ಮಕ್ಕಳಲ್ಲಿ ಗ್ಯಾಸ್ಟ್ರಿಕ್ ತೊಂದರೆ ಮತ್ತದಕ್ಕೆ ಹೊಸಾ ಔಷಧ!

ಕೆಲದಿನಗಳ ಹಿಂದೆ ಹಿರಿಯರೊಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದೆ. ಮರುದಿನ ಅವರನ್ನು ನೋಡಲೆಂದು ಹೋಗಿದ್ದಾಗ ಅವರ ಕೊಠಡಿಯ ಹೊರಗೆ ನಿಂತಿದ್ದ ಸುಮಾರು ಎರಡು ವರ್ಷದ ಮಗುವೊಂದು ಪೊಟ್ಟಣವೊಂದರಿಂದ ಕುರುಂಕುರುಂ ತಿಂಡಿಯನ್ನು ಬಾಯಿಯೊಳಗೆ ತುರುಕಿಕೊಂಡು ತಿನ್ನುತ್ತಿದ್ದುದನ್ನು ನೋಡಿದೆ. ನಾನು ಒಳಹೊಕ್ಕಾಗ ಆ ಮಗುವೂ ನನ್ನ ಹಿಂದೆಯೇ ಬಂದಳು. ನಾನು ರೋಗಿಯನ್ನು ಪರೀಕ್ಷಿಸಿ ಇನ್ನೇನು ಹೊರ ನಡೆಯುವುದರಲ್ಲಿದ್ದಾಗ ಅಲ್ಲೇ ಇದ್ದ ಮೇಜಿನ ಮೇಲೆ ಅಂಟಾಸಿಡ್ ನ ಬಾಟಲಿಯೊಂದು ನನ್ನ ಕಣ್ಣಿಗೆ ಬಿತ್ತು. ನಾನು ಇದನ್ನು ಬರೆದೇ ಇಲ್ಲವಲ್ಲ, ಇದೇಕೆ ಇಲ್ಲಿದೆ ಅಂತ ದಾದಿಯಲ್ಲಿ ವಿಚಾರಿಸಿದೆ.
“ಇಲ್ಲ, ಅದು ಅವರದ್ದಲ್ಲ, ನನ್ನ ಮಗುವಿಗೆ ಮಕ್ಕಳ ವೈದ್ಯರು ಬರೆದು ಕೊಟ್ಟದ್ದು” ಅಂದಳು ನನ್ನ ರೋಗಿಯ ಮಗಳು.
“ಯಾಕೆ” ಅಂದೆ.
“ಅವಳಿಗೆ ಗ್ಯಾಸ್ಟ್ರಿಕ್ ಆಗಿದೆ, ವಾಂತಿ ಮಾಡ್ತಾ ಇರ್ತಾಳೆ”
“ಅಲ್ಲಮ್ಮಾ, ನಿಮ್ಮ ಮಗಳು ಕುರುಂಕುರುಂ ತಿಂಡಿಯನ್ನು ತಿಂತಾ ಇದ್ದದ್ದನ್ನು ನಾನು ಈಗಷ್ಟೇ ನೋಡಿದೆ”
“ಹೌದು, ಅವ್ಳು ಅದೇ ಬೇಕೂಂತ ಹಠ ಮಾಡ್ತಾಳೆ”
”ಅವ್ಳಿಗೆ ಅದನ್ನು ಮೊದಲಿಗೆ ತಿನ್ನಿಸಿ ಅಭ್ಯಾಸ ಮಾಡ್ಸಿದ್ದು ನೀವೇ ತಾನೆ, ಈಗ ಅವಳನ್ನೇಕೆ ದೂರುತ್ತೀರಿ?”
ಅಮ್ಮ ನಿರುತ್ತರ
”ಮಗುವಿನ ಡಾಕ್ಟ್ರು ಈ ವಿಷಯವನ್ನು ಕೇಳಲಿಲ್ವೇ”
”ಇಲ್ಲ, ಆದ್ರೆ ನಾನೇ ಅವರಲ್ಲಿ ಹೇಳಿದೆ, ಆದ್ರೆ ಅವರೇನೂ ಆ ಬಗ್ಗೆ ಹೇಳ್ಲಿಲ್ಲ, ಇದನ್ನೇ ಬರೆದು ಕೊಟ್ರು”
*****************
ಇದಕ್ಕೆ ಕೆಲ ದಿನಗಳ ಹಿಂದೆ ಮಂಗಳೂರಿನ ಸಂಜೆ ಪತ್ರಿಕೆಯ ಕೊನೆಯ ಪುಟದಲ್ಲೊಂದು ವರದಿಯು ಪ್ರಕಟವಾಗಿತ್ತು. ಇತ್ತೀಚೆಗೆ ಒಂದೆರಡು ವರ್ಷದಷ್ಟು ಕಿರಿಯ ವಯಸ್ಸಿನ ಮಕ್ಕಳಲ್ಲಿ ಗ್ಯಾಸ್ಟ್ರಿಕ್ ತೊಂದರೆಯು ಹೆಚ್ಚುಹೆಚ್ಚಾಗಿ ಕಂಡುಬರುತ್ತಿದೆಯೆಂದೂ, ಅದರ ಚಿಕಿತ್ಸೆಗಾಗಿ ಆ ವಯಸ್ಸಿನ ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಅಂಟಾಸಿಡ್ ಅನ್ನು ಖ್ಯಾತ ಔಷಧ ಕಂಪೆನಿಯೊಂದು ಮಾರುಕಟ್ಟೆಗೆ ತಂದಿದೆಯೆಂದೂ ನಗರದ ಮಕ್ಕಳ ತಜ್ಞರೊಬ್ಬರು ಆ ಕಂಪೆನಿಯ ಅಧಿಕಾರಿಯೊಬ್ಬರೊಂದಿಗೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ ಬಗ್ಗೆ ವರದಿಯಾಗಿತ್ತು.
*******************
ನೀವೇನಂತೀರಿ?

11 Nov22:02

ಒಂದು ಲೇಖನ ಬರೆಯಿರಿ

By ismail

ಬಹಳ ದಿನಗಳಿಂದ ನಿಮ್ಮ ಬ್ಲಾಗ್ ನೋಡಿರಲಿಲ್ಲ. ಇವತ್ತು ನೋಡಿದೆ. ಗ್ಯಾಸ್ಟ್ರಿಕ್ ತೊಂದರೆಗೆ ಸಂಬಂಧಿಸಿದಂತೆ ನೀವು ವಿವರವಾದ ಲೇಖನವೊಂದನ್ನು ಬರೆದರೇ ಉತ್ತಮವೇನೋ. ಇತ್ತೀಚೆಗಂತೂ ಎಲ್ಲರ ಜೇಬಿನಲ್ಲೂ ಜಿನ್ಟಾಕ್, ರಾನ್ಟ್ಯಾಕ್ ಗಳಿರುತ್ತವೆ. ನಮ್ಮ ಊಟ ತಿಂಡಿಗಳಲ್ಲೇ ಮೂಲಭೂತ ಬದಲಾವಣೆಯ ಅವಶ್ಯಕತೆ ಇದೆಯೇನೋ?
ಇಸ್ಮಾಯಿಲ್ನನ್ನ ಬ್ಲಾಗ್: http://ismail.sampada.net

12 Nov08:25

ಖಂಡಿತ

By skakkilaya

ಖಂಡಿತ ಬರೆಯುತ್ತೇನೆ!

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.