ನೋವು ನಿವಾರಕಗಳ ನೋವಿನ ಕಥೆ

ಅಮೆರಿಕಾದ ಮಸಚುಸೆಟ್ಸ್ ನ ಬೇಸ್ಟೇಟ್ ಮೆಡಿಕಲ್ ಸೆಂಟರಿನಲ್ಲಿ ಅರಿವಳಿಕೆ ಹಾಗೂ ನೋವು ನಿವಾರಣಾ ತಜ್ಞನಾಗಿರುವ ಸ್ಕಾಟ್ ರೂಬೆನ್ ಕಳೆದ ಹನ್ನೆರಡು ವರ್ಷಗಳಲ್ಲಿ ನೋವು ನಿವಾರಣೆಯ ವಿಧಾನಗಳ ಬಗ್ಗೆ 72 ಸಂಶೋಧನಾ ಲೇಖನಗಳನ್ನು ಬರೆದ; ಪ್ರತಿಷ್ಠಿತವೆನಿಸಿಕೊಂಡ ವೈದ್ಯಕೀಯ ಪತ್ರಿಕೆಗಳಲ್ಲಿ ಅವು ಪ್ರಕಟಗೊಂಡವು. ಇವುಗಳಲ್ಲಿ ಹಲವು ಲೇಖನಗಳು ಬಹುರಾಷ್ಟ್ರೀಯ ದೈತ್ಯ ಔಷಧ ತಯಾರಕ ಕಂಪೆನಿಯಾದ ಫೈಸರ್ ನ ಉತ್ಪನ್ನಗಳಾದ ಸೆಲೆಕಾಕ್ಸಿಬ್ ಎಂಬ ಹೊಸ ನೋವು ನಿವಾರಕ ಔಷಧ ಹಾಗೂ ಪ್ರೆಗಾಬಾಲಿನ್ ಎಂಬ ನರಶೂಲೆ ನಿವಾರಕ ಔಷಧಗಳ ಬಗೆಗಾಗಿದ್ದವು. ಶಸ್ತ್ರಚಿಕಿತ್ಸೆಯ ನಂತರ ಉಂಟಾಗುವ ನೋವನ್ನು ನಿವಾರಿಸಲು ಈ ಎರಡು ಔಷಧಗಳನ್ನು ಜೊತೆಯಾಗಿ ಬಳಸುವುದೇ ಅತ್ಯುತ್ತಮವಾದ ವಿಧಾನವೆನ್ನುವ ತೀರ್ಮಾನವನ್ನು ವೈದ್ಯಕೀಯ ಸಮುದಾಯವು ಮಾಡಿಬಿಡುವಷ್ಟರ ಮಟ್ಟಿಗೆ ರೂಬೆನನ ಪ್ರಭಾವ ಬೆಳೆಯಿತು. ಆದರೆ ಬೇಸ್ಟೇಟ್ ಮೆಡಿಕಲ್ ಸೆಂಟರಿನ ಸಮಿತಿಯೊಂದು ನಡೆಸಿದ ತನಿಖೆಗಳಲ್ಲಿ ರೂಬೆನನ 'ಸಂಶೋಧನೆಗಳ' ಬಂಡವಾಳವೆಲ್ಲ ಬಯಲಾಯಿತು - ಪ್ರಕಟಿತ 72 ಲೇಖನಗಳಲ್ಲಿ ಕನಿಷ್ಠ 21ರಲ್ಲಿ ಬಳಸಲಾದ ಅಂಕಿಅಂಶಗಳೆಲ್ಲಾ ಸಂಪೂರ್ಣವಾಗಿ ಯಾ ಭಾಗಶಃ ಸುಳ್ಳೆನ್ನುವುದು ತಿಳಿಯಿತು. ರೂಬೆನನ ಪತನದೊಂದಿಗೆ ಅವನು ಪ್ರತಿಪಾದಿಸಿದ ಬಹುಔಷಧಗಳ ನೋವು ನಿವಾರಣಾ ಚಿಕಿತ್ಸೆಯೂ ಬುಡಮೇಲಾಯಿತು. [ನೋಡಿ 1, 2]

ಔಷಧ ತಯಾರಕ ದೈತ್ಯ ಕಂಪೆನಿಗಳ ಮತ್ತು ಅವುಗಳಿಗಾಗಿ ವಿವಿಧ ಹಂತಗಳಲ್ಲಿ ಪರೀಕ್ಷೆಗಳನ್ನೂ, ಅಧ್ಯಯನಗಳನ್ನೂ ನಡೆಸುವವರ ಆಟಾಟೋಪಗಳು ಹೊಸದೇನಲ್ಲ. ’ಮಾನವ ಇನ್ಸುಲಿನ್’ ವಿಚಾರದಲ್ಲಿ ನಡೆದಿರುವ ಕಣ್ಣುಕಟ್ಟಿನ ಅಧ್ಯಯನಗಳ ಬಗ್ಗೆ ಕೊಕ್ರೇನ್ ವಿಮರ್ಶಕರ ಅಭಿಪ್ರಾಯವನ್ನು ಈ ಮೊದಲು ಬರೆದಿದ್ದೆ. ಔಷಧ ತಯಾರಕರು ಪ್ರಾಯೋಜಿಸಿದ ಅಧ್ಯಯನಗಳ ವರದಿಗಳನ್ನು ಪ್ರಕಟಿಸುವಾಗ ಬಹಳಷ್ಟು ಜಾಗರೂಕರಾಗಿರಬೇಕು ಯಾ ಅವನ್ನು ಪ್ರಕಟಿಸಲೇಬಾರದು ಎನ್ನುವ ನಿರ್ಧಾರವನ್ನು ಪ್ರಮುಖ ವೈದ್ಯಕೀಯ ಪತ್ರಿಕೆಗಳ ಸಂಪಾದಕರುಗಳು ಕೆಲ ವರ್ಷಗಳ ಹಿಂದೆ ಕೈಗೊಂಡಿದ್ದರಾದರೂ, ಅದರಿಂದ ಹೆಚ್ಚೇನೂ ಬದಲಾದಂತೆ ಅನಿಸುವುದಿಲ್ಲ. ಜಾರ್ಜ್ ಬುಷ್, ಬಿಲ್ ಗೇಟ್ಸ್, ಡೊನಾಲ್ಡ್ ರಮ್ಸ್ ಫೆಲ್ಡ್, ಅಂಬಾನಿಗಳಂತಹವರು ಇಂತಹಾ ಔಷಧ ದೈತ್ಯರ ಮಾಲಕರಾಗಿ ಅಥವಾ ದೊಡ್ಡ ಹೂಡಿಕೆದಾರರಾಗಿ ಇದ್ದಾರೆಂದ ಮೇಲೆ, ಈ ಕಂಪೆನಿಗಳ ’ವ್ಯಾವಹಾರಿಕ ಜಾಣ್ಮೆಯ’ ಬಗ್ಗೆ ಬೇರೇನೂ ಹೇಳಬೇಕಿಲ್ಲ.[ನೋಡಿ]

ರೂಬೆನ್ನನ ಲೇಖನಗಳ ವಸ್ತುವಾದ ಸೆಲೆಕಾಕ್ಸಿಬ್, ಕಾಕ್ಸ್ ೨ ನಿರೋಧಕಗಳೆಂಬ ಹೊಸ ನೋವು ನಿವಾರಕ ಔಷಧಗಳಲ್ಲೊಂದು. ಇದೇ ಗುಂಪಿಗೆ ಸೇರಿದ ರೊಫಿಕಾಕ್ಸಿಬ್ [Vioxx] ಹಾಗೂ ವಾಲ್ಡೆಕಾಕ್ಸಿಬ್ [Bextra]ಗಳನ್ನು ಬಳಸುವವರಲ್ಲಿ ಹೃದಯಾಘಾತದಂತಹಾ ಗಂಭೀರವಾದ ಸಮಸ್ಯೆಗಳೂ, ಚರ್ಮದ ಮೇಲೆ ಗಂಭೀರವಾದ ಪ್ರತಿಪರಿಣಾಮಗಳೂ ಹೆಚ್ಚಾಗಿ ಕಂಡುಬಂದಾಗ ಅವನ್ನು ಮಾರುಕಟ್ಟೆಯಿಂದ ಹಿಂದೆಗೆಯಲಾಯಿತು. ಈಗ ಅವುಗಳ ಅಣ್ಣನಾದ ಸೆಲೆಕಾಕ್ಸಿಬ್ ನ ಸರದಿ.

ವಿವಿಧ ನೋವು ನಿವಾರಕಗಳು

ಜೀವರಸಾಯನ ಶಾಸ್ತ್ರ, ತಳಿವಿಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ನಮ್ಮ ನೈಪುಣ್ಯತೆ ಬೆಳೆದಂತೆ ನಮ್ಮ ದೇಹದೊಳಗಿನ ಸೂಕ್ಷ್ಮವಾದ ಆಗುಹೋಗುಗಳ ಬಗ್ಗೆ ಹೆಚ್ಚು ಹೆಚ್ಚು ವಿವರಗಳು ಹೊರಬೀಳುತ್ತಿವೆ. ಇಂಗಾಲ, ಆಮ್ಲಜನಕ, ಸಾರಜನಕ, ಜಲಜನಕಗಳಿಂದ ಮಾಡಲ್ಪಟ್ಟಿರುವ ನಮ್ಮ ದೇಹದ ಪ್ರತಿಯೊಂದು ಕಾರ್ಯದಲ್ಲಿ ಒಂದಿಲ್ಲೊಂದು ರಾಸಾಯನಿಕ ಕ್ರಿಯೆಯು ಇದ್ದೇ ಇರುತ್ತದೆ. ನೋವಿನ ಸಂವೇದನೆಯೂ ಅವುಗಳಲ್ಲೊಂದು. ನೋವುಂಟಾಗುವ ಪ್ರಕ್ರಿಯೆಯಲ್ಲಿ ಪ್ರೋಸ್ಟಾಗ್ಲಾಂಡಿನ್ ಎಂಬ ಸಂಯುಕ್ತಗಳ ಪಾತ್ರವು ಮಹತ್ವದ್ದು. ಉರಿಯೂತ, ಗಾಯಗಳು ಹಾಗೂ ಮುರಿತಗಳು, ಶಸ್ತ್ರಕ್ರಿಯೆ, ಸೋಂಕುಗಳು ಇವೇ ಮುಂತಾದ ಸಂದರ್ಭಗಳಲ್ಲಿ ಪ್ರೋಸ್ಟಾಗ್ಲಾಂಡಿನ್ ಬಿಡುಗಡೆಗೊಂಡು, ನೋವಿನ ಸಂವೇದನೆಯನ್ನು ಒಯ್ಯುವ ನರಗಳನ್ನು ಪ್ರಚೋದಿಸುತ್ತವೆ; ನೋವಿನ ಸಂಜ್ಞೆಗಳು ನರಗಳ ಮೂಲಕ ಮೊದಲು ಮಿದುಳುಬಳ್ಳಿಗೆ ಸಾಗಿ, ಅಲ್ಲಿಂದ ಮಿದುಳನ್ನು ತಲುಪಿದಾಗ ನಮಗೆ ನೋವಿನ ಅರಿವುಂಟಾಗುತ್ತದೆ. ಮೂರು ಹಂತಗಳಲ್ಲಿ ಈ ಪ್ರಕ್ರಿಯೆಯನ್ನು ತಡೆಯುವ ಮೂಲಕ ನೋವನ್ನು ನಿಗ್ರಹಿಸಬಹುದು: ಪ್ರೋಸ್ಟಾಗ್ಲಾಂಡಿನ್ ಬಿಡುಗಡೆಯನ್ನು ತಡೆಯುವುದು, ನರಗಳಲ್ಲಿ ಸಂಜ್ಞೆಗಳು ರವಾನೆಯಾಗುವುದನ್ನು ತಡೆಯುವುದು ಹಾಗೂ ಮಿದುಳಿನಲ್ಲಿ ನೋವಿನ ಸಂವೇದನೆಯನ್ನು ತಡೆಯುವುದು. ನೋವಿನ ಕಾರಣ, ತೀವ್ರತೆ ಹಾಗೂ ರೋಗಿಯ ಸ್ಥಿತಿಗತಿಗಳಿಗನುಗುಣವಾಗಿ ಇವುಗಳಲ್ಲಿ ಯಾವುದೇ ಒಂದು ಅಥವಾ ಅಗತ್ಯವಿದ್ದರೆ, ಒಂದಕ್ಕಿಂತ ಹೆಚ್ಚಿನ ವಿಧಾನಗಳನ್ನು ವೈದ್ಯರು ಬಳಸಿಕೊಳ್ಳುತ್ತಾರೆ. ಇವುಗಳ ಪೈಕಿ, ಪ್ರೋಸ್ಟಾಗ್ಲಾಂಡಿನ್ ಬಿಡುಗಡೆಯನ್ನು ತಡೆಯುವ ಔಷಧಗಳು ಸುಲಭವಾಗಿ ಲಭ್ಯವಿದ್ದು, ನೋವು ನಿವಾರಕಗಳಾಗಿ ಅತ್ಯಂತ ಹೆಚ್ಚು ಬಳಕೆಯಲ್ಲಿವೆ.[ನೋಡಿ]

ನೋವಷ್ಟೇ ಅಲ್ಲದೆ ಜ್ವರವುಂಟಾಗುವುದಕ್ಕೂ ಪ್ರೋಸ್ಟಾಗ್ಲಾಂಡಿನ್ ಕಾರಣ. ಅಷ್ಟೇ ಅಲ್ಲದೆ, ರಕ್ತದ ಹೆಪ್ಪುಗಟ್ಟುವಿಕೆ, ಮೂತ್ರಪಿಂಡಗಳೂ ಸೇರಿದಂತೆ ದೇಹದ ಅಂಗಾಂಗಗಳಿಗೆ ಸರಿಯಾದ ರಕ್ತದ ಪೂರೈಕೆ, ಪ್ರಸವ, ಜಠರದಲ್ಲಿನ ಆಮ್ಲದಿಂದ ಅದರ ಭಿತ್ತಿಯ ರಕ್ಷಣೆ ಮುಂತಾದ ಕ್ರಿಯೆಗಳಲ್ಲೂ ಪ್ರೋಸ್ಟಾಗ್ಲಾಂಡಿನ್ ಪಾತ್ರವು ಮಹತ್ವದ್ದಾಗಿದೆ. [ನೋಡಿ] ನಮ್ಮ ದೇಹದಲ್ಲಿ ಪ್ರೋಸ್ಟಾಗ್ಲಾಂಡಿನ್ ತಯಾರಾಗಲು ಸೈಕ್ಲೋ ಆಕ್ಸಿಜನೇಸ್ ಎಂಬ ಕಿಣ್ವಗಳು ಕಾರಣವಾಗಿದ್ದು, ಈ ವರೆಗೆ ಮೂರು ಸೈಕ್ಲೋ ಆಕ್ಸಿಜನೇಸ್ [COX 1, COX 2, COX 3] ಕಿಣ್ವಗಳನ್ನು ಗುರುತಿಸಲಾಗಿದೆ. ಆಸ್ಪಿರಿನ್, ಇಂಡೋಮೆಥಾಸಿನ್ ನಂತಹ ಹಳೆಯ ನೋವು ನಿವಾರಕಗಳು ಈ ಮೂರಕ್ಕೂ ಅಡ್ಡಿಯುಂಟುಮಾಡುತ್ತವೆ; ಅದರಿಂದಾಗಿ ಉರಿಯೂತ, ನೋವು ಹಾಗೂ ಜ್ವರಗಳೆಲ್ಲವೂ ಕಡಿಮೆಯಾಗುತ್ತವೆ, ಆದರೆ ಜಠರ, ರಕ್ತದ ಹೆಪ್ಪುಗಟ್ಟುವಿಕೆ, ಮೂತ್ರಪಿಂಡಗಳಿಗೆ ರಕ್ತದ ಪೂರೈಕೆ ಇತ್ಯಾದಿಗಳ ಮೇಲೆ ಇವುಗಳಿಂದ ಅಡ್ಡ ಪರಿಣಾಮಗಳಾಗಬಹುದು. ಇನ್ನೊಂದು ಹಳೆಯ ಔಷಧವಾದ ಪಾರಸಿಟಮಾಲ್ COX 3 ನ್ನಷ್ಟೇ ತಡೆಯುವುದರಿಂದಾಗಿ ಜ್ವರ ಹಾಗೂ ನೋವಿನ ಉಪಶಮನಕ್ಕೆ ಅದನ್ನು ಬಳಸಬಹುದು, ಉರಿಯೂತವಿರುವ ಸಂದರ್ಭಗಳಲ್ಲಿ ಅದರಿಂದ ಹೆಚ್ಚಿನ ಪ್ರಯೋಜನವಾಗದು.

ನೋವು ನಿವಾರಣೆಗಾಗಿ ಕೇವಲ COX 2ನ್ನಷ್ಟೇ ತಡೆದರೆ ಸಾಕೆನ್ನುವ ಆಶಯದಿಂದ ಹೊಸ COX 2 ನಿರೋಧಕ ಔಷಧಗಳನ್ನು ಪ್ರಯೋಗಾಲಯಗಳಲ್ಲಿ ರೂಪಿಸಿ ಪರೀಕ್ಷಿಸಲಾಯಿತು. ಸೆಲೆಕಾಕ್ಸಿಬ್, ರೊಫಿಕಾಕ್ಸಿಬ್, ವಾಲ್ಡೆಕಾಕ್ಸಿಬ್ ಹಾಗೂ ಎಟೊರಿಕಾಕ್ಸಿಬ್ ಗಳು ಭಾರೀ ನಿರೀಕ್ಷೆಗಳೊಂದಿಗೆ, ಸದ್ದುಗದ್ದಲಗಳೊಂದಿಗೆ ಮಾರುಕಟ್ಟೆಗೂ ಬಂದವು. ಈ ಪೈಕಿ, ರೊಫಿಕಾಕ್ಸಿಬ್, ವಾಲ್ಡೆಕಾಕ್ಸಿಬ್ ಗಳನ್ನು ಈಗಾಗಲೇ ಹಿಂಪಡೆಯಲಾಗಿದ್ದರೆ, ಸೆಲೆಕಾಕ್ಸಿಬ್ ನ ಬಗ್ಗೆ ಈಗ ತಾನೇ ಹುಟ್ಟಿರುವ ವಿವಾದದಿಂದಾಗಿ ಅದರ ಗತಿಯೇನಾಗುತ್ತದೋ ಕಾದು ನೋಡಬೇಕಷ್ಟೆ. ಎಟೊರಿಕಾಕ್ಸಿಬ್ ಭಾರತವೂ ಸೇರಿದಂತೆ ಸುಮಾರು 60 ದೇಶಗಳಲ್ಲಿ ಬಳಕೆಯಲ್ಲಿದ್ದರೂ, ಅಮೆರಿಕಾದ ಎಫ್ ಡಿ ಎ ಅನುಮತಿಯು ಇನ್ನೂ ಅದಕ್ಕೆ ದೊರೆತಿಲ್ಲ.

ಭಾರತದ ದುಸ್ಥಿತಿ

ನಮ್ಮಲ್ಲಿ ರೊಫಿಕಾಕ್ಸಿಬ್ ಹಾಗೂ ವಾಲ್ಡೆಕಾಕ್ಸಿಬ್ ಗಳನ್ನು ಈಗಾಗಲೇ ನಿಷೇಧಿಸಲಾಗಿದ್ದು, ಸೆಲೆಕಾಕ್ಸಿಬ್ ಹಾಗೂ ಎಟೊರಿಕಾಕ್ಸಿಬ್ ಗಳು ಮುಕ್ತವಾಗಿ ಬಳಕೆಯಲ್ಲಿವೆ. ಅದರ ಜೊತೆಗೆ ನಿಮೆಸುಲೈಡ್ ನಂತಹಾ ಗಂಭೀರವಾದ ಅಡ್ಡ ಪರಿಣಾಮಗಳುಳ್ಳ ಔಷಧಗಳನ್ನು [ನೋಡಿ, ನೋಡಿ] ತಜ್ಞ ವೈದ್ಯರಷ್ಟೇ ಅಲ್ಲ, ಸ್ವಯಂ ಚಿಕಿತ್ಸಾ ಪ್ರವೀಣರಾದ ಹಲವು ಜನಸಾಮಾನ್ಯರೂ ಮನಬಂದಂತೆ ಬಳಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಔಷಧ ತಯಾರಕ ಕಂಪೆನಿಗಳು ಇನ್ನೊಂದು ಹೊಸ ತಂತ್ರವನ್ನು ಬಹಳ ಯಶಸ್ವಿಯಾಗಿ ಬಳಸುತ್ತಿವೆ, ತಿಳಿದೋ ತಿಳಿಯದೆಯೋ ಹಲವಾರು ವೈದ್ಯಕೀಯ ತಜ್ಞರುಗಳು ಇದಕ್ಕೆ ದಾಳಗಳಾಗಿಬಿಟ್ಟಿದ್ದಾರೆ. ಲಭ್ಯವಿರುವ ಔಷಧಗಳನ್ನೇ ಜೊತೆ ಸೇರಿಸಿ ಅದನ್ನೊಂದು ಹೊಸ ಅನ್ವೇಷಣೆಯೆಂಬಂತೆ ಪ್ರಚುರಪಡಿಸಿ ಮಾರುವುದು ಇಂದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳಲ್ಲಿ ಮೂರರಲ್ಲೊಂದರಷ್ಟು ಇಂತಹಾ 'ಕೂಡು ಔಷಧಗಳು' ಎಂದು ಅಂದಾಜಿಸಲಾಗಿದ್ದು, ಅಂತಹಾ ಸುಮಾರು 1300 ತಯಾರಿಗಳಲ್ಲಿ 70 ಕ್ಕೂ ಹೆಚ್ಚು ಅತಿ ಅಪಾಯಕಾರಿ ಮಿಶ್ರಣಗಳಾಗಿವೆ. ಇಂತಹಾ 'ಕೂಡು ಔಷಧಗಳ' ಪಟ್ಟಿಯಲ್ಲಿ ನೋವು ನಿವಾರಕ ಔಷಧಗಳ ಪಾಲೇ ಅತ್ಯಧಿಕವೆನ್ನಬಹುದು. COX 1, COX 2, COX 3 ಮೂರನ್ನೂ ತಡೆಯುವ ಇಬುಪ್ರಾಫೆನ್, ಡೈಕ್ಲೋಫೆನಾಕ್ ಇತ್ಯಾದಿಗಳ ಜೊತೆ COX 3 ನ್ನು ತಡೆಯುವ ಪಾರಸಿಟಮಾಲ್ ಅನ್ನು, COX 2 ನ್ನು ತಡೆಯುವ ನಿಮೆಸುಲೈಡ್ ಜೊತೆ ಪಾರಸಿಟಮಾಲ್ ಅನ್ನು, ಹಾಗೂ ಇವುಗಳ ಜೊತೆ ಸ್ನಾಯುಗಳನ್ನು ಸಡಿಲಿಸುವ ಕೆಲವು ಔಷಧಗಳನ್ನು ಸೇರಿಸಿರುವ ಹಲವಾರು 'ಬ್ರಾಂಡ್' ಗಳು ನಮ್ಮಲ್ಲಿ ಲಭ್ಯವಿವೆ. ನೋವು ನಿವಾರಕ ಔಷಧಗಳ ಜೊತೆಗೆ ಜಠರದಲ್ಲಿ ಆಮ್ಲದ ಸ್ರಾವವನ್ನು ಕಡಿಮೆ ಮಾಡುವ ಒಮೆಪ್ರಜಾಲ್, ರಾನಿಟಿಡಿನ್ ಮುಂತಾದ ಔಷಧಗಳನ್ನು ಸೇರಿಸಿರುವ ಕೆಲವು 'ಬ್ರಾಂಡ್' ಗಳೂ ಲಭ್ಯವಿದ್ದು, ಇವುಗಳ ಅಗತ್ಯವಾಗಲೀ, ಉದ್ದೇಶವಾಗಲೀ ಏನೆಂದು ಅರ್ಥವಾಗದು. ಇಂಥಾ 'ಕೂಡು ಬ್ರಾಂಡ್' ಗಳು ಅನಗತ್ಯವಾದ ಗೊಂದಲವನ್ನುಂಟು ಮಾಡುವುದಷ್ಟೇ ಅಲ್ಲದೆ, ಅನಗತ್ಯವಾದ ವೆಚ್ಚಕ್ಕೂ ಕಾರಣವಾಗುತ್ತವೆ. ಈ ಔಷಧಗಳನ್ನು ಜೊತೆ ಸೇರಿಸುವುದರಿಂದ ಅವುಗಳ ಪ್ರಯೋಜನಗಳು ವೃದ್ಧಿಸುವುದಿಲ್ಲ, ಬದಲಾಗಿ ಅಡ್ಡ ಪರಿಣಾಮಗಳು ದುಪ್ಪಟ್ಟಾಗುತ್ತವೆ. ಹಾಗಿದ್ದರೂ ಇಂದು ನಮ್ಮ ದೇಶದಲ್ಲಿ ಒಂದೇ ನೋವು ನಿವಾರಕವನ್ನು ಬರೆಯುವ ಪ್ರವೃತ್ತಿಯೇ ವಿರಳವಾಗಿಬಿಟ್ಟಿದ್ದು, ಇಂತಹಾ ಅಸಂಬದ್ಧವಾದ 'ಕೂಡು ಬ್ರಾಂಡ್' ಗಳ ಬಳಕೆಯೇ ಅಧಿಕವಾಗಿಬಿಟ್ಟಿದೆ.

ನೋವುನಿವಾರಕ ಔಷಧಗಳ ಬಳಕೆ ಹೇಗೆ?

ನಮ್ಮ ದೇಹಕ್ಕೆ ಹಾನಿಯಾದಾಗ ಅದನ್ನು ಗುಣಪಡಿಸುವ ಪ್ರಕ್ರಿಯೆಯು ಆ ಕೂಡಲೇ ಆರಂಭಗೊಳ್ಳುತ್ತದೆ; ಉರಿಯೂತ, ನೋವು ಹಾಗೂ ಜ್ವರಗಳು ಆ ಪ್ರಕ್ರಿಯೆಯ ಲಕ್ಷಣಗಳಾಗಿವೆ. ಆದ್ದರಿಂದ ಈ ಲಕ್ಷಣಗಳನ್ನು ನಿವಾರಿಸುವ ಔಷಧಗಳನ್ನು ಬಳಸುವುದರಿಂದ ರೋಗಶಮನದ ಕಾರ್ಯದಲ್ಲಿ ಸ್ವಲ್ಪ ಮಟ್ಟಿನ ಅಡಚಣೆಯನ್ನುಂಟು ಮಾಡಿದಂತಾಗುತ್ತದೆ. ಹಾಗಾಗಿ, ಅಂತಹಾ ಔಷಧಗಳನ್ನು ಜಾಗ್ರತೆಯಿಂದ, ಅಲ್ಪಸ್ವಲ್ಪವಾಗಿ ಬಳಸುವುದೇ ಲೇಸು.

  • ಕೇವಲ ನೋವು ಅಥವಾ ಜ್ವರವಷ್ಟೇ ಇದ್ದು, ಉರಿಯೂತವಿಲ್ಲದಿದ್ದರೆ ಪಾರಸಿಟಮಾಲ್ ಮಾತ್ರ ಸಾಕಾಗುತ್ತದೆ. ಜ್ವರವು 103 ಡಿಗ್ರಿಗಳಿಗಿಂತ ಹೆಚ್ಚಿದ್ದರಷ್ಟೇ ಔಷಧವನ್ನು ತೆಗೆದುಕೊಳ್ಳಿ, ಸಣ್ಣ ಪ್ರಮಾಣದ ಜ್ವರಕ್ಕೆ ಜ್ವರ ನಿವಾರಕ ಔಷಧವನ್ನು ತೆಗೆದುಕೊಳ್ಳದಿರುವುದೇ ಒಳ್ಳೆಯದು. ಅದೇ ರೀತಿ, ಸಣ್ಣ ಪುಟ್ಟ ನೋವುಗಳಿಗೆ ಔಷಧದ ಅಗತ್ಯವಿಲ್ಲ, ಸ್ವಲ್ಪ ವಿಶ್ರಾಂತಿ ಪಡೆದರೆ ಸರಿ ಹೋಗಬಹುದು.
  • ಮೊಣಗಂಟಿನ ನೋವು, ಬೆನ್ನು ನೋವು ಇತ್ಯಾದಿಗಳು ಹೆಚ್ಚಾಗಿ ಮೂಳೆ ಸವೆತ ಹಾಗೂ ಸ್ನಾಯು ಸೆಳೆತಗಳಿಂದ ಉಂಟಾಗುತ್ತವೆಯಾದ್ದರಿಂದ, ಅವುಗಳಿಗೆ ಪಾರಸಿಟಮಾಲ್ ನಂತಹ ನೋವು ನಿವಾರಕವಷ್ಟೇ ಸಾಕಾಗುತ್ತದೆ, ಉರಿಯೂತ ಶಮನ ಮಾಡುವ ಔಷಧಗಳ ಅಗತ್ಯವಿಲ್ಲ.
  • ಉರಿಯೂತವಿದ್ದರೆ ಇಬುಪ್ರೊಫೆನ್, ಡೈಕ್ಲೊಫೆನಾಕ್ ಇತ್ಯಾದಿ ಉರಿಯೂತ ನಿವಾರಕಗಳನ್ನು ಅಗತ್ಯಕ್ಕೆ ತಕ್ಕಂತೆ, ಜಾಗ್ರತೆಯಿಂದ ಬಳಸಬಹುದು. ವೈದ್ಯರು ಸೂಚಿಸಿದ ಪ್ರಮಾಣವನ್ನೂ, ಅವಧಿಯನ್ನೂ ಯಾವ ಸಂದರ್ಭದಲ್ಲೂ ಮೀರಲೇಬಾರದು. ಹೆಚ್ಚಿನ ಸಂದರ್ಭಗಳಲ್ಲಿ ಮೂರರಿಂದ ಐದು ದಿನಗಳ ಕಾಲ ನಿರಂತರವಾಗಿ ಉರಿಯೂತ ನಿವಾರಕಗಳನ್ನು ತೆಗೆದುಕೊಳ್ಳಬಹುದು; ಒಂದು ವಾರಕ್ಕಿಂತ ಹೆಚ್ಚು ಕಾಲ ಈ ಔಷಧಗಳನ್ನು ನಿರಂತರವಾಗಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
  • ಒಂದೇ ವಿಧದ ನೋವು ನಿವಾರಕ ಔಷಧವನ್ನು ಬಳಸಿ. 'ಕೂಡು ಔಷಧಗಳನ್ನು' ತೆಗೆದುಕೊಳ್ಳಬೇಡಿ.
  • ಹಲವು ವರ್ಷಗಳಿಂದ ಬಳಕೆಯಲ್ಲಿರುವ ನೋವು ನಿವಾರಕ ಔಷಧಗಳಿಗೇ ಪ್ರಾಶಸ್ತ್ಯವಿರಲಿ; COX 2 ನಿರೋಧಕಗಳಂತಹ ಹೊಸ ಔಷಧಗಳ ಬಳಕೆಯ ವಿಚಾರದಲ್ಲಿ ಜಾಗ್ರತೆ ವಹಿಸಿ.
  • ವಯಸ್ಸಾದವರು, ಜಠರದ ತೊಂದರೆಗಳಿರುವವರು, ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡದಂತಹಾ ಕಾಹಿಲೆಗಳಿಂದ ಬಳಲುತ್ತಿರುವವರು, ಯಕೃತ್ತು ಯಾ ಮೂತ್ರ ಪಿಂಡಗಳ ಕಾಹಿಲೆಗಳಿರುವವರು ನೋವು ನಿವಾರಕ ಔಷಧಗಳ ಬಳಕೆಯಲ್ಲಿ ಅತಿ ಜಾಗರೂಕರಾಗಿರಬೇಕು

ಹಳೆಯದು ಚಿನ್ನದಂತೆ ಎನ್ನುವುದು ನೋವು ನಿವಾರಕಗಳ ಮಟ್ಟಿಗಂತೂ ಅಕ್ಷರಶಃ ಸತ್ಯ.

31 Oct23:44

Thanks

By Rogelio73 (not verified)

Good article.

28 Mar15:20

- Thank you

By billigflüge (not verified)

- Thank you

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.