ಈಗ ಎಲ್ಲೆಂದರಲ್ಲಿ ಹಂದಿ ಜ್ವರದ್ದೇ ಹುಯಿಲು. ಎಲ್ಲಾ ದೃಶ್ಯ ಮಾಧ್ಯಮಗಳಲ್ಲೂ, ವಾರ್ತಾ ಪತ್ರಿಕೆಗಳ ಮುಖಪುಟಗಳಲ್ಲೂ ಅದರದ್ದೇ ಸುದ್ದಿ. ಎಲ್ಲೆಂದರಲ್ಲಿ ಮುಖ ಮುಚ್ಚಿಕೊಂಡು ಓಡಾಡುವವರ ಚಿತ್ರಗಳು. ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನ ಸತ್ತು ಉರುಳಲು ಕ್ಷಣಗಣನೆ ಶುರುವಾಗಿದೆಯೇನೋ ಎಂಬಂತೆ ಹೆದರಿಕೆ ಹುಟ್ಟಿಸುವ ಪ್ರಚಾರ. ಆರು ವರ್ಷಗಳ ಹಿಂದೆ ಸಾರ್ಸ್, ಮೂರು ವರ್ಷಗಳ ಹಿಂದೆ ಹಕ್ಕಿ ಜ್ವರ, ಈಗ 'ಹಂದಿ ಜ್ವರ'. ಮೂರು ವರ್ಷಗಳಿಗೊಂದು 'ಹೊಸ' ಸೋಂಕು ರೋಗವೇ? ಹಕ್ಕಿ ಜ್ವರದ ಚಿಕಿತ್ಸೆಗೆಂದು ನಮ್ಮ ಸರಕಾರ ದಾಸ್ತಾನು ಮಾಡಿದ್ದ ಟಾಮಿಫ್ಲು ಇತ್ಯಾದಿ ಔಷಧಗಳು ಬಳಕೆಗೆ ಬಾರದೆ, ಅವಧಿ ಮೀರಿ ತಿಪ್ಪೆ ಸೇರಲು ತಯಾರಾಗುತ್ತಿದ್ದಂತೆ, ಮತ್ತೊಂದು ಸಲ ಅದೇ ಔಷಧಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಹೀಗಾಗಿ, ಈಗ ಅನಾವರಣಗೊಳ್ಳುತ್ತಿರುವ 'ಹಂದಿ ಜ್ವರ'ದ ವರದಿಗಳನ್ನು ಯಥಾವತ್ತಾಗಿ ನಂಬುವಂತೆಯೂ ಇಲ್ಲ, ಸಾರಾಸಗಟಾಗಿ ಸುಳ್ಳೆಂದು ತಳ್ಳಿ ಹಾಕುವಂತೆಯೂ ಇಲ್ಲ.
ವಿಶ್ವದಾದ್ಯಂತ ಇನ್ ಫ್ಲುಯೆಂಜಾ ಎ (H1N1) ಪ್ರಕರಣಗಳ ಪರಿಷ್ಕೃತ ವರದಿ ಇಲ್ಲಿದೆ
ಇದನ್ನೂ ನೋಡಿ: ಡೆಂಗೀ ಜ್ವರ, ಚಿಕುಂಗುನ್ಯಾ, ಮಲೇರಿಯಾ ಬಗ್ಗೆ ಅಲಕ್ಷ್ಯವೇಕೆ?
[ಪರಿಷ್ಕರಣೆ: ಜುಲೈ 2, 2009]
ಸೋಂಕು ರೋಗಗಳ ಬಗ್ಗೆ ಜಗತ್ತಿನಾದ್ಯಂತ ಭೀತಿ ಹುಟ್ಟಿಸುವ ಪರಿಪಾಠವು ಇತ್ತೀಚೆಗೆ ಹೆಚ್ಚು ಸಾಮಾನ್ಯವಾಗುತ್ತಿರುವಂತೆ ಕಂಡು ಬರುತ್ತಿದೆ. ಆರು ವರ್ಷಗಳ ಹಿಂದೆ ಸಾರ್ಸ್ ಕಂಡುಬಂದಾಗಲೂ ಹೀಗೆಯೇ ಆಯಿತು; ಯಾಕೆ, ಹೇಗೆ, ಏನೆಂದು ಗೊತ್ತಿಲ್ಲದ ಅದು ವಿಶ್ವವ್ಯಾಪಿಯಾಗಿ ಕೋಟಿಗಟ್ಟಲೆ ಜನರ ಸಾವಿಗೆ ಕಾರಣವಾಗಬಹುದೆಂಬ ಭಯದಿಂದ ಅತಿರೇಕವೆನಿಸುವಷ್ಟು ಮುಂಜಾಗ್ರತಾ ಕ್ರಮಗಳನ್ನು ಎಲ್ಲೆಡೆ ಕೈಗೊಳ್ಳಲಾಯಿತು. ಮೂರು ವರ್ಷಗಳ ಹಿಂದೆ ಕೋಳಿ ಜ್ವರವೂ ಬಂತು; ಅದು ಮನುಷ್ಯರಿಗೆ ಹರಡಿ ಲಕ್ಷಗಟ್ಟಲೆ ಜನರನ್ನು ಕೊಲ್ಲಬಹುದು ಎಂದು ಯಾರೋ ಒಂದಿಬ್ಬರಿಗೆ ಗುಮಾನಿಯಾದದ್ದಕ್ಕೆ ಕೋಟಿಗಟ್ಟಲೆ ಕೋಳಿಗಳನ್ನು ಕೊಂದು ಸಮಾಧಾನ ಪಟ್ಟುಕೊಂಡೆವು. ಅಷ್ಟರಲ್ಲೇ ಈಗ 'ಹಂದಿ ಜ್ವರ' ಎದ್ದಿದೆ. ಇದು ಇಡೀ ವಿಶ್ವವ್ಯಾಪಿಯಾಗಿ ಕೋಟಿಗಟ್ಟಲೆ ಜನರನ್ನು ಕೊಲ್ಲಬಹುದು ಎಂಬ ’ಭಯ’ವನ್ನು ಅಮೆರಿಕಾದ ರೋಗನಿಯಂತ್ರಣ ಸಂಸ್ಥೆ (ಸಿ.ಡಿ.ಸಿ) ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ವ್ಯಕ್ತಪಡಿಸಿವೆ. ಮಾಧ್ಯಮಗಳು ಸಹಜವಾಗಿಯೇ ಇದಕ್ಕೆ ತಾಳ ಹಾಕುತ್ತಿವೆ. ಮುಂದಿನ ದಿನಗಳಲ್ಲಿ, "ಹಂದಿ ಜ್ವರ ಪೀಡಿತರಿಗೆ ಚಿಕಿತ್ಸೆ ನೀಡಲೆಂದು ಕೋಟಿಗಟ್ಟಲೆ ಮೌಲ್ಯದ ’ಔಷಧಗಳನ್ನು’ ಎಲ್ಲಾ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ" ಎಂಬಂತಹ ಹೇಳಿಕೆಗಳನ್ನು ನಮ್ಮ ಮಂತ್ರಿಗಳಿಂದ ನಿರೀಕ್ಷಿಸಬಹುದು.[ಅದೀಗ ನಿಜವಾಗಿದೆ; ಕೆಳಗೆ ನೋಡಿ] ಈ ’ಭಯಂಕರವಾದ’ ರೋಗಕ್ಕೆ ಒಂದೆರಡು ವೈರಸ್ ನಿರೋಧಕ ಔಷಧಗಳಷ್ಟೇ ಪರಿಣಾಮಕಾರಿಯಾಗಿದ್ದು, ಅವನ್ನು ’ಸಾಕಷ್ಟು ಪ್ರಮಾಣದಲ್ಲಿ’ ಕೂಡಲೇ ಖರೀದಿಸಬೇಕೆಂದೂ, ಜನರ ಬದುಕಿನೊಂದಿಗೆ ಸರಕಾರವು ಚೆಲ್ಲಾಟವಾಡುವುದು ಸರಿಯಲ್ಲವೆಂದೂ ಒತ್ತಾಯಗಳು ಎದ್ದು, ಅದಕ್ಕುತ್ತರವಾಗಿ, 'ಎಷ್ಟೇ ವೆಚ್ಚವಾದರೂ ಅಂತಹಾ ‘ಜೀವರಕ್ಷಕ’ ಔಷಧಗಳನ್ನು ಖಂಡಿತವಾಗಿಯೂ ಖರೀದಿಸಲಾಗುವುದು' ಎಂಬ ಆಶ್ವಾಸನೆಯು ಸರಕಾರದಿಂದ ಬರಲಿದೆ. ಈ ಹೊಸ ಸೋಂಕಿಗಾಗಿಯೇ ವಿಶೇಷವಾದ ಲಸಿಕೆಯನ್ನು ತಯಾರಿಸುವುದಾಗಿಯೂ, ಎಲ್ಲಾ ಹಂದಿಗಳಿಗೂ, ಮನುಷ್ಯರಿಗೂ ಅದನ್ನು ಚುಚ್ಚಲೇ ಬೇಕೆಂದೂ ಲಸಿಕೆ ತಯಾರಿಕಾ ಕಂಪೆನಿಗಳಿಂದ ಆಶ್ವಾಸನೆಗಳೂ ಬರಲಿವೆ.[ಇದೂ ಆಗಿದೆ; ಕೆಳಗೆ ನೋಡಿ] ಹಳೆಯ, ಹೊಸದಾದ, ಇನ್ನೂ ಹುಟ್ಟಲಿರುವ ಎಲ್ಲಾ ರೋಗಗಳನ್ನೂ ವಾಸಿ ಮಾಡಬಲ್ಲ ಮತ್ತು ತಡೆಯಬಲ್ಲ 'ಬದಲಿ ಪದ್ಧತಿಗಳ ತಜ್ಞರು’, ತಮ್ಮಿಂದ ಮಾತ್ರವೇ ಈ ರೋಗವನ್ನು ತಡೆಯಲು ಸಾಧ್ಯ ಎನ್ನುವ ಘೋಷಣೆಗಳನ್ನು ಹೊರಡಿಸಲಿದ್ದಾರೆನ್ನುವುದರಲ್ಲೂ ಸಂಶಯವಿಲ್ಲ.[ಇದೂ ಆಗಿದೆ; ಕೆಳಗೆ ನೋಡಿ] ಇವನ್ನೆಲ್ಲ ನೋಡಿದ, ಕೇಳಿದ ಜನರಲ್ಲಿ ರೋಗವಲ್ಲದಿದ್ದರೂ ಹೆದರಿಕೆಯ ಸನ್ನಿ ಹರಡುವುದಂತೂ ದಿಟ. ಇತಿಹಾಸ ಮರುಕಳಿಸುವುದು ಸುಳ್ಳೇ?
ಏನಿದು ಹಂದಿ ಜ್ವರ?
ಮನುಷ್ಯನನ್ನು ಕಾಡುವ ಹತ್ತು ಹಲವು ವೈರಸ್ ಗಳಲ್ಲಿ ಇನ್ ಫ್ಲುಯೆಂಜಾವೂ ಒಂದು. ಹಕ್ಕಿಗಳಲ್ಲೂ, ಕೆಲವು ಪ್ರಾಣಿಗಳಲ್ಲೂ ಇದೇ ಜಾತಿಯ ವೈರಸ್ ಗಳು ಸೋಂಕನ್ನುಂಟು ಮಾಡಬಹುದು. ಅಪರೂಪಕ್ಕೊಮ್ಮೆ ಇವುಗಳಿಂದ ಮನುಷ್ಯರಿಗೂ ಹರಡಬಹುದು. ಈ ವೈರಸ್ ಗಳೊಳಗೆ ತಳಿಬೆರಕೆಯಾಗಿ ಹೊಸ ರೂಪದ ಇನ್ ಫ್ಲುಯೆಂಜಾ ವೈರಸ್ ಉಂಟಾಗಿ ಹೊಸದಾಗಿ ರೋಗವನ್ನು ಹರಡಬಹುದು. ಆಹಾರಕ್ಕಾಗಿ ಪಶುಸಾಕಣೆಯು ಹೆಚ್ಚಿದಂತೆ, ಅಂತಹಾ ಹಕ್ಕಿಗಳು ಹಾಗೂ ಪ್ರಾಣಿಗಳ ಜೊತೆ ಮನುಷ್ಯನ ಸಂಪರ್ಕವು ನಿಕಟಗೊಂಡಂತೆ, ರೋಗ ಹರಡುವಿಕೆಯ ಸಾಧ್ಯತೆಯು ಇನ್ನಷ್ಟು ಹೆಚ್ಚುತ್ತದೆ. ಇತ್ತೀಚೆಗೆ ಸುದ್ದಿಯಲ್ಲಿರುವ ಹಕ್ಕಿ ಜ್ವರ, ಹಂದಿ ಜ್ವರಗಳು ಇದಕ್ಕೆ ಉದಾಹರಣೆಗಳು.
ಚಿತ್ರ: ಇನ್ ಫ್ಲುಯೆಂಜಾ ವೈರಸ್
ಮೂರು ವರ್ಷಗಳಿಂದ ಸುದ್ದಿಯಲ್ಲಿರುವ ಹಕ್ಕಿ ಜ್ವರಕ್ಕೆ ಇನ್ ಫ್ಲುಯೆಂಜಾ ಎ (H5N1) ವೈರಸ್ ಕಾರಣ. ಇದು ತನ್ನ ರೂಪವನ್ನು ಬದಲಿಸಿ, ಮನುಷ್ಯನನ್ನು ಕಾಡಬಲ್ಲ H1N1 ಆಗಿ, ವಿಶ್ವವ್ಯಾಪಿ ಸೋಂಕನ್ನುಂಟುಮಾಡುವ ಸಾಧ್ಯತೆಗಳಿವೆಯೆಂದೂ, ಆದ್ದರಿಂದ ಅದನ್ನು ನಿಯಂತ್ರಿಸುವುದಕ್ಕಾಗಿ ಜ್ವರ ಬಾಧಿತವಾದ ಮತ್ತು ಅವುಗಳ ಜೊತೆಗಿದ್ದ ಕೋಳಿಗಳೆಲ್ಲವನ್ನೂ ಕೊಲ್ಲಬೇಕೆಂದೂ ತೀರ್ಮಾನಿಸಿ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋಟಿಗಟ್ಟಲೆ ಕೋಳಿಗಳನ್ನು ಕೊಲ್ಲಲಾಯಿತು. ಹಕ್ಕಿ ಜ್ವರದ ಲಸಿಕೆಯ ವಹಿವಾಟು ಬಹಳ ಜೋರಾಗಿ ನಡೆಯಿತು. ಅದನ್ನು ಗುಣಪಡಿಸಲು ಟಾಮಿಫ್ಲು ಎಂಬ ಔಷಧವೊಂದಕ್ಕೆ ಮಾತ್ರ ಸಾಧ್ಯವೆಂದು ಡಂಗುರ ಸಾರಿಸಿ ಅದನ್ನು ತಯಾರಿಸುವ ಗಿಲಿಯಡ್ ಕಂಪೆನಿಯ ಮಾಲಕನಾದ ಡೊನಾಲ್ಡ್ ರಮ್ಸ್ ಫೆಲ್ಡ್ (ಜಾರ್ಜ್ ಬುಷ್ ನಿಂದ ಅಮೆರಿಕಾದ ರಕ್ಷಣಾ ಕಾರ್ಯದರ್ಶಿಯಾಗಿ ನಿಯುಕ್ತನಾಗಿದ್ದವನು) ಬಿಲಿಯಗಟ್ಟಲೆ ಬಾಚಿಕೊಂಡದ್ದೂ ಆಯಿತು. [ನೋಡಿ 1, 2] ಅದರ ಬೆನ್ನಲ್ಲೇ ಈ ‘ಹೊಸ ಸೋಂಕು’ ತಲೆಯೆತ್ತಿದೆ.
ಎಲ್ಲಿಂದ ಬಂತು ಈ ಹಂದಿ ಜ್ವರ?
ಜಗತ್ತಿನ ಅತಿ ದೊಡ್ಡ ಹಂದಿ ಮಾಂಸ ಪೂರೈಕೆದಾರನಾದ ಸ್ಮಿತ್ ಫೀಲ್ಡ್ ಕಂಪೆನಿಯು ಮೆಕ್ಸಿಕೋದ ಲ ಗ್ಲೋರಿಯಾದಲ್ಲಿ ನಡೆಸುತ್ತಿರುವ ಹಂದಿ ಸಾಕಣಾಲಯವೇ ಈ ಹೊಸ ಸೋಂಕಿನ ಮೂಲವೆಂದು ಹೇಳಲಾಗುತ್ತಿದೆ. ಅಲ್ಲಿ ಉಸಿರಾಡಲೂ ಜಾಗವಿಲ್ಲದಂತೆ ಕೂಡಿ ಹಾಕಿದ್ದ ಹಂದಿಗಳ ಮಧ್ಯೆ ಈ ವೈರಸ್ ಹರಡಿ, ಅವುಗಳ ಸಂಪರ್ಕಕ್ಕೆ ಬಂದ ಮನುಷ್ಯರಿಗೂ ಹರಡಿ, ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡಿತು ಎನ್ನಲಾಗುತ್ತಿದೆ. [ನೋಡಿ Down To Earth ನಲ್ಲಿ ಸುನಿತಾ ನಾರಾಯಣ್ ಅವರ ಲೇಖನ; ಇತರ ವರದಿಗಳು 1, 2, 3, 4] ಆದರೆ ಈ ಹೊಸ ವೈರಸ್ ಹಂದಿಗಳಲ್ಲಿ ಹರಡುತ್ತಿಲ್ಲವೆಂದು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ [FAO] ಹೇಳಿದ್ದು, ಹೊಸ ವೈರಸ್ ನ ಹಂದಿ ಮೂಲದ ಬಗ್ಗೆ ಹಂದಿ ಸಾಕಣೆಗಾರರು ತಗಾದೆ ಎತ್ತಿದ್ದರಿಂದ ಅದನ್ನೀಗ ಹಂದಿಜ್ವರವೆಂದು ಕರೆಯದೆ ಇನ್ ಫ್ಲುಯೆಂಜಾ ಎ (H1N1) ಎಂದೇ ಕರೆಯಲಾಗುತ್ತಿದೆ. ಈ ಮಧ್ಯೆ, ಆಸ್ಟ್ರೇಲಿಯಾದ ಖ್ಯಾತ ವೈರಸ್ ತಜ್ಞರಾದ ಅಡ್ರಿಯನ್ ಗಿಬ್ಸ್ ಅವರು, ಲಸಿಕೆ ತಯಾರಿಯ ಪ್ರಯೋಗಗಳಲ್ಲಿ ಈ ಹೊಸ ವೈರಸ್ ಹುಟ್ಟಿಕೊಂಡಿರಬಹುದೆಂಬ ಸಂಶಯವನ್ನು ವ್ಯಕ್ತಪಡಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಈ ಊಹೆಯನ್ನು ತಳ್ಳಿ ಹಾಕಿದೆ. [ನೋಡಿ 1, 2].
ನಿಜಕ್ಕೂ ಹೊಸದಾದ ವೈರಸ್ಸೇ?
ಇನ್ ಫ್ಲುಯೆಂಜಾ ಹೊಸತೇನಲ್ಲ. ಇನ್ ಫ್ಲುಯೆಂಜಾ ಎ (H1N1), ಇನ್ ಫ್ಲುಯೆಂಜಾ ಎ (H3N2), ಇನ್ ಫ್ಲುಯೆಂಜಾ ಬಿ ಇತ್ಯಾದಿ ವಿವಿಧ ಬಗೆಯ ಇನ್ ಫ್ಲುಯೆಂಜಾ ವೈರಸ್ ಗಳು ಹಲವು ವರ್ಷಗಳಿಂದ ಮನುಷ್ಯನನ್ನು ಕಾಡುತ್ತಿದ್ದು, ಪ್ರತಿ ವರ್ಷ, ಮುಖ್ಯವಾಗಿ ಚಳಿಗಾಲದಲ್ಲಿ, ಲಕ್ಷಗಟ್ಟಲೆ ಜನ ಫ್ಲು ಸೋಂಕಿನಿಂದ ಬಾಧಿತರಾಗುತ್ತಾರೆ ಹಾಗೂ ಸುಮಾರು ಐದು ಲಕ್ಷದಷ್ಟು ಜನ, ಹೆಚ್ಚಾಗಿ ಹಿರಿವಯಸ್ಸಿನವರು, ಅದರಿಂದಾಗಿ ಸಾವನ್ನಪ್ಪುತ್ತಾರೆ. ಇನ್ ಫ್ಲುಯೆಂಜಾ ವೈರಸ್ ಗಳು ಆಗಾಗ ತಮ್ಮ ರೂಪವನ್ನು ಬದಲಿಸಿಕೊಳ್ಳುವಲ್ಲಿ ನಿಷ್ಣಾತವಾಗಿದ್ದು, ಕೆಲವೊಮ್ಮೆ ಹೊಸ ವೈರಸ್ ಗಳ [ಉದಾಹರಣೆಗೆ 2002ರಲ್ಲಿ ಕಂಡುಬಂದ ಇನ್ ಫ್ಲುಯೆಂಜಾ ಎ (H1N2)] ಹುಟ್ಟಿಗೂ ಕಾರಣವಾಗುತ್ತವೆ. ಮನುಷ್ಯರು, ಹಂದಿಗಳು ಮತ್ತು ಹಕ್ಕಿಗಳನ್ನು ಕಾಡುವ ಇನ್ ಫ್ಲುಯೆಂಜಾ ವೈರಸ್ ಗಳ ತಳಿಬೆರಕೆಯಾಗಿ ಹೊಸ ವೈರಸ್ ಉಂಟಾಗಿರುವುದನ್ನು ಹಂದಿಗಳ ದೇಹದಲ್ಲಿ 1998ರಲ್ಲೇ ಗುರುತಿಸಲಾಗಿತ್ತು ಮತ್ತು 2005ರಿಂದ 2009ರವರೆಗೆ ಈ ಹಂದಿ ಮೂಲದ ವೈರಸ್ ಗಳಿಂದ ಮನುಷ್ಯರಿಗೆ ಸೋಂಕು ತಗಲಿದ 12 ಪ್ರಕರಣಗಳು ಅಮೆರಿಕದಿಂದ ವರದಿಯಾಗಿದ್ದವು. ಈ ವರ್ಷದ ಎಪ್ರಿಲ್ 15 ಹಾಗೂ 17ರಂದು ಅಮೆರಿಕದ ಸಿಡಿಸಿ ಸಂಸ್ಥೆಯು ಕ್ಯಾಲಿಫೋರ್ನಿಯಾದ ಇಬ್ಬರು ಜ್ವರ ಪೀಡಿತ ಮಕ್ಕಳಲ್ಲಿ ಇನ್ನೊಂದು ಹೊಸ ಮಾದರಿಯ ಇನ್ ಫ್ಲುಯೆಂಜಾ ವೈರಸ್ ಅನ್ನು ಗುರುತಿಸಿತು. ಇದನ್ನು ಇನ್ ಫ್ಲುಯೆಂಜಾ ಎ (H1N1) ಎಂದು ಹೆಸರಿಸಲಾಗಿದ್ದು, ಮನುಷ್ಯರು, ಹಂದಿಗಳು ಮತ್ತು ಹಕ್ಕಿಗಳ ಇನ್ ಫ್ಲುಯೆಂಜಾ ವೈರಸ್ ಗಳ ತಳಿಬೆರಕೆಯಿಂದಲೇ ಈ ಹೊಸ ವೈರಸ್ ಉಂಟಾಗಿರಬಹುದೆಂಬುದು ವಿಜ್ಞಾನಿಗಳ ಊಹೆಯಾಗಿದೆ.[ನೋಡಿ] ಕೆನಡಾದ ವಿಜ್ಞಾನಿಗಳು ಈ ವೈರಸ್ ತಳಿಯ ವಿವರಗಳನ್ನು ಸಂಪೂರ್ಣವಾಗಿ ಬಿಡಿಸಿದ್ದಾರೆಂದು ಈಗಾಗಲೇ ವರದಿಯಾಗಿದ್ದು [ನೋಡಿ] ಇದನ್ನು ಹಂದಿಗಳಲ್ಲಾಗಲೀ, ಮನುಷ್ಯರಲ್ಲಾಗಲೀ ಹಿಂದೆಂದೂ ಕಂಡಿರಲಿಲ್ಲವೆಂದು ಹೇಳಲಾಗುತ್ತಿದೆ. ಹಿಂದೆ 1918-1920ರಲ್ಲಿ ಲಕ್ಷಗಟ್ಟಲೆ ಜನರ ಸಾವಿಗೆ ಕಾರಣವಾಯಿತೆನ್ನಲಾದ ಸ್ಪಾನಿಷ್ ಫ್ಲು ವನ್ನುಂಟುಮಾಡಿದ H1N1 ವೈರಸ್ ನೊಂದಿಗೆ ಈ ಹೊಸ ವೈರಸ್ ಸಾಮ್ಯತೆಯನ್ನು ಹೊಂದಿರುವುದು ಆತಂಕಕ್ಕೆ ಕಾರಣವೆಂದೂ ಹೇಳಲಾಗುತ್ತಿದೆ. ಈ 'ಹೊಸ' ಸೋಂಕು ಬೇಸಗೆಯಲ್ಲಿ ಆರಂಭಗೊಂಡಿರುವುದು ಮತ್ತು ಯುವಜನರೂ ಅದಕ್ಕೆ ಬಲಿಯಾಗಿರುವುದು ಸ್ವಲ್ಪ ವಿಶೇಷವಾದ್ದರಿಂದ ಇಷ್ಟೊಂದು ಗದ್ದಲಕ್ಕೆ ಕಾರಣವಾಗಿರಬಹುದು. ಹೇಗಿದ್ದರೂ, ಈ ವೈರಸ್ ಹೊಸದೇ ಅಥವಾ ಸದಾ ತನ್ನ ರೂಪವನ್ನು ಬದಲಿಸಿಕೊಳ್ಳುವಲ್ಲಿ ನಿಷ್ಣಾತವಾಗಿರುವ ಇನ್ ಫ್ಲುಯೆಂಜಾ ಎ (H1N1) ವೈರಸ್ ನ ಮತ್ತೊಂದು ರೂಪವಷ್ಟೆಯೇ ಎನ್ನುವ ಸತ್ಯ ಹೊರಬೀಳುವ ಬಗ್ಗೆ ಖಾತರಿಯಿಲ್ಲ. ಈ 'ಹೊಸ' ವೈರಸ್ ಹಲವು ವರ್ಷಗಳ ಮೊದಲೇ ಹುಟ್ಟಿ, ಮೆಕ್ಸಿಕೋದಲ್ಲಿ ಕಂಡುಬರುವುದಕ್ಕಿಂತ ಹಲವು ತಿಂಗಳುಗಳ ಮೊದಲೇ ಮನುಷ್ಯರಲ್ಲಿ ಹರಡಲಾರಂಭಿಸಿತ್ತು ಎಂದು ಬ್ರಿಟಿಷ್ ವಿಜ್ಞಾನಿಗಳು ಇದೀಗ ಹೇಳಿರುವುದು [ಪ್ರಜಾವಾಣಿ ವರದಿ, ಜೂನ್ 16]ಈ ಸಂಶಯವನ್ನು ಮತ್ತಷ್ಟು ಬಲಪಡಿಸುತ್ತವೆ.
ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆಯು ಎಪ್ರಿಲ್ ಮಧ್ಯದಿಂದಲೇ ತುರ್ತು ನಿಯಂತ್ರಣ ಕ್ರಮಗಳ ಬಗ್ಗೆ ಎಚ್ಚರಿಕೆಯನ್ನು ಹೊರಡಿಸಿದೆ. ಜಗತ್ತಿನ ಜನಸಂಖ್ಯೆಯ ಮೂರನೇ ಒಂದರಷ್ಟು, ಅಂದರೆ ಸುಮಾರು 200 ಕೋಟಿ ಜನರು, ಈ ಸೋಂಕಿಗೆ ತುತ್ತಾಗುವ ಸಂಭವವಿದೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ರಕ್ಷಣಾ ವಿಭಾಗದ ಮುಖ್ಯಸ್ಥರಾದ ಕೀಜಿ ಫುಕುಡಾ ಅವರ ಹೇಳಿಕೆ. ಆದರೆ, ಈ ಭಯಾನಕವಾದ ಊಹೆಗೆ ವೈಜ್ಞಾನಿಕ ಆಧಾರಗಳೇನು ಎನ್ನುವುದು ಸ್ಪಷ್ಟವಿಲ್ಲ. [ನೋಡಿ1; 2]. ಇನ್ ಫ್ಲುಯೆಂಜಾ ಎ (H1N1) ವಿರುದ್ಧ ಲಸಿಕೆಯನ್ನು ಹೊಸದಾಗಿ ಅಭಿವೃದ್ದಿಪಡಿಸಿ ನೂರರಿಂದ ಇನ್ನೂರು ಕೋಟಿಯಷ್ಟು ಸಂಖ್ಯೆಯಲ್ಲಿ ತಯಾರಿಸಬೇಕಾಗಬಹುದೆಂದು ಅದೇ ಫುಕುಡಾ ಅವರ ಇನ್ನೊಂದು ಅಂದಾಜು. [ನೋಡಿ1, 2]. ಮೊದಲು ಆಧಾರರಹಿತವಾದ ಊಹೆಗಳನ್ನು ತೇಲಿಬಿಟ್ಟು, ನಂತರ ಅವುಗಳ ಆಧಾರದಲ್ಲಿಯೇ ಅಗತ್ಯವಿರುವ ಲಸಿಕೆಗಳ ಪ್ರಮಾಣವೆಷ್ಟೆಂದು ಲೆಕ್ಕ ಹೇಳುವ ಪರಿಯನ್ನು ನೋಡುವಾಗ ಅದರ ಹಿಂದಿರಬಹುದಾದ ಉದ್ದೇಶಗಳ ಬಗ್ಗೆ ಸಂಶಯಗಳುಂಟಾಗುವುದು ಸಹಜವೇ ಆಗಿದೆ.
‘ಹಂದಿ ಜ್ವರ’ ಎಲ್ಲೆಲ್ಲಿದೆ?
ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ಮೆಕ್ಸಿಕೋ ದೇಶದಲ್ಲಿ ಕಂಡುಬಂದ ಈ ಸೋಂಕು ರೋಗವು (ಎಪ್ರಿಲ್ ನಲ್ಲಿ ಅದರ ವೈರಸ್ ಗುರುತಿಸಲ್ಪಟ್ಟಿತು), ಮೆಕ್ಸಿಕೋಗೆ ಭೇಟಿಯಿತ್ತ ಪ್ರವಾಸಿಗಳ ಮೂಲಕ ಈಗಾಗಲೇ ಅಮೆರಿಕಾ, ಕೆನಡಾ, ಸ್ಪೇನ್, ಇಂಗ್ಲೆಂಡ್, ನ್ಯೂಜಿಲೆಂಡ್, ಭಾರತ ಮುಂತಾದ 118 ರಾಷ್ಟ್ರಗಳ ನಾಗರಿಕರಿಗೆ ಹರಡಿದೆ. ಇದು ವಿಶ್ವವ್ಯಾಪಿ ಸೋಂಕಿನ ಆರಂಭವೆಂದು ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 11ರಂದು ಘೋಷಿಸಿದೆ. ಇದುವರೆಗೆ ಅಷ್ಟೊಂದು ತೀವ್ರವಾದ ಸೋಂಕನ್ನು ಈ ಹೊಸ ವೈರಸ್ ಉಂಟು ಮಾಡಿಲ್ಲದಿದ್ದರೂ ಮುಂದೆ ಅದು ಹೇಗೆ ವರ್ತಿಸಬಹುದೆನ್ನುವುದನ್ನು ಈಗಲೇ ಹೇಳಲಾಗದೆಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೆ, ಇದುವರೆಗಿನ ಬಹುತೇಕ ಪ್ರಕರಣಗಳು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದಾಗ ಪರಿಸ್ಥಿತಿಯು ಗಂಭೀರವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲವೆಂಬ ಭಯವನ್ನು ಈ ಪ್ರಕಟಣೆಯಲ್ಲಿ ವ್ಯಕ್ತಪಡಿಸಲಾಗಿದೆ.[ನೋಡಿ] ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಈ 'ಭಯೋತ್ಪಾದಕ' ಹೇಳಿಕೆಗೆ ಆಧಾರಗಳೇನು ಎನ್ನುವುದು ಸ್ಪಷ್ಟವಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜುಲೈ 1 ರ ವರೆಗೆ, 118 ದೇಶಗಳಲ್ಲಿ ಒಟ್ಟು 77201 ಪ್ರಕರಣಗಳು ದೃಢಪಟ್ಟಿದ್ದು, 332 ಜನ (ಮೆಕ್ಸಿಕೋದಲ್ಲಿ 116, ಅಮೆರಿಕಾದಲ್ಲಿ 127, ಕೆನಡಾದಲ್ಲಿ 25, ಅರ್ಜೆಂಟೀನಾದಲ್ಲಿ 26, ಚಿಲಿಯಲ್ಲಿ 12, ಕೊಲಂಬಿಯಾದಲ್ಲಿ 2, ಡೊಮಿನಿಕನ್ ಗಣರಾಜ್ಯದಲ್ಲಿ 2, ಆಸ್ಟ್ರೇಲಿಯಾದಲ್ಲಿ 7, ಕೋಸ್ತರಿಕಾದಲ್ಲಿ 2, ಗ್ವಾಟೆಮಾಲಾದಲ್ಲಿ 2, ಬ್ರಿಟನ್ ನಲ್ಲಿ 3, ಫಿಲಿಪ್ಪೀನ್ಸ್ ನಲ್ಲಿ 1, ಹೊಂಡುರಾಸ್ ನಲ್ಲಿ 1, ಉರುಗ್ವೇಯಲ್ಲಿ 1, ಸ್ಪೇನ್ ನಲ್ಲಿ 1, ಥೈಲ್ಯಾಂಡ್ ನಲ್ಲಿ 3, ಬ್ರೆಜಿಲ್ ನಲ್ಲಿ 1) ಅದರಿಂದಾಗಿ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಬಾಧಿತರಾಗಿರಬಹುದೆಂದು ಅಲ್ಲಿನ ಆರೋಗ್ಯ ತಜ್ಞರು ಅಂದಾಜಿಸಿದ್ದು, [ನೋಡಿ], ಇದುವರೆಗೆ ವರದಿಯಾಗಿರುವ ಪ್ರಕರಣಗಳು ಮಂಜುಗಡ್ಡೆಯ ತುದಿಯಂತೆ ಅತ್ಯಲ್ಪ ಮಾತ್ರ ಎನ್ನಲಾಗಿದೆ. ಹೀಗೆ, ಹತ್ತು ಲಕ್ಷಕ್ಕೂ ಮಿಕ್ಕಿರುವ ಸೋಂಕಿತರಲ್ಲಿ ಸತ್ತವರ ಸಂಖ್ಯೆಯು ಶೇ. 0.03 ರಷ್ಟಾಗುತ್ತದೆ. ಆದ್ದರಿಂದ, ಹಂದಿ ಜ್ವರವು ಈ ಮೊದಲು ಊಹಿಸಿದಷ್ಟು ಗಂಭೀರವಾಗಿಲ್ಲ ಎಂದು ಅಮೆರಿಕದ ಅಧಿಕಾರಿಗಳೀಗ ಒಪ್ಪಿಕೊಂಡಿದ್ದಾರೆ. [ನೋಡಿ].
ಹೊಸ ಇನ್ ಫ್ಲುಯೆಂಜಾ ಎ (H1N1) ಸೋಂಕಿನ ತೀವ್ರತೆಯು ಈ ಮೊದಲು ಅಂದಾಜಿಸಿದ್ದಷ್ಟು ಭೀಕರವಾಗಿಲ್ಲವೆನ್ನುವುದು ಇದೀಗ ಸ್ಪಷ್ಟವಾಗುತ್ತಿದೆ. ಅಮೆರಿಕಾದಲ್ಲಿ ಸತ್ತಿರುವ 99 ಜನರ ವಿವರಗಳನ್ನು ವಿಶ್ಲೇಷಿಸಿದಾಗ ಆ ಪೈಕಿ 87 ಜನ ಮೊದಲೇ ವಿವಿಧ ಅನಾರೋಗ್ಯಗಳಿಂದ ಬಾಧಿತರಾಗಿದ್ದರೆನ್ನುವುದು ಕಂಡುಬಂದಿದೆ. [ನೋಡಿ] ಅಮೆರಿಕದಲ್ಲಿ ಸೋಂಕಿನಿಂದ ಪೀಡಿತರಾದ ಹತ್ತು ಲಕ್ಷಕ್ಕೂ ಹೆಚ್ಚು ಜನರ ಪೈಕಿ, ಸುಮಾರು 3000ದಷ್ಟು ಜನ ತೀವ್ರ ಸ್ವರೂಪದ ತೊಂದರೆಗಳಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಆ ಪ್ರಮಾಣವು ಕೇವಲ ಶೇ.0.3 ರಷ್ಟಾಗುತ್ತದೆ. ಈ 'ಹೊಸ' ಫ್ಲೂ ಜ್ವರವು, ಅಮೆರಿಕಾದಲ್ಲಿ ಎಷ್ಟೋ ವರ್ಷಗಳಿಂದ ತಿರುಗಾಡುತ್ತಿರುವ ಸಾಮಾನ್ಯ ಫ್ಲೂ ಜ್ವರಕ್ಕಿಂತ ಹೆಚ್ಚು ಅಪಾಯಕಾರಿಯೇನಲ್ಲ ಎನ್ನುವುದನ್ನು ಅಮೆರಿಕಾದ ಅಧಿಕಾರಿಗಳು ಈ ಮೊದಲೇ ಒಪ್ಪಿದ್ದರು.[ನೋಡಿ] ಲ್ಯಾಟಿನ್ ಅಮೆರಿಕಾದಲ್ಲಿ ಸೋಂಕು ಹರಡುತ್ತಿದ್ದಂತೆ ಅದರ ತೀವ್ರತೆಯು ಕಡಿಮೆಯಾಗುತ್ತಿರುವುದು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲದಿರುವುದು ಕಂಡುಬರುತ್ತಿವೆ. [ನೋಡಿ]. ಯೂರೋಪಿನಲ್ಲಿಯೂ ಇನ್ ಫ್ಲುಯೆಂಜಾ ಎ (H1N1) ಸೋಂಕು ಅಷ್ಟೊಂದು ತ್ವರಿತವಾಗಿ ಹರಡುತ್ತಿಲ್ಲವೆಂದೂ, ರೋಗ ನಿಯಂತ್ರಣಕ್ಕಾಗಿ ಅಲ್ಲಿ ಕೈಗೊಳ್ಳಲಾಗಿರುವ ಕಟ್ಟುನಿಟ್ಟಿನ ಕ್ರಮಗಳೇ ಅದಕ್ಕೆ ಕಾರಣವೆಂದೂ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿಕೊಂಡಿದೆ. [ನೋಡಿ].
ವಿಶ್ವ ಆರೋಗ್ಯ ಸಂಸ್ಥೆಯ ದೈನಿಕ ವರದಿಗಳು ಹೀಗಿವೆ:[ನೋಡಿ]
ಭಾರತದಲ್ಲಿ ಇನ್ ಫ್ಲುಯೆಂಜಾ ಎ (H1N1)
ಈವರೆಗೆ ಭಾರತದಲ್ಲಿ 769 ಫ್ಲೂ ಶಂಕಿತರಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, 112 ಇನ್ ಫ್ಲುಯೆಂಜಾ ಎ (H1N1) ಪ್ರಕರಣಗಳನ್ನು ದೃಢಪಡಿಸಲಾಗಿದೆ. [ನೋಡಿ] ಸೋಂಕು ದೃಢಪಟ್ಟಿರುವ 112 ರಲ್ಲಿ 102 ಮಂದಿ ವಿದೇಶಗಳಿಂದ ಭಾರತಕ್ಕೆ ಬಂದವರಾಗಿದ್ದರೆ, ದೆಹಲಿಯಲ್ಲಿ ಏಳು ಮತ್ತು ಹೈದರಾಬಾದ್, ಗುರುದಾಸಪುರ ಹಾಗೂ ಗುರ್ಗಾಂವ್ ಗಳಲ್ಲಿ ತಲಾ ಒಬ್ಬರು ಸಂಬಂಧಿಗಳಿಗೆ ಸೋಂಕು ಹರಡಿರುವುದು ಪತ್ತೆಯಾಗಿದೆ.
'ಪ್ರತಿಷ್ಠಿತ ಉದ್ಯಮಿಗಳ' ಕುಟುಂಬಕ್ಕೆ ಸೇರಿರುವ ಈ ತಾಯಿ-ಮಗ ಆಸ್ಪತ್ರೆಗೆ ದಾಖಲಾಗಲು ಒಪ್ಪದೆ ತಮ್ಮ ಮನೆಯೊಳಗೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರೆಂದೂ, ಆಸ್ಪತ್ರೆಗೆ ದಾಖಲಾಗುವಂತೆ ಅವರ 'ಮನವೊಲಿಸಲಾಗಿದೆಯೆಂದೂ' ವರದಿಯಾಗಿತ್ತು! (ಸೋಂಕು ರೋಗ ನಿಯಂತ್ರಣದಲ್ಲೂ ವಶೀಲಿ!!) [ನೋಡಿ 1,2] ಆದರೆ ಅವರಿಬ್ಬರೂ ಅದೇ ದಿನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ತಮ್ಮ ಮನೆಗೆ ಮರಳಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ, 1897ರಡಿಯಲ್ಲಿ ಪೋಲೀಸರ ನೆರವನ್ನು ಪಡೆದು ಮತ್ತೆ ಅವರನ್ನು ಆಸ್ಪತ್ರೆಗೆ ತರಲಾಗಿದೆಯಂತೆ!![ಜೂನ್ 12ರ ದಿ ಹಿಂದೂ ವರದಿ, [ಜೂನ್ 13ರ ದಿ ಹಿಂದೂ ವರದಿ] ಹೈದರಾಬಾದಿನಲ್ಲಿ ಗುರುತಿಸಲ್ಪಟ್ಟಿರುವ ಐದು ಪ್ರಕರಣಗಳು ಮೇ 31ರಂದು ಫಿಲಡೆಲ್ಫಿಯಾದಿಂದ ಹೈದರಾಬಾದಿಗೆ ಬಂದ ಬ್ರಿಟಿಷ್ ಏರ್ ವೇಸ್ ನ ವಿಮಾನ ಬಿಎ 227 ರಲ್ಲಿ ಪ್ರಯಾಣಿಸಿದ್ದ ನಾಲ್ವರು ಹಾಗೂ ಅವರಲ್ಲೊಬ್ಬರಿಂದ ಸ್ಥಳೀಯವಾಗಿ ಹರಡಿದವುಗಳಾಗಿವೆ. [ನೋಡಿ1, 2] (ವಿವರಗಳು ಕೆಳಗಿವೆ) ಸೋಂಕು ತಗಲಿದವರನ್ನು, ಅವರ ನಿಕಟ ಸಂಪರ್ಕಕ್ಕೆ ಬಂದಿದ್ದವರನ್ನು ಹಾಗೂ ಸೋಂಕಿನ ಶಂಕೆಯುಳ್ಳವರನ್ನು ಪ್ರತ್ಯೇಕಿಸಿ ಅವರಿಗೆ ಟಾಮಿಫ್ಲು ನೀಡಲಾಗುತ್ತಿದೆಯೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. [ಜೂನ್ 8ರ ದಿ ಟೈಂಸ್ ಆಫ್ ಇಂಡಿಯಾ ವರದಿ] ದೇಶದಲ್ಲಿ ಇನ್ನೂ ಹದಿನಾರು ಪ್ರಯೋಗಾಲಯಗಳಲ್ಲಿ ರೋಗಪತ್ತೆಗೆ ವ್ಯವಸ್ಥೆಯನ್ನು ಕಲ್ಪಿಸುವುದಾಗಿಯೂ, ಟಾಮಿಫ್ಲು ವನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿರುವುದಾಗಿಯೂ ಕೇಂದ್ರ ಆರೋಗ್ಯ ಸಚಿವರು ಅಭಯ ನೀಡಿದ್ದಾರೆ. [ಜೂನ್ 9ರ ದಿ ಹಿಂದೂ ವರದಿ]
ನ್ಯೂಜೆರ್ಸಿಯಿಂದ ಬೆಂಗಳೂರಿಗೆ ಬಂದ ತಾಯಿ ಹಾಗೂ ಮಗುವಿನಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಇನ್ ಫ್ಲುಯೆಂಜಾ ಎ (H1N1) ಕರ್ನಾಟಕವನ್ನು ಪ್ರವೇಶಿಸಿದೆ. ಬೆಂಗಳೂರಿನಿಂದ ವರದಿಯಾಗಿರುವ ಪ್ರಕರಣಗಳ ಒಟ್ಟು ಸಂಖ್ಯೆ ಈಗ ಹದಿನೇಳನ್ನು ತಲುಪಿದೆ.
ಇದುವರೆಗೆ ನಮ್ಮ ದೇಶದಲ್ಲಿ ದೃಢಪಟ್ಟಿರುವ ಇನ್ ಫ್ಲುಯೆಂಜಾ ಎ (H1N1) ಪ್ರಕರಣಗಳು ಹೀಗಿವೆ:
ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ:
ಹಂದಿ ಜ್ವರ ರೋಗ ಹರಡುವುದು ಹೇಗೆ?
ಮೊದಲಲ್ಲಿ ಹಂದಿಗಳ ನಿಕಟ ಸಂಪರ್ಕಕ್ಕೆ ಬಂದ ಮನುಷ್ಯರಿಗೆ (ಹಂದಿ ಸಾಕಣೆಯ ಕೆಲಸಗಾರರಿರಬಹುದು) ಹರಡಿದ ಹೊಸ ಇನ್ ಫ್ಲುಯೆಂಜಾ ರೋಗವು, ಈಗ ರೋಗ ಪೀಡಿತರಾದ ಮನುಷ್ಯರಿಂದ ಇತರರಿಗೆ ಹರಡುತ್ತಿದೆ. ಈ ವರೆಗೆ ವರದಿಯಾದ ಪ್ರಕರಣಗಳನ್ನು ಗಮನಿಸಿದರೆ, ಈ ಹೊಸ ಸೋಂಕು ಸಾಕಷ್ಟು ತ್ವರಿತವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿರುವುದು ಕಂಡುಬರುತ್ತದೆ.
ರೋಗಿಯ ಕೆಮ್ಮು ಯಾ ಸೀನಿನ ಮೂಲಕ ಇನ್ ಫ್ಲುಯೆಂಜಾ ವೈರಸ್ ಇತರರಿಗೆ ಹರಡುತ್ತದೆ. ಕೆಮ್ಮು ಯಾ ಸೀನಿನ ಮೂಲಕ ವೈರಸ್ ಸಿಂಪಡಣೆಗೊಂಡ ಜಾಗಗಳನ್ನು ಮುಟ್ಟಿ ಅದೇ ಬೆರಳುಗಳಿಂದ ಮುಖ ಯಾ ಕಣ್ಣುಗಳನ್ನು ಒರೆಸಿಕೊಳ್ಳುವುದರಿಂದಲೂ ರೋಗವು ಹರಡಬಹುದು. ಸೋಂಕಿನ ಲಕ್ಷಣಗಳು ಕಂಡುಬಂದ ಒಂದರಿಂದ ಏಳು ದಿನಗಳವರೆಗೆ ಅದು ಇತರರಿಗೆ ಹರಡಬಹುದು.
ರೋಗ ಲಕ್ಷಣಗಳೇನು?
ಹೊಸ ಇನ್ ಫ್ಲುಯೆಂಜಾ ಎ (H1N1) ಸೋಂಕು, ಸಾಮಾನ್ಯವಾಗಿ ಕಂಡುಬರುವ ಫ್ಲೂ ಜ್ವರದ ಲಕ್ಷಣಗಳನ್ನೇ ಹೊಂದಿರುತ್ತದೆ. ಜ್ವರ, ಮೈಕೈ ನೋವು, ತಲೆ ನೋವು, ಗಂಟಲು ನೋವು, ಕೆಮ್ಮು ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿದ್ದು, ವಾಂತಿ, ಬೇಧಿ, ನ್ಯುಮೋನಿಯಾ ಇತ್ಯಾದಿ ತೊಂದರೆಗಳು ಅಪರೂಪದಲ್ಲಿ ಉಂಟಾಗಬಹುದು.
ಇನ್ ಫ್ಲುಯೆಂಜಾ ಎ (H1N1) ಗೆ ಚಿಕಿತ್ಸೆ ಇದೆಯೇ?
ಹೆಚ್ಚಿನ ರೋಗಿಗಳಲ್ಲಿ ಇನ್ ಫ್ಲುಯೆಂಜಾ ತನ್ನಿಂತಾನಾಗಿ, ಯಾವುದೇ ಚಿಕಿತ್ಸೆಯಿಲ್ಲದೆಯೇ, ಗುಣ ಹೊಂದುತ್ತದೆ.
ಒಸೆಲ್ಟಾಮಿವಿರ್ (ಅದೇ, ರಮ್ಸ್ ಫೆಲ್ಡನ ಗಿಲಿಯಡ್ ಕಂಪೆನಿಯ ಟಾಮಿಫ್ಲು) ಮತ್ತು ಜನಾಮಿವಿರ್ (ಇನ್ನೊಂದು ದೈತ್ಯ ಕಂಪೆನಿ ಗ್ಲಾಕ್ಸೋದ ರೆಲೆಂಜಾ) ಎಂಬ ಹೊಸ ಔಷಧಗಳು ರೋಗದ ತೀವ್ರತೆಯನ್ನು ಕಡಿಮೆ ಮಾಡಿ (5-7 ದಿನಗಳ ಜ್ವರವನ್ನು 4-6 ದಿನಗಳಿಗೆ ಇಳಿಸಿ), ಅಪರೂಪಕ್ಕೊಮ್ಮೆ ಅದರಿಂದಾಗಬಹುದಾದ ಸಮಸ್ಯೆಗಳನ್ನು ತಡೆಯಬಲ್ಲವೆಂದು ಹೇಳಲಾಗುತ್ತಿದೆ. ಆದರೆ ಈ ಹೊಸ ವೈರಸ್ ಕೂಡಾ ಟಾಮಿಫ್ಲುವಿಗೆ ರೋಧ ಶಕ್ತಿಯನ್ನು ಅದಾಗಲೇ ಬೆಳೆಸಿಕೊಂಡಿರುವುದಾಗಿ ಡೆನ್ಮಾರ್ಕ್ ನಿಂದ ವರದಿಯಾಗಿದೆ. [ನೋಡಿ]
ನಿರೀಕ್ಷೆಯಂತೆ, ಹೊಸ ಇನ್ ಫ್ಲುಯೆಂಜಾ ಸೋಂಕಿಗೆ ಟಾಮಿಫ್ಲು ಬಳಸುವ ಬಗ್ಗೆ ಸಾಕಷ್ಟು ವಿರೋಧಾಭಾಸವುಳ್ಳ ಸಲಹೆಗಳು ಹೊರಬರುತ್ತಿವೆ! ಇನ್ ಫ್ಲುಯೆಂಜಾದಿಂದ ಗಂಭೀರವಾದ ಸಮಸ್ಯೆಗಳುಂಟಾಗುವ ಅಪಾಯವು ಹೆಚ್ಚಿರುವವರಲ್ಲಿ ಮಾತ್ರವೇ ಈ ಔಷಧಗಳನ್ನು ಬಳಸಬೇಕೆಂದೂ, ಅನಗತ್ಯವಾಗಿ ಇವನ್ನು ಅತಿಬಳಕೆ ಮಾಡಬಾರದೆಂದೂ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯಾದ ನಿಕ್ಕಿ ಶಿಂಡೋ ಅವರು ಮೇ 12ರಂದು ಹೇಳಿದ್ದರು ಹಾಗೂ ಅಮೆರಿಕಾದ ಸಿ.ಡಿ.ಸಿ ಕೂಡಾ ಇದೇ ಸಲಹೆಯನ್ನು ನೀಡಿದೆಯೆಂದು ವರದಿಯಾಗಿತ್ತು. [ನೋಡಿ 1, 2, 3, 4] ಅನೇಕರಲ್ಲಿ ರೋಗವು ಯಾವುದೇ ಔಷಧಗಳಿಲ್ಲದೆಯೇ ತನ್ನಿಂತಾನೇ ಗುಣ ಹೊಂದಿರುವುದಾಗಿಯೂ, ಒಸೆಲ್ಟಾಮಿವಿರ್ ನಂತಹ ಔಷಧಗಳು ರೋಗ ಲಕ್ಷಣಗಳ ಕಾಲಾವಧಿಯನ್ನು ಬಹುಷಃ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು (ಖಾತರಿಯಿಲ್ಲ!) ಎಂಬುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದರೆ [ನೋಡಿ], ಸೋಂಕಿನಿಂದಾಗಿ ಅಥವಾ ಅದರ ಶಂಕೆಯಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾದವರಿಗೂ, ತೀವ್ರತೆರನಾದ ಸೋಂಕಿನ ಅಪಾಯವುಳ್ಳವರಿಗೂ ಅದನ್ನು ನೀಡಬೇಕೆಂದು ಸಿ.ಡಿ.ಸಿ. ಹೇಳುತ್ತದೆ.[ನೋಡಿ] ರೋಗ ತಗಲಿದವರಲ್ಲೇ ಯಾವುದೇ ಪ್ರಯೋಜನಗಳ ಖಾತರಿಯಿಲ್ಲದ ಈ ಔಷಧಗಳನ್ನು 'ರೋಗವನ್ನು ತಡೆಯುವುದಕ್ಕಾಗಿ ಆರು ವಾರಗಳ ಕಾಲ ಬಳಸಬೇಕೆಂದು' ಸಿ.ಡಿ.ಸಿ. ಸಲಹೆ ನೀಡುತ್ತದೆ! (ಈ ಔಷಧಗಳ ಬಳಕೆಯಿಂದ ಇನ್ ಫ್ಲುಯೆಂಜಾ ಸೋಂಕನ್ನು ತಡೆಯುವುದಕ್ಕೆ ಸಾಧ್ಯವಿದೆಯೆಂದು ಇವುಗಳನ್ನು ತಯಾರಿಸುವ ಕಂಪೆನಿಗಳ ನೆರವಿನಿಂದ ನಡೆಸಲಾದ 'ಅಧ್ಯಯನಗಳು' ತೋರಿಸಿವೆ!! [ನೋಡಿ 1,2,3]; ಆದರೆ ಈ ಯಾವುದೇ ಅಧ್ಯಯನಗಳನ್ನು ಹೊಸ ಇನ್ ಫ್ಲುಯೆಂಜಾ ಎ (H1N1) ವೈರಸ್ ಬಗ್ಗೆ ನಡೆಸಿಲ್ಲ ಎನ್ನುವುದನ್ನು ಗಮನಿಸಿ) ಈ ಔಷಧಗಳ ಬಳಕೆಯಿಂದ ವೈರಸ್ ತನ್ನ ರೂಪವನ್ನು ಬದಲಿಸುವ ಸಾಧ್ಯತೆ ಹೆಚ್ಚುವುದೆಂದೂ, ಈ ಔಷಧಗಳಿಗೆ ಇನ್ ಫ್ಲುಯೆಂಜಾ ವೈರಸ್ ಪ್ರತಿರೋಧವನ್ನು ಬೆಳೆಸಿಕೊಂಡಿರುವ ಬಗ್ಗೆಯೂ ಈ ಮೊದಲು ವರದಿಯಾಗಿತ್ತು.
ಇನ್ನೊಂದು ಔಷಧವಾದ ರೆಲೆಂಜಾವನ್ನು ಟಾಮಿಫ್ಲು ವಿನಷ್ಟು ಭರಾಟೆಯಿಂದ ಮಾರಾಟ ಮಾಡಲು ಅದನ್ನು ತಯಾರಿಸುತ್ತಿರುವ ಗ್ಲಾಕ್ಸೋ ಸ್ಮಿತ್ ಕ್ಲೀನ್ (ಜಿಎಸ್ಕೆ) ಕಂಪೆನಿಯು ಅಷ್ಟೊಂದು ಮುತುವರ್ಜಿ ವಹಿಸುತ್ತಿಲ್ಲವೆಂದು ರೆಲೆಂಜಾವನ್ನು ಅಭಿವೃದ್ಧಿಪಡಿಸಿದ ಬಯೋಟಾ ಕಂಪೆನಿಯ ವಿಜ್ಞಾನಿಗಳು ಬೇಸರಿಸಿಕೊಂಡಿದ್ದಾರಂತೆ. [ನೋಡಿ] ಇನ್ನೊಂದೆಡೆ, ಈ ಔಷಧವನ್ನು ತನ್ನದೇ ಸಿಬ್ಬಂದಿಗೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸುವುದಕ್ಕೆ ಜಿಎಸ್ಕೆಯು ಹಿಂದೇಟು ಹಾಕಿರುವ ಬಗ್ಗೆಯೂ ವರದಿಯಾಗಿದೆ.[ನೋಡಿ]
ಈ ನಡುವೆ, ಮಹಾದಾನಿಯಾದ ಬಿಲ್ ಗೇಟ್ಸ್ ಇನ್ ಫ್ಲುಯೆಂಜಾ ಎ (H1N1) ಬಗ್ಗೆ ’ಚರ್ಚಿಸಲು’ ಜೂನ್ 9ರಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳೊಂದಿಗೆ ಗುಪ್ತ ಸಭೆಯೊಂದನ್ನು ನಡೆಸಿದ ಬಗ್ಗೆ ವರದಿಯಾಗಿದೆ. [ನೋಡಿ] ಟಾಮಿಫ್ಲು ತಯಾರಿಸುವ ರೋಷ್ ಹಾಗೂ ರೆಲೆಂಜಾವನ್ನು ತಯಾರಿಸುವ ಜಿಎಸ್ಕೆ ಕಂಪೆನಿಗಳೆರಡಕ್ಕೂ ಬಿಲ್ ಗೇಟ್ಸ್ ದತ್ತಿ ನಿಧಿಯಿಂದ ಇದಕ್ಕೆ ಮೊದಲು ಅನ್ಯ ಸಂಶೋಧನೆಗಳಿಗಾಗಿ ’ದಾನಗಳನ್ನು’ನೀಡಲಾಗಿತ್ತು. [ನೋಡಿ] ಅಂತೂ ಹಂದಿ ಜ್ವರದ ಕಥೆಯಲ್ಲಿ ಸಾಕಷ್ಟು ಮಸಾಲೆಯಿರುವುದು ವ್ಯಕ್ತವಾಗುತ್ತಿದೆ!
ಒಟ್ಟಿನಲ್ಲಿ, ಸಾಕಷ್ಟು ಬಲವಾದ ಆಧಾರಗಳೇನೂ ಇಲ್ಲದೆ, ಹೊಸ ಇನ್ ಫ್ಲುಯೆಂಜಾ ಎ (H1N1) ಸೋಂಕಿಗೆ ಚಿಕಿತ್ಸೆ ಹಾಗೂ 'ತಡೆಗಟ್ಟುವ' ನೆಪದಲ್ಲಿ ಈ ಔಷಧಗಳನ್ನು ಖರೀದಿಸಿ ದಾಸ್ತಾನು ಮಾಡುವಂತೆ ಜಗತ್ತಿನಾದ್ಯಂತದ ಸರಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆಯೆನ್ನುವುದರಲ್ಲಿ ಸಂದೇಹವಿಲ್ಲ.
ಇನ್ನೊಂದೆಡೆ, ಬೆಂಗಳೂರಿನಂತಹಾ ನಗರಗಳಲ್ಲಿರುವ ಖಾಸಗಿ ಔಷಧದ ಅಂಗಡಿಗಳಲ್ಲಿ, ವೈದ್ಯರ ಚೀಟಿಯಿಲ್ಲದೆಯೂ ಕೇಳಿದವರಿಗೆಲ್ಲ ಈ ಔಷಧಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿರುವ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿಯಾಗಿದೆ. [ನೋಡಿ]. ಇನ್ ಫ್ಲುಯೆಂಜಾ ಎ (H1N1) ಬಗ್ಗೆ ಅಬ್ಬರದ ಪ್ರಚಾರದಿಂದಾಗಿ, ಟಾಮಿಫ್ಲು ಮತ್ತು ರೆಲೆಂಜಾಗಳ ವಹಿವಾಟು ಭರ್ಜರಿಯಾಗಿ ನಡೆದಿದ್ದು, ಅವುಗಳನ್ನು ತಯಾರಿಸುವ ಕಂಪೆನಿಗಳ ಲಾಭವೂ, ಅವುಗಳ ಶೇರುಗಳ ಮೌಲ್ಯಗಳೂ ಆಗಸಕ್ಕೆ ಜಿಗಿದಿವೆ. [ನೋಡಿ1; 2] ಈ ಹಿಂದೆ ಹಕ್ಕಿಜ್ವರದ ಭೀತಿಯನ್ನು ಹರಡಿದ್ದಾಗಲೂ ಹೀಗೆಯೇ ಆಗಿತ್ತು. [ನೋಡಿ1; 2]. 'ಹಂದಿ ಜ್ವರದ' ಹೆಸರಿನಲ್ಲಿ ಇನ್ನಷ್ಟು ಹೊಸ ಔಷಧಗಳು ಹಾಗೂ ಲಸಿಕೆಗಳ ತಯಾರಿಗೆ ಈಗಾಗಲೇ ಭರದಿಂದ ರಂಗಸಜ್ಜಿಕೆಯಾಗುತ್ತಿದೆ.[ನೋಡಿ]
ಆದರೆ, ಯಾವುದೇ ಔಷಧಗಳಿಲ್ಲದೆಯೇ ಹೆಚ್ಚಿನವರಲ್ಲಿ ರೋಗವು ವಾಸಿಯಾಗುವುದರಿಂದ ಅವನ್ನು ತಿನ್ನಲು ಯಾರೂ ಹಂಬಲಿಸಬೇಕಿಲ್ಲ, ದುಬಾರಿ ಬೆಲೆ ತೆತ್ತು ಖಾಸಗಿಯಾಗಿ ಸಂಗ್ರಹಿಸಿಕೊಳ್ಳಬೇಕಿಲ್ಲ.
ಬದಲಿ ಚಿಕಿತ್ಸೆ ಬಂದಿದೆ!
ಹಂದಿ ಜ್ವರವೆಂಬ ಕಾಹಿಲೆಯ ಬಗ್ಗೆ ಘೋಷಣೆಯಾದದ್ದೇ ತಡ, ಬದಲಿ ಚಿಕಿತ್ಸಾ ತಜ್ಞರು ಅದಕ್ಕೆ 'ಅತ್ಯಂತ ಪರಿಣಾಮಕಾರಿಯಾದ' ಚಿಕಿತ್ಸೆಯನ್ನು ಕಂಡುಹಿಡಿದು ಬಿಟ್ಟಿದ್ದಾರೆ! ಆ ಮೂಲಕ ಏಪ್ರಿಲ್ 28ರ ನನ್ನ ಭವಿಷ್ಯವಾಣಿಯನ್ನು ನಿಜವಾಗಿಸಿದ್ದಾರೆ!!
ಹೋಮಿಯೋಪತಿಯಲ್ಲಿ ಯುಪಟೋರಿಯಂ, ಆರ್ಸೆನಿಕಂ, ಬ್ರಯೋನಿಯ, ಜೆಲ್ಸಿಮಿಯಂ, ಕಾಂಫೊರಾ, ಅಕೊನೈಟ್, ನಕ್ಸ್ ವೊಮಿಕಾ, ಫಾಸ್ಫರಿಕಂ, ಚೈನಾ, ಟುಬರ್ಕುಲಿನಂ, ಬಾಪ್ಟಿಸಿಯಾ, ಸಬದಿಲ್ಲ, ರಸ್ ಇತ್ಯಾದಿಗಳೆಲ್ಲ ಉಪಯುಕ್ತವೆಂದು ಹೇಳಲಾಗಿದೆ. [1, 2, 3](ಈ ಪೈಕಿ ಯುಪಟೋರಿಯಂ, ಆರ್ಸೆನಿಕಂ, ಬ್ರಯೋನಿಯ, ಜೆಲ್ಸಿಮಿಯಂ, ಕಾಂಫೊರಾ, ಅಕೊನೈಟ್, ನಕ್ಸ್ ವೊಮಿಕಾ, ಫಾಸ್ಫರಿಕಂ, ಚೈನಾ, ಟುಬರ್ಕುಲಿನಂ, ರಸ್ ಇತ್ಯಾದಿಗಳು ಚಿಕುಂಗುನ್ಯಾ ಚಿಕಿತ್ಸೆಯಲ್ಲೂ ಪರಿಣಾಮಕಾರಿ ಎಂದು ಹೇಳಲಾಗಿತ್ತು! ನೋಡಿ) ಸೋಂಕು ಹೊಸದಾದರೇನಂತೆ, ಹೋಮಿಯೋಪತಿ ಸದಾ ಸಿದ್ಧ!!
ಹಂದಿಜ್ವರಕ್ಕೆ ಚಿಕಿತ್ಸೆಯನ್ನು ಸೂಚಿಸುವಲ್ಲಿ ಆಯುರ್ವೇದ ತಜ್ಞರೂ ಹಿಂದೆ ಬಿದ್ದಿಲ್ಲ. [ನೋಡಿ 1, 2]
ಇನ್ ಫ್ಲುಯೆಂಜಾ ಎ (H1N1) ತಡೆಯುವುದು ಹೇಗೆ?
ಇನ್ ಫ್ಲುಯೆಂಜಾ ಎ (H1N1) ಹರಡಿರುವ ದೇಶಗಳಿಂದ ಮರಳಿದವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ ಅವರನ್ನು ಪ್ರತ್ಯೇಕಿಸಿ, ರೋಗವು ವಾಸಿಯಾಗುವವರೆಗೆ ನಿಗಾ ವಹಿಸಬೇಕು ಮತ್ತು ಅಗತ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಯಾರಿಗಾದರೂ ಇನ್ ಫ್ಲುಯೆಂಜಾ ಎ (H1N1) ಸೋಂಕು ತಗಲಿದ ಬಗ್ಗೆ ಶಂಕೆಯಿದ್ದರೆ ರಾಷ್ಟ್ರೀಯ ಸೋಂಕು ರೋಗ ಅಧ್ಯಯನ ಸಂಸ್ಥೆಯ ದೂರವಾಣಿ (011-23921401) ಗೆ ಕರೆಮಾಡಿ ತಕ್ಷಣವೇ ಮಾಹಿತಿಯನ್ನು ನೀಡಬೇಕೆಂದು ಕೇಂದ್ರ ಆರೋಗ್ಯ ಇಲಾಖೆಯ ವತಿಯಿಂದ ಕೋರಲಾಗಿದೆ.
ಚಿತ್ರ: 'ಹಂದಿ ಜ್ವರ'ದಿಂದ ರಕ್ಷಿಸಿಕೊಳ್ಳಲೆಂದು ಕಂಪೆನಿಯೊಂದು ಮಾರುತ್ತಿರುವ ಮುಖ ಕವಚ!
ಸೋಂಕು ತಗಲಿರಬಹುದಾದ ರೋಗಿಗಳಿಂದ ದೂರವಿರುವುದು, ಕೈಗಳನ್ನು ಚೆನ್ನಾಗಿ ತೊಳೆಯುವುದು, ಮುಖ ಹಾಗೂ ಕಣ್ಣುಗಳನ್ನು ಅಶುದ್ಧವಾದ ಕೈಗಳಿಂದ ಒರೆಸದಿರುವುದು ಇವೇ ಮೊದಲಾದ ಸರಳ ಕ್ರಮಗಳಿಂದ ಸೋಂಕನ್ನು ತಡೆಯಬಹುದು. ಆದರೆ, ಇನ್ ಫ್ಲುಯೆಂಜಾ ಎ (H1N1) ಸೋಂಕನ್ನು ತಡೆಯುವ ಬಗ್ಗೆ ಭಾರತೀಯ ವೈದ್ಯಕೀಯ ಸಂಘವು ಡೆಟ್ಟಾಲ್ ಜೊತೆಗೂಡಿ ಹೊರಡಿಸಿರುವ ಜಾಹೀರಾತು ಹುಬ್ಬೇರುವಂತೆ ಮಾಡಿದೆ. [ ನೋಡಿ] ಇನ್ ಫ್ಲುಯೆಂಜಾ ಎ (H1N1)ದಿಂದ ರಕ್ಷಿಸಿಕೊಳ್ಳುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಮಾಹಿತಿಯಲ್ಲಿ ಸಾಬೂನು ಹಾಗೂ ಆಲ್ಕೋಹಾಲ್ (ಸ್ಪಿರಿಟ್) ಗಳನ್ನು ಬಳಸುವ ಬಗ್ಗೆ ಹೇಳಲಾಗಿದ್ದು ಡೆಟ್ಟಾಲ್ ನಂತಹಾ ಕ್ರಿಮಿನಾಶಕಗಳ ಪ್ರಯೋಜನಗಳ ಬಗ್ಗೆ ಏನನ್ನೂ ಹೇಳಲಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ.[ ನೋಡಿ]
ವೈಟಮಿನ್ ಡಿ ಹಾಗೂ ವೈಟಮಿನ್ ಸಿ ಯಥೇಷ್ಟವಾಗಿರುವ ಮೀನು, ಮೊಟ್ಟೆ, ನೆಲ್ಲಿ, ಲಿಂಬೆ, ಸೊಪ್ಪು ಹಾಗೂ ತರಕಾರಿಗಳನ್ನು ಒಳಗೊಂಡ ಒಳ್ಳೆಯ ಆಹಾರ, ಪ್ರತಿದಿನ 30-45 ನಿಮಿಷಗಳ ಸರಳ ವ್ಯಾಯಾಮ ಮತ್ತು ನಿದ್ದೆಗಳಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಹೊಸ ಇನ್ ಫ್ಲುಯೆಂಜಾ ಎ (H1N1) ವಿರುದ್ಧ ಲಸಿಕೆಯು ಲಭ್ಯವಿಲ್ಲ. ಇನ್ ಫ್ಲುಯೆಂಜಾ ವೈರಸ್ ಪದೇ ಪದೇ ತನ್ನ ರೂಪವನ್ನು ಬದಲಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಅದರ ವಿರುದ್ಧ ಯಾವುದೇ ಲಸಿಕೆಯನ್ನು ಬಳಸಿದರೂ ಪ್ರಯೋಜನವು ತಾತ್ಕಾಲಿಕ ಅಥವಾ ಸೊನ್ನೆ, ಅಷ್ಟೇ. ಈಗ ಲಭ್ಯವಿರುವ ಇನ್ ಫ್ಲುಯೆಂಜಾ ಲಸಿಕೆಯು ಇನ್ ಫ್ಲುಯೆಂಜಾ ಎ (H1N1), ಇನ್ ಫ್ಲುಯೆಂಜಾ ಎ (H3N2) ಮತ್ತು ಇನ್ ಫ್ಲುಯೆಂಜಾ ಬಿ ವೈರಸ್ ಗಳ ವಿರುದ್ಧ ಪರಿಣಾಮಕಾರಿಯಾಗಿದ್ದರೂ, ಹೊಸದಾಗಿ ಗೋಚರಿಸಿರುವ ಇನ್ ಫ್ಲುಯೆಂಜಾ ಎ (H1N1) ವಿರುದ್ಧ ಅದು ನಿಷ್ಪ್ರಯೋಜಕವೆಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಹಾಗಾಗಿ, ಲಕ್ಷಗಟ್ಟಲೆ ಜನ ಹೊಸ ಲಸಿಕೆ ಚುಚ್ಚಿಸಿಕೊಂಡ ಕೆಲ ಸಮಯದಲ್ಲೇ ಹೊಸ ರೂಪದಲ್ಲಿ ಇನ್ ಫ್ಲುಯೆಂಜಾ ವೈರಾಣು ಮತ್ತೆ ಪ್ರತ್ಯಕ್ಷ! ಮತ್ತೆ ಹೊಸ ಲಸಿಕೆ! ಹೊಸ ಫ್ಯಾಷನ್ ಶುರುವಾದಾಗ ಹಳೆ ಅಂಗಿ ವ್ಯರ್ಥವಾದಂತೆ! ಇನ್ ಫ್ಲುಯೆಂಜಾ ಎ (H1N1) ವಿರುದ್ಧ ಇನ್ನೊಂದು ಹೊಸ ಲಸಿಕೆಯನ್ನು ಶೀಘ್ರದಲ್ಲಿಯೇ ಸಿದ್ಧಪಡಿಸಲು ಯತ್ನಿಸಲಾಗುವುದೆಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಹೊಸ ಇನ್ ಫ್ಲುಯೆಂಜಾ ಎ (H1N1) ಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆಯೆಂದು ನೊವಾರ್ಟಿಸ್ ಕಂಪೆನಿಯು ಜೂನ್ 12ರಂದು ಘೋಷಿಸಿದೆ. [ನೋಡಿ] ಲಸಿಕೆಯ ಸ್ಪರ್ಧೆಯು ತುರುಸಾಗುವಂತೆ ಕಾಣುತ್ತಿದ್ದು, ಸೆಪ್ಟೆಂಬರ್ ವೇಳೆಗೆ ಹೊಸ ಇನ್ ಫ್ಲುಯೆಂಜಾ ಎ (H1N1) ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆಯೆಂದು ಚೀನಾ ಘೋಷಿಸಿದೆ![ನೋಡಿ] ತಾನು ಅಭಿವೃದ್ಧಿ ಪಡಿಸಲಿರುವ ಲಸಿಕೆಯಲ್ಲಿ ಶೇ.10ರಷ್ಟನ್ನು (ಅಂದರೆ 10 ಕೋಟಿಯಷ್ಟನ್ನು) ವಿಶ್ವ ಆರೋಗ್ಯ ಸಂಸ್ಥೆಗೆ ದಾನ ನೀಡುವುದಾಗಿ ಸಾನೊಫಿ ಘೋಷಿಸಿದೆ.[ನೋಡಿ] ಲಸಿಕೆ ತಯಾರಿಗಾಗಿ ಹೊಸ ಇನ್ ಫ್ಲುಯೆಂಜಾ ಎ (H1N1) ತಳಿಯನ್ನು ಭಾರತದ ಕಂಪೆನಿಗಳಿಗೂ ನೀಡಬೇಕೆಂದು ನಮ್ಮ ಸರಕಾರವು ವಿಶ್ವ ಆರೋಗ್ಯ ಸಂಸ್ಥೆಯನ್ನು ಕೇಳಿದೆ. ಆದರೆ ಇಂತಹಾ ಎಲ್ಲಾ ಲಸಿಕೆಗಳು ವ್ಯಾಪಕವಾಗಿ ಬಳಕೆಗೆ ಬರುವಂತಾಗಲು ವರ್ಷಗಳೇ ಬೇಕು, ಬಂದರೂ ಎಲ್ಲರ ಕೈಗೆಟಕದು; ನಾವದನ್ನು ನಂಬಿ ಕಾಯುತ್ತಾ ಕೂರುವ ಅಗತ್ಯವೂ ಇಲ್ಲ.
ಹಾಗಿದ್ದರೂ, ಸರಕಾರಗಳು ದೈತ್ಯ ಕಂಪೆನಿಗಳ ಜೇಬು ತುಂಬಿಸುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಹೊಸ ಇನ್ ಫ್ಲುಯೆಂಜಾ ಎ (H1N1) ಗೆ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಬ್ರಿಟಿಷ್ ಔಷಧ ದೈತ್ಯನಾದ ಜಿಎಸ್ಕೆಗೆ ಹನ್ನೆರಡು ಕೋಟಿಯಷ್ಟು ಲಸಿಕೆಯನ್ನು ಪೂರೈಸುವಂತೆ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಹಾಗೂ ಫಿನ್ಲೆಂಡ್ ಗಳು ಸುಮಾರು 60ಕೋಟಿ ಪೌಂಡ್ ಮೌಲ್ಯದ ಬೇಡಿಕೆಯನ್ನು ಈಗಾಗಲೇ ಸಲ್ಲಿಸಿವೆಯೆಂದು ವರದಿಯಾಗಿದ್ದು, ರೆಲೆಂಜಾ ಹಾಗೂ ಬರಲಿರುವ ಲಸಿಕೆಗಳಿಂದ ಜಿಎಸ್ಕೆಯ ಭಾಗ್ಯದ ಬಾಗಿಲು ತೆರೆದಂತಾಗಿದೆ.[ನೋಡಿ] ಅಮೆರಿಕಾದಲ್ಲಿ ಈ ವರ್ಷದ ಚಳಿಗಾಲದಲ್ಲಿ ಸುಮಾರು 60 ಕೋಟಿಯಷ್ಟು ಹೊಸ ಇನ್ ಫ್ಲುಯೆಂಜಾ ಎ (H1N1) ಲಸಿಕೆಯನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಅದರ ಜೊತೆಗೆ ಹಳೆಯ ಇನ್ ಫ್ಲುಯೆಂಜಾ ಲಸಿಕೆಯನ್ನೂ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. [ನೋಡಿ] ಅಂತೂ, ಇನ್ ಫ್ಲುಯೆಂಜಾ ಎ (H1N1) ಸೋಂಕಿಗಲ್ಲದಿದ್ದರೂ, ಎರಡೆರಡು ಲಸಿಕೆಗಳಿಗೆ ಸಿಕ್ಕಿಕೊಳ್ಳಬೇಕಾದ ಫಜೀತಿ ಅಮೆರಿಕನ್ನರದ್ದು!
ಹಂದಿಗಳನ್ನು ಕೊಲ್ಲಬೇಕೆ? ಹಂದಿ ಮಾಂಸವನ್ನು ತಿನ್ನಬಾರದೇ?
ಕೋಳಿ ಜ್ವರವು ಕೋಳಿಗಳನ್ನು ಬಾಧಿಸುವ ಸೋಂಕು; ಅದು ಕೋಳಿಗಳಲ್ಲಿ ಹರಡುತ್ತಿದ್ದರೆ ಆ ವೈರಸ್ ಕ್ರಮೇಣವಾಗಿ ರೂಪ ಬದಲಿಸಿಕೊಂಡು ಮನುಷ್ಯರನ್ನು ಕಾಡಬಲ್ಲ ವೈರಸ್ ಆಗಿ ಬದಲಾಗಬಹುದೆಂಬ 'ಭಯದಿಂದ' ಕೋಟಿಗಟ್ಟಲೆ ಕೋಳಿಗಳನ್ನು ನಾವು ಕೊಂದೆವು. ಆದರೆ ಮೂರು ವರ್ಷಗಳ ನಂತರವೂ ಕೋಳಿಜ್ವರದ ವೈರಸ್ ಬದಲಾಗಲಿಲ್ಲ, ಅತಿ ನಿಕಟವಾದ ಸಂಪರ್ಕಕ್ಕೆ ಬಂದ ಅತ್ಯಲ್ಪ ಸಂಖ್ಯೆಯ ಮನುಷ್ಯರಿಗಷ್ಟೇ ಹರಡಿತು.
ಈಗ ಹಂದಿಗಳಲ್ಲಿ ಹೊಸ ವೈರಸ್ ಹುಟ್ಟಿ ಮನುಷ್ಯರಿಗೆ ಹರಡುತ್ತಿದೆಯೆಂದ ಮೇಲೆ ಹಂದಿಗಳನ್ನೂ ಕೊಲ್ಲಬೇಡವೇ? ಮೇಲೆ ಹೇಳಿರುವಂತೆ, ಈ ಹೊಸ ವೈರಸ್ ಹಂದಿಗಳಲ್ಲಿ ಹರಡುತ್ತಿರುವ ಬಗ್ಗೆ ವರದಿಗಳಿಲ್ಲ. ಅದೀಗ ಏನಿದ್ದರೂ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವ ಸೋಂಕಷ್ಟೇ ಆಗಿದೆ. ಆದ್ದರಿಂದ ಹಂದಿಗಳನ್ನು ಕೊಲ್ಲುವ ಅಗತ್ಯವಿಲ್ಲ, ಹಂದಿ ಮಾಂಸದ ಸೇವನೆಯಿಂದ ಈ ಸೋಂಕು ಹರಡುವುದೂ ಇಲ್ಲ. ಆದರೆ ಈಗಾಗಲೇ ಸಾಕಷ್ಟು ಹೆದರಿರುವ ಜನ ಹಂದಿ ಮಾಂಸದ ಸೇವನೆಯನ್ನು ಬಿಟ್ಟಿದ್ದಾರಂತೆ, ಜಗತ್ತಿನಾದ್ಯಂತ ಹಂದಿ ಮಾಂಸಕ್ಕೀಗ ಬೇಡಿಕೆಯೇ ಇಲ್ಲವಂತೆ!
ನಾವೀಗ ಹೆದರಬೇಕೆ?
‘ಹಂದಿ ಜ್ವರ’ ತೀರಾ ಹೊಸತೇನಲ್ಲ, ಮನುಷ್ಯರಿಗೆ ಹರಡಿರುವುದೂ ಇದೇ ಮೊದಲಲ್ಲ. ಆದರೆ ಈ ಬಾರಿ ವೈರಸ್ ನ ಸ್ವರೂಪವು ಬದಲಾಗಿರುವುದರಿಂದ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ರಾಷ್ಟ್ರಗಳಿಗೂ ನಿಯಂತ್ರಣ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದ್ದು, ನಮ್ಮ ದೇಶದಲ್ಲೂ ಹೊರದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತಿದೆ. (ಹಿಂದೆ ಸಾರ್ಸ್ ಸೋಂಕು ಕಂಡು ಬಂದಾಗಲೂ ಹೀಗೆಯೇ ಮಾಡಲಾಗಿತ್ತು). ಸೂಕ್ತವಾದ ಕ್ರಮಗಳನ್ನು ಕೈಗೊಂಡರೆ ಈ ಸೋಂಕಿನ ಹರಡುವಿಕೆಯನ್ನು ತಡೆಯುವುದೇನೂ ಕಷ್ಟವಾಗದು. ಆದ್ದರಿಂದ ಹಂದಿ ಜ್ವರದ ಬಗ್ಗೆ ಹೆದರಬೇಕಾಗಿಲ್ಲ, ಜಾಗರೂಕರಾಗಿರಬೇಕು, ಅಷ್ಟೆ. ಅನಗತ್ಯವಾದ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವೂ ಆಗದು.
ರೋಗಗಳ ಬಗ್ಗೆ ಅಮಾಯಕ ಜನರಲ್ಲಿ ಭೀತಿ ಹುಟ್ಟಿಸುವ ಪ್ರವೃತ್ತಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ. ಯಾವುದೇ ಗೊಂದಲಗಳಿಗೂ, ಸಮೂಹ ಭಯಕ್ಕೂ ಕಾರಣವಾಗದಂತೆ ಸರಿಯಾದ, ಸ್ಪಷ್ಟವಾದ ಮಾಹಿತಿಯನ್ನು ಜನರಿಗೆ ಒದಗಿಸುವುದು ಸಮುದಾಯದ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳಲ್ಲಿ ಅತ್ಯಗತ್ಯವಾಗಿದ್ದು, ಅಂತಹಾ ಗುರುತರವಾದ ಜವಾಬ್ದಾರಿಯನ್ನು ನಮ್ಮ ಸರಕಾರಗಳೂ, ಮಾಧ್ಯಮಗಳೂ, ವೈದ್ಯಕೀಯ ಸಮುದಾಯವೂ ನಿರ್ವಹಿಸಬೇಕಾಗಿದೆ.

ಹೆಚ್ಚಿನ ಮಾಹಿತಿ:
Re: ಈಗ ಹಂದಿ ಜ್ವರ!
By ramshreem (not verified)ತುಂಬಾ ಒಳ್ಳೆಯ ಮಾಹಿತಿಯನ್ನು ಒದಗಿಸಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು...........
ಓಳ್ಳೆ ದಿಟ ಮಾಹಿತಿ
By ಕುಮಾರಸ್ವಾಮಿ (not verified)ತಾವು ತುಂಬಾ ಒಳ್ಳೆಯ ಮಾಹಿತಿಯನ್ನು ಒದಗಿಸಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು
ಸ್ವಾಮಿ
Post new comment