ಮಧುಮೇಹ ರೋಗದ ಚಿಕಿತ್ಸೆಯು ಒಂದು ಅತಿ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗದು. ಅತಿ ಕಿರಿಯ ವಯಸ್ಸಿನಿಂದಲೇ ತಿನ್ನಬಹುದಾದ ಸಂಸ್ಕರಿತ ಆಹಾರಗಳನ್ನು ತಯಾರಿಸಿ, ಆಕರ್ಷಕವಾದ ಜಾಹೀರಾತುಗಳ ಮೂಲಕ ಅವನ್ನು ಮಾರಾಟ ಮಾಡಿ, ಆಧುನಿಕತೆಯ ರೋಗಗಳಾದ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಇತ್ಯಾದಿಗಳಿಗೆ ಕಾರಣವಾಗುತ್ತಿರುವ ಬಹುರಾಷ್ಟ್ರೀಯ ಆಹಾರೋದ್ಯಮ ಒಂದೆಡೆ. ಮಧುಮೇಹವು ಒಂದು ಭೀಕರವಾದ ಕಾಹಿಲೆಯೆಂದೂ, ಅದೀಗ ವಿಪರೀತವಾಗಿ ಹೆಚ್ಚುತ್ತಿದೆಯೆಂದೂ, ಅದಕ್ಕೆ ಆರಂಭದಿಂದಲೇ ಚಿಕಿತ್ಸೆಯನ್ನು ನೀಡಬೇಕಾದದ್ದು ಅತ್ಯಗತ್ಯವೆಂದೂ ಬೊಬ್ಬಿಡುತ್ತಿರುವ ಬಹುರಾಷ್ಟ್ರೀಯ ಔಷಧ ಕಂಪೆನಿಗಳು ಇನ್ನೊಂದೆಡೆ. ಆರಂಭದಿಂದಲೇ ಇನ್ಸುಲಿನ್ ಚುಚ್ಚುಮದ್ದನ್ನು ತೊಡಗುವುದರಿಂದ ಮೇದೋಜೀರಕಾಂಗವನ್ನು ರಕ್ಷಿಸಬಹುದೆನ್ನುವ ವಾದವನ್ನು ಇವೇ ಮೂಲಗಳಿಂದ ನಾವು ಇತ್ತೀಚಿನ ವರ್ಷಗಳಲ್ಲಿ ಪದೇಪದೇ ಕೇಳುತ್ತಿದ್ದೇವೆ. ಈ ಎರಡೂ ಉದ್ಯಮಗಳ ಮಧ್ಯೆ ಕುಳಿತು, ಅವರಾಡುತ್ತಿರುವ ಆಟಗಳನ್ನು ನೋಡುತ್ತಾ, ಅವೆರಡು ಉದ್ಯಮಗಳಿಂದಲೂ ವಿವಿಧ 'ಸಹಾಯ'ಗಳನ್ನು ಪಡೆದು ಆನಂದಿಸುತ್ತಿರುವ ವೈದ್ಯಕೀಯ ಸಮುದಾಯದ ಜಾಣ ಮೌನವು ಮನುಕುಲದ ಆರೋಗ್ಯಕ್ಕೆ ವಿಪರೀತವಾದ ಹಾನಿಯನ್ನು ತಂದೊಡ್ಡಲು ಕಾರಣವಾಗಿದೆ.
ಮೇದೋಜೀರಕಾಂಗವು ಸ್ರವಿಸುವ ಇನ್ಸುಲಿನ್ ಹಾರ್ಮೋನು ರಕ್ತದ ಸಕ್ಕರೆಯ ಪ್ರಮಾಣವನ್ನು ಇಳಿಸುವ ಸಂಗತಿಯನ್ನು ಕಂಡುಹಿಡಿದದ್ದು ಸುಮಾರು ತೊಂಭತ್ತು ವರ್ಷಗಳ ಹಿಂದೆ. ಅಲ್ಲಿಂದೀಚೆಗೆ ಪಶುಜನ್ಯ ಇನ್ಸುಲಿನ್ ಹಾರ್ಮೋನನ್ನು ಪ್ರತ್ಯೇಕಿಸಿ, ಶುದ್ಧೀಕರಿಸಿ, ಮನುಷ್ಯರಲ್ಲಿ ಚುಚ್ಚುಮದ್ದಾಗಿ ಬಳಸಲಾಗುತ್ತಿತ್ತು, ಅದರಿಂದಾಗಿ ಹಲವು ಸಹಸ್ರ ಮಧುಮೇಹಿಗಳ ಜೀವವೂ ಉಳಿಯಿತು. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಮಾನವ ಇನ್ಸುಲಿನ್ ವಂಶವಾಹಿಗಳನ್ನು ಇ. ಕೊಲೈ ಬ್ಯಾಕ್ಟೀರಿಯಾದ ಕೋಶಗಳಲ್ಲಿ ಕಸಿಮಾಡಿ ಕೃತಕ ಇನ್ಸುಲಿನ್ ಅನ್ನು ತಯಾರಿಸಲಾಯಿತು. ಈ ಕೃತಕ ಇನ್ಸುಲಿನಿಗೆ 'ಮಾನವ ಇನ್ಸುಲಿನ್' ಎಂದು ನಾಮಕರಣ ಮಾಡಿ, ಕೇವಲ ಹದಿನೇಳು ಮಧುಮೇಹವಿಲ್ಲದ ಗಂಡಸರ ಮೇಲೆ ಪ್ರಯೋಗಿಸಿ, ಅದರ ಉಪಯುಕ್ತತೆಯನ್ನೂ, ಸುರಕ್ಷತೆಯನ್ನೂ 'ಖಾತರಿಪಡಿಸಲಾಯಿತು'; ಈ ವರದಿಯನ್ನು ವಿಶ್ವಾಸಾರ್ಹವೆಂದು ಪರಿಗಣಿತವಾಗಿರುವ ದಿ ಲಾನ್ಸೆಟ್ ವೈದ್ಯಕೀಯ ಪತ್ರಿಕೆಯು ಪ್ರಕಟಿಸಿತು.[1] ಈ ವರದಿಯ ಆಧಾರದಲ್ಲಿಯೇ ಅಮೆರಿಕದ ಎಫ್.ಡಿ.ಎ. ಯ ಅನುಮತಿಯನ್ನು ಪಡೆದು 'ಮಾನವ ಇನ್ಸುಲಿನ್' ಅನ್ನು ತರಾತುರಿಯಲ್ಲಿ ಮಾರುಕಟ್ಟೆಗೆ ತರಲಾಯಿತು. 'ಮಾನವ ಇನ್ಸುಲಿನ್' ವೈದ್ಯಕೀಯ ಕ್ಷೇತ್ರದಲ್ಲಾದ ಅದ್ಭುತವಾದ ಕ್ರಾಂತಿಯೆಂದೂ, ಪ್ರಾಣಿಜನ್ಯ ಇನ್ಸುಲಿನ್ ಅನ್ನು ತೆಗೆದುಕೊಳ್ಳಬೇಕಾದ ಪ್ರಮೇಯವು ಇನ್ನಿಲ್ಲವೆಂದೂ ಜಗತ್ತಿನಾದ್ಯಂತವಾಗಿ ಡಂಗುರ ಸಾರಲಾಯಿತು. ಅದುವರೆಗೆ ಸುಮಾರು ಅರುವತ್ತು ವರ್ಷಗಳಿಂದ ಬಳಕೆಯಲ್ಲಿದ್ದ ಪ್ರಾಣಿಜನ್ಯ ಇನ್ಸುಲಿನ್ ಗಳು ಅಶುದ್ಧವಾದವುಗಳೆಂದೂ, ಅವುಗಳನ್ನು ಬಳಸಿದವರಲ್ಲಿ ಅಸಹಿಷ್ಣುತೆಯು ಬಹಳ ಸಾಮಾನ್ಯವೆಂದೂ, ಅದರಿಂದಾಗಿ ಹಲವಾರು ತೊಂದರೆಗಳುಂಟಾಗುವುವೆಂದೂ ಪ್ರಚಾರಗಳನ್ನು ನಡೆಸಲಾಯಿತು. 'ಮಾನವ ಇನ್ಸುಲಿನ್' ಮಾನವ ಸಹಜವೂ, ಅತಿ ಪರಿಶುದ್ಧವೂ ಆಗಿರುವುದರಿಂದ ಅದು ಅತ್ಯಂತ ಸುರಕ್ಷಿತವೆಂದು ಘೋಷಿಸಲಾಯಿತು. ಆಗ ಲಭ್ಯವಿದ್ದ ಪ್ರಾಣಿಜನ್ಯ ಇನ್ಸುಲಿನ್ ಗಳಿಗಿಂತ 'ಮಾನವ ಇನ್ಸುಲಿನ್' ಗೆ ನಾಲ್ಕು ಪಾಲಷ್ಟು ಬೆಲೆಯಿದ್ದರೂ, 'ಮಾನವ ಇನ್ಸುಲಿನ್' ಹೆಚ್ಚು ಪರಿಶುದ್ಧವೂ, ಪರಿಣಾಮಕಾರಿಯೂ ಆಗಿರುವುದರಿಂದ ರೋಗಿಗೆ ಚುಚ್ಚಬೇಕಾದ ಪ್ರಮಾಣವು ಕಡಿಮೆಯಾಗುವುದರಿಂದ ಈ ಅಧಿಕ ಬೆಲೆಯು ಸರಿದೂಗಲ್ಪಡುವುದೆಂದು ಸಮಜಾಯಿಷಿಯನ್ನೂ ನೀಡಲಾಯಿತು, ಮಾತ್ರವಲ್ಲ, ಬಳಕೆಯು ಹೆಚ್ಚಿ ವ್ಯವಹಾರವು ಬೆಳೆದಂತೆ ಬೆಲೆಯು ತನ್ನಿಂತಾನೇ ಇಳಿಯುವುದೆಂದೂ ಆಶ್ವಾಸನೆಯನ್ನು ನೀಡಲಾಯಿತು. ಆದರೆ ಏನಾಯಿತು?
'ಮಾನವ ಇನ್ಸುಲಿನ್' ಸುರಕ್ಷಿತವೇ?
'ಮಾನವ ಇನ್ಸುಲಿನ್' ಬಳಸಲಾರಂಭಿಸಿದ ಕೆಲವೇ ದಿನಗಳಲ್ಲಿ, ಅದನ್ನು ಚುಚ್ಚಿಸಿಕೊಂಡ ಕೆಲವರಲ್ಲಿ ರಕ್ತದ ಗ್ಲೂಕೋಸ್ ಪ್ರಮಾಣವು ತೀರಾ ಕಡಿಮೆಯಾಗುವುದನ್ನು ಗಮನಿಸಲಾಯಿತು. ಅಂತಹವರಲ್ಲಿ ಹೆಚ್ಚಿನವರಿಗೆ ಅದರ ಅರಿವುಂಟಾಗದೆ ಕೆಲವರು ಪ್ರಜ್ಞಾಶೂನ್ಯರಾದರು. ಕೆಲವರು ರಾತ್ರಿಯ ವೇಳೆ ಮಲಗಿದಲ್ಲಿಯೇ ಸಾವನ್ನಪಿದ ಪ್ರಕರಣಗಳೂ ವರದಿಯಾದವು. ಇದನ್ನು ಪರಿಗಣಿಸಿ ಪ್ರತಿಷ್ಠಿತ ಲಿವರ್ ಪೂಲ್ ವಿಶ್ವವಿದ್ಯಾಲಯದಲ್ಲೊಂದು ಅಧ್ಯಯನವನ್ನು ನಡೆಸಲಾಯಿತು. ಒಟ್ಟು ಏಳು ಜನರನ್ನಷ್ಟೇ ಒಳಗೊಂಡಿದ್ದ ಈ ಅಧ್ಯಯನವು 'ಮಾನವ ಇನ್ಸುಲಿನ್' ಪ್ರಾಣಿಜನ್ಯ ಇನ್ಸುಲಿನ್ ನಷ್ಟೇ ಸುರಕ್ಷಿತವೆಂಬ ತೀರ್ಮಾನಕ್ಕೆ ಬಂದೇ ಬಿಟ್ಟಿತು ಹಾಗೂ ಇದನ್ನು ಸಹ ದಿ ಲಾನ್ಸೆಟ್ ಪ್ರಕಟಿಸಿತು.[2] ನಂತರದ ದಿನಗಳಲ್ಲೂ 'ಮಾನವ ಇನ್ಸುಲಿನ್' ನ ಉತ್ಕೃಷ್ಟತೆಯ ಬಗ್ಗೆ, ಲಾಭಗಳ ಬಗ್ಗೆ ಹಲವಾರು ಲೇಖನಗಳು ಪ್ರಕಟಗೊಂಡವು, ಹಲವಾರು ಗೋಷ್ಠಿಗಳು ನಡೆದವು. ಪ್ರಾಣಿಜನ್ಯ ಇನ್ಸುಲಿನ್ ಅನ್ನು ಬಳಸುವುದು ಹಾಸ್ಯಾಸ್ಪದವೆಂಬಂತೆ ಬಿಂಬಿಸಲಾಯಿತು. ಮಂಗಲ್ ಪಾಂಡೆಯಂತವರು ಪ್ರಾಣಿಜನ್ಯ ಉತ್ಪನ್ನಗಳ ವಿರುದ್ಧ ಹೋರಾಡಿದಂತಹ ದೇಶದಲ್ಲಿ ಇಂದಿಗೂ ಕೆಲ ವೈದ್ಯರು ಪ್ರಾಣಿಜನ್ಯ ಇನ್ಸುಲಿನ್ ಅನ್ನು ಬಳಸುತ್ತಿದ್ದಾರೆ ಎಂದು ಮೂದಲಿಸುವ ಲೇಖನವೊಂದು ನಾಡಿನ ಪ್ರಮುಖ ದೈನಿಕವೊಂದರಲ್ಲಿ ಇತ್ತೀಚೆಗೆ ಪ್ರಕಟವಾಗಿತ್ತು. (ಅದಕ್ಕೆ ನಾನು ಬರೆದ ಪ್ರತಿಕ್ರಿಯೆಯು, ಸಹಜವಾಗಿಯೇ, ಪ್ರಕಟಗೊಳ್ಳಲಿಲ್ಲ). ಇವೆಲ್ಲದರ ನಡುವೆ ಪ್ರಾಣಿಜನ್ಯ ಇನ್ಸುಲಿನ್ ಅನ್ನು ನಿಧಾನವಾಗಿ ಮಾರುಕಟ್ಟೆಯಿಂದ ಹಿಂದೆಗೆಯುವ ಪ್ರಯತ್ನಗಳು ಮುಂದುವರಿದಿದ್ದು, ಈಗ ಮಧುಮೇಹಿಗಳೆಲ್ಲರೂ 'ಮಾನವ ಇನ್ಸುಲಿನ್' ಅನ್ನು ಕಡ್ಡಾಯವಾಗಿ ಬಳಸಬೇಕಾದ ಬಲಾತ್ಕಾರಕ್ಕೆ ಒಳಗಾಗುವಂತಾಗಿದೆ.
ಆದರೆ 'ಮಾನವ ಇನ್ಸುಲಿನ್' ಬಳಕೆಯಿಂದ ಹೇಳಿಕೊಳ್ಳುವಂತಹಾ ಯಾವುದೇ ಪ್ರಯೋಜನಗಳಿಲ್ಲವೆನ್ನುವುದು ಕಳೆದ ಇಪ್ಪತ್ತೈದು ವರ್ಷಗಳ ಅನುಭವದಿಂದಲೂ, ಹಲವು ಅಧ್ಯಯನಗಳಿಂದಲೂ ಸಾಬೀತಾಗಿದೆ. ಇನ್ಸುಲಿನ್ ಚುಚ್ಚುಮದ್ದಿನ ಪ್ರಮಾಣದಲ್ಲಿ ಇಳಿಕೆಯಾಗಬಹುದು, ಬಳಕೆ ಹೆಚ್ಚಿದಂತೆ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬಿತ್ಯಾದಿ ಭರವಸೆಗಳೆಲ್ಲ ಬರೇ ಪೊಳ್ಳೆಂದು ಸಾಬೀತಾಗಿಬಿಟ್ಟಿವೆ. ಇನ್ಸುಲಿನ್ ಬಗೆಗೆ ಈವರೆಗೆ ಲಭ್ಯವಿರುವ ಅಧ್ಯಯನಗಳನ್ನು ತುಲನೆ ಮಾಡಿದ ಕೊಕ್ರೇನ್ ವಿಮರ್ಶೆಯು 2005ರಲ್ಲಿ ಪ್ರಕಟವಾಗಿದ್ದು, 'ಮಾನವ ಇನ್ಸುಲಿನ್' ಪ್ರಾಣಿಜನ್ಯ ಇನ್ಸುಲಿನ್ ಗಿಂತ ಯಾವುದೇ ರೀತಿಯಲ್ಲಿ ಉತ್ತಮವೆನ್ನುವುದಕ್ಕೆ ಸಾಕಷ್ಟು ಅಧಾರಗಳಿಲ್ಲವೆಂದು ಸ್ಪಷ್ಟವಾದ ಶಬ್ದಗಳಲ್ಲಿ ಹೇಳಿದೆ. ''ಮಾನವ ಇನ್ಸುಲಿನ್' ಹಾಗೂ ಪ್ರಾಣಿಜನ್ಯ ಇನ್ಸುಲಿನ್ ಗಳ ಪರಿಣಾಮಗಳನ್ನೂ, ಅಡ್ಡ ಪರಿಣಾಮಗಳನ್ನೂ ಹೋಲಿಸಿದಾಗ ಹೇಳಿಕೊಳ್ಳುವಂತಹಾ ಯಾವುದೇ ವ್ಯತ್ಯಾಸವೂ ಗೋಚರಿಸುವುದಿಲ್ಲ. ರೋಗಿಗಾದ ಪ್ರಯೋಜನಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು, ಆರೋಗ್ಯದ ಗುಣಮಟ್ಟ ಅಥವಾ ಮಧುಮೇಹದ ತೊಂದರೆಗಳು ಹಾಗೂ ಅದರಿಂದಾದ ಸಾವುಗಳು ಇತ್ಯಾದಿಗಳನ್ನು, ಉನ್ನತ ದರ್ಜೆಯ ಅಧ್ಯಯನಗಳಲ್ಲಿ ಇದುವರೆಗೂ ಪರೀಕ್ಷಿಸಿಯೇ ಇಲ್ಲ. ಲಭ್ಯವಿರುವ 45 ಅಧ್ಯಯನಗಳನ್ನು (ಪಾಲ್ಗೊಂಡವರ ಸಂಖ್ಯೆ 2156) ಪರಿಗಣಿಸಿದಾಗ ವಿಭಿನ್ನ ಇನ್ಸುಲಿನ್ ಗಳ ಮಧ್ಯೆ ಯಾವದೇ ವ್ಯತ್ಯಾಸವಿರುವುದು ಕಂಡುಬರುವುದಿಲ್ಲ.' [3] ಈ ವರದಿಯು ಒಂದು ತೀಕ್ಷ್ಣವಾದ ಎಚ್ಚರಿಕೆಯನ್ನೂ ನೀಡುತ್ತದೆ: 'ಮಾನವ ಇನ್ಸುಲಿನ್' ಆನ್ನು ಮಾರುಕಟ್ತೆಗೆ ಪರಿಚಯಿಸುವಾಗ ಆದ ಕಥೆಯು ಪುನಾರಾವರ್ತೆನೆಯಾಗಬಹುದು: ಪ್ರಯೋಜನಗಳು ಮತ್ತು ಸುರಕ್ಷತೆಯ ಬಗ್ಗೆ ಸಾಕಷ್ಟು ಆಧಾರಗಳಿಲ್ಲದೆಯೇ ಇನ್ನಷ್ಟು ಹೊಸ ಔಷಧಗಳು ಹಾಗೂ ತಂತ್ರ ಜ್ಞಾನಗಳನ್ನು ಕೂಡಾ ಮಾರುಕಟ್ಟೆಗೆ ಪರಿಚಯಿಸಿಬಿಡುವ ಸಾಧ್ಯತೆಗಳಿವೆ.'[3]
ಮಾನವ ಇನ್ಸುಲಿನ್ ಬಳಕೆಯಿಂದ ಅಡ್ಡ ಪರಿಣಾಮಗಳು ಕಡಿಮೆಯಾಗುವ ಬದಲಾಗಿ ಹೆಚ್ಚೇ ಆಗಿರುವ ಬಗ್ಗೆ ಹಲವಾರು ವರದಿಗಳಿವೆ. ಪ್ರಾಣಿಜನ್ಯ ಇನ್ಸುಲಿನ್ ಬಳಕೆಯ ಎಂಭತ್ತು ವರ್ಷಗಳಲ್ಲಿ ಎಂದೂ ವರದಿಯಾಗದಿದ್ದ ಸಂಧಿನೋವು ಮುಂತಾದ ತೊಂದರೆಗಳು ಮಾನವ ಇನ್ಸುಲಿನ್ ಬಳಸುವವರಲ್ಲಿ ಕಂಡುಬಂದಿವೆ. ಅಮೆರಿಕದಲ್ಲಿ ವರದಿಯಾಗುವ ಔಷಧಗಳ ಅಡ್ದ ಪರಿಣಾಮಗಳಲ್ಲಿ ಶೇ. 2ರಷ್ಟು ಮಾನವ ಇನ್ಸುಲಿನ್ ಬಳಕೆದಾರರದ್ದೇ ಆಗಿರುತ್ತವೆ. ಮಾನವ ಇನ್ಸುಲಿನ್ ಪ್ರಾಣಿಜನ್ಯ ಇನ್ಸುಲಿನಿನಷ್ಟೇ ಅಸಹಿಷ್ಣುತೆಗೆ ಕಾರಣವಾಗುತ್ತದೆ ಮತ್ತು ಶೇ. 55 ಸಂದರ್ಭಗಳಲ್ಲಿ ಪ್ರತಿಕಾಯಗಳನ್ನೂ ಉಂಟುಮಾಡುತ್ತದೆ. ರಕ್ತದ ಗ್ಲೂಕೋಸ್ ಪ್ರಮಾಣದಲ್ಲಿ ರೋಗಿಯ ಅರಿವಿಗೆ ಬಾರದೆಯೇ ವಿಪರೀತವಾದ ಇಳಿಕೆಯಾಗುವುದು, ವರ್ತನೆಯಲ್ಲಿ ಬದಲಾವಣೆಗಳಾಗುವುದು, ಮಧುಮೇಹದ ನಿಯಂತ್ರಣವು ಸಮರ್ಪಕವಾಗಿಲ್ಲದಿರುವುದು ಇವೇ ಮುಂತಾದ ಹಲವು ಸಮಸ್ಯೆಗಳು ಮಾನವ ಇನ್ಸುಲಿನ್ ಬಳಸುವವರಲ್ಲಿ ಉಂಟಾಗುತ್ತವೆ.[ವಿವರಗಳಿಗೆ 4-8]
'ಸದೃಶ ಇನ್ಸುಲಿನ್'
ಇತ್ತೀಚೆಗೆ ಇನ್ಸುಲಿನ್ ತಯಾರಿಕಾ ಕಂಪೆನಿಗಳು ಹೊಸತೊಂದು ಪ್ರಯೋಗಕ್ಕಿಳಿದಿವೆ. ಮನುಷ್ಯನ ಇನ್ಸುಲಿನ್ ವಂಶವಾಹಿಯನ್ನು ಮನಬಂದಂತೆ ಬದಲಿಸಿ, ಆ ಮೂಲಕ ಇನ್ಸುಲಿನ್ ರಚನೆಯನ್ನು ಬದಲಿಸಿ, ಅದು ಮನುಷ್ಯನ ದೇಹದಲ್ಲಿ ಕೆಲಸ ಮಾಡುವ ಅವಧಿಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಪ್ರಯತ್ನಗಳಾಗಿವೆ ಹಾಗೂ ಇಂತಹಾ ಪ್ರಯೋಗಗಳಿಂದ ದೊರೆತ ಕೃತಕ ಪ್ರೊಟೀನುಗಳನ್ನು 'ಸದೃಶ ಇನ್ಸುಲಿನ್ ಗಳೆಂದು' ಈಗಾಗಲೇ ಮಾರುಕಟ್ಟೆಗೆ ತರಲಾಗಿದೆ. ಈ 'ಅದ್ಭುತ ಆವಿಷ್ಕಾರಗಳ' ಬೆಲೆಯು ಪ್ರಾಣಿಜನ್ಯ ಇನ್ಸುಲಿನ್ ನ ಬೆಲೆಗಿಂತ ಹತ್ತು ಪಾಲಷ್ಟಿದೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಪ್ರಯತ್ನಗಳು ಕೇವಲ ಹಣಗಳಿಸುವ ದಂಧೆಯಷ್ಟೇ ಅಲ್ಲ, ಬದಲಾಗಿ ಮನುಷ್ಯತ್ವಕ್ಕೂ, ಪ್ರಕೃತಿನಿಯಮಗಳಿಗೂ ಮಾಡಿರುವ ಘೋರವಾದ ಅನ್ಯಾಯವೆಂದೂ, ರೋಗಿಗಳನ್ನು ಅಪಾಯಕ್ಕೆ ತಳ್ಳುವ ದುರಂತಗಳೆಂದೂ ಹೇಳಲೇ ಬೇಕಾಗಿದೆ. ಮನುಷ್ಯನ ಇನ್ಸುಲಿನಿಗೆ ಹೋಲಿಸಿದಲ್ಲಿ, ಪ್ರಾಣಿಜನ್ಯ ಇನ್ಸುಲಿನ್ ಗಳಲ್ಲಿ ಒಂದು ಯಾ ಎರಡು ಅಮೈನೋ ಅಮ್ಲಗಳು ಬೇರೆಯಾಗಿರುತ್ತವೆ; ಈ ವಿಚಾರವನ್ನೇ ಅತಿಯಗಿ ವರ್ಣಿಸಿ, ಕೃತಕವಾಗಿ ತಯಾರಿಸಿದ 'ಮಾನವ ಇನ್ಸುಲಿನ್' ಅತ್ಯುತ್ತಮವೆಂದು ಅಂದು ಬೊಬ್ಬಿರಿಯಲಾಗಿತ್ತು. ಇಂದು ಅವೇ ಕಂಪೆನಿಗಳು, ಅದೇ ವಿಜ್ಞಾನಿಗಳು 'ಮಾನವ ಇನ್ಸುಲಿನಿನ' ಅಮೈನೋ ಅಮ್ಲಗಳನ್ನು ಮನಬಂದಂತೆ ಬದಲಾಯಿಸಿ, ಅವಕ್ಕೆ ಸದೃಶ ಇನ್ಸುಲಿನ್ ಗಳೆಂದು ನಾಮಕರಣ ಮಾಡಿ, ಅವುಗಳಿಂದೇನೂ ತೊಂದರೆಯಿಲ್ಲವೆಂದು, ಸರಿಯಾದ ಆಧಾರಗಳಿಲ್ಲದೆಯೇ, ಘೋಷಿಸುತ್ತಿದ್ದಾರೆ! ಆದರೆ ಪ್ರಕೃತಿಯಲ್ಲಿ ಹಾಗಿಲ್ಲವಲ್ಲ?! ಜೀವಿಯೊಳಗಿನ ಒಂದೊಂದು ಕಣಕ್ಕೂ ತನ್ನದೇ ಆದ ರೂಪವಿದೆ, ರಚನೆಯಿದೆ, ಕೆಲಸಗಳಿವೆ. ಅದರಲ್ಲಿ ಒಂದಿಷ್ಟು ಬದಲಾದರೂ ಅದರ ಸ್ವರೂಪವೇ ಬೇರೆಯಾಗುತ್ತದೆ. ಉದಾಹರಣೆಗಾಗಿ ರಕ್ತದಲ್ಲಿ ಆಮ್ಲಜನಕವನ್ನು ಒಯ್ಯುವ ಹಿಮೋಗ್ಲೋಬಿನ್ ಅನ್ನೇ ತೆಗೆದುಕೊಳ್ಳಿ. ಮನುಷ್ಯನಲ್ಲಿ ಸಾಮಾನ್ಯವಾಗಿ ಇರುವುದು ಹಿಮೋಗ್ಲೋಬಿನ್ ಎ. ಅದರಲ್ಲಿ ಆಲ್ಫಾ ಮತ್ತು ಬೀಟಾ ಎಂಬ ಎರಡೆರಡು ಶೃಂಖಲೆಗಳಿರುತ್ತವೆ. ಬೀಟಾ ಶೃಂಖಲೆಯ ಆರನೇ ಸ್ಥಾನದಲ್ಲಿರುವ ಗ್ಲುಟಾಮಿಕ್ ಆಮ್ಲದ ಬದಲಾಗಿ ವೇಲಿನ್ ಎಂಬ ಅಮೈನೋ ಆಮ್ಲವು ಸೇರಿಕೊಂಡರೆ ಹಿಮೋಗ್ಲೋಬಿನ್ ನ ಸ್ವರೂಪವೇ ಬದಲಾಗಿ ಅದು ಹಿಮೋಗ್ಲೋಬಿನ್ ಎಸ್ ಆಗಿಬಿಡುತ್ತದೆ; ರಕ್ತದಲ್ಲಿ ಆಮ್ಲಜನಕದ ಪ್ರಮಾಣವು ತಗ್ಗಿದೊಡನೆ ಅದು ವಿರೂಪಗೊಂಡು, ಮಚ್ಚಿನಾಕೃತಿಯನ್ನು ತಾಳಿ, ಒಂದಕ್ಕೊಂದು ಅಂಟಿಕೊಂಡು, ರಕ್ತಸಂಚಾರಕ್ಕೇ ತೊಂದರೆಯನ್ನುಂಟು ಮಾಡಿಬಿಡುತ್ತದೆ. ಹಿಮೋಗ್ಲೋಬಿನ್ ವಂಶವಾಹಿಯಲ್ಲಿ ಉಂಟಾಗುವ ಒಂದು ಸಣ್ಣ ಬದಲಾವಣೆಯೇ ಇಷ್ಟೆಲ್ಲ ಆಗುವುದಕ್ಕೆ ಕಾರಣವಾಗುತ್ತದೆ. ಮಾನವನ ಒಟ್ಟು ವಂಶವಾಹಿಗಳನ್ನು 2000 ಪುಟಗಳ ಪುಸ್ತಕಕ್ಕೆ ಹೋಲಿಸಿದರೆ, ಆ ಇಡೀ ಪುಸ್ತಕದಲ್ಲಿ ಕೇವಲ ಒಂದು ಅಕ್ಷರದ ಮುದ್ರಣ ದೋಷವಿದ್ದರೆ ಹೇಗೋ ಹಾಗೆ! ನಿಸರ್ಗದ ನಿಯಮಗಳು ಅಷ್ಟೊಂದು ಕಠಿಣವಾಗಿರುವಾಗ, ನಿಸರ್ಗರಚಿತ ಪ್ರೊಟೀನುಗಳನ್ನು ನಮ್ಮ ಮನಬಂದಂತೆ ಬದಲಿಸಿ ನಮ್ಮೊಳಕ್ಕೆ ಚುಚ್ಚಿಕೊಳ್ಳುವುದು ಹುಚ್ಚುತನವಲ್ಲದೆ ಬೇರೇನು? ಹಾಗೆ ಬದಲಾದ ಪ್ರೊಟೀನುಗಳನ್ನು ಮೂಲ ಪ್ರೊಟೀನಿನ ಸಾದೃಶ್ಯ ಗಳೆಂದು ಕರೆಯುವುದು ಘೋರವಾದ ಅನ್ಯಾಯ ಹಾಗೂ ಮೋಸವಷ್ಟೇ ಅಲ್ಲ, ಸರಿಯಾದ ಅಧ್ಯಯನಗಳಿಲ್ಲದೇ ಅವುಗಳನ್ನು ಬಳಸುವುದು ಅಪಾಯಕರವೂ ಆಗಬಹುದು. ಇನ್ಸುಲಿನ್ ಕೇವಲ ರಕ್ತದ ಗ್ಲೂಕೋಸನ್ನು ಕಡಿಮೆ ಮಾಡುವ ಹಾರ್ಮೋನಲ್ಲ, ಅದು ಶರೀರದ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನಾಗಿದೆಯಲ್ಲದೆ ಇತರ ಹಲವಾರು ಕಾರ್ಯಗಳನ್ನೂ ಹೊಂದಿದೆ. ಹಾಗಿರುವಾಗ ಬದಲಿಸ್ಪಟ್ಟ ಪ್ರೊಟೀನು ಈ ಎಲ್ಲಾ ಕಾರ್ಯಗಳಲ್ಲಿ ಹೇಗೆ ವರ್ತಿಸುತ್ತದೆಯೆಂದು ಅರ್ಥವಾಗದೇ ಅದನ್ನು ಬಳಸತೊಡಗುವುದು ಅಪಾಯಕರವೆಂದು ಹೇಳಲೇ ಬೇಕಾಗುತ್ತದೆ.
ಕೆಲವು 'ಸದೃಶ ಇನ್ಸುಲಿನ್ ಗಳು':
ಈ 'ಸದೃಶ ಇನ್ಸುಲಿನ್ ಗಳ' ಕಥೆಯು ಇನ್ನೂ ದೊಡ್ದದಿದೆ ಮಾತ್ರವಲ್ಲ, ಕೆಟ್ಟದ್ದೂ ಆಗಿದೆ. ಅಮೆರಿಕದ ಎಫ್. ಡಿ. ಎ. 2000ನೇ ಇಸವಿಯಲ್ಲಿ ಲಾಂಟಸ್ ನ ಮಾರಾಟಕ್ಕೆ ಒಪ್ಪಿಗೆಯನ್ನು ನೀಡಿತು. ಯುರೋಪಿನ ಔಷಧ ವಿಮರ್ಶಾ ಸಂಸ್ಥೆಯು ಯೂರೋಪಿನಲ್ಲಿ ಅದರ ಬಳಕೆಗೆ ಒಪ್ಪಿಗೆಯನ್ನು ನೀಡುವ ಮೊದಲು ಏನಾಯಿತು ಗಮನಿಸಿ. ಲಾಂಟಸ್ ಕ್ಯಾನ್ಸರ್ ಕಣಗಳ ವರ್ಧನೆಯನ್ನು ಅತಿಯಾಗಿ ಪ್ರಚೋದಿಸುತ್ತದೆಯೆಂದು ಪ್ರಯೋಗಗಳಲ್ಲಿ ಕಂಡುಬಂದ ವಿಚಾರವನ್ನು ಲಾಂಟಸ್ ನ ತಯಾರಕ ಅವೆಂಟಿಸ್ ಕಂಪೆನಿಯು ಯುರೋಪಿನ ಔಷಧ ವಿಮರ್ಶಾ ಸಂಸ್ಥೆಗೆ ಕೇವಲ ಮೌಖಿಕವಾಗಿ ತಿಳಿಸಿತು ಹಾಗೂ ಸಂಸ್ಥೆಯು ಅದೊಂದು ಅಪ್ರಸ್ತುತ ವಿಚಾರವೆಂದು ಬದಿಗೊತ್ತಿ ಒಪ್ಪಿಗೆಯನ್ನು ನೀಡಿತು! [9] ಇದಾದ ನಂತರವೂ, ಸದೃಶ ಇನ್ಸುಲಿನ್ ಗಳು ಕ್ಯಾನ್ಸರ್ ಗಳ ಬೆಳವಣಿಗೆಯನ್ನು ಪ್ರಚೋದಿಸುವುದಷ್ಟೇ ಅಲ್ಲ, ಹೃದಯ ಹಾಗೂ ರಕ್ತನಾಳಗಳ ತೊಂದರೆಗಳಿಗೂ ಕಾರಣವಾಗಬಲ್ಲವು ಎಂದು ಅಧ್ಯಯನಗಳು ತೋರಿಸಿವೆ.[9,10] ಆದರೂ ಅವುಗಳ ಮಾರಾಟ ಅವ್ಯಾಹತವಾಗಿ ಸಾಗಿದೆ. ಆದರೆ, ವಾಸ್ತವದಲ್ಲಿ, ಈ ಸದೃಶ ಇನ್ಸುಲಿನ್ ಗಳನ್ನು ಬಳಸಲೇ ಬೇಕಾದ ಪ್ರಮೇಯವೇನೂ ವೈದ್ಯರುಗಳಿಗಿಲ್ಲ; ಅವುಗಳಿಂದ ಯಾವುದೇ ವಿಶೇಷವಾದ ಪ್ರಯೋಜನಗಳಾಗಲೀ, ಲಾಭವಾಗಲೀ ಇಲ್ಲ.[11,12]
ಆದ್ದರಿಂದ, ಇನ್ಸುಲಿನ್ ಬಳಕೆಯ ಬಗ್ಗೆ ಈ ಕೆಳಗಿನ ವಿಚಾರಗಳು ಸುಸ್ಪಷ್ಟ:
ಮತ್ತೆ ಸೇರಿಸಿದ್ದು:
'ಮಾನವ ಇನ್ಸುಲಿನ್' ಎಂಬ ಮಾನವತಾ ವಿರೋಧಿಯಾದ ಲಾಭಕೋರ ದಂಧೆಯನ್ನು ತೊಡಗಿ, ಇಂದಿಗೂ ಅದರ ಮಂಚೂಣಿಯಲ್ಲಿರುವುದು ಅಮೆರಿಕಾದ ಬಹು ದೊಡ್ದ ಔಷಧ ಕಂಪೆನಿಯಾದ ಎಲಿ ಲಿಲ್ಲಿ. ಈ ಎಲಿ ಲಿಲ್ಲಿಯ ಹೂಡಿಕೆದಾರರ ಪೈಕಿ ಪ್ರಮುಖವಾದ ಹೆಸರಾವುದು ಗೊತ್ತೆ? ಈ ಜಗತ್ತಿನ ಮಾನವತಾ ವಿರೋಧಿ ಚಟುವಟಿಕೆಗಳಲ್ಲಿ ಅಗ್ರಗಣ್ಯರಾದ ಜಾರ್ಜ್ ಡಬ್ಲ್ಯು. ಬುಷ್ ಕುಟುಂಬಸ್ಥರು!
ವಿಕಿಪಿಡಿಯಾ ಮಾಹಿತಿ | ಇನ್ನೊಂದೆಡೆ
References:
human insulin
By dr.nithyananda pai (not verified)i fully agree with dr.s.kakkillaya that multinational pharmaceutical companies are exploiting the patients by creating fear psychosis in the minds of doctors and patients.this is nothing but making money at any cost.dr.c.n.pai,puttur,d.k.
Human Insulin
By PrakashI fully agree with Dr.Kukkilaya.I always prescribe Animal Insulin in my practice.Drug Companies have succeded completely in making doctors believe that human insulin and insulin analogues are better than animal insulin.This article should be published in Prajavani the largest circulated daily in Karnataka.
ಎಲ್ಲರೂ
By Ravishankar (not verified)ಎಲ್ಲರೂ ಓದಲೇಬೇಕಾದ ಲೇಖನ. ಬಹಳ ಧನ್ಯವಾದಗಳು.
ಮಾನವ ಇನ್ಸುಲಿನ್ ನ್ನು ಉಳಿಸಿ !!
By shrikanthnhಕಕ್ಕಿಲಾಯರವರೇ , ನಿಮ್ಮ ಲೇಖನ ಅತಿ ಮಾಹಿತಿಪೂರ್ಣವಾಗಿದೆ. ಬಹಳ ದಿನಗಳಿಂದ ನೀವು ವೈಯಕ್ತಿಕ ನೆಲೆಯಲ್ಲಿ ಹೇಳುತ್ತಾ ಬಂದಿದ್ದನ್ನು ಆಧಾರ ಸಮೇತವಾಗಿ ಲೇಖನದಲ್ಲಿ ಇಳಿಸಿದ್ದೀರಿ. ನನ್ನ ಈ ಪ್ರತಿಕ್ರಿಯಯ ತಲೆ ಬರಹ ಆಶ್ಚರ್ಯ ಎನಿಸಿರ ಬಹುದು . ಹೌದು ,ಈಗ ಸದ್ಯ ಉಳಿಸಬೇಕಾದದ್ದು ಮಾನವ ಇನ್ಸುಲಿನ್ ,ಪ್ರಾಣಿಜನ್ಯ ಇನ್ಸುಲಿನ್ ನ್ನು ವ್ಯವಸ್ಥಿತವಾಗಿ ಮುಗಿಸಿದ ಮೇಲೆ ಈ ಕಂಪನಿಗಳು ಈಗ ಮಾನವ ಇನ್ಸುಲಿನ್ ಮುಗಿಸುವ ಕ್ರಿಯೆಯನ್ನು ಪ್ರಾರಂಭಿಸಿವೆ ಮತ್ತು ನನ್ನ ಊಹೆಯಂತೆ ಇನ್ನು ೩-೪ ವರ್ಷದಲ್ಲಿ ಈ ಕ್ರಿಯೆಯಲ್ಲಿ ಯಷಸ್ವಿಯಾದರೆ ಆಶ್ಚರ್ಯವಿಲ್ಲ. ಮಾನವ ಇನ್ಸುಲಿನ್ ಗೆ ಬದಲು ಇನ್ಸುಲಿನ್ ಅನಾಲಾಗ್ ( ಸದ್ರುಶ ಇನ್ಸುಲಿನ್) ಗಳ ಭಾರೀ ಅಬ್ಬರ ಇದಕ್ಕೆ ಸಾಕ್ಷಿ. ನನಗಿನ್ನೂ ನೆನೆಪಿದೆ, ನಾನು ವೈದ್ಯಕೀಯ ವಿದ್ಯಾರ್ಥಿಯಾಗುವುದಕ್ಕೂ ಮೊದಲು ನೋಡಿದ ,ಕಲಿತ ಇನ್ಜೆಕ್ಶನ್ ಇನ್ಸುಲಿನ್. ೩೪ ವರ್ಷದ ಹಿಂದೆ ನಮ್ಮ ತಂದೆ ಇನ್ಸುಲಿನ್ ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಅದರ ಬೆಲೆ ಸುಮಾರು ೧೫ ರೂ , ಈಗ ೧೫೦ ರೂ.!! ಈ ಅವಧಿಯಲ್ಲಿ ಆಗಿನ ಎಲ್ಲ ಔಷಧಿಗಳ ಬೆಲೆ ಆಗಿನದಕ್ಕಿಂತ ಈಗ ಸೋವಿಯಾಗಿದೆ.( ಉದಾ. ಆಗ ಟಿ ಬಿ ಖಾಯಿಲೆಯ ಮಾತ್ರೆ ೩೫ ರೂ ಇದ್ದಿದ್ದು ಈಗ ೬ ರೂ ಆಗಿದೆ). ಈಗ ಮಾನವ ಇನ್ಸುಲಿನ್ ಕೂಡಾ ಹೋದರೆ ಸಿಗುವ ಇನ್ಸುಲಿನ್ ಬೆಲೆ ೬೦೦ರೂ ನಿಂದ ೧೦೦೦ ರೂ!!
ಕೆಲವು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಮಾನವ ಇನ್ಸುಲಿನ್ ಬೆಲೆ ೧೯೦ ರೂ ನಿಂದ ೧೫೦ ರೂ ಗೆ ಇಳಿದಾಗ ನನಗೆ ಗಾಭರಿಯಾಯಿತು, ಈ ಕಂಪನಿಗಳು ಪ್ರಾಣಿಜನ್ಯ ಇನ್ಸುಲಿನ್ನ್ ಬೆಲೆಯನ್ನು ೧೩೦ರೂ ಗಳವೆರೆಗೆ ಏರಿಸಿದಾಗಲೂ ನಮ್ಮ ದೇಶದಲ್ಲಿ ಪೂರ್ತಿಯಾಗಿ ಮಾನವ ಇನ್ಸುಲಿನ್ ನ್ನು ನೆಲೆಯೂರಿಸಲು ಆಗಿರಲಿಲ್ಲ. ಹಾಗಾಗಿ ಈಗ ತಮ್ಮ ಕೊನೆಯ ಪ್ರಯತ್ನವಾಗಿ ಪ್ರಾಣಿಜನ್ಯ ಇನ್ಸುಲಿನ್ ನ್ನು ಪೂರ್ತಿಯಾಗಿ ಮುಗಿಸಲು ಮಾಡಿದ ಕುತಂತ್ರ ಎಂಬುದು ಅರಿವಾಗಿ ನಾನು ಆ ಕಂಪನಿಯ ಪ್ರತಿನಿದಿಯ ಮೂಲಕ ನನ್ನ ಆತಂಕವನ್ನು ಮೇಲಧಿಕಾರಿಗಳಿಗೆ ಕಳುಹಿಸಿದೆ. ಆಗ ಅವರಿಂದ ಬಂದ ಉತ್ತರ ಈಗ ಇನ್ಸುಲಿನ್ ನ್ನು ಪ್ರಾಣಿಗಳಿಂದ ತೆಗೆಯುವುದು ಕಷ್ಟ ,ಇದಕ್ಕೆ ಸಾವಿರ್ರರು ಪ್ರಾಣಿಗಳ ಪ್ಯಾಂಕ್ರಿಯಾಸ್ ಬೇಕಾಗುತ್ತದೆ ,ಮಾನವ ಇನ್ಸುಲಿನ್ ತಯಾರಿಸುವುದು ಸುಲಭ ಎಂಬುದಾಗಿ. ಸರಿಯಾದ ಉತ್ತರ ,ಆದರೆ ಆ ಕಾರಣದಿಂದಲೇ ಮಾನವ ಇನ್ಸುಲಿನ್ ಬೆಲೆ ಬಹಳ ಕಡಿಮೆ ಯಿರಬೇಕಿತ್ತು ,ಅದಾಗಲೇ ಇಲ್ಲ.
ಈಗ ಆಗುತ್ತಿರುವುದು ಇನ್ನೂ ಗಂಭೀರ , ಈ ಇನ್ಸುಲಿನ್ ಅನಾಲಾಗ್ ನಿಂದಾಗಿ ಮಾನವ ಇನ್ಸುಲಿನ್ ಸಿಗುವುದೇ ನಿಲ್ಲುವ ಸಾಧ್ಯತೆ ಕೇವಲ ನಮ್ಮ ಕಲ್ಪನೆ ಯಸ್ಟೇ ಅಲ್ಲ , ಮಧುಮೇಹದ ಹೆಸರಾಂತ ವೈದ್ಯಕೀಯ ಜರ್ನಲ್ ಆದ Diabetologea ದ ಸಂಪಾದಕರಾದ ಗೇಲ್ ಅವರು ಬರೆದ ಸಂಪಾದಕೀಯ ಆಗಷ್ಟ್೨೦೦೭ ರಲ್ಲಿ ಇದೇ ಭಯವನ್ನು ವ್ಯಕ್ತ ಪಡಿಸಿದ್ದಾರೆ. ಅದನ್ನು ಅಲ್ಲಗಳೆದು ಕಂಪನಿಯೊಂದರ ಅಧಿಕಾರಿ ಸಮಜಾಯಸಿ ಕೂಡ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ನನ್ನ ಪ್ರಕಾರ ಈಗ ಉಳಿಯಬೇಕಾದದ್ದು ಮಾನವ ಇನ್ಸುಲಿನ್ ,ಇಲ್ಲದಿದ್ದ್ರೆ ನಮಗೆ ಉಳಿಯುವುದು ಈ ದುಭಾರಿಯ ಬೆಲೆಯ ಸದ್ರುಶ ಇನ್ಸುಲಿನ್ ಮಾತ್ರ!
ಉತ್ತಮ ಲೇಖನ ಮತ್ತು ಚಿಂತನೆಗೆ ಧನ್ಯವಾದಗಳು
ತುಂಬಾ ಉಪಯುಕ್ತವಾದ ಬರಹ
By ಕುಮಾರಸ್ವಾಮಿ.ಕಡಾಕೊಳ್ಳ (not verified)ಬಹುರಾಷ್ಟ್ರಿಯ ಕಂಪನಿಗಳು ನಡೆಸುವ ಸಾವಿನ ವ್ಯಾಪಾರದ ಬಗ್ಗೆ ತುಂಬಾ ವಿವರವಾಗಿ ನಿಮ್ಮ ಬರವಣಿಗೆ ಮೂಡಿಬಂದಿದೆ. ತುಂಬಾ ಉಪಯುಕ್ತವಾದ ಬರಹ. ಅದೇ ರೀತಿ ಏಡ್ಸ ಬಗ್ಗೆ ಒಂದು ಲೇಖನ ಬರೆಯಿರಿ. ಬದುಕೇ ಮುಗಿಯಿತು ಎನ್ನುವ ಹಾಗೆ ಪ್ರಚಾರ ಮಾಡುವ ಏಡ್ಸು ಅವಾಂತರಗಳ ಬಗ್ಗೆ ಖಂಡಿತ ಒಂದು ಬರವಣಿಗೆಯನ್ನು ಬರಿಯಬೇಕು.
ನಿವು ಇಂತ ಅಮೂಲ್ಯವಾದ ವಿಷಯವನ್ನು ಎಲ್ಲರಲ್ಲೂ ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು.
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ
reply
By girish rajanal (not verified)dsVery informative.
thank you very much for this wonderful article..
it should reach to every common man...
Post new comment