ಕಪಾಲಭಾತಿಯಿಂದ ಹೊಟ್ಟೆ ನೋವು

ಮೊನ್ನೆ ಮೂವತ್ತರ ಹರೆಯದ ಮಹಿಳೆಯೊಬ್ಬರು ಹೊಟ್ಟೆನೋವಿನ ಚಿಕಿತ್ಸೆಗಾಗಿ ಬಂದಿದ್ದರು. ನಾಲ್ಕು ತಿಂಗಳುಗಳಿಂದ ಉದರದ ಮೇಲ್ಭಾಗದಲ್ಲಿ ನೋವಿನಿಂದ ಬಳಲುತ್ತಿದ್ದ ಅವರಿಗೆ, ಜಠರದರ್ಶಕ ಪರೀಕ್ಷೆ ಹಾಗೂ ಹೊಟ್ಟೆಯ ಅಲ್ಟ್ರಾ ಸೌಂಡ್ ಪರೀಕ್ಷೆಗಳೆರಡರಲ್ಲೂ ಯಾವುದೇ ತೊಂದರೆಗಳು ಕಾಣಿಸಿರಲಿಲ್ಲ. ರೋಗಿಯನ್ನು ಮಾತಾಡಲು ಬಿಟ್ಟರೆ ರೋಗದ ಕಾರಣ ತಾನೇ ಹೊರಬರುತ್ತದೆ ಎಂಬ ಪಾಪ್ ವರ್ತ್ ನ ಸಲಹೆಯು ನೆನಪಾಗಿ, ನಿಮ್ಮ ಹೊಟ್ಟೆ ನೋವು ಯಾಕಿರಬಹುದು ಅಂತ ನೀವೇ ಹೇಳಿಬಿಡಿ ಅಂತ ಅವರನ್ನೇ ಕೇಳಿದೆ. ಹಾಗಾದರೆ ನಿಮ್ಮಲ್ಲಿಗೆ ಯಾಕೆ ಬರಬೇಕು ಅಂದು ಬಿಟ್ಟರು. ಪರೀಕ್ಷಿಸುವಾಗ ಉದರದ ಸ್ನಾಯುಗಳಲ್ಲಿ ನೋವಿದ್ದಂತಿದೆ, ಈಗಾಗಲೇ ಮಾಡಿಸಿರುವ ಪರೀಕ್ಷೆಗಳಲ್ಲಿ ಹೊಟ್ಟೆಯೊಳಗೇನೂ ತೊಂದರೆಗಳು ಇಲ್ಲವೆನ್ನುವುದು ದೃಢ ಪಟ್ಟಿದೆ, ಅದಕ್ಕಾಗಿ ಬೇರೇನಾದರೂ ಹೇಳುವುದಿದೆಯೇ ಅಂತ ಕೇಳಿದೆನಷ್ಟೆ ಅಂದೆ.
"’ನೀನು ಕಪಾಲಭಾತಿ ಮಾಡ್ತಿರೋ ಬಗ್ಗೆ ಡಾಕ್ಟ್ರಿಗೆ ಈ ಮೊದಲು ಹೇಳಿದ್ದೀಯ?’ ಅಂತ ನನ್ನ ಗಂಡ ಕೇಳ್ತಾ ಇದ್ರು, ಅದ್ರಿಂದ ಹಾಗಾಗುತ್ತಾ ಡಾಕ್ಟ್ರೇ"
"ಯಾವಾಗಿನಿಂದ ಕಪಾಲಭಾತಿ ಮಾಡ್ತಾ ಇದ್ರಿ?"
"ಈಗ ನಾಲ್ಕೈದು ತಿಂಗಳಾಯ್ತು"
"ಯಾಕಾಗಿ?"
"ಹೊಟ್ಟೆಯ ಬೊಜ್ಜು ಕರಗಿಸ್ಲಿಕ್ಕೆ ಅದು ಬಹಳ ಒಳ್ಳೆಯದು ಅಂತ ನನ್ನ ಕಸಿನ್ ಹೇಳಿದ್ಲು. ಅವ್ಳು ದಿನಕ್ಕೆ ನೂರು ಮಾಡ್ತಾಳಂತೆ, ನಾನು ಬೇಗನೇ ಬೊಜ್ಜು ಕರಗ್ಲಿ ಅಂತ ಮುನ್ನೂರು ಮಾಡ್ತಾ ಇದ್ದೆ, ಅದು ಸ್ವಲ್ಪ ಹೆಚ್ಚಾದದ್ರಿಂದ್ಲೇ ನೋವು ಬಂದಿರಬಹುದು ಡಾಕ್ಟ್ರೇ. ಯೋಗದಿಂದ ಏನೂ ತೊಂದರೆ ಇಲ್ಲ ಅನ್ನೋದನ್ನು ನಾನು ನಂಬಬಾರದಿತ್ತು" ಅನ್ನುತ್ತಾ ತಲೆ ತಗ್ಗಿಸಿದರು.

ಹೋಗಲಿ, ಬೊಜ್ಜಾದರೂ ಕರಗಿತೇ ಅಂದದ್ದಕ್ಕೆ ಸ್ವಲ್ಪಾನೂ ಇಲ್ಲ ಎಂಬ ಉತ್ತರವೂ ಬಂತು.

ಕಪಾಲಭಾತಿ ಪ್ರಾಣಾಯಾಮವನ್ನು ಮಾಡುವಾಗ ಉದರದ ಸ್ನಾಯುಗಳನ್ನು ಬಲವಂತವಾಗಿ ಒಳಕ್ಕೆ ಹೊರಕ್ಕೆ ಸಂಕುಚನಗೊಳಿಸುವುದರಿಂದ ಸ್ನಾಯುಗಳ ಎಳೆಗಳಿಗೆ ಹಾನಿಯಾಗಿ ನೋವುಂಟಾಗಬಹುದು. ಟಿವಿಯನ್ನು ನೋಡಿ, ಮಿತ್ರರು ಯಾ ಸಂಬಂಧಿಗಳ ಸಲಹೆಗಳನ್ನು ಕೇಳಿ ತಮ್ಮಷ್ಟಕ್ಕೆ ತಾವೇ ಕಪಾಲಭಾತಿ ಅಥವಾ ಇನ್ನಿತರ ಯೋಗಾಸನಗಳನ್ನು ಮಾಡುವುದರಿಂದಾಗಬಹುದಾದ ತೊಂದರೆಗಳಿಗೆ ಇದೊಂದು ಉದಾಹರಣೆ. ಯೋಗಾಭ್ಯಾಸದಿಂದ ಯಾವುದೇ ತೊಂದರೆ ಇಲ್ಲ ಎನ್ನುವ ಪ್ರಚಾರದಿಂದಾಗಿ, ತೊಂದರೆಗಳಾದರೂ ಅವನ್ನು ಯೋಗಾಭ್ಯಾಸಿಗಳು ಪರಿಗಣಿಸದಿರುವ ಸಾಧ್ಯತೆಗಳು ಒಂದೆಡೆಯಾದರೆ, ಎಲ್ಲಾ ವಿವರಗಳನ್ನು ವೈದ್ಯರಿಗೆ ಹೇಳದಿರುವುದರಿಂದ ಅನಗತ್ಯವಾಗಿ ದುಬಾರಿ ಪರೀಕ್ಷೆಗಳಿಗೂ ಒಳಗಾಗಬೇಕಾಗುತ್ತದೆ.

ಇನ್ನು ಯಾರಾದರೂ ಹೊಟ್ಟೆನೋವಿನಿಂದ ನನ್ನಲ್ಲಿಗೆ ಬಂದರೆ, ಕಪಾಲಭಾತಿಯ ಬಗ್ಗೆ ನಾನೇ ಪ್ರಶ್ನಿಸಬೇಕೆಂದು ನಿರ್ಧರಿಸಿದ್ದೇನೆ.

19 Mar23:05

kapalabhati

By bcshetty

sariyada margadarshana illade yoga ithayadigalannu maadabaradu embudakke innondu udaharane
inthaha vishayavannu thilisiddakke vaidyarige dhanyavaadagalu

25 Mar12:39

ಕಪಾಲಭಾತಿ

By amith (not verified)

ಕಪಾಲಭಾತಿ ಮಾಡುವ ಮೊದಲು -

ಊಟ, ತಿಂಡಿ ಮತ್ತು ಕಪಾಲಭಾತಿಗೆ ಕನಿಷ್ಠ - ೪ ಘಂಟೆ ಅಂತರ ಇರಬೇಕು.
ಆರಂಭಿಸುವವರು ಬಹಳ ಮಂದ ಗತಿಯಲ್ಲಿ ಮಾಡಬೇಕು ಸೆಕೆಂಡಿಗೆ ಒಂದರಂತೆ
ಟಿ ವಿ ಯಲ್ಲಿ ತೋರಿಸಿದರೆಂದು , ಉಸಿರು ಹೊರಗೆ ಬಿಡುವಾಗ ಸದ್ದು ಬರಬೇಕೆಂದು ಬಹಳ ಒತ್ತಡ ಹಾಕಿ ಉಸಿರು ಬಿಡಬಾರದು. - ಇದರಿಂದ ಸ್ನಾಯುಗಳಿಗೆ ಪೆಟ್ಟಾಗುವ ಸಾಧ್ಯತೆ ಹೆಚ್ಚು.

ಪ್ರಾಣಾಯಮವನ್ನು ನುರಿತ ಪ್ರಾಣಾಯಾಮ ಪಟುಗಳಿಂದ ಕಲಿತು ಅವರಲ್ಲಿ ತೋರಿಸಿ ಅಭ್ಯಾಸ ಮಾಡುವುದು ಅತ್ಯವಶ್ಯಕ

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.