಾರ್ಮಿಕ ಅಂಧಶ್ರದ್ಧೆಯನ್ನು ಬಲಪಡಿಸಬಯಸುವ ಪ್ರತಿಗಾಮಿ ಶಕ್ತಿಗಳಿರುವುದು ಸರ್ವವಿದಿತವಾಗಿದೆ ಮಾತ್ರವಲ್ಲ, 'ಚಿಕಿತ್ಸೆ' ಹಾಗೂ 'ದೀರ್ಘಾಯುಷ್ಯ'ದ ಹೆಸರಲ್ಲಿ ಜನಸಾಮಾನ್ಯರನ್ನು ದನದ ಮಲ-ಮೂತ್ರ ಸೇವನೆಗೆ ತಳ್ಳುವ ದುರುದ್ದೇಶವೂ ಇರುವಂತಿದೆ. ಇದೇ ಮೂಲಭೂತವಾದಿ ಶಕ್ತಿಗಳು ದಲಿತರಿಗೆ ಮನುಷ್ಯನ ಮಲ-ಮೂತ್ರಗಳನ್ನು ತಿನ್ನಿಸಿದ ಹಲವಾರು ಪ್ರಕರಣಗಳು ವರದಿಯಾಗಿರುವಾಗ ಇದರಲ್ಲಿ ಅಚ್ಚರಿಯೇನೂ ಇಲ್ಲ.[35]
ಹಾಲನ್ನು ನೀಡುತ್ತದೆ ಎನ್ನುವ ಕಾರಣಕ್ಕಾಗಿ (ಮಲ-ಮೂತ್ರಗಳಿಗಾಗಿ ಅಲ್ಲವೆಂದು ನಂಬೋಣ) ದನವನ್ನು (ಅಷ್ಟೇ 'ಉಪಯುಕ್ತವೆನಿಸುವ' ಎಮ್ಮೆಯನ್ನಲ್ಲ) 'ಎರಡನೇ ತಾಯಿ', 'ವಿಶ್ವಮಾತೆ' [11] ಇತ್ಯಾದಿಯಾಗಿ ವೈಭವೀಕರಿಸುವುದನ್ನು ನೋಡುವಾಗ, ಕೇವಲ ಹಾಲೂಡಿಸುವುದಷ್ಟೇ ತಾಯ್ತನವೇ ಹಾಗೂ ಕೇವಲ ಅಷ್ಟಕ್ಕಾಗಿಯೇ ನಾವು ತಾಯಂದಿರನ್ನು ಗೌರವಿಸುತ್ತೇವೆಯೇ ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.
ವಯಸ್ಸಾದ ದನಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡದಂತೆ ತಡೆಯುವ ಮತ್ತು ಆ ಮೂಲಕ ಬಡವರಿಗೂ, ದಲಿತರಿಗೂ ಅಗ್ಗದ ಮಾಂಸವು ದೊರೆಯದಂತೆ ಮಾಡುವ ಹಾಗೂ ಮಾಂಸ ವ್ಯಾಪಾರಿಗಳ ವಹಿವಾಟಿಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದಲೇ ಹಾಲು ಕೊಡಲಾಗದ ದನಗಳನ್ನು ಮಲ-ಮೂತ್ರಗಳಿಗಾಗಿ ಸಾಕುವುದು ಆರ್ಥಿಕವಾಗಿ ಬಹಳ ಲಾಭದಾಯಕವೆಂದು (ಇದಕ್ಕೆ ಯಾವುದೇ ಆಧಾರಗಳು ಇದ್ದಂತಿಲ್ಲ) ಪ್ರಚಾರ ಮಾಡಲಾಗುತ್ತಿದೆ. ಆದರೆ ಪ್ರಾಣಿಗಳ ಸಾಕಣೆಯಿಂದಾಗಿ ಪರಿಸರದ ಮೇಲೆ ಅಗಾಧವಾದ ಹೊರೆಯಾಗುವುದೆಂದೂ, ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.[36,37] ಆದ್ದರಿಂದ ಪ್ರಜ್ಞಾವಂತರೆಲ್ಲರೂ ಈ ಎಲ್ಲಾ ವಿಚಾರಗಳ ಬಗ್ಗೆ ವಸ್ತುನಿಷ್ಠವಾದ, ವೈಜ್ಞಾನಿಕವಾದ ಅಭಿಪ್ರಾಯವನ್ನು ತಳೆಯುವುದು ಅತ್ಯಗತ್ಯವಾಗಿದೆ.
ಆಕರಗಳು:
ಜ್ಞಾನೋಚಿತ ಲೇಖನ
By ಮೊದ್ಮಣಿ (not verified)ಆತ್ಮೀಯ ಶಕಿಲಾಯ ರವರೇ.
ನಿಮ್ಮ ಲೇಖನದ ಎಲ್ಲಾ ಅಂಶಗಳೂ ಸರಿಯಿದೆ ಎಂದು ನನ್ನ ಭಾವನೆ. ಸರಿಯಾದ ಸಂಶೋಧನೆಗಳ ಆಧಾರವಿಲ್ಲದೆ ಸೂಚಿಸಲ್ಪಡುವ ಇಂತಹ ಚಿಕಿತ್ಸೆಗಳಿಂದ ಹಲವಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನನ್ನ ಪರಿಚಯದ ಮಹಿಳೆಯೊಬ್ಬರ ಕ್ಯಾನ್ಸರ್ ರೋಗಕ್ಕೆ ಮದ್ದಾಗಿ ಗೋ-ಮೂತ್ರವನ್ನು ಸೇವಿಸಿ, ಅದರಿಂದ ಕಾಯಿಲೆ ಉಲ್ಬಣಗೊಂಡು ಪ್ರಾಣ ಕಳೆದುಕೊಂಡಿದ್ದಕ್ಕೆ ನಾನೇ ಸಾಕ್ಷಿ.
ಮೊದಲಿಗೆ ಇಂತಹ ಚಿಕಿತ್ಸೆಗಳಿಗೆ ಆಧಾರವೇನೆಂಬುದನ್ನೂ ಸಾಕ್ಷೀಕರಿಸಿ ಹೇಳುವುದರಲ್ಲಿ ಇದರ ಪ್ರಚಾರಕರು ಸೋಲುತ್ತಾರೆ. ಪ್ರಶ್ನಿಸಿದರೆ ಮೇಲೆ ಕೆಲವರ ಅಭಿಪ್ರಾಯದಂತೆಯೇ ಮೂದಲಿಸಿ ಮಾತು ಮರೆಸುತ್ತಾರೆ.
ಇಂಡಸ್ ಕಣಿವೆಯ ನಾಗರೀಕತೆಯಲ್ಲಿ ಗೋವು ಪವಿತ್ರ ಸ್ಥಾನ ಪಡೆದಿದ್ದದ್ದು, ಅದರ ಬಹೂಪಯುಕ್ತತೆಯಿಂದ. ಅದು ಹೊಲ ಉಳುವ ಯಂತ್ರದ ಶಕ್ತಿಮೂಲವಾಗಿ, ಗೊಬ್ಬರದ ಗಣಿಯಾಗಿ, ಸಾರಿಗೆಯ ಸರದಾರನಾಗಿ, ಆಹಾರದ ಆಕರವೂ ಆಗಿತ್ತೆಂದೇ ಅದಕ್ಕೆ ಪೂಜ್ಯ ಸ್ಥಾನ ದೊರಕಿತ್ತೆಂದು ನನ್ನ ಭಾವನೆ.
ಹೀಗೆಯೇ ನಿಮ್ಮಿಂದ ಇನ್ನಷ್ಟು ಉಪಯುಕ್ತ ಮಾಹಿತಿಗಳಿರುವ ಲೇಖನಗಳು ಬರುತ್ತಿರಲಿ. ಹಾಗೂ ಅವನ್ನು ಸಂಪದದಲ್ಲೂ ಪ್ರಕಟಿಸುತ್ತಿರಿ.
ಮತ್ತೊಂದು ಸಣ್ಣ ಪ್ರಶ್ನೆ. ಇವತ್ತಿನ BP Level, Sugar Level ಇತ್ಯಾದಿಗಳನ್ನು ನಿರ್ಧರಿಸುವಲ್ಲಿ ಭಾರತೀಯ ಜನಾಂಗಗಳ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ?
ಮಂಜುನಾಥ್
ಧನ್ಯವಾದಗಳು
By skakkilayaನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ರಕ್ತದೊತ್ತಡ ಹಾಗೂ ರಕ್ತದ ಗ್ಲುಕೋಸ್ ಪ್ರಮಾಣಗಳ ಆರೋಗ್ಯಕರ ಮಟ್ಟಗಳ ಬಗ್ಗೆ ಅಂತರರಾಷ್ಟ್ರೀಯ ತಜ್ಞರನ್ನೊಳಗೊಂಡ ಸಮಿತಿಗಳು ನಿರ್ಧರಿಸುತ್ತವೆ. ಅಮೆರಿಕಾದ ಜಂಟಿ ರಾಷ್ಟ್ರೀಯ ಸಮಿತಿ, ಯೂರೋಪಿನ ರಕ್ತದೊತ್ತಡ ಸಂಘ, ವಿಶ್ವ ಆರೋಗ್ಯ ಸಂಸ್ಥೆ ಇವಕ್ಕೆ ಉದಾಹರಣೆಗಳು. ಇವುಗಳಲ್ಲಿ ಭಾರತೀಯರೂ ಇರುತ್ತಾರೆ.
Re: ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?
By ಕೃಷ್ಣಪ್ರಕಾಶ ಬೊಳುಂಬು (not verified)೧೯೯೫ನೇ ಇಸವಿಯ ’ಮಾತೃಭೂಮಿ’ [ಮಲೆಯಾಳ] ಪತ್ರಿಕೆಯ ಸಂಚಿಕೆಯೊನ್ದರಲ್ಲಿ ಪಂಚಗವ್ಯವ ಬೞಸಿಕೊಣ್ಡು ನಡೆಸಿರುವ ಪ್ರಯೋಗಗಳ ಕುರಿತು ಮಾಹಿತಿಯಿದೆ. ಬಾೞೆಗೆ ಬರುವ ’ಸುರುಳಿ ರೋಗ’ವನ್ನು ಸುಧಾರಿತ ಪಂಚಗವ್ಯದಿನ್ದ ಗುಣಪಡಿಸಿರುವ ಕುಱಿತು. ಪ್ರಮಾಣ ಮತ್ತು ದಾಮಾಶಯಗಳ ಬಗೆಗೂ ಬರೆಹದಲ್ಲಿ ಮಾಹಿತಿ ನೀಡಲಾಗಿದೆ. ಮಲೆಯಾಳ ನಿಮಗೆ ಬರದಿದ್ದರೆ ಕೇರಳದ ನಿಮ್ಮ ಕಮ್ಮಿ ಸ್ನೇಹಿತರನ್ನು ಕೇಳಿರಿ.
ಕೃಷ್ಣಪ್ರಕಾಶ ಬೊಳುಂಬು.
Re: ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?
By skakkilayaಗೋಮಯ, ಗೋಮೂತ್ರಗಳ 'ಮಹಿಮೆಯ' ಬಗ್ಗೆ 1995ರ ಮಲಯಾಳಿ ಪತ್ರಿಕೆಯಾದ ಮಾತೃಭೂಮಿಯನ್ನು ಓದಬೇಕಾಗಿಲ್ಲ, ಕಮ್ಮಿ - ಹೆಚ್ಚಿನವರಾರನ್ನೂ ಕೇಳಬೇಕಿಲ್ಲ. ಅಂತಹಾ 'ಅಧ್ಯಯನಗಳ' ನೂರಾರು ಉಲ್ಲೇಖಗಳು ಅಂತರಜಾಲದಲ್ಲೇ ಸಿಗುತ್ತವೆ, ಅವುಗಳಲ್ಲಿ ಹಲವನ್ನು ಓದಿದ್ದೇನೆ, ಮನುಷ್ಯರಿಗೆ ಸಂಬಂಧಿಸಿದ ಕೆಲವಕ್ಕೆ ನನ್ನ ಲೇಖನದಲ್ಲೇ ಕೊಂಡಿಗಳನ್ನು ಕೊಟ್ಟಿದ್ದೇನೆ. ಸಸ್ಯಗಳ ಪಾಲಿಗೆ ಕೀಟನಾಶಕವಾಗಿ ಉಪಯುಕ್ತವೆಂದು 'ಕಂಡುಬಂದಿರುವ' ಗೋಮೂತ್ರವು ಮನುಷ್ಯರ ಪಾಲಿಗೆ ರೋಗನಾಶಕವೇ? ಹಾಗಾದರೆ, ಹಲವರ ಸಾವಿಗೆ ಕಾರಣವಾಗುತ್ತಿರುವ ಕೀಟನಾಶಕಗಳು ಮನುಷ್ಯರ ರೋಗಗಳನ್ನು ಶಮನಮಾಡಬಲ್ಲವೇ ಎಂದು ಹೊಸದಾಗಿ ಅಧ್ಯಯನ ಮಾಡಿದರೆ ಹೇಗೆ? ಮನುಷ್ಯನೇ ಕೃತಕವಾಗಿ ತಯಾರಿಸುತ್ತಿರುವ ಕೀಟನಾಶಕಗಳನ್ನು 'ಗೋಮಾತೆಯ' ಮೂತ್ರದಿಂದ ತಯಾರಿಸಿದ 'ಕೀಟನಾಶಕಗಳ' ಜೊತೆ ತುಲನೆ ಮಾಡಬಾರದು ಎನ್ನುವಿರೋ?
ಗೋ ಉತ್ಪನ್ನಗಳು
By shvaram_shastriಡಾ. ಕಕ್ಕಿಲ್ಲಾಯ ಅವರೇ, ಗೋವಿನ ಕುರಿತು ತುಂಬಾ ಮಾಹಿತಿ ಸಂಗ್ರಹಿಸಿದ್ದೀರಿ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಗೋ ಉತ್ಪನ್ನಗಳ ಕುರಿತು ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂಬುದು ಒಪ್ಪತಕ್ಕದ್ದೇ. peer reviewed journal ಗಳಲ್ಲಿ ಪ್ರಕಟವಾದ ವಿಷಯಗಳು ಒಂಥರ ಸಾಣೆ ಹಚ್ಚಿದ ಚಿನ್ನ ಎಂಬುದೂ ನಿಜ. ಆದರೆ, ಅಲ್ಲೂ ಆಗಾಗ ಕಪಟಗಳು ನಡೆಯುವುದುಂಟು ಎಂಬುದು ನಿಮಗೆ ತಿಳಿದ ವಿಷಯವೇ ಇದ್ದೀತು. ಗೋ ಉತ್ಪನ್ನಗಳ ಕುರಿತು ಇನ್ನಷ್ಟು ಓದಿದ ಮೇಲೆ ಇನ್ನೊಮ್ಮೆ ಬರೆಯುತ್ತೇನೆ.
ಕಪಟವಿಲ್ಲದೆ ವ್ಯಾಪಾರವಿಲ್ಲ
By skakkilayaಧನ್ಯವಾದಗಳು; ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ! ನೀವಂದಂತೆ peer reviewed ಲೇಖನಗಳಲ್ಲೂ ಕಾಪಟ್ಯವಿರಬಹುದು. ಅದಕ್ಕಾಗಿ 'ಗೆರೆಗಳ ನಡುವೆ ಓದುವುದನ್ನು' ಅಭ್ಯಾಸ ಮಾಡಿಕೊಳ್ಳುವುದೇ ಒಳ್ಳೆಯದು. ಅಧ್ಯಯನದ ಪ್ರಾಯೋಜಕರ ಬಗ್ಗೆ, ಲೇಖಕರ ಹಿತಾಸಕ್ತಿಗಳ ತಾಕಲಾಟಗಳ ಬಗ್ಗೆ ಪ್ರಕಟಿತ ಲೇಖನಗಳ ಕೊನೆಯಲ್ಲಿ ಒದಗಿಸಲಾಗುವ ಮಾಹಿತಿಯನ್ನು ಮೊದಲಲ್ಲೇ ಓದಿಕೊಳ್ಳುವುದು ಒಳ್ಳೆಯದು.
Gomoothra
By Anonymous (not verified)Ee baravanige Hindu gala nambikege avamanapadisidanthe ide. Neevu nambalilla andare beda bidi. aadare innobbara nambikeyanna avhelana maduvudu nimma hakkalla. Nanagannisutthade neevu hasuvina bagge sariyagi thilidu kondilla. Swalpa purana kathegalanna odidare nimage thiliyutthade govu yaake shreshta embudu. Heege sikka sikka haage bareyuvudu uchithavalla. Idara samshodhane madidavaru buddivanthare, hagagi idara upayogagalannu allagaleyalu nimage yava hakku illa. Gomoothrada product galige patent sikkirodu Hindugalu hemme padontha vishayave yakandare govu hindugala daiva. matthobbara nambikege kheda tharuvantha intha baravanigegallanna prakatisadiddare uchitha endu kanutthade. Bareyuva munche swalpa vichara maadi munduvareyiri dayavittu.
ನಂಬಿಕೆಗಿಂತ ಅರಿವು ಮುಖ್ಯ
By skakkilayaನಿಮ್ಮ ಪ್ರತಿಕ್ರಿಯೆಯು ಸ್ವಲ್ಪ ಬೆದರಿಸುವ ಧಾಟಿಯಲ್ಲಿದೆ. ಹಿಂದೂ ಧರ್ಮದ ಹೆಸರನ್ನು ಬಳಸಿ ವೈಯಕ್ತಿಕ ಅಭಿಪ್ರಾಯಗಳನ್ನು ಇತರರ ಮೇಲೆ ಹೇರಬಹುದೆಂದುಕೊಳ್ಳುವವರ ಪಟ್ಟಿಯಲ್ಲಿ ನಿಮ್ಮ ಹೆಸರನ್ನೂ ಸೇರಿಸಬಹುದು. ಇರಲಿ, ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮನ್ನಿಸಿ, ಎಲ್ಲರಿಗೂ ಅದು ತಿಳಿಯಲೆಂಬ ಉದ್ದೇಶದಿಂದ ಅದನ್ನಿಲ್ಲಿ ಪ್ರಕಟಿಸಿದ್ದೇವೆ. ಆದರೆ ನಿಮ್ಮ ಪ್ರತಿಕ್ರಿಯೆಯು ತೀರಾ ಭಾವನಾತ್ಮಕವಾಗಿದ್ದು, ಅದರಲ್ಲಿ ವಸ್ತುನಿಷ್ಠತೆಯ ಕೊರತೆಯಿದೆ ಎನ್ನುವುದನ್ನು ಹೇಳಲೇಬೇಕಾಗಿದೆ; ಅದನ್ನು ನೀವು ಒಪ್ಪಬೇಕಾಗಿಲ್ಲ. ಆದರೆ ಕನಿಷ್ಠ ಪಕ್ಷ ನಿಮ್ಮ ಹೇಳಿಕೆಗಳಿಗೆ ವಸ್ತುನಿಷ್ಠವಾದ ಆಧಾರಗಳನ್ನು ನಿಮ್ಮಿಂದ ನಾವು ಅಪೇಕ್ಷಿಸಬಹುದೇ?
ನಾನು ಬರೆದಿರುವ ಲೇಖನವು ಗೋಮೂತ್ರದ ಬಗ್ಗೆ ಈಗಾಗಲೇ ಆಗಿರುವ ಅಧ್ಯಯನಗಳನ್ನು ಆಧರಿಸಿದ್ದಾಗಿದ್ದು, ಅದರಲ್ಲಿ ಬರೆದಿರುವ ಎಲ್ಲಾ ವಿಚಾರಗಳಿಗೆ ಸಂಬಂಧಪಟ್ಟ ಆಕರಗಳ ವಿವರಗಳನ್ನು, ಅವಕ್ಕೆ ಅಂತರ್ಜಾಲದ ಕೊಂಡಿಗಳನ್ನೂ ಒದಗಿಸಿದ್ದೇನೆ; ಸಿಕ್ಕ ಸಿಕ್ಕ ಹಾಗೆ ಬರೆದಿರುವುದು ಅದರಲ್ಲಿ ಯಾವುದಿದೆ? ಗೋಮೂತ್ರದ ಬಗ್ಗೆ ಅಧ್ಯಯನ ಮಾಡಿದವರು ಬುದ್ಧಿವಂತರಲ್ಲವೆಂದಾಗಲೀ, ಅವರ ಅಧ್ಯಯನವು ಸುಳ್ಳೆಂದಾಗಲೀ, ಇತರರ ನಂಬಿಕೆಗಳನ್ನು ಅವಹೇಳನ ಮಾಡುವಂತಹ ಏನನ್ನೇ ಆಗಲೀ ನಾನು ಎಲ್ಲೂ ಬರೆದಿಲ್ಲ, ಬರೆದಿದ್ದರೆ ದಯವಿಟ್ಟು ತೋರಿಸಿ.
ಇದೇ ಲೇಖನದ ಇಂಗ್ಲಿಷ್ ಆವೃತ್ತಿಯು ಇಲ್ಲಿ ಲಭ್ಯವಿದ್ದು, ಗೋಮೂತ್ರದ ಬಗ್ಗೆ ಸಂಶೋಧನೆಗಳನ್ನು ನಡೆಸಿದವರೊಬ್ಬರು ಅದರ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಾ, ಲೇಖನವು ಆಸಕ್ತಿದಾಯಕವಾಗಿದೆಯೆಂದೂ, ಲೇಖಕನ ಚಿಂತನಾಲಹರಿಯು ಪ್ರಶಂಸನೀಯವೆಂದೂ, ಒಬ್ಬರ ವಿಚಾರಗಳನ್ನು ಇನ್ನೊಬ್ಬರು ಪ್ರಶ್ನಿಸುವುದರಿಂದ ಕೊನೆಗೆ ಒಳ್ಳೆಯ ಅಭಿಪ್ರಾಯಗಳೇ ಹೊರಹೊಮ್ಮಲು ಸಾಧ್ಯವಾಗುತ್ತದೆಯೆಂದೂ ಬರೆದಿದ್ದಾರೆ. ಗೋಮೂತ್ರದ ಸಂಶೋಧಕರೇ ನನ್ನ ಲೇಖನವನ್ನು ಮೆಚ್ಚಿ ಆ ಲೇಖನದ ಬಗ್ಗೆ ಯಾವುದೇ ಅಭ್ಯಂತರವನ್ನೂ ಸೂಚಿಸದೇ ಇರುವಾಗ, ತಮ್ಮ ಈ ರೀತಿಯ ಆಕ್ಷೇಪಣೆಯ ಹಿಂದಿರುವ ಉದ್ದೇಶವಾದರೂ ಏನು?
ವೈಜ್ಞಾನಿಕ ಚಿಂತನೆಯು ಯಾವತ್ತೂ ಸೂಕ್ತವಾದ ಆಧಾರಗಳನ್ನು ಅಪೇಕ್ಷಿಸುತ್ತದೆ. ಅತಿಸೂಕ್ಷ್ಮ ವಿಚಾರಗಳನ್ನೆಲ್ಲ ಪರಿಗಣಿಸಿರುವ ಪ್ರಯೋಗ ಕ್ರಮಗಳಿಂದ ನಡೆಸುವ ಅಧ್ಯಯನಗಳ ಫಲಿತಾಂಶಗಳು ಮತ್ತು ಸಹಚಿಂತಕರಿಂದ ಅವುಗಳ ವಿಮರ್ಶೆಯು ಅಂತಹಾ ಆಧಾರಗಳನ್ನು ರೂಪಿಸಿದರೆ, ಅವೇ ಪ್ರಯೋಗ ಕ್ರಮಗಳನ್ನು ಬಳಸಿ ಇನ್ನೊಬ್ಬರು ಅದೇ ಅಧ್ಯಯನವನ್ನು ನಡೆಸಿ ಅಂತಹದೇ ಫಲಿತಾಂಶಗಳು ದೊರೆತಾಗ ಆ ಆಧಾರಗಳು ಇನ್ನಷ್ಟು ಗಟ್ಟಿಗೊಳ್ಳುತ್ತವೆ. ವೈಜ್ಞಾನಿಕ ಚಿಂತನೆಯು ಬೆಳೆಯುವುದು ಹೀಗೆ, ತಂತ್ರಜ್ಞಾನವು ವಿಕಾಸಗೊಳ್ಳುವುದು ಹೀಗೆ. ಆಧುನಿಕ ವೈದ್ಯವಿಜ್ಞಾನವು ಇಂತಹಾ ಅಧ್ಯಯನಗಳ ತಳಹದಿಯ ಮೇಲೆ ನಿಂತಿರುವುದರಿಂದಲೂ, ಸದಾ ಪರಿಷ್ಕಾರಗೊಳ್ಳುತ್ತಿರುವುದರಿಂದಲೂ ಇಂದು ಜಗತ್ತಿನಾದ್ಯಂತ ಅತಿ ಹೆಚ್ಚು ಪರಿಣಾಮಕಾರಿಯಾದ ಹಾಗೂ ಸುರಕ್ಷಿತವಾದ ಆರೋಗ್ಯಸೇವೆಯನ್ನು ಒದಗಿಸಲು ಸಾಧ್ಯವಾಗಿದೆ. ಆಯುರ್ವೇದ, ಯೋಗ, ಹೋಮಿಯೋಪತಿ ಇತ್ಯಾದಿಗಳನ್ನೂ ಮೇಲೆ ಹೇಳಿದ ಸರಳವಾದ ವೈಜ್ಞಾನಿಕ ವಿಧಾನಗಳ ಒರೆಗಲ್ಲಿಗೆ ಹಚ್ಚುವುದರಿಂದ ಅವುಗಳ ಬಳಕೆಯು ಇನ್ನಷ್ಟು ಫಲಪ್ರದವೂ, ಸುರಕ್ಷಿತವೂ ಆಗಲು ಸಾಧ್ಯವಿಲ್ಲವೆ? ಇದೇ ಪ್ರಶ್ನೆಯನ್ನು ಮೇಲೆ ಪ್ರಸ್ತಾಪಿಸಿದ ಸಂಶೋಧಕರಲ್ಲೂ ನಾನು ಕೇಳಿದ್ದು, ಮೂರು ತಿಂಗಳ ಬಳಿಕವೂ ಅವರಿಂದ ಉತ್ತರವು ದೊರೆತಿಲ್ಲ.
ನಿಮ್ಮಲ್ಲೂ ಅದೇ ಪ್ರಶ್ನೆಯನ್ನಿಲ್ಲಿ ಕೇಳುತ್ತಿದ್ದೇನೆ: ಗೋಮೂತ್ರದ ಹತ್ತು ಹಲವು ಪ್ರಯೋಜನಗಳ ಬಗ್ಗೆ ಪ್ರಸ್ತಾಪಗಳಿದ್ದರೂ, ಅದರ ಯಾವುದೇ ಒಂದು ಪ್ರಯೋಜನದ ಬಗ್ಗೆ ಮನುಷ್ಯರಲ್ಲಿ ನಡೆಸಲಾದ ದೊಡ್ಡ ಮಟ್ಟಿನ, ದೀರ್ಘ ಕಾಲೀನ, ಬಹು ಕೇಂದ್ರಿತವಾದ, ಇಕ್ಕಡೆಗೂ ಅರಿವಿಲ್ಲದ, ಯಾದೃಚ್ಛಿಕವಾದ, ನಿಯಂತ್ರಿತವಾದ ಕನಿಷ್ಠ ಒಂದಾದರೂ ಅಧ್ಯಯನದ ಪ್ರಕಟಿತ ಆಕರಗಳು ಯಾವುದಾದರೂ ನಿಮ್ಮ ಅರಿವಿನಲ್ಲಿದ್ದರೆ ಅದರ ವಿವರಗಳನ್ನು ಅಂಗೀಕೃತ ಶೈಲಿಯಲ್ಲಿ [ಲೇಖಕರು, ಶೀರ್ಷಿಕೆ, ಪತ್ರಿಕೆ/ಗ್ರಂಥ, ವರ್ಷ;ಸಂಪುಟ(ಸಂಚಿಕೆ):ಪುಟ ಸಂಖ್ಯೆ ಹಾಗೂ ಲಭ್ಯವಿದ್ದರೆ ಅದರ ಅಂತರ್ಜಾಲ ಕೊಂಡಿ] ದಯವಿಟ್ಟು ಒದಗಿಸಿದರೆ ಎಲ್ಲರಿಗೂ ಮಹದುಪಕಾರವಾದೀತು. ಅಥವಾ, ಗೋಮೂತ್ರದ ಬಗ್ಗೆ ಅಂತಹಾ ಅಧ್ಯಯನಗಳ ಅಗತ್ಯವೇ ಇಲ್ಲ, ಅದನ್ನು ನಂಬಿಕೆಯ ಮೇಲೆಯೇ ಅತಿ ಸುರಕ್ಷಿತವಾಗಿಯೂ, ಪರಿಣಾಮಕಾರಿಯಾಗಿಯೂ ಬಳಸಬಹುದು ಹಾಗೂ ಅಂತಹಾ ಉತ್ಪನ್ನಗಳ ಮಾರಾಟಕ್ಕೆ ಸರಕಾರವು ತೆರಿಗೆದಾರರ ಹಣದಿಂದ ಎಲ್ಲಾ ನೆರವನ್ನೂ ಒದಗಿಸಬೇಕೆನ್ನುವುದು ನಿಮ್ಮ ನಿಲುವಾಗಿದ್ದರೆ, ಅದೇ ಮಾನದಂಡಗಳನ್ನು ಆಧುನಿಕ ವೈದ್ಯವಿಜ್ಞಾನದ ಔಷಧಗಳಿಗೂ, ಹೊಸದಾಗಿ ಅಭಿವೃದ್ಧಿ ಪಡಿಸಲಾಗುತ್ತಿರುವ ನೂರಾರು ತಂತ್ರಜ್ಞಾನಗಳಿಗೂ ಅನ್ವಯಿಸಿ, ಅವೆಲ್ಲವನ್ನೂ ಅದೇ ರೀತಿ ಸಾಕಷ್ಟು ಅಧ್ಯಯನಗಳು ಹಾಗೂ ಪರೀಕ್ಷೆಗಳಿಲ್ಲದೆಯೇ ನಮ್ಮ ಜನರ ಮೇಲೆ ಬಳಸುವುದಕ್ಕೆ ಸರಕಾರವು ಸಮ್ಮತಿಸುವುದೇ ಮತ್ತು ಅದಕ್ಕೆ ನಿಮ್ಮ ಒಪ್ಪಿಗೆಯಿದೆಯೇ ಹಾಗೂ ಅಂತಹವುಗಳನ್ನು ನಿಮ್ಮ ಸ್ವಂತಕ್ಕೆ ನೀವು ಬಳಸುವಿರೇ?
ಇದೇ ರೀತಿ ನನ್ನನ್ನು ಕಾಡುತ್ತಿರುವ ಇನ್ನೂ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ನಾನು ಕೇಳಿದ್ದು ಅವುಗಳಿಗೆ ವಸ್ತುನಿಷ್ಠವಾದ, ಆಕರಸಹಿತವಾದ ಉತ್ತರಗಳಿದ್ದಲ್ಲಿ ದಯವಿಟ್ಟು ಅವನ್ನೂ ಒದಗಿಸಿ.
ಕೊನೆಗೊಂದು ಮಾತು: ನಿಮ್ಮ ವೈಯಕ್ತಿಕವಾದ, ಸೀಮಿತ ನೆಲೆಯ ಅಭಿಪ್ರಾಯಗಳನ್ನು ಹಿಂದೂಗಳೆಲ್ಲರಿಗೆ ಅಂಟಿಸಿರುವುದಕ್ಕೆ ನಿಮ್ಮಲ್ಲೇನಾದರೂ ಆಧಾರಗಳಿದ್ದರೆ ಅವನ್ನೂ ತಿಳಿಸಿದರೆ ಒಳ್ಳೆಯದು. ಹಿಂದೂ ಧರ್ಮ ಹಾಗೂ ದನಗಳ ಬಗ್ಗೆ ಸಾಕಷ್ಟು ಕಾಳಜಿಯಿದ್ದು, ಆ ಬಗ್ಗೆ ಸಾಕಷ್ಟು ಪುರಾಣ ಕಥೆಗಳನ್ನು ಓದಿರುವ ತಾವು ಭಾರತೀಯ ಪರಂಪರೆಯ ಬಗೆಗೆ ಎಲ್ಲವನ್ನೂ ತಿಳಿದಿದ್ದೀರಿ ಅಂದುಕೊಳ್ಳುತ್ತೇನೆ. ಹೀಗೆ ಅಪ್ರತಿಮ ಜ್ಞಾನಿಗಳಾಗಿರುವ ತಾವು ಭಾರತೀಯ ತತ್ವ ಶಾಸ್ತ್ರದ ಮೇರು ವ್ಯಕ್ತಿಗಳಾದ ಗೋತಮ-ವಾತ್ಸ್ಯಾಯನರ ಬಗ್ಗೆಯೂ ಎಲ್ಲವನ್ನೂ ತಿಳಿದಿರುತ್ತೀರಿ. ಗೋತಮನ ನ್ಯಾಯ ಸೂತ್ರಗಳಲ್ಲಿ [ಇದನ್ನು ತಾವು ಓದಿರಬಹುದಾದರೂ, ಅದರ ಬಗ್ಗೆ ವಿಕಿಪಿಡಿಯಾ ಕೊಂಡಿ ಇಲ್ಲಿದೆ] ಯಾವುದೇ ವಿಚಾರದ ಬಗ್ಗೆ ಸಂಶಯವನ್ನು ತಳೆದು ಅದನ್ನು ಪರೀಕ್ಷಿಸಿ, ನಿರ್ಣಯವನ್ನು ಕೈಗೊಳ್ಳಬೇಕೆಂದು ಹೇಳಿರುವುದು ಅಲ್ಪ ಜ್ಞಾನಿಯಾಗಿರುವ ನನ್ನ ತಿಳುವಳಿಕೆಯಲ್ಲಿದ್ದು, ಅದರಂತೆಯೇ ಗೋಮೂತ್ರದ ಗುಣಾವಗುಣಗಳ ಬಗ್ಗೆ ನನಗಿದ್ದ ಸಂಶಯಗಳನ್ನು ಪರೀಕ್ಷಿಸಿಕೊಂಡಿದ್ದೇನೆ, ಅದನ್ನೇ ಇಲ್ಲಿ ಬರೆದಿದ್ದೇನೆ. ಇದು ಭಾರತೀಯ ಪರಂಪರೆಯ ಅಥವಾ ಹಿಂದೂ ಧರ್ಮದ ಆಶೋತ್ತರಗಳಿಗೆ ಅದೆಂತು ವಿರೋಧವಾಗಿದೆಯೆನ್ನುವುದನ್ನು ಜ್ಞಾನಿಗಳಾದ ತಾವು ತಿಳಿಸಬೇಕು. ಅದೇ ರೀತಿ, ಯಾವುದೇ ವಿಚಾರದ ಬಗ್ಗೆ ಏನನ್ನೂ ಪ್ರಶ್ನಿಸದೆಯೇ ಹಾಗೆಯೇ ಒಪ್ಪಿಕೊಳ್ಳಬೇಕೆಂದು ಭಾರತೀಯ ಮೂಲದ ಯಾವ ಗ್ರಂಥದಲ್ಲಿ ಹೇಳಲ್ಪಟ್ಟಿದೆಯೆನ್ನುವುದಕ್ಕೂ ಸೂಕ್ತವಾದ ಆಕರಗಳನ್ನು ಜ್ಞಾನಿಗಳಾದ ತಾವು ಒದಗಿಸಿದರೆ ನಾನು ಧನ್ಯ.
ಗೋ ಮೂತ್ರ ಮತ್ತು ಬ್ರುಸೆಲ್ಲೊಸಿಸ್
By ಶ್ರೀಕಾಂತ ಹೆಗಡೆ (not verified)ಗೋ ಮೂತ್ರ ಚಿಕಿತ್ಸೆ ಎಂಬುದು ಬಹಳ ಕೇಳಿಬರುತ್ತಿರುವ ಮಾತು. ಕೆಲವು ದಿನಗಳ ಹಿಂದೆ ನನ್ನಲ್ಲಿಗೆ ಸಂದರ್ಶನಕ್ಕೆ ಒಬ್ಬ ಮಹನೀಯರು ಬಂದಿದ್ದರು, ಅವರಿಗೆ ಥೈರಾಯಿಡ್ ನ ಕಾಯಿಲೆ- ಅತಿಯಾದ ಥೈರಾಯಿಡ್ ನಿಂದ ಥೈರೋಟೊಕ್ಸಿಕೊಸಿಸ್ ಎಂಬ ತೊಂದರೆ. ಅದಕ್ಕೆ ಅವರು ಬಳಸುತ್ತಿದ್ದುದು ಗೋಮಾತ್ರ!! ಇದು ನಂಬಿಕೆಯೋ ಅಂಧ ವಿಶ್ವಾಷವೋ ತಿಳಿಯದು. ಈ ಗೋಮೂತ್ರ ಸೇವನೆ ಬ್ರುಸೆಲ್ಲೊಸಿಸ್ ಎಂಬ ಜಾನುವಾರುಗಳ ಕಾಯಿಲೆ ಮನುಷ್ಯರಲ್ಲಿ ಬರಲು ದಾರಿಮಾದಬಹುದು. ನಿಜಕ್ಕೂ ಮನುಷ್ಯ ದೇಹದ ಶಕ್ತಿ ಅಪಾರ. ಅದು ಅನಾವಶ್ಯಕ ಅಲೊಪತಿಕ್ ಔಷಧವನ್ನೂ ಅದರ ಅಡ್ಡ ಪರಿಣಾಮವನ್ನೂತಡೆಯುತ್ತದೆ ಹಾಗೆ ಇಂತಹ ಅವೈಜ್ನಾನಿಕ ಚೋದ್ಯಗಳನ್ನು ಕೂಡ ಸಹಿಸುತ್ತದೆ
retort
By dev (not verified)it seems a prejudiced article. the author has not gone into the depth of the sacredness of the cow. it is once again linking a deeply religious sentiment to the atrocities on Daliths worshipping cow is a different issue and the atrocities on dalits is also a different issue. why link these two and insult the religious sentiments of so many millions of innocent Hindus like me. say whatever you like ,rundown the values as you like but you have no right to generalize the issue and hurt the sentiments.
ಉತ್ತರ ಮೇಲಿದೆ
By skakkilayaನಿಮ್ಮ ಪ್ರತಿಕ್ರಿಯೆಗೂ ಮೇಲಿನದನ್ನು ಉತ್ತರವೆಂದು ಪರಿಗಣಿಸಬಹುದು.
ತುಂಬಾ
By supreeth (not verified)ತುಂಬಾ ವಸ್ತುನಿಷ್ಠವಾಗಿ ಬರೆದಿದ್ದೀರಿ ಸರ್... ಧನ್ಯವಾದಗಳು
Post new comment