ಪಶು ಹಾಲಿನ ಪಾನ: ತಾಯ್ತನಕ್ಕೆ ಅಪಮಾನ, ರೋಗಗಳಿಗೆ ಆಹ್ವಾನ

ಹಾಲಿನ ಬಗ್ಗೆ ಕೆಟ್ಟದ್ದನ್ನು ಹೇಳಿದರೆ ಒಪ್ಪುವವರ ಸಂಖ್ಯೆಯು ಅತಿ ವಿರಳ. ಮನುಷ್ಯನ ಜೀವನದೊಂದಿಗೆ ಬಹಳ ಭಾವನಾತ್ಮಕವಾಗಿ ಬೆರೆತಿರುವ 'ಆಹಾರ'ವೆಂದರೆ ಹಾಲು. ಹುಟ್ಟಿದ ಘಳಿಗೆಯಿಂದ ಕೊನೆಯ ತನಕ ಮನುಷ್ಯನು ಸೇವಿಸುವ 'ಆಹಾರ'ವೊಂದಿದ್ದರೆ ಅದು ಹಾಲೇ ಅಲ್ಲವೆ? ಶತ-ಶತಮಾನಗಳಿಂದ ಮನುಷ್ಯನು ಕುಡಿಯುತ್ತಿರುವ ಈ ಹಾಲು ಅಮೃತವಲ್ಲವೇ?

ಹೌದೆ?

ಹಾಲು ಒಂದು ಅತ್ಯುತ್ಕೃಷ್ಟವಾದ, ಸಂಪೂರ್ಣವಾದ ಆಹಾರ. ಖಂಡಿತವಾಗಿಯೂ ಹೌದು. ತಾಯಿಯ ಹಾಲು ಆಕೆಯ ಮಗುವಿನ ಪಾಲಿಗೆ ಅತ್ಯುತ್ಕೃಷ್ಟವಾದ, ಸಂಪೂರ್ಣವಾದ ಆಹಾರ. ಅಷ್ಟೆ. ಆಯಾ ಸಸ್ತನಿಯ ಹಾಲು ಅದರ ಸಂತಾನಕ್ಕಷ್ಟೇ ಸೀಮಿತವಾದ ವಿಶಿಷ್ಟ ಆಹಾರವೆನ್ನುವುದು ನಿಸರ್ಗದ ಸತ್ಯ. ತನ್ನ ಮಗುವಿಗೆ ಹಾಲೂಡಿಸುವುದು ಹೇಗೆ ತಾಯಿಯ ಸೌಭಾಗ್ಯವೋ, ಅದನ್ನು ತಾಯಿಯಿಂದ ಪಡೆಯುವುದು ಆ ಮಗುವಿನ ಜನ್ಮಸಿದ್ಧವಾದ ಹಕ್ಕೂ ಹೌದು. ಹೇಗೆ ತಾಯಿಯೋರ್ವಳು ಅನ್ಯಳ ಮಗುವಿಗೆ ಹಾಲೂಡಿಸಲಾರಳೋ, ಹಾಗೆಯೇ ಬೇರೆ ಯಾವುದೇ ಹಾಲು ಮಗುವಿಗೆ ಆಹಾರವೂ ಅಲ್ಲ, ಮಗುವಿಗೆ (ಅಥವಾ ಮಗುವಾಗಿರದೆ ದೊಡ್ಡದಾಗಿ ಬೆಳೆದಿರುವವರಿಗೆ) ಅದರ ಅಗತ್ಯವೂ ಇಲ್ಲ. ಅನ್ಯ ಪ್ರಾಣಿಯ ಹಾಲನ್ನು ಕುಡಿಯುವುದೆಂದರೆ ತಾಯ್ತನಕ್ಕೆ ಮಾಡುವ ಅಪಮಾನವೆಂದೇ ಹೇಳಬಹುದು; ಬಹುಷಃ ಇದೇ ಕಾರಣಕ್ಕೆ ಬಹುತೇಕ ಮಕ್ಕಳು ಆಕಳ ಹಾಲನ್ನು ಇಷ್ಟಪಡುವುದಿಲ್ಲ ಮತ್ತು ಆಕಳ ಹಾಲನ್ನು ತಿರಸ್ಕರಿಸುವುದು ನಿಸರ್ಗಸಹಜವಾದ ಪ್ರತಿಕ್ರಿಯೆಯೇ ಆಗಿರಬಹುದು. ಹೆತ್ತು ಹಾಲೂಡಿಸಿದ ಅಮ್ಮನೊಬ್ಬಳು ನಮಗಿರುವಾಗ, ದನಗಳು ನಮ್ಮ 'ಮಾತೆ'ಯರಾಗುವುದೇಕೆ ಮತ್ತು ಹೇಗೆ?

ಇನ್ನೊಂದೆಡೆ, ಪಶುಗಳ ಹಾಲನ್ನು ಸೇವಿಸುವುದರಿಂದ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಶೈಶವಾವಸ್ಥೆಯ ಬಳಿಕ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಎಲ್ಲಾ ಪೌಷ್ಟಿಕಾಂಶಗಳ ಪೂರೈಕೆಯಾಗುವುದಿಲ್ಲ. ಇನ್ನೊಂದೆಡೆ, ಹಾಲನ್ನು ಸೇವಿಸುತ್ತಿದ್ದೇವಲ್ಲಾ ಎಂಬ ಭ್ರಮೆಯಲ್ಲಿ ಇತರ ಆಹಾರಗಳ ಸೇವನೆಯು ಕಡಿತಗೊಂಡು ನ್ಯೂನಪೋಷಣೆಗೂ ಕಾರಣವಾಗಬಹುದು. ತಾಯಿಯ ಹಾಲನ್ನು ಕುಡಿಯುವ ವಯಸ್ಸು ಮೀರಿದಂತೆ, ನಮ್ಮ ಕರುಳಿನಲ್ಲಿ ಹಾಲನ್ನು ಜೀರ್ಣಿಸುವ ಸಾಮರ್ಥ್ಯವೂ ನಿಧಾನವಾಗಿ ಕಡಿಮೆಯಾಗುತ್ತದೆ, ಅದು ಪ್ರಕೃತಿ ನಿಯಮ. ನಮ್ಮ ದೇಹದಲ್ಲಿ ವಯಸ್ಸಿಗನುಗುಣವಾಗಿ ಉಂಟಾಗುವ ಹಲವಾರು ಬದಲಾವಣೆಗಳಲ್ಲಿ ಇದೂ ಒಂದು. ನಾವು ಬೆಳೆದಂತೆ, ಯಾವುದು ಅಗತ್ಯವೋ ಅದು ಮೂಡುತ್ತದೆ, ಯಾವುದರ ಅಗತ್ಯವು ಇನ್ನಿಲ್ಲವೋ, ಅದು ಕ್ಷೀಣಿಸಿ ಮಾಯವಾಗುತ್ತದೆ. ಕರುಳಿನಲ್ಲಿ ಹಾಲನ್ನು ಜೀರ್ಣಿಸುವ ಕಿಣ್ವಗಳೂ ವಯಸ್ಸಾದಂತೆ ದುರ್ಬಲಗೊಂಡು ಮರೆಯಾಗುತ್ತವೆ. ಹಾಗಿರುವಾಗ, ಹಾಲನ್ನು ಕುಡಿಯುವ ವಯಸ್ಸು ಮೀರಿದ ಬಳಿಕವೂ ಅದನ್ನು ಕುಡಿಯುತ್ತಿದ್ದರೆ, ಅದು ಸರಿಯಾಗಿ ಪಚನಗೊಳ್ಳದೆ, ಬೇಕಾದದ್ದು ಹೀರಲ್ಪಡದೆ, ಬೇಡವಾದದ್ದು ಹೀರಲ್ಪಡುವ ಸಾಧ್ಯತೆಗಳು ಸಾಕಷ್ಟು. ಹೀಗಾಗಿ, ಬೆಳೆಯುವ ಮಗುವಿಗೆ ತಾಯಿಯ ಹಾಲು ಅಮೃತವಾದರೆ, ವಯಸ್ಸಾದವರ ಪಾಲಿಗೆ ಪಶುವಿನ ಹಾಲು ಹಾಲಾಹಲವಾಗಬಹುದು.

ಹಾಗಂದೊಡನೆ, 'ಹಿರಿಯರೆಲ್ಲರೂ ಹಾಲನ್ನು ಯಥೇಷ್ಟವಾಗಿ ಕುಡಿಯುತ್ತಿರಲಿಲ್ಲವೇ?' ಎಂದು ಆಕ್ಷೇಪಿಸುವವರು ಬಹಳಷ್ಟಿದ್ದಾರೆ. ಆದರೆ ಇದು ನಿಜವೆ? ಮನುಷ್ಯನು ಆಕಳ ಹಾಲನ್ನು 'ಅನಾದಿ ಕಾಲದಿಂದಲೇ' ಕುಡಿಯುತ್ತಿರಲಿಲ್ಲ, ಅದರ ಬಳಕೆ ಆರಂಭಗೊಂಡದ್ದು ಸುಮಾರು ಏಳೆಂಟು ಸಾವಿರ ವರ್ಷಗಳ ಹಿಂದಷ್ಟೇ. ಸುಮಾರು ನೂರೈವತ್ತು ವರ್ಷಗಳ ಹಿಂದಿನವರೆಗೂ ಆಕಳ ಹಾಲನ್ನು ನೇರವಾಗಿ ಕುಡಿಯುತ್ತಿದ್ದುದು ಕಡಿಮೆಯೇ, ಅದನ್ನು ಹೆಚ್ಚಾಗಿ ಬೆಣ್ಣೆ ಮತ್ತು ಗಿಣ್ಣುಗಳನ್ನು ತಯಾರಿಸಲಿಕ್ಕೆಂದು ಬಳಸಲಾಗುತ್ತಿತ್ತಷ್ಟೇ. ಹಾಲು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿ ಬಿಟ್ಟದ್ದು ತೀರಾ ಇತ್ತೀಚೆಗಷ್ಟೇ. ಪ್ಯಾಶ್ಚೀಕರಣ, ಮೇದಸ್ಸಿನ ಪ್ರತ್ಯೇಕಿಸುವಿಕೆ, ಅದಾಗಿ ಉಳಿದ ದ್ರಾವಣವನ್ನು ಬಲವಂತದಿಂದ ಮಿಶ್ರಣ ಮಾಡುವುದು (homogenization) ಇವೇ ಮುಂತಾದ ತಂತ್ರಜ್ಞಾನಗಳನ್ನು ಕಳೆದ ನೂರು ವರ್ಷಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇಂದು 'ಹಾಲು' ಎಂದು ಮಾರಲ್ಪಡುತ್ತಿರುವ ದ್ರಾವಣಕ್ಕೂ, ಎಂಭತ್ತರಿಂದ ನೂರು ವರ್ಷಗಳ ಹಿಂದೆ ಮನುಷ್ಯರು ಬಳಸುತ್ತಿದ್ದ ಆಕಳ ಹಾಲಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಆದರೇನು? ಈಗ ಹಾಲಿನ ಬಳಕೆಯು ಒಂದು ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ, ಸಂಸ್ಕರಿತಗೊಂಡು ತನ್ನ ನಿಸರ್ಗ ಸಹಜತೆಯನ್ನು ಕಳೆದುಕೊಂಡಿರುವ 'ಹಾಲು' ಮತ್ತದರ ಉತ್ಪನ್ನಗಳು ಮನುಷ್ಯನಿಗೆ ಅತ್ಯಗತ್ಯವೆಂದೂ, ಅವು ತಾಯಿಯ ಹಾಲಿನಷ್ಟೇ ಅಥವಾ ಅದಕ್ಕಿಂತಲೂ ಉತ್ತಮವೆಂದೂ ಬಿಂಬಿಸಲಾಗುತ್ತಿದೆ!

ಹಾಲಿನಲ್ಲಿ ಲ್ಯಾಕ್ಟೋಸ್ ಎಂಬ ಸಕ್ಕರೆ, ಹಲವು ತರಹದ ಮೇದಸ್ಸುಗಳು, ಪ್ರೊಟೀನುಗಳು, ಖನಿಜಗಳು ಇವೇ ಮುಂತಾದ ಪೌಷ್ಟಿಕಾಂಶಗಳು ನಿರ್ದಿಷ್ಟವಾದ ಅನುಪಾತದಲ್ಲಿ ಸಮ್ಮಿಶ್ರಣಗೊಂಡಿರುತ್ತವೆ ಮತ್ತು ಇವುಗಳ ಪ್ರಮಾಣವು ಶಿಶುವಿನ ಅಗತ್ಯಗಳಿಗನುಗುಣವಾಗಿ ಪ್ರತಿಯೊಂದು ಸಸ್ತನಿಯಲ್ಲಿಯೂ ಭಿನ್ನವಾಗಿರುತ್ತವೆ. ಅಂತಹಾ ಹಾಲಿನಿಂದ ಕೆನೆಯನ್ನು ಪ್ರತ್ಯೇಕಿಸಿ ತೆಗೆದಾಗ ಈ ಆಹಾರಾಂಶಗಳ ನಿಸರ್ಗಸಹಜವಾದ ಅನುಪಾತವು ಬದಲಾಗಿ, ಅದು ಕೇವಲ ಪ್ರೊಟೀನುಗಳು ಮತ್ತು ಕ್ಯಾಲ್ಸಿಯಂ ಪ್ರಮಾಣವೇ ಹೆಚ್ಚಾಗಿರುವ ಬೆಳ್ಳಗಿನ ಪ್ರಾಣಿಜನ್ಯ ದ್ರಾವಣವಾಗಿ ಬಿಡುತ್ತದೆ, ಅಷ್ಟೆ! ಪಶುಗಳ ಹಾಲಿನಲ್ಲಿರುವ ಇವೇ ಪ್ರೊಟೀನುಗಳು ಮನುಷ್ಯನ ಶರೀರಕ್ಕೆ ಒಗ್ಗದೆ ಹಲವು ತರಹದ ತೊಂದರೆಗಳನ್ನುಂಟುಮಾಡಬಹುದೆಂದು ಅಧ್ಯಯನಗಳು ತೋರಿಸಿವೆ. ಇನ್ನೊಂದೆಡೆ, ಪ್ಯಾಶ್ಚೀಕರಣದ ತಾಪದಿಂದ ಹಾಲಿನ ಪ್ರೊಟೀನುಗಳಲ್ಲಿ ಉಂಟಾಗುವ ಬದಲಾವಣೆಗಳು ಮತ್ತು ಅಂತಹಾ ಪ್ರೊಟೀನುಗಳಿಂದ ಮನುಷ್ಯರ ಮೇಲಾಗುವ ಪರಿಣಾಮಗಳ ಬಗ್ಗೆ ಆಳವಾದ ಅಧ್ಯಯನಗಳು ಇದುವರೆಗೂ ನಡೆದಂತಿಲ್ಲ.

ಹಾಲಿನಲ್ಲಿ ಏನೇನಿದೆ ಎಂಬ ಬಗ್ಗೆ ನಮಗಿನ್ನೂ ಸಂಪೂರ್ಣವಾದ ಅರಿವಿಲ್ಲವೆಂದೇ ಹೇಳಬೇಕು. ರಕ್ತನಾಳಗಳ ಬೆಳೆತವನ್ನು ಪ್ರಚೋದಿಸುವ ಅಂಶವೊಂದು ತಾಯಿಯ ಹಾಲಲ್ಲಿರುವುದನ್ನು ತೀರಾ ಇತ್ತೀಚೆಗೆ ಪತ್ತೆ ಮಾಡಲಾಗಿದೆ. ಇಂತಹಾ ಹಲವು ಬೆಳೆತ ಪ್ರಚೋದಕಗಳು ಹಾಲಲ್ಲಿದ್ದು ನವಜಾತ ಶಿಶುವಿನ ಕರುಳು, ರೋಧವ್ಯವಸ್ಥೆ, ನರಮಂಡಲ, ಎಲುಬುಗಳು ಇವೇ ಮತ್ತಿತರ ಅಂಗಾಂಗಗಳ ತ್ವರಿತವಾದ ಬೆಳವಣಿಗೆಗೆ ಪುಷ್ಟಿಯನ್ನು ನೀಡುತ್ತವೆ. ಆದರೆ ಶೈಶವಾವಸ್ಥೆಯ ಬಳಿಕವೂ ಹಾಲನ್ನು ಕುಡಿಯುವುದರಿಂದ ಇವೇ ಬೆಳೆತ ಪ್ರಚೋದಕಗಳು ಅಸಾಮಾನ್ಯವಾದ, ಅಸಹಜವಾದ ಬೆಳೆತಕ್ಕೆ ಕಾರಣವಾಗಬಲ್ಲವು. ಅಧಿಕ ಪ್ರಮಾಣದಲ್ಲಿ ಪಶುಗಳ ಹಾಲನ್ನು ಕುಡಿಯುವ ಮಕ್ಕಳು ಹೆಚ್ಚು ಎತ್ತರಕ್ಕೆ ಬೆಳೆಯುತ್ತಾರೆನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.
ಹಾಲಿನಲ್ಲಿರುವ IGF-1 ನಂತಹ ಬೆಳೆತ ಪ್ರಚೋದಕಗಳು ಗಂತಿಗಳ ಬೆಳವಣಿಗೆಯನ್ನು ಪ್ರಚೋದಿಸುತ್ತವೆ ಹಾಗೂ ಹಾಲನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವವರಲ್ಲಿ ಹಲವು ತರಹದ ಅರ್ಬುದ ಗಂತಿಗಳು ಹೆಚ್ಚು ಸಾಮಾನ್ಯವೆನ್ನುವುದೀಗ ಸಂಶಯಾತೀತವಾಗಿ ಗುರುತಿಸಲ್ಪಟ್ಟಿದೆ. ಅದೇ ರೀತಿ ಪಶುಗಳ ಹಾಲಿನಲ್ಲಿ ಸ್ರವಿಸಲ್ಪಡುವ ಹಲವು ತರಹದ ಹಾರ್ಮೋನುಗಳು ಮನುಷ್ಯರ ಪ್ರಜನನಾಂಗಗಳ ಮೇಲೆ ವರ್ತಿಸುವುದರಿಂದ ಸಂತಾನಶಕ್ತಿಯ ಮೇಲೆ ಪರಿಣಾಮಗಳುಂಟಾಗಬಹುದು ಮಾತ್ರವಲ್ಲ, ಈ ಅಂಗಗಳಲ್ಲಿ ಕ್ಯಾನ್ಸರ್ ಬೆಳೆಯುವುದಕ್ಕೂ ಕಾರಣವಾಗಬಹುದು.

ಪಶುಗಳು ಸೇವಿಸುವ ಆಹಾರ ಮತ್ತು ಅದರ ಮೂಲಕ ಅವುಗಳ ದೇಹವನ್ನು ಸೇರುವ ಕೀಟನಾಶಕಗಳು, ಪಶುಗಳಿಗೆ ನೀಡುವ ಹಲವು ತರಹದ ಔಷಧಗಳು ಹಾಗೂ ಬೆಳೆತ ಪ್ರಚೋದಕಗಳು - ಇವೆಲ್ಲವೂ ಹಾಲಿನಲ್ಲಿ ಸ್ರವಿಸಲ್ಪಟ್ಟು ಅದನ್ನು ಕುಡಿದವರಿಗೆ ತೊಂದರೆಯನ್ನುಂಟುಮಾಡಬಹುದು.

ಹಾಗಾದರೆ ಹಾಲನ್ನು ಕುಡಿಯಬಾರದೇ? ಬೇಕೇ ಬೇಕು ಮತ್ತು ಖಂಡಿತಾ ಕೂಡದು. ತಾಯಿಯ ಹಾಲನ್ನು ಮಗುವಿಗೆ ಕುಡಿಸಲೇ ಬೇಕು. ಪಶುವಿನ ಹಾಲನ್ನು ಕುಡಿಯಲೇ ಬಾರದು. ಮೊದಲನೆಯದು ನಿಸರ್ಗಸಹಜ ಸತ್ಯ, ಎರಡನೆಯದು ಕೋಟಿ ಕೋಟಿಗಟ್ಟಲೆಯ ವ್ಯವಹಾರ.

  • ತಾಯಿಯ ಹಾಲು ಆಕೆಯ ಮಗುವಿನ ಪಾಲಿಗೆ ಅತ್ಯುತ್ಕೃಷ್ಟವಾದ, ಸಂಪೂರ್ಣವಾದ ಆಹಾರ. ನವಜಾತ ಶಿಶುವಿಗೆ ತಾಯಿಯ ಹಾಲು ಬೇಕೇ ಬೇಕು, ಮಾತ್ರವಲ್ಲ, ಮೊದಲ ಆರು ತಿಂಗಳುಗಳ ಕಾಲ ಬೇರೇನನ್ನೂ ಮಗುವಿಗೆ ಉಣಿಸಬಾರದು.
  • ತಾಯಿಯ ಹಾಲಷ್ಟೇ ಆಕೆಯ ಮಗುವಿಗೆ ಆಹಾರ; ಒಂದು ಪ್ರಾಣಿಯ ಹಾಲು ಇನ್ನೊಂದು ಪ್ರಾಣಿಗೆ ಆಹಾರವಾಗಲಾರದು, ಇನ್ನೊಂದು ಶರೀರಕ್ಕೆ ಒಗ್ಗದು.
  • ಅನ್ಯ ಪ್ರಾಣಿಗಳ ಹಾಲು ಶಿಶುವಿನ ಕರುಳಲ್ಲಿ ಸರಿಯಾಗಿ ಜೀರ್ಣವಾಗುವುದಿಲ್ಲ, ಮಾತ್ರವೇ ಅಲ್ಲ, ಅದರಲ್ಲಿರುವ ಮೇದಸ್ಸು, ಪ್ರೊಟೀನು ಹಾಗೂ ಸಕ್ಕರೆಗಳ ಅನುಪಾತವು ತಾಯಿಯ ಹಾಲಿಗಿಂತ ತೀರಾ ಭಿನ್ನವಾಗಿರುವುದರಿಂದ ಶಿಶುವಿನ ಬೆಳವಣಿಗೆಗೆ ತೊಂದರೆಯಾಗಬಹುದು, ನಂತರವೂ ಹಲವು ತರದ ಕಾಹಿಲೆಗಳಿಗೆ ಹೇತುವಾಗಬಹುದು.
  • ಬೆಳ್ಳಗಿರುವುದೆಲ್ಲಾ ಹಾಲಲ್ಲ. ಪಶುಗಳ ಹಾಲನ್ನು ಶೇಖರಿಸಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಹಾಲಾಗಿದ್ದದ್ದು ಹಲವು ಬದಲಾವಣೆಗಳಿಗೆ ಒಳಗಾಗಿ ಗ್ರಾಹಕನ ಕೈಗೆ ತಲುಪುವಾಗ ನೈಸರ್ಗಿಕವಾದ ಹಾಲಾಗಿರದೇ ತಾಪಕ್ಕೆ ಸಿಕ್ಕು ಬದಲಾದ ಪ್ರೊಟೀನುಗಳು, ಸಕ್ಕರೆ ಮತ್ತು ಕ್ಯಾಲ್ಸಿಯಂ ತುಂಬಿರುವ ಬಿಳಿ ದ್ರಾವಣವಾಗಿರುತ್ತದೆ. ಇದರಿಂದ ಮಾನವನ ದೇಹಕ್ಕೆ ಪ್ರಯೋಜನಗಳಿಗಿಂತ ತೊಂದರೆಗಳೇ ಜಾಸ್ತಿ.
  • ಪಶುಗಳ ಹಾಲಿನ ಸೇವನೆಯಿಂದ ಬೊಜ್ಜು, ರಕ್ತನಾಳಗಳ ಒಳಭಿತ್ತಿಯ ಪೆಡಸಾಗುವಿಕೆ, ಮಧುಮೇಹ, ಪಚನಾಂಗದ ಹಲವು ಕಾಹಿಲೆಗಳು, ಶ್ವಾಸಾಂಗದ ತೊಂದರೆಗಳು, ಹಲವು ತರಹದ ಕ್ಯಾನರ್ ಗಳು, ಮೂಳೆಸವೆತ ಮತ್ತು ಮೂಳೆಮುರಿತ, ಹಲವು ಸೋಂಕುರೋಗಗಳು, ಮೊಡವೆಗಳು, ಮೂತ್ರಪಿಂಡದ ಹರಳುಗಳು ಇವೇ ಮುಂತಾದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವಿವರವಾದ ಲೇಖನ ಇಲ್ಲಿದೆ http://spandanametabolics.in/kannada/milk-kan.htm

17 Jun20:56

ಬಹಳ

By Ravishankar (not verified)

ಬಹಳ ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.